ಗುರುವಾರ , ಏಪ್ರಿಲ್ 9, 2020
19 °C
ತಂತ್ರಜ್ಞಾನ ಶೃಂಗಸಭೆಯಲ್ಲಿ ಸತ್ಯ ನಾದೆಲ್ಲ

ಪ್ರಗತಿಗೆ ತಂತ್ರಜ್ಞಾನ ಬಳಕೆಗೆ ವಿಪುಲ ಅವಕಾಶ: ಸತ್ಯ ನಾದೆಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಪ್ರಗತಿ ಸಾಧಿಸಲು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲು ವಿಪುಲ ಅವಕಾಶಗಳು ನಮ್ಮೆದುರಿಗೆ ಇವೆ’ ಎಂದು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ಅವರು ಹೇಳಿದ್ದಾರೆ.

‘ನಮ್ಮೆಲ್ಲರ ಬದುಕಿನಲ್ಲಿ ತಂತ್ರಜ್ಞಾನವು ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಹೀಗಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸುವವರು ನೈತಿಕ ಮೌಲ್ಯಗಳು ಮತ್ತು ವಿಶ್ವಾಸ ವೃದ್ಧಿಗೆ ಗಮನ ನೀಡಬೇಕು. ಹೀಗಾದರೆ ಮಾತ್ರ ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳ ಪ್ರಯೋಜನವು ಎಲ್ಲರಿಗೂ ದೊರೆಯಲಿದೆ. ತಂತ್ರಜ್ಞಾನ ಪರಿಹಾರಗಳು ರೀಟೆಲ್‌, ಆರೋಗ್ಯ ಮತ್ತು ಕೃಷಿ ಕ್ಷೇತ್ರಕ್ಕೂ ಪ್ರಯೋಜನಕಾರಿಯಾಗಬೇಕು. ಭಾರತದಲ್ಲಿನ ಪ್ರತಿಯೊಂದು ಉದ್ದಿಮೆಯು ತನ್ನದೇ ಆದ ಡಿಜಿಟಲ್‌ ಸಾಮರ್ಥ್ಯ ವೃದ್ಧಿಸಿಕೊಂಡು ಉದ್ದಿಮೆಯ ಸ್ವರೂಪ ಬದಲಿಸಿಕೊಂಡು ಹೊಸ ಎತ್ತರಕ್ಕೆ ಏರಲು ಮೈಕ್ರೊಸಾಫ್ಟ್‌ ನೆರವು ನೀಡಲಿದೆ’ ಎಂದರು.

ನಗರದಲ್ಲಿ ನಡೆದ ‘ಭವಿಷ್ಯದ ವಿಶ್ಲೇಷಣೆ; ತಂತ್ರಜ್ಞಾನ ಶೃಂಗಸಭೆ’ಯಲ್ಲಿ ಅವರು ಮಾತನಾಡುತ್ತಿದ್ದರು. ತಂತ್ರಜ್ಞಾನ ಭವಿಷ್ಯದ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡ ಭಾರತ ಸಂಜಾತ ನಾದೆಲ್ಲ, ‘ಸ್ಟಾರ್ಟ್‌ಅಪ್‌ಗಳು ನಾವೀನ್ಯತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಎಂಜಿನ್‌ಗಳಾಗಿವೆ. ನವೋದ್ಯಮಗಳ ಬೆಳವಣಿಗೆ ತ್ವರಿತಗೊಳಿಸಲು ಮೈಕ್ರೊಸಾಫ್ಟ್‌ ಅವುಗಳ ಜತೆ ಸಹಯೋಗ ಹೊಂದಲಿದೆ. ತನ್ನ ಅಜುರ್‌ ಕ್ಲೌಡ್ ಕಂಪ್ಯೂಟಿಂಗ್‌ ಮೂಲಕ ಇಂತಹ ಉದ್ದಿಮೆಗಳಿಗೆ ನೆರವಾಗುತ್ತಿದೆ’ ಎಂದರು.

‘ತಂತ್ರಜ್ಞಾನ ಅಭಿವೃದ್ಧಿಪಡಿಸುವ 42 ಲಕ್ಷ ಪ್ರತಿಭಾನ್ವಿತರು ಭಾರತದಲ್ಲಿ ಇದ್ದಾರೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಅಲ್ಪಾವಧಿಯಲ್ಲಿ ₹ 7,100 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಮಟ್ಟಿಗೆ (ಯೂನಿಕಾರ್ನ್‌) ಬೆಳೆದಿರುವ ನವೋದ್ಯಮಗಳಾದ ಮಿಂತ್ರಾ ಮತ್ತು ಉಡಾನ್‌, ಮೈಕ್ರೊಸಾಫ್ಟ್‌ನ ಅಜುರ್‌ ಕ್ಲೌಡ್‌ ಕಂಪ್ಯೂಟಿಂಗ್‌ ತಂತ್ರಜ್ಞಾನ ಬಳಸಿ ತಮ್ಮ ವಹಿವಾಟನ್ನು ಗಣನೀಯವಾಗಿ ವಿಸ್ತರಿಸಿರುವುದು ಶ್ಲಾಘನೀಯ’ ಎಂದರು.

ನಾದೆಲ್ಲ, ಮೂರು ದಿನಗಳ ಭೇಟಿ ನೀಡಲು ಭಾರತಕ್ಕೆ ಬಂದಿದ್ದಾರೆ. ಉದ್ದಿಮೆ ಮತ್ತು ಸಮುದಾಯದಲ್ಲಿನ ಯಶೋಗಾಥೆಗಳನ್ನು ಮುಂದುವರೆಸಿಕೊಂಡಲು ಹೋಗಲು ತಂತ್ರಜ್ಞಾನವನ್ನು ಹೊಸ ಬಗೆಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದರ ಮಾಹಿತಿ ಸಮಾವೇಶದಲ್ಲಿತ್ತು. ಸಾಫ್ಟವೇರ್‌ ಅಭಿವೃದ್ಧಿಪಡಿಸುವವರು, ತಂತ್ರಜ್ಞರು ಮತ್ತು ಉದ್ಯಮ ದಿಗ್ಗಜರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು