ಸೋಮವಾರ, ಸೆಪ್ಟೆಂಬರ್ 20, 2021
21 °C

ಅಡುಗೆಮನೆ ಸ್ಮಾರ್ಟ್‌ ‘ಕುಕ್ಕು’ಗಳು: ಇಲ್ಲಿವೆ ಆಧುನಿಕ ತಂತ್ರಜ್ಞಾನ ಉಪಕರಣಗಳ ವಿವರ

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ನಮ್ಮದು ಬಿಡುವಿಲ್ಲದ ಜೀವನ; ನಮಗೆ ದೊರೆಯುವ ಅಲ್ಪ ಸಮಯದಲ್ಲೇ ಮನೆಕೆಲಸಗಳನ್ನು ಮುಗಿಸಬೇಕೆಂಬ ತವಕ. ಹೀಗಾಗಿ ಕಡಿಮೆ ಅವಧಿಯಲ್ಲಿ ಶೀಘ್ರವಾಗಿ ಅಡುಗೆಯನ್ನು ತಯಾರಿಸಲು ನೆರವಾಗುವ ವಸ್ತು-ಉಪಕರಣಗಳಿಗೆ ಬೇಡಿಕೆಗಳು ಹೆಚ್ಚು. ಇದರಿಂದ ಅಡುಗೆಮನೆಗೂ ತಂತ್ರಜ್ಞಾನ ನುಗ್ಗುತ್ತಿದೆ. ಅಡುಗೆಮನೆಗೆ ಆಧುನಿಕ ತಂತ್ರಜ್ಞಾನ ಕೊಟ್ಟಿರುವ ಕೆಲವು ವಸ್ತು–ಉಪಕರಣಗಳು ಇಲ್ಲಿವೆ.

ಸ್ಮಾರ್ಟ್‌ ಒವೆನ್‌ 

ನಮ್ಮ ಮಾತನ್ನು ಕೇಳಿಸಿಕೊಂಡು ಖಾದ್ಯಗಳನ್ನು ತಯಾರಿಸಬಲ್ಲ ಉಪಕರಣಗಳು ನಮಗೆ ಇಷ್ಟವಾಗದಿದ್ದೀತೆ? ಸಾಂಪ್ರದಾಯಿಕ ಪದ್ಧತಿಯಲ್ಲಿ, ನಮ್ಮ ಕೌಶಲವನ್ನು ಶಕ್ತಿ ಬಳಸಿ ಅಡುಗೆಮಾಡುತ್ತಲೇ ಬಂದಿದ್ದೇವೆ. ಇದೇ ಕೆಲಸವನ್ನು ತಂತ್ರಜ್ಞಾನ ನೆರವಿನೊಂದಿಗೆ ಮಾಡಿಕೊಳ್ಳುವಂತಿದ್ದರೆ? ಹೀಗೆ ನಮ್ಮ ಪಾಕಶಾಲೆಯಲ್ಲಿ ತಾಂತ್ರಿಕವಾಗಿ ನೆರವಾಗುವ ಹಲವು ಉಪಕರಣಗಳು ಈಗಾಗಲೇ ಲಭ್ಯವಿವೆ. ಅವುಗಳಲ್ಲಿ ಕ್ಯಾಸೊರಿ ಟೋಸ್ಟರ್‌ ಒವೆನ್‌ ಕೂಡ ಒಂದು. ವೈ-ಫೈ ತಂತ್ರಜ್ಞಾನ ನೆರವಿನೊಂದಿಗೆ ಕಾರ್ಯನಿರ್ವಹಿಸುವ ಈ ಉಪಕರಣ ನಮ್ಮ ಧ್ವನಿಯ ಆದೇಶಾನುಸಾರ ಅಡುಗೆಯನ್ನು ಸಿದ್ಧಗೊಳಿಸುತ್ತದೆ. ನಮ್ಮ ಸ್ಮಾರ್ಟ್‌ಫೋನ್‌ಗೆ ಜೋಡಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಇದರಲ್ಲಿ ಹೈ-ಸ್ಪೀಡ್‌, ಏರ್‌ ಫ್ರೈ, ಬೇಕ್‌, ಟೋಸ್ಟ್‌, ಪ್ರೀಹೀಟ್‌, ರೋಸ್ಟ್‌, ಬ್ರಾಯಿಲ್‌, ಕೀಪ್‌ ವಾರ್ಮ್‌, ಸ್ಲೋ ಕುಕ್‌ನಂತಹ ಮೋಡ್‌ಗಳು ಇರುವುದರಿಂದ ಅಡುಗೆಯನ್ನು ತಯಾರಿಸುವುದು ಸುಲಭ. ವಿಶೇಷವೆಂದರೆ 12 ಇಂಚುಗಳ ಗಾತ್ರದ ಪಿಜ್ಜಾ ತಯಾರಿ ಮೋಡ್‌ ಕೂಡ ಇದೆ. ಆಂಡ್ರಾಯ್ಡ್‌ ಹಾಗೂ ಐಒಎಸ್‌ ಎರಡೂ ತಂತ್ರಾಂಶಗಳಿಗೂ ಹೊಂದಿಕೊಳ್ಳುತ್ತದೆ. ಗೂಗಲ್‌ ಅಸಿಸ್ಟೆಂಟ್‌ ಅಥವಾ ಅಮೆಜಾನ್‌ ಅಲೆಕ್ಸಾ ಮೂಲಕ ಅಡುಗೆ ಮಾಡಲು ಆದೇಶಿಸಬಹುದು.

ಬೇಯಿಸುವ ಅವಧಿ ನಿಖರ: ನಾವು ಸೇವಿಸುವ ಆಹಾರ ಹದವಾಗಿ ಬೆಂದರಷ್ಟೇ ರುಚಿ. ಇದಕ್ಕಾಗಿಯೇ ರೂಪಿಸಲಾಗಿದೆ: ಅನೊವಾ ಕಲಿನಲಿ ಸಾಸ್‌ ವೈಡ್‌ ಸ್ಮಾರ್ಟ್‌ ಪ್ರಿಷನ್‌ ಕುಕ್ಕರ್‌. ನಳಿಕೆ ರೂಪದಲ್ಲಿರುವ ಈ ಉಪಕರಣವನ್ನು ಬಳಸುವುದು ಸುಲಭ. ಇದನ್ನು ನಮ್ಮ ಸ್ಮಾರ್ಟ್‌ಫೋನ್‌ಗೆ ಜೋಡಿಸಿ ಆ್ಯಪ್ ನೆರವಿನೊಂದಿಗೆ ಉಪಯೋಗಿಸಿಕೊಳ್ಳಬಹುದು. ಬೇಯಿಸಬೇಕಿರುವ ಹಣ್ಣು, ತರಕಾರಿ ಮುಂತಾದ ಆಹಾರಪದಾರ್ಥಗಳನ್ನು ಸೀಲ್‌ಬ್ಯಾಗ್‌ಗೆ ಹಾಕಿ ಪಾತ್ರೆಯಲ್ಲಿಟ್ಟು ಈ ಉಪಕರಣವನ್ನು ಪಾತ್ರೆಗೆ ಜೋಡಿಸಿ, ಆ್ಯಪ್‌ನಲ್ಲಿ ಆಹಾರ ಪದಾರ್ಥದ ಮಾಹಿತಿ ನೀಡಿದರೆ ಆ ಪದಾರ್ಥವನ್ನು ಎಷ್ಟು ಹೊತ್ತು ಬೇಯಿಸಬೇಕು ಎಂಬ ಮಾಹಿತಿ ಈ ಉಪಕರಣದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಿರ್ದಿಷ್ಟ ಸಮಯದೊಳಗೆ ಪದಾರ್ಥಗಳನ್ನು ಬೇಯಿಸಿ, ರುಚಿ ರುಚಿಯಾಗಿ ಸೇವಿಸಬಹುದು.

ಹ್ಯಾಮಿಲ್ಟನ್‌ ಸ್ಮಾರ್ಟ್‌ ಕಾಫಿ ಮೇಕರ್‌

‘ಅಲೆಕ್ಸಾ ಹಾಡು ಕೇಳಿಸು…’, ‘ಅಲೆಕ್ಸಾ ಸುದ್ದಿ ತಿಳಿಸು…’ ಎಂದು ಕೇಳಿದ ಹಾಗೆ ‘ಅಲೆಕ್ಸಾ ಕಾಫಿ ತಯಾರಿಸಿ ಕೊಡು’ ಎಂದು ಹೇಳುವಂತಿದ್ದರೆ ಎಷ್ಟು ಚೆನ್ನ! ಇಂಥ ಬಯಕೆ ಹಲವರಿಗೆ ಈಗಾಗಲೇ ಬಂದಿರಬಹುದು. ಇಂಥವರಿಗಾಗಿ ಈಗಾಗಲೇ ಮಾರುಕಟ್ಟೆಗೆ ಕೆಲವು ಸ್ಮಾರ್ಟ್‌ ಕಾಫಿ ಮೇಕರ್‌ಗಳು ಲಗ್ಗೆಯಿಟ್ಟಿವೆ. ಅಂಥವುಗಳಲ್ಲಿ ವೈ-ಫೈ ತಂತ್ರಜ್ಞಾನ ನೆರವಿನೊಂದಿಗೆ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ ಕಾಫಿ ಮೇಕರ್‌ ಕೂಡ ಒಂದು. ಇದರಲ್ಲಿ ಒಮ್ಮೆಗೆ 12 ಕಪ್‌ ಕಾಫಿ ತಯಾರಿಸಿಕೊಳ್ಳಬಹುದು. ಇದರ ವಿಶೇಷವೆಂದರೆ ನಿರ್ವಹಣೆಗಾಗಿ ನಮ್ಮ ಸ್ಮಾರ್ಟ್‌ಫೋನ್‌ಗೆ ಯಾವುದೇ ಆ್ಯಪ್ ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಜೊತೆಗೆ ಅಲೆಕ್ಸಾ ತಂತ್ರಜ್ಞಾನ ಜೋಡಿಸಿರುವುದರಿಂದ ಹಾಲು, ಸಕ್ಕರೆ, ಕಾಫಿ ಪುಡಿ ಹಾಕಿಟ್ಟರೆ ಸಾಕು, ನಿಮ್ಮ ಮಾತು ಕೇಳಿದ ಕೂಡಲೇ ಕಾಫಿ ತಯಾರಿಸಿ ಕೊಡುತ್ತದೆ. ಕಾಫಿ ಮೇಕರ್‌ನ ಮೇಲ್ಭಾಗದಲ್ಲಿರುವ ಸೂಚನಾಫಲಕದಲ್ಲಿನ ಕೀ ಬಟನ್‌ಗಳು ನಿರ್ವಹಣೆಗೆ ನೆರವಾಗುತ್ತವೆ.

ರೆನ್ಫೋ ಸ್ಮಾರ್ಟ್‌ ಸ್ಕೇಲ್‌

ವೈದ್ಯರು ಆರೋಗ್ಯದೃಷ್ಟಿಯಿಂದ ಅಳತೆಯ ಊಟಕ್ಕೆ ಹೆಚ್ಚು ಶಿಫಾರಸು ಮಾಡುತ್ತಿರುತ್ತಾರೆ. ಆದರೆ ನಾವು ಸೇವಿಸುತ್ತಿರುವ ಆಹಾರ ಪ್ರಮಾಣದ ಬಗ್ಗೆ ನಮಗೆ ತಿಳಿಯುವುದಿಲ್ಲ. ಈ ಸಮಸ್ಯಯೆ ಪರಿಹಾರಕ್ಕೆ ನೆರವಾಗುತ್ತದೆ: ರೆನ್ಫೊ ಸ್ಮಾರ್ಟ್‌ ಸ್ಕೇಲ್‌.

ಐಒಎಸ್‌ ಹಾಗೂ ಅಂಡ್ರಾಯ್ಡ್‌ – ಎರಡೂ ತಂತ್ರಾಂಶಗಳಿಗೆ ಹೊಂದಿಕೊಳ್ಳುವ ಈ ಉಪಕರಣವನ್ನು ಬ್ಲೂಟೂತ್‌ ನೆರವಿನಿಂದ ನಮ್ಮ ಸ್ಮಾರ್ಟ್‌ಫೋನ್‌ಗೆ ಜೋಡಿಸಿ ಬಳಸಿಕೊಳ್ಳಬಹುದು. ಗರಿಷ್ಠ 5 ಕೆ.ಜಿ. ತೂಕದ ಹಣ್ಣು, ತರಕಾರಿ, ಆಹಾರಪದಾರ್ಥಗಳನ್ನು ಈ ಸ್ಕೇಲ್‌ ಮೇಲಿಟ್ಟು ಪರಿಶೀಲಿಸಬಹುದು. ಉದಾಹರಣೆಗೆ, ಯಾವುದಾದರೂ ಒಂದು ಹಣ್ಣನ್ನೊ ಅಥವಾ ಆಹಾರ ಪದಾರ್ಥವನ್ನೋ ಇದರ ಮೇಲಿಟ್ಟರೆ ಅದರಲ್ಲಿನ ವಿಟಮಿನ್ಸ್‌, ಕ್ಯಾಲರಿ, ಪ್ರೊಟೀನ್ಸ್‌ ಸೇರಿದಂತೆ ಎಲ್ಲ ಪೋಷಕಾಂಶಗಳ ವಿವರಗಳು ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇದಕ್ಕಾಗಿಯೇ ರೂಪಿಸಲಾಗಿರುವ ಆ್ಯಪ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ನಮ್ಮ ದೇಹಕ್ಕೆ ಎಷ್ಟು ಪೋಷಕಾಂಶಗಳು ಲಭಿಸುತ್ತವೆ ಎಂದು ಸುಲಭವಾಗಿ ತಿಳಿಯುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಹಂಬಲಿಸುವವರಿಗೆ ಈ ಉಪಕರಣ ಪ್ರಯೋಜನಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು