ಗುರುವಾರ , ಆಗಸ್ಟ್ 11, 2022
23 °C

ಆ್ಯಂಡ್ರಾಯ್ಡ್‌ 11 ಬಿಡುಗಡೆ: ಅಪ್‌ಡೇಟ್‌ನಲ್ಲಿ ಏನೆಲ್ಲ ಹೊಸತು?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಆ್ಯಂಡ್ರಾಯ್ಡ್ 11

ಸ್ಮಾರ್ಟ್‌ಫೋನ್‌ಗಳ ಪೈಕಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಆ್ಯಂಡ್ರಾಯ್ಡ್‌, ಒಎಸ್‌ನ ಹೊಸ ಆವೃತ್ತಿ ಬಿಡುಗಡೆ ಮಾಡಿದೆ. ಸಂದೇಶಗಳ ವಿನಿಮಯ, ಮೊಬೈಲ್‌ನೊಂದಿಗೆ ಸಂಪರ್ಕಿಸಲಾಗಿರುವ ಸಾಧನಗಳು ಹಾಗೂ ಖಾಸಗಿತನದ ಸುರಕ್ಷತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆಯನ್ನು 'ಆ್ಯಂಡ್ರಾಯ್ಡ್‌ 11'  ಅಳವಡಿಸಿಕೊಂಡಿದೆ. ಗೂಗಲ್‌ ತನ್ನ ಪಿಕ್ಸೆಲ್ ಫೋನ್‌ಗಳಿಗೆ ಆ್ಯಂಡ್ರಾಯ್ಡ್ 11 ಬಿಡುಗಡೆ ಮಾಡಿದೆ. ಆದರೆ, ಒನ್‌ಪ್ಲಸ್‌, ಒಪ್ಪೊ, ರಿಯಲ್‌ಮಿ ಹಾಗೂ ಶವೊಮಿಯ ಆಯ್ದ ಮಾದರಿಗಳಲ್ಲಿಯೂ ಹೊಸ ಆವೃತ್ತಿಯ ಅಪ್‌ಡೇಟ್‌ ಸಿಗುತ್ತಿದೆ.

ಯಾವೆಲ್ಲ ಫೋನ್‌ಗಳಿಗೆ ಸಿಗುತ್ತೆ ಆ್ಯಂಡ್ರಾಯ್ಡ್‌ ಹೊಸ ಆವೃತ್ತಿ

ಗೂಗಲ್‌ನ ಪಿಕ್ಸೆಲ್‌ 2 ಅಥವಾ ನಂತರದ ಮಾದರಿಗಳ ಫೋನ್‌ಗಳಿಗೆ ಹೊಸ ಆ್ಯಂಡ್ರಾಯ್ಡ್‌ ಅಪ್‌ಡೇಟ್‌ಗೆ ಸಂಬಂಧಿಸಿದ ನೋಟಿಫೀಕೇಷನ್‌ ಬರುತ್ತಿದೆ, ಇಲ್ಲವೇ ಸಿಸ್ಟಮ್‌ ಅಪ್‌ಡೇಟ್‌ನಲ್ಲಿ ಗಮನಿಸಬಹುದು. ಕೇವಲ ಪಿಕ್ಸೆಲ್‌ ಫೋನ್‌ಗಳಿಗೆ ಮಾತ್ರವೇ ಹೊಸ ಆ್ಯಂಡ್ರಾಯ್ಡ್‌ ಸಿಗಲಿದೆ ಎನ್ನಲಾಗಿತ್ತಾದರೂ, ಇತರೆ ಕಂಪನಿಗಳ ಫೋನ್‌ಗಳಲ್ಲಿಯೂ ಹೊಸ ಆವೃತ್ತಿ ಲಭ್ಯವಾಗುತ್ತಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಒನ್‌ಪ್ಲಸ್‌ 8 ಮತ್ತು ಒನ್‌ಪ್ಲಸ್‌ 8 ಪ್ರೊ ಆ್ಯಂಡ್ರಾಯ್ಡ್ 11 ಅಪ್‌ಡೇಟ್‌ ಸಿಗುವುದಾಗಿ ಕಂಪನಿ ಹೇಳಿದೆ. ಒಪ್ಪೊದ ಫೈಂಡ್‌ ಎಕ್ಸ್‌2 ಮತ್ತು ರೆನೊ 3 ಮಾದರಿಗಳು, ರಿಯಲ್‌ಮಿ ಎಕ್ಸ್‌50 ಪ್ರೊ, ಶವೊಮಿಯ ಎಂಐ 10 ಮತ್ತು ಎಂಐ 10 ಪ್ರೊ ಫೋನ್‌ಗಳಲ್ಲಿ ಹೊಸ ಆ್ಯಂಡ್ರಾಯ್ಡ್‌ ಅಪ್‌ಡೇಟ್‌ ಆಗಲಿದೆ.

ಫೋನ್‌ ಮೂಲಕ ನಡೆಸುವ ಹಲವು ಕಾರ್ಯಗಳನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಆ್ಯಂಡ್ರಾಯ್ಡ್‌ ಗಮನಹರಿಸಿದೆ. ಎಸ್‌ಎಂಎಸ್‌ ಸೇರಿದಂತೆ ಇತರೆ ಸಂದೇಶಗಳಿಗಾಗಿ ನೋಟಿಫಿಕೇಷನ್‌ ಸೆಕ್ಷನ್‌ನಲ್ಲಿ ಪ್ರತ್ಯೇಕ ಸ್ಥಳ ಮೀಸಲಿರುತ್ತದೆ. ಮುಖ್ಯವಾದ ಸಂದೇಶಗಳನ್ನು ಮಿಂಚು ನೋಟದಲ್ಲಿ ಗಮನಿಸಲು, ಪ್ರಮುಖ ಸಂದೇಶಗಳು ಮೊದಲಿಗೆ ಕಾಣುವಂತೆ ಮಾಡುವುದು, ಮ್ಯೂಟ್‌ ಮಾಡುವುದಕ್ಕೂ 'ಕಾನ್‌ವರ್ಸೇಷನ್ಸ್‌' (Conversations) ವ್ಯವಸ್ಥೆ ಸಹಕಾರಿಯಾಗಲಿದೆ.

* ಬಬಲ್ಸ್ (Bubbles): ಫೇಸ್‌ಬುಕ್‌ ಮೆಸೆಂಜರ್‌ನ ಸಂದೇಶಗಳು ಬಬಲ್‌ನಲ್ಲಿ ಕಾಣುವಂತೆ ಎಲ್ಲ ಚಾಟ್‌ಗಳು ಬಬಲ್‌ ಆಗಿರುವುದರಿಂದ, ಫೋನ್‌ನಲ್ಲಿ ಇತರೆ ಕೆಲಸಗಳ ನಡುವೆಯೇ ಸಂದೇಶಗಳಲ್ಲಿ ಪ್ರತಿಕ್ರಿಯಿಸುವುದು ಸುಲಭವಾಗಲಿದೆ.  

* ಸ್ಕ್ರೀನ್‌ ರೆಕಾರ್ಡಿಂಗ್‌: ಮೊಬೈಲ್‌ ಸ್ಕ್ರೀನ್‌ ರೆಕಾರ್ಡ್‌ ಮಾಡುವ ಆಯ್ಕೆ ಆಪರೇಟಿಂಗ್‌ ಸಿಸ್ಟಮ್‌ನಲ್ಲೇ ಬರಲಿದೆ. ಮತ್ತೊಂದು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳದೆಯೇ ಆಡಿಯೊ, ವಿಡಿಯೊ ಹಾಗೂ ಸ್ಕ್ರೀನ್‌ನ ಎಲ್ಲವನ್ನೂ ರೆಕಾರ್ಡ್‌ ಮಾಡುವ ವ್ಯವಸ್ಥೆ ಅಳವಡಿಸಲಾಗಿದೆ.

* ಮೀಡಿಯಾ ಕಂಟ್ರೋಲ್‌: ಆಡಿಯೊ ನಿಯಂತ್ರಿಸಲು ಕ್ವಿಕ್‌ ಸೆಟ್ಟಿಂಗ್ಸ್‌ನಲ್ಲಿ ಪ್ರತ್ಯೇಕ ನಿಯಂತ್ರಣ ನೀಡಲಾಗಿದೆ. ಹಾಗೇ ಪ್ಲೇ ಆಗುತ್ತಿರುವ ಆಡಿಯೊ ಹೆಡ್‌ಫೋನ್‌ನಿಂದ ಬ್ಲೂಟೂಥ್‌ ಸ್ಪೀಕರ್‌ಗೆ ವರ್ಗಾಯಿಸಲು ಮೀಡಿಯಾ ಕಂಟ್ರೋಲ್‌ನಲ್ಲಿ ಆಡಿಯೊ ಸೋರ್ಸ್‌ ಟ್ಯಾಪ್‌ ಮಾಡಿ ಆಯ್ಕೆ ಮಾಡಬಹುದು.

* ಪವರ್‌ ಬಟನ್‌: ಪವರ್‌ ಬಟನ್‌ ಒತ್ತಿ ಹಿಡಿಯುವ ಮೂಲಕ ಸ್ಮಾರ್ಟ್‌ ಹೋಂ ಸಾಧನಗಳೊಂದಿಗೆ ಸಂಪರ್ಕ ಸಾಧಿಸಬಹುದು.

ಇನ್ನೂ ಆ್ಯಪ್‌ಗಳ ಬಳಕೆಯಲ್ಲಿ ಒನ್‌–ಟೈಮ್‌ ಪರ್ಮಿಷನ್‌ ಹಾಗೂ ಆಟೊ ರಿಸೆಟ್‌ ಪರ್ಮಿಷನ್‌ ಆಯ್ಕೆಗಳನ್ನು ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು