ಶನಿವಾರ, ಜನವರಿ 25, 2020
22 °C

ಗೂಗಲ್ ಪಾಡ್ ಕಾಸ್ಟ್

ರಶ್ಮಿ. ಕೆ Updated:

ಅಕ್ಷರ ಗಾತ್ರ : | |

ಪಾಡ್ ಕಾಸ್ಟ್- ಹಾಡು, ಚರ್ಚೆ, ಮಾಹಿತಿ ಅಥವಾ ದಿನನಿತ್ಯದ ವಿದ್ಯಮಾನಗಳ ಬಗ್ಗೆ ನಿಮಗೆ ತಿಳಿದುಕೊಳ್ಳುವ ಅಥವಾ ಕೇಳಿಸಿಕೊಳ್ಳುವ ಆಸಕ್ತಿ ಇದ್ದರೆ ಪಾಡ್‌ಕಾಸ್ಟ್ ಕೇಳಬಹುದು. ನೀವು ಧ್ವನಿ ಮಾಹಿತಿ ಆಲಿಸಲು ಇಷ್ಟಪಡುವವರಾಗಿದ್ದು ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ ಗೂಗಲ್ ಪಾಡ್‌ಕಾಸ್ಟ್‌ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಉಚಿತ ಆ್ಯಪ್ ಆಗಿದ್ದು ಇಲ್ಲಿ ನಿಮಗಿಷ್ಟವಾದ ಪಾಡ್‌ಕಾಸ್ಟ್‌ಗಳನ್ನು ಹುಡುಕಿ ಕೇಳಬಹುದು.

ಗೂಗಲ್ ಪ್ಲೇ ಸ್ಟೋರ್‌ನಿಂದ ಗೂಗಲ್ ಪಾಡ್‌ಕಾಸ್ಟ್ ಆ್ಯಪ್ ಡೌನ್‌ಲೋಡ್ ಮಾಡಿದರೆ ಅಲ್ಲಿ ವಿವಿಧ ವಿಭಾಗಗಳ ಪಾಡ್‌ಕಾಸ್ಟ್‌ಗಳು ಲಭ್ಯವಿದೆ.

ಸುದ್ದಿ ಮತ್ತು ರಾಜಕೀಯ, ಹಾಸ್ಯ, ಕ್ರೀಡೆ, ಶಿಕ್ಷಣ, ವ್ಯವಹಾರ, ತಂತ್ರಜ್ಞಾನ, ಕಲೆ, ಆರೋಗ್ಯ ಹೀಗೆ ಹತ್ತು ಹಲವು ವರ್ಗಗಳಾಗಿ ವಿಂಗಡಿಸಿರುವ ಸರಣಿಗಳ ಗುಚ್ಛ ಇಲ್ಲಿದೆ.

ಕನ್ನಡ ಪಾಡ್‌ಕಾಸ್ಟ್‌ಗಳನ್ನು ಕೇಳಬೇಕೆಂದರೆ ಆ್ಯಪ್ ತೆರೆದು ಸರ್ಚ್‌ಬಾರ್‌ನಲ್ಲಿ ಕನ್ನಡ ಎಂದು ಹುಡುಕಿ. ಕನ್ನಡದಲ್ಲಿರುವ ಎಲ್ಲ ಪಾಡ್‌ಕಾಸ್ಟ್‌ಗಳ ಪಟ್ಟಿ ಇಲ್ಲಿ ಸಿಗುತ್ತದೆ. ಉದಾಹರಣೆ ಕನ್ನಡ ಪುಸ್ತಕ ಸಿದ್ಧಪಡಿಸಿರುವ ಕನ್ನಡ ಆಡಿಯೊ ಪಠ್ಯಪುಸ್ತಕಗಳ ಪಾಡ್‌ಕಾಸ್ಟ್ ಇಲ್ಲಿದೆ. ದೃಷ್ಟಿದೋಷ ಇರುವವರಿಗಾಗಿ ಮಾಹಿತಿಗಳನ್ನು ನೀಡುವ ಉದ್ದೇಶದಿಂದ ಈ ಪಾಡ್‌ಕಾಸ್ಟ್ ಸಿದ್ಧಪಡಿಸಲಾಗಿದೆ. ಶೈಕ್ಷಣಿಕ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ವಿಷಯಗಳ ಬಗ್ಗೆ ಇಲ್ಲಿ ಹಲವಾರು ಕಂತುಗಳಲ್ಲಿ ಮಾಹಿತಿ ನೀಡಲಾಗಿದೆ. ಆನ್‌ಲೈನ್‌ನಲ್ಲಿ ಅಥವಾ ನಿರ್ದಿಷ್ಟ ಕಂತು ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್‌ನಲ್ಲಿಯೂ ಕೇಳಬಹುದು.

ಇದನ್ನೂ ಓದಿ: ವಾಟ್ಸ್ಆ್ಯಪ್‌ನಲ್ಲಿ ‘ಸ್ವಯಂ ಡಿಲೀಟ್’ ಹೊಸ ವೈಶಿಷ್ಟ್ಯ

ಉಪಯೋಗ ಹೇಗೆ

ಮಕ್ಕಳಿಗೆ ಕತೆ ಹೇಳಲು ಬಿಡುವಿಲ್ಲದಿದ್ದರೆ ಅಥವಾ ನಿಮ್ಮ ಆಸಕ್ತಿಯ ವಿಷಯಗಳನ್ನು ಓದಲು ಪುರುಸೋತ್ತು ಇಲ್ಲದಿದ್ದರೆ ಈ ಪಾಡ್‌ಕಾಸ್ಟ್‌ಗಳನ್ನು ಅವಲಂಬಿಸಬಹುದು. ನಿಮಗಿಷ್ಟವಾದ ಪಾಡ್‌ಕಾಸ್ಟ್ ಸರಣಿಗೆ ಚಂದಾದಾರರಾಗಬಹುದು. ಕನ್ನಡದಲ್ಲಿ ಮಕ್ಕಳ ಕತೆಗಾಗಿ ಕೇಳಿರೊಂದು ಕಥೆಯ ಎಂಬ ಪಾಡ್‌ಕಾಸ್ಟ್ ಸರಣಿ ಇದೆ. 3 ರಿಂದ 10 ವರ್ಷದ ಮಕ್ಕಳಿಗಾಗಿ ರೂಪಿಸಿದ ಸರಣಿ ಇದಾಗಿದ್ದು ಆಯ್ದ ಜನಪದ ಕತೆಗಳು ಇಲ್ಲಿವೆ. ಇಲ್ಲಿಯವರೆಗೆ 67 ಕಂತುಗಳು ಈ ಪಾಡ್‌ಕಾಸ್ಟ್ ಸರಣಿಯಲ್ಲಿದೆ.

ಅದೇ ರೀತಿ ಕನ್ನಡ ಸಾಹಿತ್ಯ ಮತ್ತು ಇತರ ವಿಷಯಗಳ ಬಗ್ಗೆ ಕೇಳಲು ನೆಲ್ಲಿಕಾಯಿ ಪಾಡ್‌ಕಾಸ್ಟ್ ಇದೆ. ತಲೆ ಹರಟೆ ಪಾಡ್‌ಕಾಸ್ಟ್ ಸರಣಿಯಲ್ಲಿ  ಕನ್ನಡ, ಕರ್ನಾಟಕಕ್ಕೆ ಸಂಬಂಧಪಟ್ಟ ಹತ್ತು ಹಲವು ವಿಷಯಗಳ ಮಾಹಿತಿ ಇದೆ. ಸರ್ಚ್ ಬಾರ್‌ನಲ್ಲಿ ಕನ್ನಡ ಎಂದು ಕನ್ನಡ ಅಕ್ಷರದಲ್ಲೇ ಟೈಪಿಸಿದರೆ ಕನ್ನಡಕ್ಕೆ ಸಂಬಂಧಪಟ್ಟ ಪಾಡ್‌ಕಾಸ್ಟ್‌ಗಳು ಸುಲಭವಾಗಿ ಸಿಗುತ್ತವೆ. ಹೆಚ್ಚಿನ ಪಾಡ್‌ಕಾಸ್ಟ್‌ಗಳು ಇಂಗ್ಲಿಷ್ ಭಾಷೆಯಲ್ಲಿದ್ದು ಭಾಷಾ ಕಲಿಕೆಗೂ ಇದು ಉಪಯುಕ್ತವಾಗಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು