ಬುಧವಾರ, ಫೆಬ್ರವರಿ 1, 2023
26 °C

ಸರ್ಕಾರಗಳು ಬಳಸುವ ಅಧಿಕೃತ ಕುತಂತ್ರಾಂಶ ಪೆಗಾಸಸ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ರೇಲ್‌ನ ಸೈಬರ್ ಭದ್ರತಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿ, ಮಾರಾಟ ಮಾಡುತ್ತಿರುವ ಕಣ್ಗಾವಲು ತಂತ್ರಾಂಶದ ಹೆಸರು ಪೆಗಾಸಸ್. ತಾಂತ್ರಿಕವಾಗಿ ಪೆಗಾಸಸ್ ಒಂದು ಕುತಂತ್ರಾಂಶ (ಮಾಲ್‌ವೇರ್). ಅಧಿಕೃತವಾಗಿ ಮಾರಾಟವಾಗುತ್ತಿರುವ ಜಗತ್ತಿನ ಅತ್ಯಂತ ಪ್ರಬಲ ಕುತಂತ್ರಾಂಶ ಇದು.

‘ಪೆಗಾಸಸ್ ಅನ್ನು ಸ್ಥಾಪಿತ ಸರ್ಕಾರಗಳಿಗೆ ಮತ್ತು ಸರ್ಕಾರದ ಗುಪ್ತಚರ ಸಂಸ್ಥೆಗಳಿಗಷ್ಟೇ ಮಾರಾಟ ಮಾಡುತ್ತೇವೆ’ ಎಂದು ಎನ್‌ಎಸ್‌ಒ ಗ್ರೂಪ್ ಘೋಷಿಸಿಕೊಂಡಿದೆ. ಆದರೆ ತನ್ನ ಗ್ರಾಹಕರು ಯಾರು ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.

‘ಪೆಗಾಸಸ್ ಅನ್ನು ಸರ್ಕಾರಗಳಿಗೆ ಮಾತ್ರವೇ ಮಾರಾಟ ಮಾಡಲಾಗುತ್ತದೆ. ಈಗ ಸೋರಿಕೆಯಾಗಿರುವ ದತ್ತಾಂಶದಲ್ಲಿ ಇರುವವರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಗಳು, ವಿರೋಧ ಪಕ್ಷಗಳ ನಾಯಕರು, ಸರ್ಕಾರದ ವಿರುದ್ಧ ತನಿಖಾ ಪತ್ರಿಕೋದ್ಯಮ ನಡೆಸುತ್ತಿದ್ದ ಪತ್ರಕರ್ತರೇ ಆಗಿದ್ದಾರೆ. ಹೀಗಿದ್ದಾಗ ಸರ್ಕಾರವೇ ಈ ಪೆಗಾಸಸ್ ಕಣ್ಗಾವಲು ತಂತ್ರಾಂಶವನ್ನು ಬಳಸಿಕೊಂಡು ಕಣ್ಗಾವಲು ನಡೆಸುತ್ತಿದೆ ಎಂದು ಸಂದೇಹ ಪಡುವುದರಲ್ಲಿ ತಪ್ಪಿಲ್ಲ’ ಎಂದು ದಿ ವೈರ್ ತನ್ನ ಸರಣಿ ವರದಿಗಳಲ್ಲಿ ಹೇಳಿದೆ.

ಪೆಗಾಸಸ್ ತಂತ್ರಾಂಶವನ್ನು ಫೋನ್‌ ಕರೆಯ ಮೂಲಕವೂ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಬಹುದು. ಪೆಗಾಸಸ್ ಅಳವಡಿಕೆಯಾಗಿರುವುದು ಬಳಕೆದಾರರಿಗೆ ತಿಳಿಯದೇ ಹೋಗುವ ಸಾಧ್ಯತೆಯೇ ಹೆಚ್ಚು. ಈ ತಂತ್ರಾಂಶ ಬಳಸಿಕೊಂಡು ಬಳಕೆದಾರರ ಫೋನ್‌ ಕರೆ, ಸಂದೇಶಗಳು, ವಾಟ್ಸ್‌ಆ್ಯಪ್‌ ಸಂದೇಶ-ಕರೆ, ವಿಡಿಯೊ ಕರೆಗಳ ಮೇಲೆ ಕಣ್ಗಾವಲು ನಡೆಸಬಹುದು. ಮೀಡಿಯಾ ಗ್ಯಾಲರಿ, ಕರೆ ಪಟ್ಟಿಯಲ್ಲಿರುವ ದತ್ತಾಂಶಗಳನ್ನು ಅಳಿಸಬಹುದು ಮತ್ತು ಹೊಸ ದತ್ತಾಂಶಗಳನ್ನು ಸೇರಿಸಬಹುದು.

2017-18ರ ಅವಧಿಯಲ್ಲಿ ಭಾರತೀಯ ಪತ್ರಕರ್ತರ ಸ್ಮಾರ್ಟ್‌ಫೋನ್‌ಗಳ ಮೇಲೆ ಪೆಗಾಸಸ್ ಬಳಸಿ ಸರ್ಕಾರ ಕಣ್ಗಾವಲು ನಡೆಸಿದೆ ಎಂದು 2019ರಲ್ಲೂ ವರದಿಯಾಗಿತ್ತು. ಅದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು