ಶುಕ್ರವಾರ, ಡಿಸೆಂಬರ್ 3, 2021
20 °C

ಆ್ಯಪಲ್ ಸಾಧನಗಳಲ್ಲಿ ಫೈಲ್ ವಿನಿಮಯಕ್ಕೆ 'ಏರ್‌ಡ್ರಾಪ್'

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

Prajavani

ಎರಡು ಫೋನ್‌ಗಳು ಅಥವಾ ಬೇರೆ ಗ್ಯಾಜೆಟ್‌ಗಳ ನಡುವೆ ಯಾವುದೇ ಫೋಟೊ, ವಿಡಿಯೊ ಅಥವಾ ಅನ್ಯ ಫೈಲ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಸಾಕಷ್ಟು ದಾರಿಗಳಿವೆ. ಕೆಲವಕ್ಕೆ ಯುಎಸ್‌ಬಿ ಕೇಬಲ್ ಬಳಸಬಹುದಾಗಿದ್ದರೆ, ಬಹುತೇಕ ಬ್ಲೂಟೂತ್ ಮೂಲಕ ಫೈಲ್ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ, ಎಂದಿನಂತೆ ವಾಟ್ಸ್ಆ್ಯಪ್, ಇಮೇಲ್ ಮುಂತಾದ ಸಾರ್ವಕಾಲಿಕ ಸ್ವೀಕಾರಾರ್ಹ ವಿಧಾನಗಳೂ ಇವೆ. ಶೇರ್ ಮಾಡಿಕೊಳ್ಳಲು ಕೆಲವು ಆ್ಯಪ್‌ಗಳೂ ಇವೆ. ಆದರೆ, ಇತ್ತೀಚೆಗಷ್ಟೇ ಐಫೋನ್ 13 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿರುವ ಆ್ಯಪಲ್ ಕಂಪನಿಯ ಐಫೋನ್ ಅಥವಾ ಐಪ್ಯಾಡ್ ಅಥವಾ ಮ್ಯಾಕ್ ಕಂಪ್ಯೂಟರುಗಳಲ್ಲಿ ಫೈಲ್‌ಗಳ ವಿನಿಮಯ ತೀರಾ ಕಷ್ಟ ಎಂಬ ಮಾತಿದೆ. ಸುರಕ್ಷತೆಯ ದೃಷ್ಟಿಯಿಂದ ಐಫೋನ್‌ನ ಫೈಲ್‌ಗಳನ್ನು ಬೇರೆಡೆ ವರ್ಗಾಯಿಸುವುದಕ್ಕೆ ವಾಟ್ಸ್ಆ್ಯಪ್, ಟೆಲಿಗ್ರಾಂನಂತಹ ಸಂದೇಶ ವಿನಿಮಯ ಆ್ಯಪ್ ಹಾಗೂ ಇಮೇಲ್ ಹೊರತಾಗಿ ಬೇರೆ ಸಾಧ್ಯತೆ ಇಲ್ಲ. ಫೈಲ್‌ಗಳ ಗಾತ್ರ ದೊಡ್ಡದಾದರೆ ಕಳುಹಿಸುವುದಕ್ಕೆ ತೀರಾ ಕಷ್ಟ. ಇದಕ್ಕಾಗಿ ಐಟ್ಯೂನ್ ತಂತ್ರಾಂಶವನ್ನು ಕಂಪ್ಯೂಟರಿಗೆ ಅಳವಡಿಸಿಕೊಂಡು ಫೈಲುಗಳನ್ನು ವರ್ಗಾಯಿಸಬೇಕಾಗುತ್ತದೆ.

ಇದರ ಹೊರತಾಗಿ, ಆ್ಯಪಲ್ ಸಾಧನಗಳ ನಡುವೆ ವೈರ್ ಇಲ್ಲದೆಯೇ ಸುಲಭವಾಗಿ ಫೈಲ್‌ಗಳನ್ನು ವರ್ಗಾಯಿಸಲು ಅವುಗಳಲ್ಲಿರುವ ಏರ್‌ಡ್ರಾಪ್ ಎಂಬ ಆ್ಯಪ್ ನೆರವಾಗುತ್ತದೆ. ಇದು ಐಒಎಸ್ (ಆ್ಯಪಲ್‌ನ ಕಾರ್ಯಾಚರಣಾ ವ್ಯವಸ್ಥೆ) ಇರುವ ಸಾಧನಗಳಿಗಷ್ಟೇ ಲಭ್ಯ. ಇದು ಯಾವುದೇ ಪ್ರತ್ಯೇಕ ತಂತ್ರಾಂಶ ಅಳವಡಿಸದೆಯೇ, ಅತ್ಯಂತ ವೇಗವಾಗಿ ಫೈಲ್ ವರ್ಗಾಯಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೋಟೊ, ಹಾಡು, ವಿಡಿಯೊ ಮಾತ್ರವೇ ಅಲ್ಲ, ವೆಬ್ ವಿಳಾಸ, ಸಂಪರ್ಕ ಸಂಖ್ಯೆ, ಪ್ಲೇಲಿಸ್ಟ್‌ಗಳು, ಲೊಕೇಶನ್, ಟಿಪ್ಪಣಿ ಮಾಡಿಕೊಂಡ ಪಠ್ಯವನ್ನೂ ಬೇರೆ ಆ್ಯಪಲ್ ಸಾಧನಗಳಿಗೆ (ಐಫೋನ್, ಐಪ್ಯಾಡ್, ಮ್ಯಾಕ್ ಕಂಪ್ಯೂಟರ್) ಏರ್‌ಡ್ರಾಪ್ ಮಾಡಬಹುದು.

ಏರ್‌ಡ್ರಾಪ್‌ನ ಶಾರ್ಟ್‌ಕಟ್ ಬಟನ್ ಎಲ್ಲಿದೆ ಎಂಬುದು ಕೆಲವರಿಗೆ ಗೊಂದಲವಾಗಬಹುದು. ಐಫೋನ್ ಅಥವಾ ಐಪ್ಯಾಡ್‌ನ ಬಲ ಮೇಲ್ಭಾಗದ ಮೂಲೆಯಿಂದ ಕೆಳಕ್ಕೆ ಸ್ವೈಪ್ ಮಾಡಿದಾಗ 'ಕಂಟ್ರೋಲ್ ಸೆಂಟರ್' ತೆರೆದುಕೊಳ್ಳುತ್ತದೆ. ಅದರಲ್ಲಿ ವೈಫೈ, ಡೇಟಾ ಸಂಪರ್ಕದ ಬಟನ್‌ಗಳಿರುವ ಚೌಕವನ್ನು ಒತ್ತಿಹಿಡಿದಾಗ 'ಏರ್‌ಡ್ರಾಪ್' ಕಾಣಿಸುತ್ತದೆ. ಅದನ್ನು ಒತ್ತಿದಾಗ ಸ್ವೀಕರಿಸುವುದನ್ನು ಆಫ್ ಮಾಡುವ, ಸಂಪರ್ಕಗಳಿಂದ ಮಾತ್ರ ಸ್ವೀಕರಿಸುವ ಮತ್ತು ಎಲ್ಲರಿಂದಲೂ ಸ್ವೀಕರಿಸುವಂತೆ ಹೊಂದಿಸುವ ಆಯ್ಕೆ ಗೋಚರಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ
ಏರ್‌ಡ್ರಾಪ್ ಕೆಲಸ ಮಾಡುವುದು ಬ್ಲೂಟೂತ್ ಸಂಪರ್ಕವನ್ನು ಬಳಸಿಯೇ. ಎರಡೂ ಸಾಧನಗಳ ಮಧ್ಯೆ ವೈಫೈ ಸಂಪರ್ಕ ಏರ್ಪಡುತ್ತದೆ. ಇದಕ್ಕೆ ಇಂಟರ್ನೆಟ್ ಸಂಪರ್ಕವೇನೂ ಬೇಕಾಗಿಲ್ಲ. ವೈಫೈ ಮತ್ತು ಬ್ಲೂಟೂತ್ ಎರಡೂ ಆನ್ ಆಗಿದ್ದರೆ ಸಾಕಾಗುತ್ತದೆ. ಎರಡೂ ಸಾಧನಗಳಲ್ಲಿ ಏರ್‌ಡ್ರಾಪ್ ಆನ್ ಮಾಡಿದಾಗ, ತಾವಾಗಿಯೇ ಫೈರ್‌ವಾಲ್ ರಚಿಸಿಕೊಂಡು, ಎನ್‌ಕ್ರಿಪ್ಟ್ ಆಗಿಯೇ ಫೈಲ್‌ಗಳು ಉಭಯ ಸಾಧನಗಳ ಮಧ್ಯೆ ವಿನಿಮಯವಾಗುತ್ತವೆ. ಇಮೇಲ್ ಅಥವಾ ಇತರ ಸಂದೇಶವಾಹಕಗಳ ಮೂಲಕ ಕಳುಹಿಸುವುದಕ್ಕಿಂತಲೂ ಇದು ಸುರಕ್ಷಿತ ವಿಧಾನ. ಸುಲಭವಾಗಿ ಹೇಳುವುದಾದರೆ, (ಈಗ ಭಾರತದಲ್ಲಿ ನಿಷೇಧವಾಗಿರುವ) ಶೇರ್ ಇಟ್ ಎಂಬ ಆ್ಯಪ್ ಬಳಸಿದಂತೆಯೇ.

ಕಳುಹಿಸಬೇಕಾದ ಫೈಲ್ ಆಯ್ಕೆ ಮಾಡಿಕೊಂಡು, ಶೇರ್ ಮಾಡುವ ಬಟನ್ ಒತ್ತಿದಾಗ, ಏರ್‌ಡ್ರಾಪ್ ಆಯ್ಕೆ ಕಾಣಿಸುತ್ತದೆ. ಫೈಲ್ ಸ್ವೀಕರಿಸಬೇಕಾದ ಸಾಧನದ ಸೆಟ್ಟಿಂಗ್ಸ್‌ನಲ್ಲಿ 'ಜನರಲ್' ಆಯ್ಕೆ ಮಾಡಿದಾಗ ಏರ್‌ಡ್ರಾಪ್ ತೆರೆದರೆ, ಎಲ್ಲರಿಂದಲೂ (Everyone) ಅಂತ ಆಯ್ಕೆ ಮಾಡಿದಾಗ, ಕಳುಹಿಸುವ ಸಾಧನದಲ್ಲಿ ಈ ಸಾಧನದ ಹೆಸರು ಕಾಣಿಸುತ್ತದೆ. ಅದನ್ನು ಒತ್ತಿದಾಗ, ಫೈಲ್ ಸ್ವೀಕರಿಸುವ ಸಾಧನದಲ್ಲಿ ಈ ಫೈಲನ್ನು ಪಡೆದುಕೊಳ್ಳಬೇಕೇ ಎಂದು ಕೇಳಲಾಗುತ್ತದೆ. 'ಒಕೆ' ಒತ್ತಿದಾಗ ಕ್ಷಿಪ್ರಗತಿಯಲ್ಲಿ ಫೈಲ್ ವರ್ಗಾವಣೆಯಾಗುತ್ತದೆ. ಬ್ಲೂಟೂತ್ ಸಂಪರ್ಕದ ಮೂಲಕ ವೈಫೈ ಕೂಡ ಕೆಲಸ ಮಾಡುವುದರಿಂದ ವೇಗವಾಗಿ ಫೈಲ್ ರವಾನೆಯಾಗುತ್ತದೆ. ಹೀಗಾಗಿ ದೊಡ್ಡ ಗಾತ್ರದ ಫೈಲುಗಳ ವರ್ಗಾವಣೆ ಸುಲಭ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು