ಸೋಮವಾರ, ಅಕ್ಟೋಬರ್ 3, 2022
24 °C

ಸಾವನ್ನು ಓಡಿಸುವ ಸಂಜೀವನೀ ಯಂತ್ರ ಬಂದೀತೆ?

ಕೊಳ್ಳೇಗಾಲ ಶರ್ಮ Updated:

ಅಕ್ಷರ ಗಾತ್ರ : | |

Prajavani

ನಮ್ಮ ಪುರಾಣಗಳಲ್ಲಿ ಶುಕ್ರಾಚಾರ್ಯರ ಕಥೆ ಬರುತ್ತದೆ. ಕಠಿಣ ತಪಸ್ಸಿನಿಂದ ಮಹಾಶಿವನನ್ನು ಒಲಿಸಿಕೊಂಡ ದಾನವರ ಗುರು ಶುಕ್ರಾಚಾರ್ಯ ಸಂಜೀವನೀ ಮಂತ್ರವನ್ನು ಶಿವನಿಂದ ಪಡೆಯುತ್ತಾನೆ. ದೇವತೆಗಳು ಕೊಂದ ತನ್ನ ಶಿಷ್ಯರಿಗೆ ಮರಳಿ ಜೀವ ಕೊಡುವುದು ಅವನ ಉದ್ದೇಶವಾಗಿರುತ್ತದೆ. ಕೊನೆಗೆ ಅದೇ ಮಂತ್ರದ ಪಠಣದಿಂದ ತಾನೇ ಸಾವನ್ನಪ್ಪುವಂತೆ ಆಗುತ್ತದೆ ಎನ್ನುವುದು ಕಥೆ. ರೋಚಕ ಕಥೆ. ಸಾವನ್ನು ಹಿಮ್ಮೆಟ್ಟಿಸಬಹುದು, ಅದು ಬರುವುದನ್ನು ತಡ ಮಾಡಬಹುದು, ಆದರೆ ಸತ್ತ ಜೀವಕ್ಕೆ ಮರಳಿ ಚೈತನ್ಯ ಕೊಡುವುದು ಸಾಧ್ಯವೇ? ಇಂತಹುದೊಂದು ಪ್ರಶ್ನೆಯನ್ನು ಇತ್ತೀಚೆಗೆ ‘ನೇಚರ್‌’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಮುಂದಿಟ್ಟಿದೆ. ಹಂದಿಯೊಂದು ಸತ್ತು ಒಂದು ಗಂಟೆಯಾದ ಮೇಲೆ ಅದರಲ್ಲಿರುವ ಹಲವು ಅಂಗಗಳಿಗೆ ಅಮೆರಿಕೆಯ ಯೇಲ್‌ ವೈದ್ಯಕೀಯ ಕಾಲೇಜಿನ ನರವಿಜ್ಞಾನಿ ನೆನಾದ್‌ ಸೆಸ್ತಾನ್‌ ಮತ್ತು ಸಂಗಡಿಗರು ಜೀವಕಳೆಯನ್ನು ಮರಳಿಸಿದ್ದಾರಂತೆ. ಇದು ‘ಸಾವು’ ಎನ್ನುವುದರ ವ್ಯಾಖ್ಯಾನವನ್ನು ಬದಲಿಸಲಿದೆಯಂತೆ.

ಸಾವು ಎಂದರೇನು – ಎನ್ನುವ ಪ್ರಶ್ನೆ ಬಹಳ ಗಹನವಾದದ್ದು. ಕಳೆದ ನೂರು, ನೂರೈವತ್ತು ವರ್ಷಗಳಲ್ಲಿ ಜೀವಿಗಳ ಬಗ್ಗೆ, ಹಾಗೂ ವೈದ್ಯಕೀಯದಲ್ಲಿ ನಡೆದ ಸಂಶೋಧನೆಗಳು ಜೀವಿಗಳ ಹುಟ್ಟು, ಮರಣದ ಬಗ್ಗೆ ಶತಮಾನಗಳಿಂದ ಇದ್ದಂತಹ ನಂಬಿಕೆಗಳನ್ನು ದೂರಗೊಳಿಸಿವೆ. ಹಾಗಿದ್ದೂ ಸಾವು ಎಂದರೇನು ಎನ್ನುವುದನ್ನು ‘ಇದಮಿತ್ಥಂ’ ಎಂದು ಹೇಳುವ ವೈದ್ಯರಿಲ್ಲ. ಅದಕ್ಕೆ ವಿವರಣೆ ಇಲ್ಲ. ಸುತ್ತಲಿನ ವಿದ್ಯಮಾನಗಳಿಗೆ ಸ್ಪಂದಿಸದಂತೆ ದೇಹ ನಿಷ್ಕ್ರಿಯವಾಗಿಬಿಡುವುದನ್ನೇ ಸಾವು ಎಂದು ಒಮ್ಮೆ ಹೇಳಲಾಗಿತ್ತು. ಆದರೆ ಅಂತಹ ವ್ಯಕ್ತಿಯಲ್ಲಿಯೂ ಜೀವ ಇರುತ್ತದೆ. ಅವನ ಅಂಗಗಳು ಇನ್ನೂ ಬದುಕಿರುತ್ತವೆ. ಅವಕಾಶ ದೊರಕಿದರೆ ಬೇರೆ ವ್ಯಕ್ತಿಯಲ್ಲಿ ಆ ಅಂಗಗಳು ಕಾರ್ಯನಿರ್ವಹಿಸಬಲ್ಲುವು ಎನ್ನುವ ಅರಿವು ಬಂದಿದೆ. ಜೊತೆಗೇ ಹಾಗೆ ನಿಶ್ಚಲ ಸ್ಥಿತಿಗೆ, ಅರ್ಥಾತ್‌ ಕೋಮಾವಸ್ಥೆಗೆ ಹೋದ ವ್ಯಕ್ತಿಯ ಅಂಗಗಳನ್ನು ದಾನ ಮಾಡುವ, ಅಗತ್ಯವಿರುವವರಿಗೆ ಕಸಿ ಮಾಡುವ ಪದ್ಧತಿಯೂ ಹೆಚ್ಚಾಗುತ್ತಿದೆ. ಇಂತಹ ಅಂಗಗಳನ್ನು ದೀರ್ಘ ಕಾಲ ಜೀವಂತವಾಗಿಡುವ ಪ್ರಯತ್ನದಲ್ಲಿ ತೊಡಗಿಕೊಂಡ ಸೆಸ್ತಾನ್‌ ತಂಡ, ಸತ್ತ ಹಂದಿಯ ಜೀವಕೋಶಗಳು ಮರಳಿ ಜೀವಕಳೆ ತೋರಬಲ್ಲುವು ಎಂದು ನಿರೂಪಿಸಿದೆ.

ವೈದ್ಯರು ಎರಡು ಬಗೆಯ ಸಾವನ್ನು ಗುರುತಿಸುತ್ತಾರೆ. ನಿಶ್ಚಲ ಸ್ಥಿತಿಗೆ ಹೋದ ವ್ಯಕ್ತಿಯನ್ನು ‘ಮಿದುಳು–ಸತ್ತವರು’ ಎಂದು ವೈದ್ಯರು ಹೇಳುವ ಪ್ರಕರಣಗಳೂ ಮೊದಲನೆಯ ವಿಧ. ಮಿದುಳಿಗೆ ನಾಲ್ಕೇ ನಾಲ್ಕು ನಿಮಿಷ ರಕ್ತ ಹರಿಯದಿದ್ದರೂ, ಅಲ್ಲಿನ ನರಕೋಶಗಳು ಸತ್ತು ಮಿದುಳಿನ ಕೆಲಸಗಳು ಸ್ಥಗಿತಗೊಳ್ಳುತ್ತವೆ; ಬ್ರೈನ್‌ಡೆಡ್‌ ಅಥವಾ ಮಿದುಳಿನ ಸಾವುಂಟಾಗುತ್ತದೆ. ಮಿದುಳಿನ ನರಕೋಶಗಳು ಚೈತನ್ಯಹೀನವಾಗಿದ್ದರ ಫಲ ಇದು. ಇಂತಹ ವ್ಯಕ್ತಿಗಳಲ್ಲಿ ರಕ್ತದ ಹರಿವು, ಹೃದಯದ ಚಟುವಟಿಕೆಗಳು ಸಾಮಾನ್ಯವಾಗಿರುತ್ತವೆಯಾದ್ದರಿಂದ ಅಂಗಗಳು ಸತ್ತಿರುವುದಿಲ್ಲ. ಆದರೆ ಇಂತಹವರು ಸ್ವತಃ ಆಹಾರವನ್ನು ಸೇವಿಸಲಾರರಾದ್ದರಿಂದ ಕೃತಕವಾಗಿ ಉಣಿಸಬೇಕಾಗುತ್ತದೆ. ಸದಾ ಕಾಲ ಐಸಿಯುವಿನಲ್ಲಿಯೇ ಇರಿಸಬೇಕಾಗುತ್ತದೆ. ಮಿದುಳನ್ನು ಚೇತರಿಸಲು ಅಸಾಧ್ಯ ಎನ್ನಿಸಿದಾಗ, ಸಂಬಂಧಿಗಳ ಒಪ್ಪಿಗೆಯ ಮೇರೆಗೆ ಆಹಾರ ನಿಲ್ಲಿಸಿ, ಉಸಿರಾಟ ಕಡಿಮೆಯಾಗಿ ತನ್ನಂತಾನೇ ರಕ್ತದ ಹರಿವು ನಿಲ್ಲುವಂತೆ ಮಾಡುತ್ತಾರೆ. ಸಾವು ಬರುತ್ತದೆ. ತಕ್ಷಣವೇ ಅಂಗಗಳನ್ನು ತೆಗೆದರೆ ಕಸಿ ಮಾಡಲು ಒದಗುವುದು.

ಎರಡನೆಯದು, ಹೃದಯದ ಹಾಗೂ ಶ್ವಾಸಕೋಶದ ಚಟುವಟಿಕೆಗಳು ನಿಂತು ರಕ್ತವೇ ಹರಿಯದೆ ಹೋಗುವುದು. ಇದರಿಂದಾಗಿ, ಪ್ರಾಣವಾಯು ಎನ್ನಿಸಿದ ಆಕ್ಸಿಜನ್‌ ಸರಬರಾಜು ಇಲ್ಲದಾಗಿ ಮಿದುಳಷ್ಟೆ ಅಲ್ಲ, ದೇಹದ ಇತರೆ ಅಂಗಗಳಲ್ಲಿನ ಜೀವಕೋಶಗಳೂ ಕ್ರಮೇಣ ಸಾಯುತ್ತವೆ. ವ್ಯಕ್ತಿ ಜೀವ ಕಳೆದುಕೊಳ್ಳುತ್ತಾನೆ. ಹೃದಯಾಘಾತವಾದ ನಂತರ ಆಗುವ ಸಾವು ಇದು. ‘ಮಿದುಳು ಸತ್ತ’ವರಲ್ಲಿ ಬೇರೆ ಅಂಗಗಳು ಸತ್ತಿರದಿರಬಹುದು. ರಕ್ತದ ಸರಬರಾಜನ್ನು ಹಾಗೆಯೇ ಪೂರೈಸಿಕೊಂಡು ಅವನ್ನು ಜೀವಂತ ಉಳಿಸಿಕೊಳ್ಳಬಹುದು. ಅಂತಹ ಅಂಗಗಳನ್ನು ಇತರರಿಗೆ ಕಸಿ ಮಾಡಬಹುದು.

ಮಿದುಳು ಸತ್ತವರ ಅಂಗಗಳನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಹೇಗೆ? ಇದಕ್ಕೆ ದೇಹದ ರಕ್ತನಾಳಗಳಲ್ಲಿ ಕೃತಕವಾಗಿ ರಕ್ತವನ್ನು ಹರಿಸುವ ಉಪಾಯಗಳನ್ನು ವೈದ್ಯರು ಕಂಡುಕೊಂಡಿದ್ದಾರೆ. ಅವರದ್ದೇ ರಕ್ತವನ್ನೋ, ಅಥವಾ ರಕ್ತ ಹಾಗೂ ರಕ್ತದಂತೆಯೇ ಪೋಷಕಾಂಶಗಳನ್ನು ಒದಗಿಸುವ ಕೃತಕ ದ್ರವವನ್ನೋ ದೇಹದೊಳಗೆ ಪಂಪು ಮಾಡಿ, ಹೊರತೆಗೆಯುತ್ತಾ ವಿವಿಧ ಅಂಗಗಳು ಸಾಯದಂತೆ ಕಾಪಾಡಲು ಯತ್ನಿಸುತ್ತಾರೆ. ಪರ್ಫ್ಯೂಶನ್‌ ತಂತ್ರ ಎನ್ನುವ ಈ ಉಪಾಯವನ್ನು ಬಳಸಿ ಅಮೆರಿಕವೊಂದರಲ್ಲಿಯೇ ಕಳೆದ ಮೂವತ್ತು ವರ್ಷಗಳಲ್ಲಿ ತೊಂಬತ್ತೈದು ಸಾವಿರ ಮಂದಿಯನ್ನು ಸಾವಿನ ದವಡೆಯಿಂದ ಬದುಕಿಸಲಾಗಿದೆ. ಇದು ದುಬಾರಿ ತಂತ್ರ. ಅಗ್ಗದ ತಂತ್ರವೆಂದರೆ ಅಂಗಗಳನ್ನು ಕಿತ್ತು ತೆಗೆದು, ಕೃತಕ ದ್ರವದಲ್ಲಿಟ್ಟು ಕಾಪಾಡುವುದು. ಆದರೆ ಇದನ್ನು ರಕ್ತದ ಹರಿವು ನಿಂತ ಎರಡರಿಂದ ಇಪ್ಪತ್ತು ನಿಮಿಷಗಳೊಳಗೆ ಮಾಡಬೇಕಾಗುತ್ತದೆ. ಅನಂತರ ಅಂಗಗಳನ್ನು ಶೈತ್ಯೀಕರಿಸಿ ಕಾಪಾಡಬೇಕಾಗುತ್ತದೆ.

ಸೆಸ್ತಾನ್‌ ತಂಡ ಇಪ್ಪತ್ತು ನಿಮಿಷವಲ್ಲ, ಒಂದು ಗಂಟೆ ಕಳೆದ ಮೇಲೂ ಹೊಸದೊಂದು ತಂತ್ರವನ್ನು ಬಳಸಿ ಅಂಗಗಳನ್ನು ಕಾಪಾಡಬಹುದೆನ್ನುವ ಆಸೆಯನ್ನು ಹುಟ್ಟಿಸಿದೆ. ಪರ್ಫ್ಯೂಶನ್‌ ತಂತ್ರವನ್ನು ಸುಧಾರಿಸುವ ನಿಟ್ಟಿನಲ್ಲಿ ಸೆಸ್ತಾನ್‌ ತಂಡ ಕೆಲವು ವರ್ಷಗಳ ಹಿಂದೆ ಹೊಸದೊಂದು ಯಂತ್ರವನ್ನು ಹುಟ್ಟು ಹಾಕಿತ್ತು. ಇವು ಮಿದುಳು ಸತ್ತವರಲ್ಲಿ ಅಂಗಗಳನ್ನು ಕಾದಿಡುವುದಕ್ಕಾಗಿ ಬಳಸಲಾಗುತ್ತಿತ್ತಾದರೂ, ಹೃದಯ ಹಾಗೂ ಶ್ವಾಸಕೋಶಗಳು ಸತ್ತು ಆಗಬಹುದಾದ ಸಾವಿನಿಂದ ವ್ಯಕ್ತಿಗಳನ್ನು ಉಳಿಸಲೂ ಇದನ್ನು ಬಳಸುವ ಉದ್ದೇಶವಿತ್ತು. ತಲೆಯನ್ನು ತುಂಡರಿಸಿ, ಕೇವಲ ತಲೆಗಷ್ಟೆ ಈ ಯಂತ್ರದಿಂದ ಪೋಷಣೆ ನೀಡಿ, ನರಕೋಶಗಳು ಉಳಿಯುತ್ತವೆಯೋ ಎಂದು ಕೆಲವು ವರ್ಷಗಳ ಹಿಂದೆ ಸೆಸ್ತಾನ್‌ ತಂಡ ಪರಿಶೀಲಿಸಿತ್ತು.

ಇದೀಗ ಹಂದಿಯೊಂದಕ್ಕೆ ಕೃತಕವಾಗಿ ಹೃದಯಾಘಾತ ಮಾಡಿ, ಅದು ಸತ್ತು ಒಂದು ಗಂಟೆಯಾದ ಹಂದಿಯ ವಿವಿಧ ಅಂಗಗಳನ್ನು ‘ಆರ್ಗನ್‌-ಎಕ್ಸ್‌’ ಎನ್ನುವ ತಮ್ಮ ಯಂತ್ರದ ಮೂಲಕ ಕಾಪಾಡಲು ಈ ತಂಡ ಪ್ರಯತ್ನಿಸಿದೆ. ಈ ಯಂತ್ರ ಅಥವಾ ತಂತ್ರ ಕೃತಕವಾದೊಂದು ದ್ರವವನ್ನು ನಿಯತವಾಗಿ, ಹೃದಯ ಮಾಡಿದಂತೆಯೇ, ಅಂಗಗಳೊಳಗೆ ಪಂಪು ಮಾಡುತ್ತದೆ. ಈ ದ್ರವವೂ ವಿಶೇಷ. ಕೇವಲ ಹೀಮೋಗ್ಲೋಬಿನ್‌ ಅಣುವಷ್ಟೆ ಇರುವ, ಜೀವಕೋಶಗಳೇ ಇಲ್ಲದ, ಶಬ್ದಾತೀತ ತರಂಗಗಳಿಗೆ ಸ್ಪಂದಿಸುವಂತಹ ವಿಶೇಷ ದ್ರವ. ಇದು ಸತ್ತ ಜೀವಕೋಶಗಳು ಊದಿಕೊಳ್ಳದಂತೆ ನೋಡಿಕೊಳ್ಳುತ್ತದೆಯಂತೆ. ಇಂತಹ ದ್ರವವನ್ನು ಅಂಗಗಳೊಳಗೆ ಹರಿಸುತ್ತಾ, ಅಂಗಗಳಲ್ಲಿನ ಜೀವಕೋಶಗಳ ಚಟುವಟಿಕೆಯನ್ನು ಎಂ.ಆರ್‌.ಐ. ತಂತ್ರ ಹಾಗೂ ಇತರೆ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ. ಕೃತಕವಾಗಿ ಹೃದಯಾಘಾತ ಮಾಡಿದ ಇನ್ನೊಂದು  ಹಂದಿಯ ಎಲ್ಲ ಅಂಗಗಳನ್ನೂ ಒಂದು ಗಂಟೆಯ ನಂತರ ಗಮನಿಸಿದ್ದಾರೆ. ಹಾಗೆಯೇ ಇದೀಗ ಬಳಸುವ ಪರ್ಫ್ಯೂಶನ್‌ ತಂತ್ರಗಳನ್ನೂ ಬಳಸಿ ಕಾದಿಟ್ಟ ಹಂದಿಯ ಅಂಗಗಳನ್ನೂ ಆರ್ಗನ್‌ ಎಕ್ಸ್‌ ಬಳಸಿದ ಹಂದಿಗಳದ್ದರ ಜೊತೆಗೆ ವಿವಿಧ ಸಮಯಗಳಲ್ಲಿ ಅಧ್ಯಯನ ಮಾಡಿದ್ದಾರೆ.

ಸತ್ತು ಒಂದು ಗಂಟೆಯಾದ ಮೇಲೆ ಹಾಗೆಯೇ ಇಟ್ಟ ಅಂಗಗಳಲ್ಲಿನ ಜೀವಕೋಶಗಳ ವಿದ್ಯುತ್ ಚಟುವಟಿಕೆಗಳು ಕುಗ್ಗಿದ್ದುವು. ಅವುಗಳೊಳಗಿನ ಸೂಕ್ಷ್ಮ ರಕ್ತನಾಳಗಳಲ್ಲಿ ಹರಿವು ನಿಂತಿತ್ತು. ಅಲ್ಲಲ್ಲಿ ಮಿದುಳಿನ ಜೀವಕೋಶಗಳು ಸಾಯುತ್ತಿದ್ದುವು. ಸತ್ತ ಜೀವಕೋಶಗಳ ಸುತ್ತಲೂ ಊತ ಕಾಣಿಸುತ್ತಿತ್ತು. ಕೆಲವೆಡೆ ರಕ್ತನಾಳಗಳು ಒಡೆದು ರಕ್ತಸ್ರಾವ ಕಾಣಿಸುತ್ತಿತ್ತು. ಸಾವಿನ ಈ ಎಲ್ಲ ಲಕ್ಷಣಗಳೂ ಕೂಡ ಆರ್ಗನ್‌ ಎಕ್ಸ್‌ ಬಳಸಿದ ಹಂದಿಯ ಅಂಗಗಳಲ್ಲಿ ಕಡಿಮೆಯಾಗುತ್ತ ಬಂತೆಂದು ಇವರು ವರದಿ ಮಾಡಿದ್ದಾರೆ. ಅಂದರೆ ರಕ್ತದ ಹರಿವು ನಿಂತು ಸತ್ತ ಅಂಗಕ್ಕೆ ಪುನಶ್ಚೇತನಗೊಳ್ಳುವ ಸಾಮರ್ಥ್ಯ ಇದೆ ಎನ್ನುವುದು ಸೆಸ್ತಾನ್‌ ತಂಡದ ತೀರ್ಮಾನ. ಈ ಹಿಂದೆ ಮಿದುಳಿನಲ್ಲಿಯೂ ಇದೇ ರೀತಿ ಚಟುವಟಿಕೆಗಳನ್ನು ಉಳಿಸಿಕೊಳ್ಳಬಹುದು ಎಂದು ಸೆಸ್ತಾನ್‌ ತಂಡ ತೋರಿಸಿತ್ತು. ಆದರೆ ಇದೀಗ ಸತ್ತ ಒಂದು ಗಂಟೆಯ ನಂತರವೂ ಅಂಗಗಳನ್ನು ಪುನಶ್ಚೇತನಗೊಳಿಸಬಹುದು ಎನ್ನುವುದು ವಿಶೇಷ.

ಇದರರ್ಥ ಇಷ್ಟೆ. ನಾವೀಗ ಸಾವು ಎಂದು ಹೇಳುವ ವಿದ್ಯಮಾನ ಶಾಶ್ವತವಿರಲಿಕ್ಕಿಲ್ಲ. ಅದನ್ನು ಹಿನ್ನಡೆಸಬಹುದು. ಸತ್ತ ಜೀವಕೋಶಗಳಲ್ಲಿ ಮರಳಿ ಚೈತನ್ಯವನ್ನು ತುಂಬಬಹುದು. ಆದರೆ ಇದು ಸತ್ತ ವ್ಯಕ್ತಿಯನ್ನು ಮರಳಿ ಓಡಾಡುವಂತೆ ಮಾಡೀತೇ? ಶುಕ್ರಾಚಾರ್ಯರ ಸಂಜೀವನೀ ಮಂತ್ರದಂತೆ ಅಂತಹುದನ್ನು ಮಾಡುವ ಯಂತ್ರ ಅಥವಾ ತಂತ್ರ ಸಾಧ್ಯವೋ? ಗೊತ್ತಿಲ್ಲ. ಸದ್ಯಕ್ಕೆ ಸತ್ತ ಪ್ರಾಣಿಗಳ ಅಂಗಗಳನ್ನು ಮರುಬಳಕೆಗೆ ಯೋಗ್ಯವಾಗುವಂತೆ ಕಾದಿಡುವ ತಂತ್ರವೊಂದು ಸಿಕ್ಕಿದೆ ಎನ್ನಬಹುದಷ್ಟೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು