ಬುಧವಾರ, ನವೆಂಬರ್ 25, 2020
18 °C
ಡಿಜಿಟಲ್ ವೇದಿಕೆಗಳಲ್ಲಿ ಕನ್ನಡದ ಪ್ರಗತಿಗೆ ಪೂರಕ

PV Web Exclusive: ಯುನಿಕೋಡ್ ಬಳಸಿ 'ಶಿಷ್ಟ' ಡಿಜಿಟಲ್ ಕನ್ನಡಿಗರಾಗೋಣ!

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

Prajavani

ಎಲ್ಲರಿಗೂ ನಮಸ್ಕಾರ. ಕನ್ನಡಿಗರು ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳು. ಈ ರೀತಿಯಾಗಿ ಪ್ರಯೋಗ-ಮತಿಯಾದ ಕನ್ನಡಿಗ ಎಚ್ಚೆತ್ತುಕೊಂಡನೆಂದಾದರೆ ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಬೆಳವಣಿಗೆಗೆ ತಡೆಯೊಡ್ಡುವುದು ಯಾರಿಗಾದರೂ ಸಾಧ್ಯವೇ?

ಸಿದ್ಧರು, ಪ್ರಬುದ್ಧರು ಮೊಬೈಲ್, ಕಂಪ್ಯೂಟರನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ಹೇಗೆ ಬಳಸುವುದು ಅಂತ ಅರಿಯಲು ತೆಗೆದುಕೊಳ್ಳುವುದಕ್ಕಿಂತಲೂ ಕಡಿಮೆ ಸಮಯದಲ್ಲಿ, ಅದರಲ್ಲಿ ಏನೇನೆಲ್ಲ ಮಾಡಬಹುದೆಂಬುದನ್ನು ಮಕ್ಕಳು ತಿಳಿದುಕೊಂಡುಬಿಟ್ಟಿರುತ್ತವೆ. ಇದು ಇಂದಿನ ಪೀಳಿಗೆಯವರ ವೇಗದ ಕಲಿಕೆಯ ಪರಿ. ಇದು ಈ ಕುರಿತೋದದೆಯೇ ಅವರು ತಾವಾಗಿ ಕಲಿಯುವುದರ ಫಲ. ಅವರಿಗೆ ನಾವು ಹೇಳಿಕೊಟ್ಟೆವಾ? ಅಥವಾ ಹೇಳಿಕೊಡಲು ಅವರಷ್ಟು ನಮಗೆ ತಿಳಿದಿದೆಯೋ ಅಂತಲೂ ಪ್ರಶ್ನೆ ಮಾಡಿಕೊಳ್ಳಬಹುದು. ಮಕ್ಕಳ ಈ ಕಲಿಕೆಯ ಓಟವು 'ಇಷ್ಟಪಟ್ಟರೆ ಕಷ್ಟಪಡುವುದೇನೂ ಸಾಹಸವೇ ಅಲ್ಲ' ಎಂಬುದಕ್ಕೆ ಸಾಕ್ಷಿ ಮತ್ತು ನಮಗದುವೇ ಒಂದು ಪಾಠ!

ಡಿಜಿಟಲ್ ಜಗತ್ತಿನೊಳಗೆ ಅರಿವಿದ್ದೋ, ಅರಿವಿಲ್ಲದೆಯೋ ಕಾಲಿಡುತ್ತಿರುವ ಪ್ರತಿಯೊಬ್ಬ ಕನ್ನಡಿಗನಿಗೂ ಈ ಮಕ್ಕಳ ಆಟವೇ ಮಾದರಿಯಾಗುವ ಪಾಠವಿದು.

'ಅಯ್ಯೋ, ಮೊಬೈಲಲ್ಲಿ ಕನ್ನಡ ಬರೆಯೋದು ತುಂಬಾನೇ ಕಷ್ಟ ಕಣ್ರೀ.... ನಾನು ಇಂಗ್ಲಿಷಲ್ಲೇ ಕಂಗ್ಲಿಷ್ ಬೆರಳಚ್ಚಿಸ್ತೇನೆ' ಅಂತ ಹೇಳುವವರನ್ನು ನಾವು ಇಂದಿಗೂ ನೋಡುತ್ತಿದ್ದೇವೆ. ಕಂಪ್ಯೂಟರಲ್ಲಿ ಕೂಡ ಸೇಮ್ ಟು ಸೇಮ್. 'ಕನ್ನಡದಲ್ಲಿ ಟೈಪ್ ಮಾಡೋದೇ ಕಷ್ಟ, ಅದರ ಫಾಂಟೂ-ಗೀಂಟೂ ತಕರಾರು. ನಾನು ಇಂಗ್ಲಿಷಲ್ಲೇ ಕನ್ನಡ ಟೈಪ್ ಮಾಡ್ತೀನಿ' ಅಂತ ನಿರ್ಲಕ್ಷಿಸುತ್ತಾ ಹೇಳುವವರನ್ನೂ ನೋಡುತ್ತೇವೆ, ಕೇಳುತ್ತಿದ್ದೇವೆ.

ಯಾಕೆ ಈ ಉಡಾಫೆ ಮನಸ್ಥಿತಿ? ಹೇಳಿ ಕೇಳಿ, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರನ್ನು ತಂತ್ರಜ್ಞಾನ ಜಗತ್ತಿನ ಕೇಂದ್ರ ಬಿಂದು ಎಂದು ಕರೆಯಲಾಗುತ್ತಿರುವ ಅಮೆರಿಕದ ಸಿಲಿಕಾನ್ ಸಿಟಿಗೆ ಹೋಲಿಸಲಾಗುತ್ತಿದೆ. ಅಂದರೆ, ಕನ್ನಡ ನಾಡಿನ ಹೃದಯಭಾಗವೇ ನಮ್ಮ ದೇಶದ ತಂತ್ರಜ್ಞಾನಾಭಿವೃದ್ಧಿಯ ನೆಲೆವೀಡು. ಈ ಬಗ್ಗೆ ನಾವ್ಯಾರಿಗೂ ಕಮ್ಮಿಯಲ್ಲ ಅಂತ ಹೆಮ್ಮೆ ಪಡಬೇಕಾದ ಕನ್ನಡಿಗರಿಗೆ, ತಂತ್ರಜ್ಞಾನವನ್ನು ನುಂಗಿ ನೀರು ಕುಡಿಯುವಷ್ಟಲ್ಲದಿದ್ದರೂ, ಅದರ ಅರಿವಿನ ರುಚಿಯನ್ನು ಕನಿಷ್ಠ ಮಟ್ಟಕ್ಕಾದರೂ ಸವಿಯಲೇಕೆ ಔದಾಸೀನ್ಯ?

'ನಾನು ನುಡಿಯಲ್ಲಿ ಬರೀತಾ ಇದ್ದೀನಲ್ಲಾ, ಇದು ಕನ್ನಡ ನುಡಿಯಲ್ಲವೇ? ನನಗೆ ಬರಹದಲ್ಲಿ ಬರೆಯುವುದು ಗೊತ್ತು, ಇದು ಕನ್ನಡವಲ್ಲವೇ? ನಾವಂತೂ ಶ್ರೀಲಿಪಿ ಬಳಸಿ ಅತ್ಯುತ್ತಮವಾಗಿ ಕನ್ನಡವನ್ನು ಡಿಜಿಟಲ್ ಲೋಕದಲ್ಲಿ ಪಡಿಮೂಡಿಸುತ್ತಿದ್ದೇವೆ, ಅದ್ಭುತವಾಗಿ ವಿನ್ಯಾಸ ಮಾಡುತ್ತಿದ್ದೇವೆ, ಸಾಕಾಗುವುದಿಲ್ಲವೇ?'

ಈ ಮಾತುಗಳನ್ನೂ ಕೇಳುತ್ತಲೇ ಬಂದಿದ್ದೇವಲ್ಲ! ಹೌದು. ಇವೆಲ್ಲವೂ ಕನ್ನಡವಾದರೂ, ಭಾರತೀಯ ಇತರ ಭಾಷೆಗಳಾದ ಹಿಂದಿ, ತಮಿಳು, ತೆಲುಗು, ಮಲಯಾಳಂ ಮುಂತಾದವುಗಳಿಗೆ ಸಮದಂಡಿಯಾಗಿ ಆನ್‌ಲೈನ್ ಲೋಕದಲ್ಲಿ ಕನ್ನಡವೂ ಬೆಳೆಯಬೇಕಿದ್ದರೆ, ಬೆಳಗಬೇಕಿದ್ದರೆ, ಸೀಮಿತ ತಂತ್ರಜ್ಞಾನಕ್ಕಿಂತ, ಎಲ್ಲರಿಗೂ ಸಲ್ಲುವಂತಾಗುವ, ಎಲ್ಲೆಲ್ಲೂ ಬಳಸುವಂತಾಗುವ ಸಾರ್ವತ್ರಿಕ ಶಿಷ್ಟತೆಯ ಯುನಿಕೋಡ್ ಅಕ್ಷರ ಬಳಕೆಯೇ ಇಂದಿನ ಅಗತ್ಯ.

ಏನಿದು ASCII, ISCII?
ಕಂಪ್ಯೂಟರ್‌ಗಳು ಆಗಷ್ಟೇ ಅರಳುತ್ತಿದ್ದ ಕಾಲದಲ್ಲಿ, ಒಂದು ಸಾಧನದಿಂದ ಮತ್ತೊಂದು ಸಾಧನಕ್ಕೆ ಅಕ್ಷರ ರೂಪದ ದತ್ತಾಂಶವನ್ನು ಅಥವಾ ಮಾಹಿತಿಯನ್ನು ವರ್ಗಾಯಿಸಿದಾಗ ಅದು ಸರಿಯಾಗಿ ರೆಂಡರ್ ಆಗುತ್ತಿರಲಿಲ್ಲ. ಇದಕ್ಕೆ ಕಾರಣವೆಂದರೆ, ಕಂಪ್ಯೂಟರ್ ಎಂಬುದೇ 0 ಮತ್ತು 1 - ಹೀಗೆ ಎರಡೇ ಅಂಕಿಗಳ ಆಧಾರಿತವಾದ ದ್ವಿಮಾನ (Binary) ಕೋಡ್ ಆಧಾರಿತ ಸಂಕೀರ್ಣ ವ್ಯವಸ್ಥೆ. ನಾವು ಊಡಿಸುವ ಯಾವುದೇ ಅಕ್ಷರವು ಈ ಎರಡು ಅಂಕಿಗಳನ್ನೊಳಗೊಂಡ ಸಂಕೇತವಾಗಿ ಪರಿವರ್ತನೆಗೊಳ್ಳುವ ತಾಂತ್ರಿಕ ಕ್ರಿಯೆಯದು. ಹೀಗಾಗಿ ಎರಡು ಸಾಧನಗಳ ಮಧ್ಯೆ ಇವುಗಳನ್ನು ವಿನಿಮಯ ಮಾಡಿಕೊಳ್ಳುವುದು ಕಷ್ಟ.

ಕಾಲಾನಂತರದಲ್ಲಿ ಒಂದು ಕಂಪ್ಯೂಟರಿನಿಂದ ಮತ್ತೊಂದು ಯಂತ್ರಕ್ಕೆ ಅಕ್ಷರ ಮಾಹಿತಿ ರವಾನೆ ಸುಲಭ ಸಾಧ್ಯವಾಗಿಸಲು ASCII ಎಂಬ ವ್ಯವಸ್ಥೆ ರೂಪುಗೊಂಡಿತು. ಇದರ ಪೂರ್ಣ ರೂಪ - ಅಮೆರಿಕನ್ ಸ್ಟ್ಯಾಂಡರ್ಡ್ ಕೋಡ್ ಫಾರ್ ಇನ್ಫರ್ಮೇಶನ್ ಇಂಟರ್‌ಚೇಂಜ್ ಅಂತ. ಅಂದರೆ, ಅಕ್ಷರ ಮಾಹಿತಿ ವಿನಿಮಯಕ್ಕೆ ಅಗತ್ಯವಿರುವ ಅಮೆರಿಕನ್ ಶಿಷ್ಟ ಕೋಡ್. ಇವುಗಳ ಮೂಲಕ ಅಮೆರಿಕನ್ ಇಂಗ್ಲಿಷ್ ಅಕ್ಷರಗಳ ಅಕ್ಷರಭಾಗಗಳು (Glyph) ಸಂಕೇತಾಕ್ಷರಕ್ಕೆ ಪರಿವರ್ತನೆಗೊಂಡು, ಎಲೆಕ್ಟ್ರಾನಿಕ್ ಸಾಧನಗಳ ನಡುವಿನ ಮಾಹಿತಿ ವಿನಿಮಯ ಸುಲಭವಾಯಿತು. ಸರಳವಾಗಿ ಹೇಳುವುದಾದರೆ, ಅಮೆರಿಕನ್ ಇಂಗ್ಲಿಷಿನ ಪ್ರತಿಯೊಂದು ಅಕ್ಷರ ಭಾಗವನ್ನೂ ಅಂಕಿಗೆ ಪರಿವರ್ತಿಸುವಂತೆ ಅನುಕೂಲ ಮಾಡಿಕೊಟ್ಟಿದ್ದು ಅಸ್ಕಿ (ASCII) ಪದ್ಧತಿ.

ಇದೇ ಪದ್ಧತಿಯ ಆಧಾರದಲ್ಲಿ, ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಲಿಪಿಗಳಿಗಾಗಿ ರೂಪುಗೊಂಡಿದ್ದು ISCII ಅಂದರೆ, ಇಂಡಿಯನ್ ಸ್ಟ್ಯಾಂಡರ್ಡ್ ಕೋಡ್ ಫಾರ್ ಇನ್ಫರ್ಮೇಶನ್ ಇಂಟರ್‌ಚೇಂಜ್, ಅದುವೇ ಮಾಹಿತಿ ವಿನಿಮಯಕ್ಕಾಗಿರುವ ಭಾರತೀಯ ಶಿಷ್ಟತೆ. ಇದು ಮೂರು ದಶಕಗಳ ಹಿಂದಿನ ಕತೆ. ಇದರ ಆಧಾರದಲ್ಲಿ, ನುಡಿ, ಬರಹ, ಶ್ರೀಲಿಪಿ ಮುಂತಾದ ಅಕ್ಷರ ತಂತ್ರಾಂಶಗಳು ರೂಪುಗೊಂಡವು, ಸಂಬಂಧಿತ ಅಕ್ಷರಗಳೂ (ಫಾಂಟ್‌ಗಳೂ) ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಡಿಜಿಟಲ್ ಜಗತ್ತನ್ನು ಸುಂದರವಾಗಿಸಿದವು.

ತೊಡಕೇನು?
ತುಂಬಾ ಸಿಂಪಲ್ಲು. ಬೇರೆಯವರು ಈ ಫಾಂಟ್‌ಗಳಲ್ಲಿ ಪಡಿಮೂಡಿಸಿದ ಸುಂದರವಾದ ಕನ್ನಡ ಲೇಖನವನ್ನು (ಅಥವಾ ಯಾವುದೇ ಭಾಷೆಯ ಅಕ್ಷರ) ಓದುವುದು ಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಯಾಕೆಂದರೆ ಇದೇ ತಂತ್ರಾಂಶವು ನಮ್ಮ ಸಾಧನಗಳಲ್ಲಿ ಅಳವಡಿಸಿದ್ದರಷ್ಟೇ ಓದಬಹುದಾಗಿತ್ತು ಅಥವಾ ಬರೆಯಬಹುದಾಗಿತ್ತು! ಅಷ್ಟಲ್ಲದೆ, ಆ ಕಾಲದ ಸಂವಹನದ ಪ್ರಮುಖ ಮಾಧ್ಯಮವಾಗಿದ್ದ ಎಸ್ಸೆಮ್ಮೆಸ್‌ನಲ್ಲಿ ಅವುಗಳನ್ನು ಟೈಪ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ಇಂಗ್ಲಿಷ್ (ರೋಮನ್) ಲಿಪಿಯಲ್ಲೇ ಕನ್ನಡವನ್ನು ಬೆರಳಚ್ಚಿಸಿ, ಕಂಗ್ಲಿಷ್‌ನಲ್ಲೇ ಮಾಹಿತಿಗಳು ರವಾನೆಯಾಗುತ್ತಿದ್ದವು. ಈಗ, ಯುನಿಕೋಡ್ ಎಂಬುದು ಸಾರ್ವತ್ರಿಕವಾಗಿ ಸ್ವೀಕೃತವಾದ ಶಿಷ್ಟತೆ. ಕನ್ನಡದ ಮಾಹಿತಿ ಬೇಕಿದ್ದರೆ ಸರ್ಚ್ ಮಾಡಿ ನೋಡಿ, ನುಡಿ, ಬರಹ-ಶ್ರೀಲಿಪಿ ಅಕ್ಷರಗಳಲ್ಲಿರುವ ಮಾಹಿತಿಗಳು ಸಿಗುತ್ತವೆಯೇ? ಇಲ್ಲ. ಅದೇ ಯುನಿಕೋಡ್‌ನಲ್ಲೇ ಟೈಪ್ ಮಾಡಿ ಸರ್ಚ್ ಮಾಡಿ, ಲಕ್ಷಾಂತರ ಅಂತರಜಾಲ ಪುಟಗಳು ಕಾಣಿಸುತ್ತವೆ.

ಫೇಸ್‌ಬುಕ್, ವಾಟ್ಸ್ಆ್ಯಪ್, ಟ್ವಿಟರ್, ಇನ್‌ಸ್ಟಾಗ್ರಾಂ ಮಾತ್ರವಲ್ಲದೆ ಎಸ್ಸೆಮ್ಮೆಸ್‌ನಲ್ಲಿ ಕೂಡ ನಾವಿಂದು ಕನ್ನಡ ಕಾಣುತ್ತಿದ್ದೇವೆ ಮತ್ತು ನೀವು ಈ ಲೇಖನವನ್ನು Prajavani.net ನಲ್ಲಿ ಓದುತ್ತಿದ್ದೀರಿ ಎಂದಾದರೆ, ಅದಕ್ಕೆ ಮೂಲ ಕಾರಣ ಈ ಯುನಿಕೋಡ್ ಎಂಬ ಸಾರ್ವತ್ರಿಕ ಶಿಷ್ಟತೆಯ (ಯುನಿವರ್ಸಲ್ ಸ್ಟ್ಯಾಂಡರ್ಡ್) ಅಕ್ಷರ ವ್ಯವಸ್ಥೆ. ಯುನಿವರ್ಸಲ್ ಕೋಡ್ ಸ್ಟ್ಯಾಂಡರ್ಡ್ ಅಂದರೆ ಸಾರ್ವತ್ರಿಕ ಸಂಕೇತಾಕ್ಷರಗಳ ಶಿಷ್ಟತೆಯಲ್ಲಿ ಬರೆದದ್ದನ್ನು ಬೇರೊಂದು ಸಾಧನದಲ್ಲಿ ಓದಬೇಕಿದ್ದರೆ, ತಿದ್ದಬೇಕಿದ್ದರೆ, ಪ್ರತ್ಯೇಕ ಫಾಂಟ್ ಬೇಕಾಗಿಲ್ಲ ಅಥವಾ ತಂತ್ರಾಂಶವೂ ಬೇಕಾಗಿಲ್ಲ.

ಯುನಿಕೋಡ್ ವೈಶಿಷ್ಟ್ಯವೆಂದರೆ, ಯಾವುದೇ ಸಾಧನದಲ್ಲಿ ನೋಡಿದರೂ, ಯಾವುದೇ ಭಾಷೆಗಳನ್ನೂ ಯಾವುದೇ ತಂತ್ರಾಂಶಗಳ ಅನಿವಾರ್ಯತೆಯಿಲ್ಲದೆ ಥಟ್ಟನೇ ಓದಬಹುದು. ಮನುಷ್ಯರಿಗಷ್ಟೇ ಅಲ್ಲದೆ, ಯಂತ್ರಾಂಶ-ತಂತ್ರಾಂಶಕ್ಕೂ ಈ ಯುನಿಕೋಡ್ ಓದುವುದು ಸುಲಭ. ಇದರಿಂದಾಗಿಯೇ ಕನ್ನಡವು ಡಿಜಿಟಲ್ ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಮೆಶಿನ್ ಲರ್ನಿಂಗ್ (ML), ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR - ಚಿತ್ರಗಳಲ್ಲಿರುವ ಅಕ್ಷರಗಳನ್ನು ಪಠ್ಯಕ್ಕೆ ಪರಿವರ್ತಿಸಲು ಅನುಕೂಲ), ಪೂರಕವಾದ ಟೆಕ್ಸ್ಟ್ ಟು ಸ್ಪೀಚ್ (TTS), ಸ್ಪೀಚ್ ಟು ಟೆಕ್ಸ್ಟ್ (ಪಠ್ಯದಿಂದ ಧ್ವನಿಗೆ, ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆಯಾಗುವ ತಂತ್ರಜ್ಞಾನ), ಗೂಗಲ್ ಅಸಿಸ್ಟೆಂಟ್, ಸಿರಿ, ಕೋರ್ಟನಾದಂತಹಾ ಧ್ವನಿ ಸಹಾಯಕ ವ್ಯವಸ್ಥೆ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಒಗ್ಗಿಕೊಳ್ಳುತ್ತಾ, ಬಳಕೆಯಾಗುತ್ತಾ, ಬೆಳೆಯುತ್ತಲೇ ಇದೆ. ಇದು ವೇಗವಾಗಿ ಬೆಳೆಯುತ್ತಿದೆ, ಆದರೆ ಯುನಿಕೋಡ್‌ಗೆ ನಾವೂ ಸೇರಿಕೊಳ್ಳುವ ಮೂಲಕ ಆನ್‌ಲೈನ್‌ನಲ್ಲಿ ಧಾವಂತದಿಂದ ಸಾಗುತ್ತಿರುವ ಕನ್ನಡದ ಜೊತೆ ನಾವೂ ಹೆಜ್ಜೆ ಹಾಕಬೇಕಾಗಿದೆಯಷ್ಟೇ.

ಸಂಕೀರ್ಣ ಸ್ಥಿತಿಯೊಂದರಿಂದ ಭಾಷೆಯು ಸರಳ ವ್ಯವಸ್ಥೆಗೆ ಹೊರಳಲು ಕಾರಣವಾಗಿರುವ ಈ ಯುನಿಕೋಡ್ ಶಿಷ್ಟತೆಯನ್ನು ನಾವೂ ಅನುಸರಿಸದಿದ್ದರೆ ಉಳಿಗಾಲವೇ ಇಲ್ಲ. ಯುನಿಕೋಡ್ ಅಕ್ಷರ ಟೈಪ್ ಮಾಡಲು ಸಾಕಷ್ಟು ಕೀಬೋರ್ಡ್ ಆ್ಯಪ್‌ಗಳು, ಪ್ರೋಗ್ರಾಂಗಳು ಲಭ್ಯ ಇವೆ. ವಿಂಡೋಸ್ ಕಂಪ್ಯೂಟರುಗಳು, ಆಂಡ್ರಾಯ್ಡ್ ಮೊಬೈಲುಗಳು ಅಷ್ಟೇ ಅಲ್ಲ, ಅಂಥಾ ಪಾಶ್ಚಾತ್ಯ ರಾಷ್ಟ್ರಗಳ ಆಕರ್ಷಣೆಯಾಗಿರುವ ಆ್ಯಪಲ್ ಕಂಪನಿಯೇ ತನ್ನ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ನಡೆಯುವ ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್‌ಬುಕ್‌ಗಳಲ್ಲೆಲ್ಲ ಕನ್ನಡ ಟೈಪಿಂಗ್ ಅವಕಾಶ ನೀಡಿರುವಾಗ, ನಾವೇಕೆ ಹಿಂದೆ ಬೀಳಬೇಕು?

ಈಗಲೂ ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರೆಯುವ ಕಂಗ್ಲಿಷರು ಸಿಗುತ್ತಾರೆ ನಮಗೆ. ನುಡಿ-ಬರಹ ತಂತ್ರಾಂಶಗಳು ಕೂಡ ಈಗ ಯುನಿಕೋಡ್‌ಗೆ ಪರಿವರ್ತನೆಯಾದರೂ, ಬಹುತೇಕ ಜನರ ಮನಸ್ಥಿತಿಯಿನ್ನೂ ಯುನಿಕೋಡ್‌ಗೆ ಬದಲಾಗಿಲ್ಲ. ಪತ್ರಿಕಾ ಕಚೇರಿಗಳಿಗೆ ಡಿಜಿಟಲ್ ಮಾಧ್ಯಮದ ಮೂಲಕ ಬರುವ ಹೆಚ್ಚಿನ ಲೇಖನಗಳಿನ್ನೂ ಬರಹ, ನುಡಿಗಳಲ್ಲೇ ಇವೆ.

ನೀವು ಇದನ್ನು ಈಗ ಓದುತ್ತೀರೆಂದಾದರೆ, ಇದಕ್ಕೆ ಕಾರಣ ಯುನಿಕೋಡ್ ಲಿಪಿ. ಕನ್ನಡ ಮಾಧ್ಯಮ ಲೋಕದಲ್ಲಿ ಪ್ರಜಾವಾಣಿ ಪತ್ರಿಕಾ ಕಚೇರಿಯಂತೂ ಇಡೀ ವ್ಯವಸ್ಥೆಯನ್ನು ಯುನಿಕೋಡ್‌ಗೆ ಬದಲಾಯಿಸಿಕೊಂಡಿದೆ. ಕನ್ನಡದ ಸಾಫ್ಟ್‌ವೇರ್ ಮನಸ್ಸುಗಳು ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಕ್ಕಾಗಿ ಕುಳಿತಲ್ಲಿಂದಲೇ ಸೇವೆ ಮಾಡುತ್ತಾ, ವೈವಿಧ್ಯಮಯ ವಿನ್ಯಾಸದ ಫಾಂಟುಗಳನ್ನು ರಚಿಸಿಕೊಟ್ಟಿದ್ದಾರೆ. ಪ್ರಜಾವಾಣಿಯೂ ತನ್ನದೇ ಆದ ಯುನಿಕೋಡ್ ಆಧಾರಿತ ಸುಂದರ ಫಾಂಟ್ ಅಭಿವೃದ್ಧಿ ಮಾಡಿಕೊಂಡಿದೆ. ಮುದ್ರಣ ಎಷ್ಟು ಸುಂದರವಾಗಿದೆ! ಇನ್ನಷ್ಟು ವೈವಿಧ್ಯಮಯ ಫಾಂಟ್‌ಗಳ ಅಗತ್ಯವಿದೆ ಎಂಬುದು ದಿಟವಾದರೂ, ಜನ ಸಾಮಾನ್ಯರಾದ ನಾವು ಈಗ ಕಂಗ್ಲಿಷ್ ಎಂಬ ಕೆಟ್ಟ ಚಾಳಿ ಬಿಟ್ಟುಬಿಡಲು ಎಷ್ಟೊಂದು ಸುಲಭ ದಾರಿಗಳಿವೆ! ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಯುನಿಕೋಡ್ ಕನ್ನಡದಲ್ಲೇ ಟೈಪ್ ಮಾಡಲು ಅವಕಾಶಗಳನ್ನು ಆಯಾ ಕಂಪನಿಗಳೇ ಕೊಟ್ಟಿವೆ. ಹೀಗಿರುವಾಗ, ಯುನಿಕೋಡ್ ಕನ್ನಡದಲ್ಲೇ ಬರೆದು ಬರೆದು ಅಂತರಜಾಲವನ್ನು ಕನ್ನಡಮಯವಾಗಿಸಲು ಅಡ್ಡಿಯೇನಿಲ್ಲವೀಗ.

ನುಡಿ-ಬರಹದಲ್ಲಿ ಟೈಪ್ ಮಾಡಿ, ಅದನ್ನು ಎಲ್ಲೆಲ್ಲಿಂದಲೋ ಫಾಂಟ್ ಪರಿವರ್ತಕ ತಂತ್ರಾಂಶವನ್ನು ಹುಡುಕಿ ಯುನಿಕೋಡ್‌ಗೆ ಕನ್ವರ್ಟ್ ಮಾಡುವ ಅಥವಾ ಬದಲಾಯಿಸುವ ಮತ್ತು ಈ ಅವಸರ ಯುಗದಲ್ಲಿಯೂ ಇದಕ್ಕಾಗಿಯೇ ಸಮಯ ವ್ಯರ್ಥವಾಗಿಸುವ ಮನಸ್ಸುಗಳು ಬದಲಾಗಬೇಕಿದೆ! ಬನ್ನಿ, ಕಂಗ್ಲಿಷ್ ಬಿಡೋಣ, ಯುನಿಕೋಡ್ ಶಿಷ್ಟತೆಗೆ ಬದಲಾಗೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು