ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ತಂತ್ರಜ್ಞಾನ: ವಿಶ್ವಕನ್ನಡವಾಗಲಿ ಕನ್ನಡ

Last Updated 26 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಡಿಜಿಟಲ್‌ ಯುಗದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ವಿಶ್ವಮಟ್ಟದಲ್ಲಿ ನೀಡಲು, ನಾವು ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ. ಮುಂದಿನ ಐದು ವರ್ಷಗಳಲ್ಲಿ ಬಳಸುವ ತಂತ್ರಜ್ಞಾನಗಳು ಮತ್ತು ಅದರಲ್ಲಿ ಕನ್ನಡವನ್ನು ನಾವು ಬಳಸಲು ಏನು ಮಾಡಬೇಕು ಮತ್ತು ಹೀಗೆ ಮಾಡುವುದರಿಂದ ಕನ್ನಡಿಗರಿಗೆ ದೊರೆಯುವ ಹೊಸ ಉದ್ಯೋಗ ಅವಕಾಶಗಳು ಹಾಗೂ ನವೋದ್ಯಮ ಅವಕಾಶಗಳು ಯಾವುದು? ಈ ಕುರಿತು ಇದುವರೆಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಸ್ಪಷ್ಟವಾದ ಕ್ರಿಯಾ ಯೋಜನೆ ಇಲ್ಲದಿರುವುದು ಡಿಜಿಟಲ್‌ ಯುಗದಲ್ಲಿ ಕನ್ನಡ ನಿರೀಕ್ಷಿತ ಪ್ರಗತಿ ಸಾಧಿಸಲು ದೊಡ್ಡ ಕೊರತೆಯಾಗಿದೆ.

ನಾವು ದೂರವಾಣಿಯಲ್ಲಿ ಮಾತನಾಡಿದಂತೆ, ಡಿಜಿಟಲ್‌ ತಂತ್ರಜ್ಞಾನ ಆಧಾರಿತ ಸೌಲಭ್ಯಗಳಲ್ಲಿ ಮಾತನಾಡಬಹುದಾ? ಹೌದು, ಧ್ವನಿಯಾಧಾರಿತ ತಂತ್ರಜ್ಞಾನ ಮತ್ತು ಸೌಲಭ್ಯಗಳು ಈ ಅವಕಾಶವನ್ನು ನಮಗೆ ನೀಡುತ್ತಿವೆ. ಉದಾಹರಣೆಗೆ, ಗೂಗಲ್‌, ಸಿರಿ, ಅಲೆಕ್ಸಾದಂತಹ ಸೇವೆಗಳು ನಾವು ಹೇಳಿದ್ದನ್ನು ಗ್ರಹಿಸಿ, ಸೂಚನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತವೆ. 2023ರ ಹೊತ್ತಿಗೆ ವಿಶ್ವಾದಂತ್ಯ ಎಂಟು ನೂರು ಕೋಟಿಗಳಿಗೂ ಹೆಚ್ಚು ಡಿಜಿಟಲ್‌ ಅಸಿಸ್ಟೆಂಟ್‌ಗಳು ಬಳಕೆಯಲ್ಲಿರುತ್ತವೆ ಎಂದು ಉದ್ಯಮತಜ್ಞರ ಅಭಿಪ್ರಾಯ.

ಅಂದರೆ, ಮುಂದಿನ ಎರಡು ವರ್ಷಗಳಲ್ಲಿ ಕೇವಲ ಡಿಜಿಟಲ್‌ ಅಸಿಸ್ಟೆಂಟ್‌ಗಳ ಮೂಲಕ ಕೋಟ್ಯಂತರ ಜನರಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳನ್ನು ಕುರಿತು ತಿಳಿಸಲು ಸಾಧ್ಯವಿದೆ. ಮುದ್ರಿತ ಪುಸ್ತಕಗಳು, ಪ್ರಕಟಣೆಗಳು ಮಾತ್ರವಷ್ಟೇ ಅಲ್ಲ, ಓದುಗರ ಅಭಿರುಚಿಗೆ ತಕ್ಕಂತೆ ಇ-ಪುಸ್ತಕ, ಆಡಿಯೊ ಪುಸ್ತಕ, ಪಾಡ್‌ಕಾಸ್ಟ್‌, ಮೊಬೈಲ್‌ ಆ್ಯಪ್‌ ಇತ್ಯಾದಿಗಳ ರೀತಿಯಲ್ಲಿ ಕನ್ನಡ ಸಾಹಿತ್ಯಕ್ಕೆ ದೇಶವಿದೇಶಗಳಲ್ಲಿ ಹೊಸ ಓದುಗರು ಮತ್ತು ಮಾರುಕಟ್ಟೆಯನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.

ಡಿಜಿಟಲ್‌ ಅಸಿಸ್ಟೆಂಟ್‌ಗಳ ಮೂಲಕ ಮಾಧ್ಯಮ ಕ್ಷೇತ್ರಕ್ಕೂ ಅನುಕೂಲವಿದೆ. ಓದುಗರ ಆಭಿರುಚಿಗೆ ತಕ್ಕಂತೆ ಮಾಹಿತಿ ನೀಡುವ ಮತ್ತು ಶುಲ್ಕ ವಿಧಿಸುವ ಅವಕಾಶ ದೊರೆಯಲಿದೆ. ಉದಾಹರಣೆಗೆ, ಕೆಲವು ಓದುಗರಿಗೆ ಪೂರ್ತಿ ಪತ್ರಿಕೆ ಬದಲಾಗಿ ಕರ್ನಾಟಕದಲ್ಲಿ ನಡೆದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯಲ್ಲಿ ಮಾತ್ರ ಆಸಕ್ತಿ ಇದ್ದರೆ, ಅವರಿಗೆ ಅಂತಹ ಮಾಹಿತಿಯನ್ನು ನೀಡಲು ಡಿಜಿಟಲ್‌ ಅಸಿಸ್ಟೆಂಟ್‌ ಬಳಸಬಹುದಾಗಿದೆ. ಇಷ್ಟು ಮಾತ್ರವಲ್ಲ, ವರ್ಷ 2022ರಲ್ಲಿ ವಿಶ್ವಾದಂತ್ಯ ಡಿಜಿಟಲ್‌ ಅಸಿಸ್ಟೆಂಟ್‌ಗಳ ಮೂಲಕ ನೀಡುವ ಜಾಹೀರಾತುಗಳಿಂದ ಒಂದು ಸಾವಿರದ ಒಂಬೈನೂರು ಕೋಟಿ ಡಾಲರ್‌ ಆದಾಯ ಬರುವ ನಿರೀಕ್ಷೆ ಇದೆ.

ಇಷ್ಟೊಂದು ಸಾಧ್ಯತೆಗಳು ಮತ್ತು ಉಪಯೋಗ ಇರುವ ಡಿಜಿಟಲ್‌ ಅಸಿಸ್ಟೆಂಟ್‌ಗಳಲ್ಲಿ ಕನ್ನಡ ಭಾಷೆಯ ಸೌಲಭ್ಯವನ್ನು ನೀಡಲು ಕೆಲಸ ಪ್ರಾರಂಭವಾಗಿದೆ. ನಾವು ಕನ್ನಡದಲ್ಲಿ ಮಾತನಾಡಿದ್ದನ್ನು ಗ್ರಹಿಸಿ, ಡಿಜಿಟಲ್‌ ಅಸಿಸ್ಟೆಂಟ್‌ ಕನ್ನಡದಲ್ಲಿ ನಮಗೆ ಉತ್ತರಿಸಿದರೆ ಸಾಕಾಗುವುದಿಲ್ಲ. ಕನ್ನಡ ಸಾಹಿತ್ಯ, ಸಂಗೀತ, ಕಲೆ, ಹೀಗೆ ವಿವಿಧ ವಿಷಯಗಳನ್ನು ಕುರಿತು ಸಮಗ್ರವಾದ ಕ್ಯೂರೇಟೇಡ್‌ ಡೇಟಾವನ್ನು ಮೊದಲು ಸಿದ್ಧಪಡಿಸಬೇಕು ಮತ್ತು ಡಿಜಿಟಲ್‌ ಅಸಿಸ್ಟೆಂಟ್‌ಗೆ ಈ ಡೇಟಾವನ್ನು ಹೇಗೆ ಬಳಸಬೇಕು ಎಂದು ಕಲಿಸಬೇಕು. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೊದಲಾದ ತಂತ್ರಜ್ಞಾನಗಳನ್ನು ಈ ಯೋಜನೆಯಲ್ಲಿ ಬಳಸಲಾಗುತ್ತದೆ. ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆವೊಂದರ ಮನವೊಲಿಸಿ, ಇಷ್ಟು ದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ವರ್ಷದಲ್ಲಿ ಈ ಸಂಸ್ಥೆಯು ಅಭಿವೃದ್ಧಿ ಪಡಿಸಿ, ಮಾರಾಟ ಮಾಡುತ್ತಿರುವ ಡಿಜಿಟಲ್‌ ಅಸಿಸ್ಟೆಂಟ್‌ವೊಂದರಲ್ಲಿ ಮೊದಲ ಹಂತದಲ್ಲಿ ಕೆಲವು ಕನ್ನಡ ಸೌಲಭ್ಯಗಳನ್ನು ನೀಡುವ ಉದ್ದೇಶವಿದೆ. ನಂತರದ ದಿನಗಳಲ್ಲಿ ಹಂತ ಹಂತವಾಗಿ ಇಂಗ್ಲಿಷ್‌ ಭಾಷೆಯಂತೆ ಕನ್ನಡ ಭಾಷೆಯಲ್ಲಿ ಕೂಡ ಸಮಸ್ತ ಸೌಲಭ್ಯಗಳನ್ನು ನೀಡುವುದು ಈ ಯೋಜನೆಯ ಒಟ್ಟು ಉದ್ದೇಶವಾಗಿದೆ.

ಆಸ್ಪತ್ರೆಗಳು, ಹೊಟೇಲ್‌ಗಳು, ಮಾಲ್‌ಗಳು, ಕಚೇರಿಗಳು, ಉದ್ಯಮಗಳು, ಬ್ಯಾಂಕುಗಳು – ಹೀಗೆ ವಿವಿಧ ಕ್ಷೇತ್ರಗಳಲ್ಲಿ ಡಿಜಿಟಲ್‌ ಅಸಿಸ್ಟೆಂಟ್‌ಗಳ ಬಳಕೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲಿ ಇಂತಹ ಸೌಲಭ್ಯಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದರಿಂದ ಕನ್ನಡಿಗರಿಗೆ ಹೆಚ್ಚು ಅನುಕೂಲವಾಗುತ್ತದೆ ಮತ್ತು ಈ ಕೌಶಲವನ್ನು ಕಲಿಯುವ ಕನ್ನಡಿಗರಿಗೆ ಉದ್ಯೋಗ ಅವಕಾಶಗಳು ಕೂಡ ಹೆಚ್ಚಾಗುತ್ತವೆ.

ಡಿಜಿಟಲ್‌ ಅಸಿಸ್ಟೆಂಟ್‌ ತಂತ್ರಜ್ಞಾನ ಬಳಕೆಯಲ್ಲಿ ಮಾಹಿತಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಬಳಕೆದಾರರ ಮಾಹಿತಿ ಇರಬಹುದು, ಲೇಖಕರು, ಕಲಾವಿದರು ಮತ್ತು ಪ್ರಕಾಶಕರ ಹಕ್ಕು ಸಾಮ್ಯವಿರಬಹುದು, ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಡಿಜಿಟಲ್‌ ಹಕ್ಕುಸಾಮ್ಯ ನಿರ್ವಹಣೆ ಕ್ಷೇತ್ರದ ತಜ್ಞರು ಮತ್ತು ಸೈಬರ್‌ ಸುರಕ್ಷತೆ ತಜ್ಞರು, ಡಿಜಿಟಲ್‌ ಅಸಿಸ್ಟೆಂಟ್‌ ಉಪಕರಣ, ಮಾಹಿತಿ ಮತ್ತು ನೆಟವರ್ಕ್‌ ಸುರಕ್ಷತೆ ವಿಧಾನಗಳನ್ನು ಅನುಷ್ಠಾನಗೊಳಿಸುತ್ತಾರೆ. ಡಿಜಿಟಲ್‌ ಹಕ್ಕುಸಾಮ್ಯ, ಸೈಬರ್‌ ಸುರಕ್ಷತೆ ಕೌಶಲಗಳನ್ನು ಗಳಿಸುವ ಕನ್ನಡಿಗರಿಗೆ ಈ ಕ್ಷೇತ್ರಗಳಲ್ಲಿ ಕೂಡ ಉದ್ಯೋಗ ಅವಕಾಶಗಳು ದೊರೆಯುತ್ತವೆ.

ಡಿಜಿಟಲ್‌ ಅಸಿಸ್ಟೆಂಟ್‌ ಅನ್ನು ಕನ್ನಡದಲ್ಲಿ ಬಳಸಲು ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಜೊತೆ ಕೆಲಸ ಮಾಡುವುದು ಅನಿವಾರ್ಯವಲ್ಲ. ಸರ್ಕಾರವೂ ಸೇರಿದಂತೆ ಕನ್ನಡ ದಿನಪತ್ರಿಕೆಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿ, ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ತಂತ್ರಜ್ಞಾನ ಪರಿಣಿತರು – ಹೀಗೆ ಎಲ್ಲರೂ ಸೇರಿ ಕೆಲಸ ಮಾಡಿದರೆ, ಮುಂದಿನ ವರ್ಷಗಳಲ್ಲಿ ಕನ್ನಡವನ್ನು ವಿಶ್ವಕನ್ನಡ ಮಾಡುವಲ್ಲಿ ಡಿಜಿಟಲ್‌ ಅಸಿಸ್ಟೆಂಟ್‌ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT