ಗುರುವಾರ , ಜೂನ್ 24, 2021
22 °C

ಸ್ಮಾರ್ಟ್‌ಫೋನ್‌ ಜೋಪಾನವಾಗಿರಲಿ

ವಿಶ್ವನಾಥ ಶರ್ಮಾ Updated:

ಅಕ್ಷರ ಗಾತ್ರ : | |

Prajavani

ಸ್ಮಾರ್ಟ್‌ಫೋನ್ ಬಳಸುತ್ತಿರುವವರಲ್ಲಿ ಬಹುತೇಕ ಮಂದಿಗೆ ಅದನ್ನು ಜೋಪಾನ ಮಾಡುವುದು ಹೇಗೆ ಎನ್ನುವ ತಿಳಿವಳಿಕೆ ಇರುವುದಿಲ್ಲ. ಈ ಮಾತನ್ನು ಸುಮ್ಮನೇ ಹೇಳುತ್ತಿಲ್ಲ. ಬೇಕಿದ್ದರೆ ನಿಮ್ಮ ಅಕ್ಕ ಪಕ್ಕ ಇರುವವರ ಫೋನ್‌ಗಳನ್ನು ಒಮ್ಮೆ ಗಮನಿಸಿ, ಎಷ್ಟು ಫೋನ್‌ಗಳು ಹಾಳಾಗಿವೆ ಎಂದು ನಿಮಗೆ ಗೊತ್ತಾಗುತ್ತದೆ.

ಹೀಗೆ ಒಡೆದು ಹೋದ ಪರದೆಯಲ್ಲಿ ಕರೆ ಸ್ವೀಕರಿಸಲು, ಮೆಸೇಜ್‌ ಕಳುಹಿಸಲು ಹರಸಾಹಸ ಪಡುವವರು ಲೆಕ್ಕವಿಲ್ಲದಷ್ಟು ಮಂದಿ ಕಾಣಸಿಗುತ್ತಾರೆ.

ಇನ್ನು, ಬ್ಯಾಟರಿ ಬಾಳಿಕೆ ಅವಧಿ ಕಡಿಮೆ ಎನ್ನುವ ಕಾರಣಕ್ಕೆ ಮೂರು ಹೊತ್ತೂ ಪವರ್‌ಬ್ಯಾಂಕ್‌ ಇಟ್ಟುಕೊಂಡು ತಿರುಗವವರೂ ಇದ್ದಾರೆ. ಹಾಗಾದರೆ ಈ ಸಮಸ್ಯೆಗಳು ಎದುರಾಗದಂತೆ ಇರಲು ಸಾಧ್ಯವಿದೆಯೇ? ಸ್ವಲ್ಪ ಮುನ್ನೆಚ್ಚರಿಕೆಯಿಂದ ಇದ್ದರೆ ಖಂಡಿತಾ ಸಾಧ್ಯವಿದೆ.

ಫೋನ್‌ ಮೇಲ್ದರ್ಜೆಗೇರಿಸುವುದರಿಂದ (ಅಪ್‌ಗ್ರೇಡ್‌) ಹ್ಯಾಕಿಂಗ್‌ ದಾಳಿಗೆ ಒಳಗಾಗುವುದು ತಪ್ಪಿಸಬಹುದು. ಆದರೆ, ಅಪ್‌ಗ್ರೇಡ್‌ ಮಾಡುವ ಮುಂಚೆ ಅದರ ಅಗತ್ಯವಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಕೆಲವೊಮ್ಮೆ ಅಪ್‌ಗ್ರೇಡ್‌ ಮಾಡುವುದರಿಂದ ನಿಮ್ಮ ಕ್ಯಾಮೆರಾ ಕ್ಲಾರಿಟಿಯಲ್ಲಿ ವ್ಯತ್ಯಾಸವಾಗಬಹುದು.

ಅದರಲ್ಲಿಯೂ ಆಂಡ್ರಾಯ್ಡ್‌ ಬೆಂಬಲಿತ ಒಎಸ್‌ಗಳನ್ನು ಅಪ್‌ಗ್ರೇಡ್‌ ಮಾಡುವ ಮುಂಚೆ ಗೂಗಲ್‌ನಲ್ಲಿ ಸ್ಮಾರ್ಟ್‌ಫೋನ್‌ನ ಕಂಪನಿಯನ್ನೊಮ್ಮೆ ಚೆಕ್‌ ಮಾಡಿ, ಅಪ್‌ಡೇಟ್‌ ಮಾಡದೇ ಇದ್ದರೆ ಏನಾದರೂ ಸಮಸ್ಯೆ ಆಗುತ್ತದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. 

ವರದಿಗಳ ಪ್ರಕಾರ ಅಮೆರಿಕನ್ನರು 22 ತಿಂಗಳಿಗೊಮ್ಮೆ ಫೋನ್‌ ಅಪ್‌ಗ್ರೇಡ್‌ ಮಾಡುತ್ತಾರೆ. ಈ ರೀತಿ ಹೆಚ್ಚು ಸಮಯದ ಬಳಿಕ ಅಪ್‌ಗ್ರೇಡ್‌ ಮಾಡುವುದರಿಂದ ಫೋನ್‌ನ ಬಾಳಿಕೆ ಅವಧಿ ಕಡಿಮೆಯಾಗುತ್ತದೆ. 

ಅನಗತ್ಯವಾದ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ. ಆ್ಯಪ್‌ಗಳ ಆಟೊ ಅಪ್‌ಡೇಟ್‌ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿಡಿ. ಅಗತ್ಯವಿರುವ ಆ್ಯಪ್‌ಗಳನ್ನು ಮಾತ್ರವೇ ಅಪ್‌ಡೇಟ್‌ ಮಾಡಿಕೊಳ್ಳಿ. 

ಪರದೆ
ಶೇ 50 ರಿಂದ ಶೇ 55ರಷ್ಟು ಸ್ಮಾರ್ಟ್‌ಫೋನ್‌ಗಳ ಪರದೆ ಡ್ಯಾಮೇಜ್‌ ಆಗಿರುತ್ತವೆ ಎನ್ನುವುದು ಎನ್‌ಗ್ಯಾಜೆಟ್‌ ವರದಿ. ಮೊಟೊರೊಲಾ ನಡೆಸಿರುವ ಸಮೀಕ್ಷೆ ಪ್ರಕಾರ, ಮೊಬೈಲ್‌ ಫೋನ್‌ ಬಳಸುತ್ತಿರುವವರಲ್ಲಿ ಶೇ 50ರಷ್ಟು ಮಂದಿ ಕನಿಷ್ಠ ಒಮ್ಮೆಯಾದರೂ ತಮ್ಮ ಫೋನ್‌ನ ಪರದೆಯನ್ನು ಹಾಳುಮಾಡಿಕೊಂಡಿರುತ್ತಾರೆ ಎಂದು ಹೇಳಿದೆ.

ಪರದೆ ಹಾಳಾದರೆ ಒರಿಜಿನಲ್‌ ಪರದೆಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ಫೋನ್‌ ಖರೀದಿಸಿದಾಕ್ಷಣವೇ ಅದಕ್ಕೆ ಹೊಂದುವಂತಹ ಟೆಂಪರ್ ಗ್ಲಾಸ್‌ ಅಳವಡಿಸುವುದು ಮರೆಯಬಾರದು. ಇದರಿಂದ ಮೊಬೈಲ್‌ ಕೈಜಾರಿ ಕೆಳಗೆ ಬಿದ್ದಾಗ ಪರದೆ ಒಡೆದುಹೋಗುವುದು ತಪ್ಪುತ್ತದೆ.

ಫೋನ್‌ ಕೇಸ್‌
ಕೇವಲ ಅಂದವಾಗಿ ಕಾಣುವಂತಹ ಫೋನ್‌ ಕೇಸ್‌ಗಳಿಗೆ ಗಮನ ನೀಡದೆ, ಗುಣಮಟ್ಟದ ಗಟ್ಟಿಮುಟ್ಟಾಗಿರುವ ಕೇಸ್‌ ಖರೀದಿಸಿದರೆ ಅದರಿಂದ ಫೋನ್‌ ಸುರಕ್ಷಿತವಾಗಿಡಬಹುದು. ಇವುಗಳು ಸ್ಕ್ರೀನ್‌ ಜತೆಗೆ ಕ್ಯಾಮೆರಾ ಲೆನ್ಸ್‌ಗೂ ರಕ್ಷಣೆ ಒದಗಿಸುತ್ತವೆ. ಕೇಸ್‌ ಬಳಸುವುದರಿಂದ ದೂಳು, ನೀರಿನಿಂದಲೂ ರಕ್ಷಣೆ ಸಿಗುತ್ತದೆ.

ಬಾತ್‌ರೂಂನಲ್ಲಿ ಫೋನ್‌ ಬಳಸುವುದರಿಂದ ಕೈ ಜಾರಿ ನೀರಿಗೆ ಬೀಳುವ ಅಥವಾ ನೀರು ತಾಕುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಆದಷ್ಟೂ ಬಾತ್‌ರೂಂನಲ್ಲಿ ಫೋನ್‌ ಬಳಸದೇ ಇರುವುದೇ ಒಳ್ಳೆಯದು. ಮಳೆ ಬರುತ್ತಿರುವಾಗ ಫೋನ್‌ಗೆ ನೀರು ತಾಕದಂತೆ ಎಚ್ಚರಿಕೆಯಿಂದ ಬಳಸಬೇಕು. ಸ್ಪೀಕರ್‌, ಹೆಡ್‌ಫೋನ್‌ ಜಾಕ್‌ಗೆ ನೀರು ಹೋಗದಂತೆ ನೋಡಿಕೊಳ್ಳಬೇಕು.

ಬ್ಯಾಟರಿ ಬಾಳಿಕೆ ಕಾಪಾಡಿಕೊಳ್ಳುವುದು
ಒಂದು ಬ್ಯಾಟರಿ 300 ರಿಂದ 500 ಬಾರಿ ಚಾರ್ಜ್ ಮಾಡಿ ಬಳಸುವ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ಶೇ 70ರಷ್ಟು ಚಾರ್ಜಿಂಗ್‌ ಕಡಿಮೆ ಆದಾಗ ಅಥವಾ ಶೇ 30ರಷ್ಟು ಚಾರ್ಜಿಂಗ್‌ ಇದ್ದಾಗ ಮಾತ್ರವೇ ಚಾರ್ಜಿಂಗ್‌ಗೆ ಹಾಕುವುದು ಒಳಿತು. ಹೀಗೆ ಹಾಕಿದಾಗ ಶೇ 100ರಷ್ಟು ಚಾರ್ಜ್‌ ಆಗುವವರೆಗೂ ಬಿಡಬೇಕು.

ಆದರೆ, ಬ್ಯಾಟರಿ ಚಾರ್ಜ್‌ ಇರುವಾಗ ಅದನ್ನು ಶೇ 100ರಷ್ಟು ಚಾರ್ಜ್‌ ಮಾಡಬೇಡಿ. ಹೀಗೆ ಮಾಡುವುದರಿಂದ ಅದರೆ ಬಾಳಿಕ ಅವಧಿ ಕಡಿಮೆಯಾಗುತ್ತದೆ. ತಿಂಗಳಲ್ಲಿ ಯಾವಾಗಲಾದರೂ ಒಮ್ಮೆ 0 ದಿಂದ ಶೇ 100ರಷ್ಟು ಚಾರ್ಜ್‌ ಮಾಡಿ. ಬ್ಯಾಟರಿ ದೀರ್ಘ ಅವಧಿಯವರೆಗೆ ಬಾಳಿಕೆ ಬರುವಂತೆ ಮಾಡಿಕೊಳ್ಳಬಹುದು.

ಬ್ರೈಟ್‌ನೆಸ್‌ ಕಡಿಮೆ ಮಾಡುವುದು, ಬ್ಯಾಕ್‌ಗ್ರೌಂಡ್‌ನಲ್ಲಿ ಸಕ್ರಿಯವಾಗಿರುವ ಆ್ಯಪ್‌ಗಳನ್ನು ನಿಷ್ಕ್ರಿಯಗೊಳಿಸುವುದು, ಸ್ಕ್ರೀನ್‌ ಐಡಲ್‌ ಟೈಮ್‌ ಕಡಿಮೆ ಮಾಡುವುದು, ವೈಬ್ರೆಟ್‌ ಆಯ್ಕೆ ಬಳಕೆ ಕಡಿಮೆ ಮಾಡುವುದರಿಂದಲೂ ಬ್ಯಾಟರಿ ಶಕ್ತಿ ವ್ಯಯವಾಗುವುದನ್ನು ತಪ್ಪಿಸಬಹುದು.

ಸ್ವಚ್ಛವಾಗಿಡಿ
ಶೇ 92ರಷ್ಟು ಸ್ಮಾರ್ಟ್‌ಫೋನ್‌ಗಳು ಬ್ಯಾಕ್ಟೀರಿಯಾದಿಂದ ಕೂಡಿರುತ್ತವೆ ಎಂದು ಲಂಡನ್‌ ಸ್ಕೂಲ್‌ ಆಪ್‌ ಹೈಜೀನ್‌ ಆ್ಯಂಡ್‌ ಟ್ರೋಪಿಕಲ್‌ ಮೆಡಿಸಿನ್‌ ಹೇಳಿದೆ. 

ಮೃದುವಾದ ಹೊಸ ಬಟ್ಟೆ ಅಥವಾ ಟವೆಲ್‌ ಬಳಸಿ ಪರದೆ ಕ್ಲೀನ್‌ ಮಾಡಬಹುದು. ಒಣಗಿದ ಬಟ್ಟೆಯಿಂದ ಪರದೆ ಕ್ಲೀನ್‌ ಆಗದೇ ಇದ್ದರೆ, ಬಟ್ಟೆಯನ್ನು ಸ್ವಲ್ಪ ಒದ್ದೆಮಾಡಿಕೊಂಡು ಒರೆಸಿ. ಡಿಸ್ಟಿಲ್ಡ್‌ ವಾಟರ್‌ ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಚ್ಛಗೊಳಿಸಲೆಂದೇ ಇರುವ ದ್ರಾವಣಗಳನ್ನು ಬಳಸಬಹುದು.

ಆದರೆ ಈ ದ್ರಾವಣಗಳನ್ನು ಬಳಸುವಾಗ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಇಡುವುದು ಒಳ್ಳೆಯದು. ಸ್ಪೀಕರ್‌, ಚಾರ್ಜಿಂಗ್‌ ಮತ್ತು ಇಯರ್‌ಫೋನ್‌ ಜಾಕ್‌ಗಳಿಗೆ ದ್ರಾವಣ ಹೋಗದಂತೆಯೂ ಜಾಗರೂಕತೆ ವಹಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು