ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾದಾ ಅಲ್ಲ, ಸ್ಮಾರ್ಟ್‌ ಮಾಸ್ಕ್‌ಗಳು, ಇಲ್ಲಿವೆ ತಂತ್ರಜ್ಞಾನ ಆಧಾರಿತ

Last Updated 3 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಇಂದು ವೈರಸ್‌ಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸುವುದು ಅನಿವಾರ್ಯವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ಸೀಮಿತವಾದ ಹಲವು ಬಗೆಯ ಮಾಸ್ಕ್‌ಗಳಿವೆ. ಇವುಗಳಿಗೆ ಭಿನ್ನವೆಂಬಂತೆ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಮಾಸ್ಕ್‌ಗಳನ್ನು ತಯಾರಿಸುವಲ್ಲಿ ತಂತ್ರಜ್ಞರು ಮಗ್ನರಾಗಿದ್ದಾರೆ. ಇಂಥ ಕೆಲವು ಮಾಸ್ಕ್‌ಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೆ, ಇನ್ನೂ ಕೆಲವು ಬಳಕೆಗೆ ಸಿಗುವ ಹಂತದಲ್ಲಿವೆ. ಅಂಥ ಕೆಲವು ಸ್ಮಾರ್ಟ್‌ ಮಾಸ್ಕ್‌ಗಳ ಮಾಹಿತಿ ಇಲ್ಲಿದೆ.

ಬ್ರೀಜ್‌ ಮಾಸ್ಕ್‌

ಇದು ಆಟೊಮೆಟೆಡ್‌ ಸ್ಮಾರ್ಟ್‌ ಎಲೆಕ್ಟ್ರಿಕ್‌ ಮಾಸ್ಕ್‌. ಇದನ್ನು ನಮ್ಮ ಮೊಬೈಲ್ ಫೋನ್, ಡಿವೈಸ್‌ ಯುಎಸ್‌ಬಿ ಕೇಬಲ್‌ಗಳು ಅಥವಾ ಗುಣಮಟ್ಟದ ಮೈಕ್ರೊ ಯುಎಸ್‌ಬಿ ಕೇಬಲ್‌ ಬಳಸಿ ಚಾರ್ಜ್‌ ಮಾಡಬಹುದು. 30 ನಿಮಿಷ ಚಾರ್ಜ್‌ಗಿಟ್ಟರೆ ಸಂಪೂರ್ಣ ಚಾರ್ಜ್‌ ಆಗುತ್ತದೆ. ನೋಡುವುದಕ್ಕೂ ಸುಂದರವಾಗಿರುವಂತೆ ಇದನ್ನು ತಯಾರಿಸಲಾಗಿದ್ದು, ಮೂತಿಯ ಭಾಗ ಕಾಣುವಂತೆ ಫೈಬರ್‌ ಗ್ಲಾಸನ್ನು ಅಳವಡಿಸಲಾಗಿದೆ; ಹೀಗಾಗಿ ಮಾಸ್ಕ್‌ ಧರಿಸಿದ್ದರೂ ನಮ್ಮನ್ನು ಇತರರು ಸುಲಭವಾಗಿ ಗುರುತಿಸಬಹುದು. ಈ ಮಾಸ್ಕ್‌ನ ಎಡಭಾಗದಲ್ಲಿ ಏರ್‌ಫಿಲ್ಟರ್‌ ಫ್ಯಾನ್‌ ಅಳವಡಿಸಲಾಗಿದ್ದು, ಇದು ವಾತಾವರಣದಲ್ಲಿರುವ ಕಲುಷಿತ ಗಾಳಿಯನ್ನು ಶುದ್ಧೀಕರಿಸಿ ನಮಗೆ ತಲುಪಿಸುತ್ತದೆ; ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ದೇಹ ಪ್ರವೇಶಿಸದಂತೆ ತಡೆಯುತ್ತದೆ. ಆದರೆ ಈ ಮಾಸ್ಕ್‌ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದಿಲ್ಲ.

ವೂಬಿ ಪಾಪ್‌ ಮಾಸ್ಕ್‌

ಇದೊಂದು ಸಿಲಿಕಾನ್‌ ಮಾಸ್ಕ್‌. ಇದನ್ನು ಮಕ್ಕಳ ರಕ್ಷಣೆಗಾಗಿಯೇ ತಯಾರಿಸಲಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್‌ ತಂತ್ರಜ್ಞಾನವಿಲ್ಲದಿದ್ದರೂ ಗಾಳಿಯಲ್ಲಿನ ಶೇ. 95ರಷ್ಟು ಹಾನಿಕಾರಕಗಳು ನಮ್ಮ ದೇಹವನ್ನು ಪ್ರವೇಶಿಸದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದನ್ನು ವಿವಿಧ ಉಪಕರಣಗಳನ್ನು ಜೋಡಿಸಿ ತಯಾರಿಸಲಾಗಿದ್ದು, ಬೇಕೆಂದಾಗ ಬಿಡಿಸಿ ಸ್ವಚ್ಛಗೊಳಿಸಿಕೊಳ್ಳಬಹುದು. ಎರಡು ಬಗೆಯ ಫಿಲ್ಟರ್‌ಗಳನ್ನು ಅಳವಡಿಸಲಾಗಿದ್ದು, ಅಗ್ನಿದುರಂತ, ವಿಪರೀತ ವಾಯುಮಾಲಿನ್ಯವಿರುವಂಥ ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದು.

ಎಒ ಏರ್‌ ಫ್ಲೈ ಥ್ರೊ

ನೋಡಲು ಕನ್ನಡಕದಂತೆ ಕಾಣುವ ಈ ಮಾಸ್ಕ್‌ ವಿನ್ಯಾಸ ಆಕರ್ಷಕವಾಗಿದೆ. ಇದು ಪ್ರಸ್ತುತ ಬಳಕಗೆ ಲಭ್ಯವಿಲ್ಲದಿದ್ದರೂ ಭವಿಷ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಸಾಮಾನ್ಯ ಮನುಷ್ಯರಷ್ಟೇ ಅಲ್ಲದೆ ಬೃಹತ್‌ ಕೈಗಾರಿಕಾ ಪ್ರದೇಶಗಳು ಹಾಗೂ ಹೆಚ್ಚು ವಾಯುಮಾಲಿನ್ಯವಿರುವಂಥ ಪ್ರದೇಶಗಳಲ್ಲಿ ಬಳಸುವುದಕ್ಕೆ ನೆರವಾಗಲೆಂದೇ ಇದನ್ನು ತಯಾರಿಸಲಾಗಿದೆ. ಇದರಲ್ಲಿ ಮೂರು ಎಲೆಕ್ಟ್ರಿಕ್‌ ಏರ್‌ಫಿಲ್ಟರ್‌ ಫ್ಯಾನ್‌ಗಳನ್ನು ಅಳವಡಿಸಲಾಗಿದ್ದು, ವಾತಾವರಣದಲ್ಲಿರುವ ಹಾನಿಕಾರಕಗಳು ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ. ಮಕ್ಕಳಿಂದ ಹಿರಿಯರವರೆಗೆ ಗಾತ್ರಕ್ಕೆ ತಕ್ಕಂತೆ ಹೊಂದಿಸಿಕೊಂಡು ಮೂತಿಗೆ ಸಿಕ್ಕಿಸಿಕೊಳ್ಳಬಹುದು. 2020ರ ಜನವರಿಯಲ್ಲಿ ನಡೆದ ಸಿಇಎಸ್‌ ವಸ್ತು–ಉಪಕರಣಗಳ ಪ್ರದರ್ಶನದಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು.

ಫಿಲಿಪ್ಸ್‌ ಏರ್‌ ಮಾಸ್ಕ್‌

ಹೆಸರೇ ಹೇಳುವಂತೆ ಇದು ಫಿಲಿಪ್ಸ್‌ ಕಂಪನಿ ತಯಾರಿಸಿದ ಸ್ಮಾರ್ಟ್‌ ಮಾಸ್ಕ್‌. ಇದು ಸಂಪೂರ್ಣ ಎಲೆಕ್ಟ್ರಾನಿಕ್‌ ತಂತ್ರಜ್ಞಾನ ಆಧಾರಿತ ಮಾಸ್ಕ್‌ ಆಗಿದ್ದು, ಆಟೊಮೆಟೆಡ್‌ ಏರ್‌ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ. ಇದು ನೋಡಲು ಸಾಮಾನ್ಯ ಬಟ್ಟೆಯ ಮಾಸ್ಕ್‌ನಂತೆ ಕಂಡರೂ ಎಡಭಾಗದಲ್ಲಿ ಗಾಳಿ ಶುದ್ಧೀಕರಿಸುವ ಫಿಲ್ಟರ್‌ ಅಳವಡಿಸಲಾಗಿದೆ. ಇದು ಪುಟ್ಟ ಮೋಟಾರ್‌ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ. ಮೈಕ್ರೊ ಯುಎಸ್‌ಬಿ ಚಾರ್ಜಿಂಗ್‌ ಪೋರ್ಟಲ್‌ ಇರುವುದರಿಂದ ಚಾರ್ಜ್‌ಗೆ ಇಟ್ಟು ಅಗತ್ಯ ಸಂದರ್ಭಗಳಲ್ಲಿ ಬಳಸಬಹುದು. ಇದರ ಹೊರನೋಟ ಕ್ರೀಡಾಪಟುಗಳಿಗೆ ಹೆಚ್ಚು ಒಪ್ಪುತ್ತದೆ. ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಇವಲ್ಲದೆ ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸುವಂತೆ ಇದನ್ನು ತಯಾರಿಸಲಾಗಿದೆ. ಮೂರು ವಿಂಡ್‌ ಮೋಡ್‌ಗಳು, 3ಡಿ ಲೇಸರ್‌ ಕಟ್‌ನಂಥ ವೈಶಿಷ್ಟ್ಯಗಳೂ ಇದರಲ್ಲಿವೆ.

ಕ್ಲಿಯು ಮಾಸ್ಕ್‌

ಇದು ಪಾರದರ್ಶಕ ಸಿಲಿಕಾನ್‌ ಮಾಸ್ಕ್ ಆಗಿದ್ದು, ಮ್ಯಾಗ್ನೆಟಿಕ್‌ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಎಲೆಕ್ಟ್ರಿಕ್‌ ತಂತ್ರಜ್ಞಾನ ಆಧಾರಿತ ಮಾಸ್ಕ್‌ಗಳಿಗೆ ಹೋಲಿಸಿದರೆ ಇದರ ವಿನ್ಯಾಸ ಸರಳವಾಗಿಯೇ ಕಾಣುತ್ತದೆ. ಮೂತಿಯನ್ನು ತೋರಿಸುವ ಪಾರದರ್ಶಕ ಭಾಗವನ್ನು ಸರಿಸಿ ಆಹಾರ, ಪಾನೀಯಗಳನ್ನು ಸೇವಿಸಬಹುದು. ಇದರಲ್ಲಿ ಪುಟ್ಟ ಗಾತ್ರದ ಸ್ಮಾರ್ಟ್‌ ಸ್ಪೀಕರ್‌ ಫೋನ್‌ ಹಾಗೂ ಮೈಕ್ರೊ ಫೋನ್‌ ಅಳವಡಿಸಲಾಗಿದ್ದು, ನಮ್ಮ ಸ್ಮಾರ್ಟ್‌ ಫೋನ್‌ಗೆ ಜೋಡಿಸಿಕೊಂಡು ಕರೆ ಬಂದಾಗ ಇದರ ಮೂಲಕವೇ ಮಾತನಾಡಬಹುದು. ಇದರ ಜತೆಗೆ ಚಾರ್ಜ್‌ ಮಾಡಲು ಚಾರ್ಜಿಂಗ್‌ ಸ್ಟ್ಯಾಂಡ್‌ ಕೂಡ ಸಿಗುತ್ತದೆ. ಚಾರ್ಜ್‌ನ ಸಮಯದಲ್ಲಿ ನೇರಳಾತೀತ ಕಿರಣಗಳು ಮಾಸ್ಕ್‌ನೊಳಗೆ ಬಿಡುಗಡೆಯಾಗುತ್ತವೆ. ಇವು ಮಾಸ್ಕ್‌ನಲ್ಲಿ ವೈರಸ್‌, ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT