ಗುರುವಾರ , ಅಕ್ಟೋಬರ್ 6, 2022
27 °C

ಆರೋಗ್ಯ ಪರೀಕ್ಷೆಗೆ ಬಂದಿದೆ ಸ್ಮಾರ್ಟ್‌ ಬ್ಯಾಂಡೇಜ್‌

ಅಮೃತೇಶ್ವರಿ ಬಿ. Updated:

ಅಕ್ಷರ ಗಾತ್ರ : | |

ನಮ್ಮ ಯೋಚನೆಗಳು, ಭಾವನೆಗಳು, ಚಲನವಲನಗಳು, ಹಸಿವು, ನೋವು - ಹೀಗೆ ದೇಹದಲ್ಲಿ ನಡೆಯುವ ಎಲ್ಲ ಕ್ರಿಯೆಗಳನ್ನೂ ನಿಯಂತ್ರಿಸುವ ಮಿದುಳಿನ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ಈ 5G ಯುಗದಲ್ಲಿ ಸ್ಮಾರ್ಟ್‌ ವಾಚಿನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಇನ್ನು ಬ್ಯಾಂಡೇಜು? ನಾವೆಲ್ಲರೂ ಒಂದಲ್ಲ ಒಂದು ಸಾರಿ ಎಲ್ಲಿಯಾರೂ ಬಿದ್ದೋ ಕೊಯ್ದುಕೊಂಡೋ ಅಥವಾ ಅಪಘಾತಗಳಿಂದಲೋ ಬ್ಯಾಂಡೇಜು ಹಾಕಿಸಿಕೊಂಡಿಯೇ ಇರುತ್ತೇವೆ. ಅರೇ! ಮಿದುಳು, ಸ್ಮಾರ್ಟ್‌ ವಾಚು ಮತ್ತು ಬ್ಯಾಂಡೇಜು – ಇವುಗಳಿಗೆ ಎಲ್ಲಿಂದ ಹೇಗೆ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಇದೋ ಈ ಮೂರಕ್ಕೂ ಸಂಬಂಧವಿರುವುದು ಹೀಗೆ. ಚಿಕಾಗೋ ವಿಶ್ವವಿದ್ಯಾನಿಲಯದ ಪ್ರಿಟ್ಸ್‌ಕ (Pritzker) ಸ್ಕೂಲ್‌ ಆಫ್‌ ಮಾಲಿಕ್ಯುಲಾರ್‌ ಇಂಜಿನಿಯರಿಂಗ್‌ನ ಸಂಶೋಧಕರು ಬಾಗುವ, ಹಿಗ್ಗಿಸಬಹುದಾದ, ಕಂಪ್ಯೂಟರಿನಂತೆಯೂ, ನಮ್ಮ ಮಿದುಳಿನ ಹಾಗೆಯೂ ಕೆಲಸ ಮಾಡುವ ಚಿಪ್‌ ಒಂದನ್ನು ರೂಪಿಸಿದ್ದಾರೆ. ಆದರೆ ಅದರ ವಿನ್ಯಾಸ ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ ವಾಚಿನಂತಾಗಲೀ ಅಥವಾ ಮಿದುಳಿನಂತಾಗಲೀ ಇಲ್ಲ. ಸ್ಮಾರ್ಟ್‌ ವಾಚಿನಂತೆಯೇ ‘ಸ್ಮಾರ್ಟ್‌ ಬ್ಯಾಂಡೇಜು’ ಅಷ್ಟೇ.

ಸ್ಮಾರ್ಟ್‌ ವಾಚುಗಳು ಅಥವಾ ಫೋನುಗಳು ನಮ್ಮ ದೇಹದಿಂದ ಕೊಂಚವಾದರೂ ಅಂತರದಲ್ಲಿರುತ್ತದೆ. ಆದ್ದರಿಂದ ಅವು ದಾಖಲಿಸುವ ಮಾಹಿತಿಗಳು ಅಷ್ಟೇನೂ ನಿಖರವಾಗಿಲ್ಲದಿರಬಹುದು. ಈ ಸಂಪರ್ಕ ದೋಷವನ್ನು ಸರಿಪಡಿಸಿ ನಮ್ಮ ದೇಹವನ್ನು ಅತ್ಯಂತ ಹತ್ತಿರದಿಂದ ನಿಖರವಾಗಿ ವೀಕ್ಷಿಸುವಂತಹ ಸಾಧನವನ್ನು ರೂಪಿಸುವ ಯೋಜನೆ ವಾಂಗ್‌ ಮತ್ತು ತಂಡದವರದಾಗಿತ್ತು. ಅದರ ಫಲವೇ ನಮ್ಮ ದೇಹದ ಪ್ರತಿಯೊಂದು ಚಲನೆಯೊಂದಿಗೆ ನಮ್ಮ ಚರ್ಮ ಹೇಗೆ ಚಲಿಸುತ್ತಾ ಎಲ್ಲವನ್ನೂ ಗ್ರಹಿಸುತ್ತದೋ ಅದೇ ರೀತಿ ಗ್ರಹಿಸುವ ಸಶಕ್ತ ಸಾಧನವೇ ಈ ಸ್ಮಾರ್ಟ್‌ ಬ್ಯಾಂಡೇಜು.

ನಮ್ಮ ಹೃದಯದ ಬಡಿತ, ರಕ್ತದೊತ್ತಡ, ನಮ್ಮ ರಕ್ತದಲ್ಲಿ ಎಷ್ಟು ಪ್ರಮಾಣದ ಆಮ್ಲಜನಕವಿದೆ, ಒಂದು ದಿನದಲ್ಲಿ ಎಷ್ಟು ಹೆಜ್ಜೆ ನಡೆದಿದ್ದೀವಿ – ಎಂಬೆಲ್ಲ ಮಾಹಿತಿಯನ್ನೂ ಸ್ಮಾರ್ಟ್‌ ವಾಚುಗಳು ಮತ್ತು ಸ್ಮಾರ್ಟ್‌ ಫೋನುಗಳು ಹೇಳುತ್ತವೆ. ಅದರಿಂದ ನಮ್ಮ ದೈಹಿಕ ಸದೃಢತೆ ಎಷ್ಟಿದೆ ಎಂಬ ಬಗ್ಗೆ ನಾವೇ ತಿಳಿದುಕೊಳ್ಳಬಹುದು. ಆದರೀಗ ಸ್ಮಾರ್ಟ್‌ ಬ್ಯಾಂಡೇಜುಗಳು ಆಸ್ಪತ್ರೆಯಲ್ಲಿರುವ ದೊಡ್ಡ ದೊಡ್ಡ ಯಂತ್ರಗಳು ಮಾಡುವ ಹಾಗೆ ನಮ್ಮ ದೇಹದ ಆರೋಗ್ಯ ತಪಾಸಣೆಯನ್ನೂ ಮಾಡುತ್ತವಂತೆ. ರಕ್ತದಲ್ಲಿರುವ ಸಕ್ಕರೆ ಹಾಗೂ ಆಮ್ಲಜನಕದ ಪ್ರಮಾಣ, ಚಯಾಪಚಯ ಕ್ರಿಯೆಯ ಮೂಲಕ ರಕ್ತಕ್ಕೆ ಸೇರುವ ಆಹಾರ ಅಥವಾ ಔಷಧೀಯ ಅಂಶಗಳನ್ನು ಕೂಡ ತಿಳಿಸುತ್ತವಂತೆ. ಸ್ಮಾರ್ಟ್‌ ವಾಚು ಹೊರಲಾರದಷ್ಟು ಭಾರವಿಲ್ಲದಿದ್ದರೂ ಮಲಗುವಾಗ ವಿಶ್ರಮಿಸುವಾಗ ತೆಗೆದಿಡಬೇಕೆನ್ನಿಸುತ್ತದೆ. ಆದರೆ ಸ್ಮಾರ್ಟ್‌ ಬ್ಯಾಂಡೇಜು ನಮ್ಮ ಚರ್ಮದಷ್ಟೇ ತೆಳುವಾಗಿರುವುದರಿಂದ ಧರಿಸಿಕೊಳ್ಳುವುದೂ ಸುಲಭ ಹಾಗೂ ನಮಗೆ ಏನನ್ನೋ ಹೊತ್ತಿರುವಂತೆಯೂ ಭಾಸವಾಗುವುದಿಲ್ಲ. ಎಷ್ಟು ಹೊತ್ತು ಬೇಕಾದರೂ ಧರಿಸಿಕೊಂಡರೂ ಆರಾಮಾಗಿರಬಹುದು. ನಮಗೆ ಅರಿವೇ ಇಲ್ಲದಂತೆ ಇವು ನಮ್ಮ ಆರೋಗ್ಯ ತಪಾಸಣಾ ಕಾರ್ಯದಲ್ಲಿ ತೊಡಗಿಕೊಂಡು ಕ್ಷಣಕ್ಷಣವೂ ಮಾಹಿತಿಯನ್ನು ದಾಖಲು ಮಾಡುತ್ತಿರುತ್ತವೆ. ‌

ನಮ್ಮ ಮಿದುಳು ಹೇಗೆ ನಮ್ಮ ದೇಹಾರೋಗ್ಯದಲ್ಲಾಗುವ ವ್ಯತ್ಯಾಸಗಳನ್ನು ಏನಾದರೊಂದು ಲಕ್ಷಣಗಳ ಮುಖಾಂತರ ಸೂಚನೆ ಕೊಡುತ್ತದೋ, ಅಂತೆಯೇ ಇವೂ ಕಾರ್ಯ ನಿರ್ವಹಿಸಬೇಕು. ಹಾಗೆ ಆಗಬೇಕೆಂದರೆ ಆ ಸಾಧನವು ಸುಲಭವಾಗಿ ಬಾಗಬೇಕು, ಹಿಗ್ಗಬೇಕು. ಹೀಗೆ ಹಿಗ್ಗುವ, ಬಾಗುವಂತಹ ಪಾಲಿಮರ್‌ ವಸ್ತುಗಳು ಈ ಸಾಧನಗಳಿಗೆ ಸೂಕ್ತ ಎಂದು ವಾಂಗ್‌ ಮತ್ತು ತಂಡದವರು ಯೋಚಿಸಿದರು. ತಮ್ಮ ಯೋಚನೆಯಂತೆ ಪಾಲಿಮರ್‌ ಬಳಸಿ ಈ ಸಾಧನವನ್ನು ವಿನ್ಯಾಸ ಮಾಡಿ ಕೃತಕ ಬುದ್ಧಿಮತ್ತೆಯನ್ನು ಕಲಿಸಿ ಆರೋಗ್ಯ ತಪಾಸಣೆ ಮಾಡುತ್ತದೆಯೇ ಎಂದು ಪರೀಕ್ಷಿಸಿದ್ಧಾರೆ. ಆಶ್ಚರ್ಯವೆಂಬಂತೆ, ಬ್ಯಾಂಡೇಜು ಕೇವಲ ಯಂತ್ರದಂತೆ ಕೆಲಸ ಮಾಡದೇ, ಮನುಷ್ಯನ ಒಂದು ಜೀವಂತ ಮಿದುಳಿನಂತೆ ಸಮಗ್ರವಾಗಿ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಿತಂತೆ. ಇದನ್ನು ವಾಂಗ್‌ ಮತ್ತು ತಂಡದವರು ‘ನ್ಯೂರೋಮಾರ್ಫಿಕ್‌ ಕಂಪ್ಯೂಟಿಂಗ್‌ ಚಿಪ್‌’ ಎಂದು ಕರೆದಿದ್ದಾರೆ.

ಈ ಚಿಪ್‌ ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಲು ಮನುಷ್ಯಹೃದಯದ ಎಲೆಕ್ಟ್ರೋಕಾರ್ಡಿಯೋಗ್ರಾಂನ ದತ್ತಾಂಶವನ್ನು ವಿಶ್ಲೇಷಣೆ ಮಾಡಿ ನೋಡಿದ್ದಾರೆ. ಅವರು ಈ ಚಿಪ್‌ಗೆ ಎಲೆಕ್ಟ್ರೋಕಾರ್ಡಿಯೋಗ್ರಾಂನ ದತ್ತಾಂಶವನ್ನು ಆರೋಗ್ಯಕರವಾದದ್ದು ಹಾಗೂ ಅಸಹಜವಾದುದ್ದೆಂದು ಗುರುತಿಸುವುದನ್ನು ಕಲಿಸಿ, ನಂತರ ಹೊಸ ಎಲೆಕ್ಟ್ರೋಕಾರ್ಡಿಯೋಗ್ರಾಂನ ಮೇಲೆ ಪ್ರಯೋಗಿಸಿದ್ದಾರೆ. ಬ್ಯಾಂಡೇಜು ಬಾಗಿದ್ದಾಗಲೂ, ಉದ್ದುದ್ದ ಹಿಗ್ಗಿಸಿದಾಗಲೂ ಹೃದಯದ ಬಡಿತವನ್ನು ನಿಖರವಾಗಿ ವಿಶ್ಲೇಷಿಸಿತ್ತಂತೆ. ಕಾಯಿಲೆ ಎಂಥದ್ದು, ಎಷ್ಟು ತೀವ್ರವಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಇನ್ನಷ್ಟು ಸಂಶೋಧನೆಗಳು ಆಗಬೇಕಿದೆ. ಆದರೆ ಸದ್ಯದಲ್ಲಿ ಈ ಬ್ಯಾಂಡೇಜಿನಂತಹ ಚಿಪ್‌ಗಳು, ರೋಗಿಗಳಿಗೆ ಅಪಾಯ ಸಂಭವಿಸಬಹುದು ಎನ್ನುವುದನ್ನು ಅಂದಾಜಿಸಿ ಚಿಕಿತ್ಸೆಗೆ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಎಚ್ಚರಿಸಬಲ್ಲವು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಇವರು ಟೈಪ್‌1 ಮಧುಮೇಹಿಗಳಿಗೆ ನೀಡುವ ಇನ್ಸುಲಿನ್‌ ಚಿಕಿತ್ಸೆಯ ಸಂದರ್ಭಗಳಲ್ಲಿ ಈಗಾಗಲೇ ಈ ಸಾಧನಗಳಿಂದ ಪಡೆದ ಮಾಹಿತಿಯನ್ನು ಪಡೆದು ಸಫಲರಾಗಿದ್ದಾರಂತೆ.

ಧರಿಸುವಂತಹ ತಂತ್ರಜ್ಞಾನಗಳು (Wearable Technology) ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಯಂತ್ರಕಲಿಕೆಗಳ ಸಮಾಗಮದಿಂದ ಸಾಧ್ಯವಾಗಿರುವ ಈ ಸಶಕ್ತ ಸಾಧನವು ನಮ್ಮ ದೇಹದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಆರೋಗ್ಯಸ್ಥಿತಿಯ ಮಾಹಿತಿಗಳನ್ನು ನಮಗೆ ಕೂತಲ್ಲಿಯೇ ತಿಳಿಸಬಲ್ಲುದೆಂದು ವಿಜ್ಞಾನಿ ಶಿಹೋಂಗ್‌ ವಾಂಗ್‌ ಹೇಳುತ್ತಾರೆ. ಇಂದು ಆರೋಗ್ಯ ತಪಾಸಣೆಗಾಗಿ ವೈದ್ಯರನ್ನು ನೋಡಲು ಮೊದಲೇ ಗೊತ್ತುಪಡಿಸಿಕೊಂಡೋ ಇಲ್ಲವೇ ನೇರವಾಗಿ ಆಸ್ಪತ್ರೆಗೇ ಹೋಗಿ, ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿಯಿದೆ. ಆದರೆ ಯಾವ ಟೆಲಿಮೆಡಿಸಿನ್ನಿಗೂ ಕಡಿಮೆಯಿಲ್ಲದ ಇಂತಹ ತಂತ್ರಜ್ಞಾನಗಳ ಕೃಪೆಯಿಂದ ಭವಿಷ್ಯದಲ್ಲಿ ಕೂತಲ್ಲೇ ನಿಂತಲ್ಲೇ ನಿರಂತವಾಗಿ ನಮ್ಮ ಆರೋಗ್ಯ ತಪಾಸಣೆ ಯನ್ನು ನಾವೇ ಮಾಡಿಕೊಳ್ಳಬಹುದಂತೆ. ಅದುವೂ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮುಂಚೆಯೇ! ಈ ಕನಸನ್ನು ನಿಜವಾಗಿಸುವ, ಧರಿಸಿದ್ದರೂ ನಮ್ಮನ್ನು ಕಿಂಚಿತ್ತೂ ಬಾಧಿಸದ ಕಂಪ್ಯೂಟರ್‌ ಸಾಧನಗಳು ನಮ್ಮ ಬಳಕೆಗೆ ದೊರೆಯಲು ಕೇವಲ ಒಂದು ಹೆಜ್ಜೆಯಷ್ಟೇ ಬಾಕಿ ಎನ್ನುತ್ತಾರೆ, ವಾಂಗ್.

ಹಠಾತ್ತನೆ ಯಾರಾದರೂ ಅಸ್ವಸ್ಥರಾದಾಗ ರಕ್ತದೊತ್ತಡ ಎಷ್ಟಿದೆ ಎಂಬುದನ್ನು ಕ್ಷಣಮಾತ್ರದಲ್ಲಿ ನಿರಂತರವಾಗಿ ತಿಳಿಯಲು ಸಾಧ್ಯವಾದರೆ, ರಕ್ತದೊತ್ತಡವನ್ನು ಸರಿದೂಗಿಸಲು ಸೂಕ್ತ ಚಿಕಿತ್ಸೆಯನ್ನು ನೀಡುವುದು ಸುಲಭವಲ್ಲವೇ? ಇಂತಹ ತಂತ್ರಜ್ಞಾನಗಳು ಅಗ್ಗ ಹಾಗೂ ಸುಲಭವಾಗಿ ಬಳಸಬಹುದಾದರೆ ಎಲ್ಲರಿಗೂ ಎಷ್ಟು ಹಿತಕರ! ಹೀಗಾದಲ್ಲಿ ಇತ್ತೀಚೆಗೆ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಅಥವಾ ನಟ ಪುನೀತ್‌ಗೆ ಸಂಭವಿಸಿದಂತಹ ಎಷ್ಟೋ ಘಟನೆಗಳನ್ನು ತಡೆಯಬಹುದೇನೋ?

ಈ ಸಂಶೋಧನೆಯು ಮೊನ್ನೆ ‘ಮ್ಯಾಟರ್‌’ ಜರ್ನಲ್‌ ನಲ್ಲಿ ವರದಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು