ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19 ಆನ್‌ಲೈನ್ ಹ್ಯಾಕಥಾನ್: ಮಣಿಪಾಲ ದ್ವಿತೀಯ

ಕೇರಳದ ಕಣ್ಣೂರಿನ ವಿದ್ಯಾರ್ಥಿಗಳು ಪ್ರಥಮ
Last Updated 20 ಮೇ 2020, 5:58 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಪರಿಹಾರ / ಸಾಧನಗಳನ್ನು ರೂಪಿಸುವುದಕ್ಕಾಗಿ ನಡೆದ 72 ಗಂಟೆಗಳ ‘ಕೋವಿಡ್‌–19 ಆನ್‌ಲೈನ್ ಹ್ಯಾಕಥಾನ್‌‘ ಸ್ಪರ್ಧೆಯಲ್ಲಿರಾಜ್ಯದ ಮಣಿಪಾಲ್‌ ಎಂಜಿನಿಯರಿಂಗ್ ಕಾಲೇಜಿನ (ಎಂಐಟಿ) ಆರು ವಿದ್ಯಾರ್ಥಿಗಳನ್ನೊಳಗೊಂಡ ತಂಡಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.

ಕೇರಳದ ಕಣ್ಣೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡತಂಡ ಪ್ರಥಮ ಬಹುಮಾನ ಪಡೆದಿದೆ. ಈ ತಂಡದ ಅಭಿನಂದನ್‌ ಸಿ. ಮತ್ತು ಶಿಲ್ಪಾ ರಾಜೀವ್ 10 ಸಾವಿರ ಡಾಲರ್‌ ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಎರಡನೇ ಸ್ಥಾನ ಪಡೆದ ಮಣಿಪಾಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ) ವಿದ್ಯಾರ್ಥಿಗಳಾದ ಜಿತಿನ್ ಸನ್ನಿ, ಜೋಯಲ್ ಜೋಗಿ ಜಾರ್ಜ್, ರೋಹನ್ ರಾವತ್, ರಕ್ಷಿತ್ ನಾಯ್ಡು, ಮೇಘ ಬೇದ್ ಮತ್ತು ಶಿವಾಂಗಿ ಶುಕ್ಲ ಅವರು 5ಸಾವಿರ ಡಾಲರ್‌ ಮೊತ್ತದ ನಗದು ಬಹುಮಾನ ಪಡೆದಿದ್ದಾರೆ.

ಅಮೆರಿಕ ಮೂಲದ ಮೊಟ್ವಾನಿ ಜಡೇಜಾ ಫ್ಯಾಮಿಲಿ ಫೌಂಡೇಷನ್‘ಕೋವಿಡ್‌ 19‘ ವೈರಸ್ ವಿರುದ್ಧ ಹೋರಾಟಕ್ಕಾಗಿ ಸೂಕ್ತ ಪರಿಹಾರಗಳನ್ನು ಕಂಡು ಹಿಡಿಯುವ ಹಿನ್ನೆಲೆಯಲ್ಲಿ ಈ ಹ್ಯಾಕಥಾನ್ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ಭಾರತ ಸೇರಿದಂತೆ ದೇಶ, ವಿದೇಶಗಳ ನೂರಾರು ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಕೊರೊನಾ ಬಿಕ್ಕಟ್ಟಿನಿಂದ ಮುಕ್ತಿ ಹೊಂದವಂತಹ ಪರಿಹಾರಗಳನ್ನು ರೂಪಿಸಿದ್ದರು.

ಮೊದಲ ಬಹುಮಾನ ಪಡೆದ ಕೇರಳದ ತಂಡದವರು ಆಧುನಿಕ ವರ್ಚುವಲ್ ಕ್ಲಾಸ್‍ರೂಂ ಒಳಗೊಂಡ ‘ಐಕ್ಲಾಸ್‍ರೂಂ‘ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಪರ್ಕ ಕಲ್ಪಿಸಿ ವಿದ್ಯಾರ್ಜನೆಗೆ ಸಹಕಾರಿಯಾಗುವಂಥದ್ದು.

ದ್ವಿತೀಯ ಬಹುಮಾನ ಪಡೆದ ಮಣಿಪಾಲ್‌ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಕೊರೊನಾ ವೈರಸ್ ಸೋಂಕಿತ ರೋಗಿ ಸಂಪರ್ಕ ಮಾಡದೇ, ವೆಬ್‌ಕ್ಯಾಮೆರಾ ಮತ್ತು ಬ್ರೌಸರ್ ಮೂಲಕ ರೋಗಿಯ ಆರೋಗ್ಯ ಮಾಹಿತಿ ಸಂಗ್ರಹಿಸುವಂತಹ ‘ಟೆಲಿವೈಟಲ್‘ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.ಈ ನೇರ ಸಂಪರ್ಕ ರಹಿತ ಆರೋಗ್ಯ ವಿಶ್ಲೇಷಕ ಸಾಧನ ‘ಮುಂಚೂಣಿ ಕೊರೊನಾ ಯೋಧರಿಗೆ’ ಅನುಕೂಲವಾಗುತ್ತದೆ ಮತ್ತು ಸೋಂಕು ತಗುಲುವ ಅಪಾಯವನ್ನು ತಡೆಯುತ್ತದೆ.

ಮೂರನೇ ಬಹುಮಾನವನ್ನು ಮೂರು ವಿಭಾಗಗಳಲ್ಲಿ ಸಮನಾಗಿ ಹಂಚಲಾಯಿತು. ಅದರಲ್ಲಿ ‘ಕೋವಿಡ್‌ 19 ಫ್ಯಾಕ್ಟ್‌ ಚೆಕ್ಕರ್‌‘ ಅಭಿವೃದ್ಧಿಪಡಿಸಿದ ತಂಡ ಒಂದು ವಿಭಾಗದಲ್ಲಿ ಮೂರನೇ ಬಹುಮಾನ ಪಡೆಯಿತು.ಮೂರನೇ ಸ್ಥಾನ ಪಡೆದ ಮೂರು ತಂಡಗಳಿಗೆ ತಲಾ 3ಸಾವಿರ ಡಾಲರ್‌ ನಗದು ಬಹುಮಾನ ವಿತರಿಸಲಾಯಿತು.

ಉಳಿದಂತೆ, ಹ್ಯಾಕಥಾನ್‍ನಲ್ಲಿ ಭಾಗವಹಿಸಿ, ಅತ್ಯುತ್ತಮ ‘ಪರಿಹಾರೋಪಾಯಗಳನ್ನು‘ ಅಭಿವೃದ್ಧಿಪಡಿಸಿದ 10 ತಂಡಗಳಿಗೆ ತಲಾ ಒಂದು ಸಾವಿರ ಡಾಲರ್‌ ನಗದು ಬಹುಮಾನವನ್ನೂ ನೀಡಲಾಯಿತು.

ಈ ಆನ್‌ಲೈನ್‌ ಹ್ಯಾಕಥಾನ್‌ಗೆ ಸಾಕಷ್ಟು ಪ್ರವೇಶಗಳು ಬಂದಿದ್ದವು. ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದದು ವಿಶೇಷವಾಗಿತ್ತು. ಈ ಹ್ಯಾಕಥಾನ್‍ನಲ್ಲಿ ಪ್ರಶಸ್ತಿ ವಿಜೇತರಿಗೆ ಒಟ್ಟು 34 ಸಾವಿರ ಡಾಲರ್ ಮೊತ್ತದ ನಗದು ಬಹುಮಾನಗಳನ್ನು ನೀಡಲಾಗಿದೆ.

‘ಸ್ಪರ್ಧಿಗಳು ತಮ್ಮ ಸಂಶೋಧನೆ/ ಪರಿಹಾರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲುಈ ಹಣ, ನೆರವಾಗಲಿದೆ‘ ಎಂದು ಮೋಟ್ವಾನಿ ಜಡೇಜ ಫ್ಯಾಮಿಲಿ ಫೌಂಡೇಷನ್ ಸಂಸ್ಥಾಪಕಿ ಆಶಾ ಜಡೇಜಾ ಮೋಟ್ವಾನಿಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT