ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಡೆಪ್ಯುಟಿ ಪಿ.ಎಂ!

Published : 25 ಸೆಪ್ಟೆಂಬರ್ 2023, 0:19 IST
Last Updated : 25 ಸೆಪ್ಟೆಂಬರ್ 2023, 0:19 IST
ಫಾಲೋ ಮಾಡಿ
Comments

ಬೆಕ್ಕಣ್ಣ ಖುಷಿಯಿಂದ ಸಂಸತ್‌ ಉದ್ಘಾಟನೆಯ ಫೋಟೊಗಳನ್ನು ತೋರಿಸುತ್ತ ಹೇಳಿತು, ‘ನೋಡಿಲ್ಲಿ… ಹೊಸ ಸಂಸತ್ತಿನಾಗೆ ಹೀರೋಯಿನ್‌ಗಳು ಎಷ್ಟ್‌ ಚಂದ ಪೋಸ್‌ ಕೊಟ್ಟಾರೆ’.

‘ಆದರೆ ನಮ್‌ ರಾಷ್ಟ್ರಪತಿಯವರಿಗೇ ಆಹ್ವಾನ ಕೊಟ್ಟಿರಲಿಲ್ಲವಂತೆ’ ಎಂದೆ.

‘ರಾಷ್ಟ್ರಪತಿಯವರಿದ್ದೇ ತಾನೆ ಸಂಸತ್ತು, ಮನಿಯವ್ರಿಗೆ ಆಹ್ವಾನ ಕೊಡ್ತಾರೇನು ಯಾರರೇ’ ಎಂದು ಉಡಾಫೆಯಿಂದ ಹೇಳಿದ ಬೆಕ್ಕಣ್ಣ ಮುಂದಿನ ಫೋಟೊ ತೋರಿಸಿತು.

‘ನಮ್‌ ಕುಮಾರಣ್ಣ ದೇಶ ಉಳಿಸಬೇಕಂತ ಹೆಂತಾ ತ್ಯಾಗ ಮಾಡಿ, ಕಮಲಕ್ಕನ ಮನಿಯವ್ರ ಜೊತೆಗೂಡ್ಯಾನೆ. ಎಷ್ಟೇ ಆಗಲಿ ಮಣ್ಣಿನಮಗ, ಪಂಚೆ ಉಟ್ಟೇ ಭೇಟಿ ಮಾಡ್ಯಾನ’ ಎಂದು ಬಾಯಿತುಂಬ ಹೊಗಳಿತು.

‘ಹೌದ್ಹೌದು, ಕುಮಾರಣ್ಣನ ಪಕ್ಷ ‘ಎಸ್’ ಅಕ್ಷರ ಬಿಸಾಕಿ, ಬರೇ ‌‘ಜೆಡಿ’ ಅಂತ ಶಾರ್ಟ್‌ ಆ್ಯಂಡ್‌ ಸ್ವೀಟ್‌ ಆಗೈತಿ’.

‘ತಪ್ಪೇನೈತಿ? ಸಂವಿಧಾನದ ಹೊಸ ಪ್ರತಿ ಹಂಚ್ಯಾರಲ್ಲ, ಅದ್ರಾಗೇ ಸೆಕ್ಯುಲರ್‌ ಪದ ಕೈಬಿಟ್ಟಾರಂತೆ. ಭಾರತೀಯರ ಜೀನ್‌ ಒಳಗೇ ಜಾತ್ಯತೀತ ಅನ್ನೂದು ಐತಿ, ಹಿಂಗಾಗಿ ಅದನ್ನು ಪ್ರತ್ಯೇಕವಾಗಿ ಹೇಳೂ ಅಗತ್ಯನೇ ಇಲ್ಲ’.

‘ನಿಮ್‌ ಕುಮಾರಣ್ಣ ಕರುನಾಡಿನ ಕಮಲಕ್ಕನ ಮನಿಯವ್ರಿನ್ನ ಬಿಟ್ಟು, ಡೆಲ್ಲಿವಳಗ ದೊಡ್ಡ ಕಮಲಕ್ಕನ ಜೊತಿ ಕೈಜೋಡಿಸ್ಯಾನೆ ಅಂದ್ರ ಬ್ಯಾರೇ ಏನೋ ಮಸಲತ್ತು ಇರಬಕು’.

‘ನನಗೂ ಅದೇ ಅನುಮಾನ. ಕುಮಾರಣ್ಣ ಯಾರ ಜೊತಿ ಮೈತ್ರಿ ಮಾಡಿಕೆಂಡರೂ, ಕುರ್ಚಿ ನಂದೇ ಅನ್ನಾಂವ. ಮೋದಿಮಾಮನ ಪ್ರಧಾನಿ ಕುರ್ಚಿನೇ ಬೇಕು ಅಂದ್ರೂ ಅನ್ನಬೌದು!’

‘ಮೋದಿಮಾಮ, ಶಾಣೇ ಅಂಕಲ್ ಕುರ್ಚಿ ಅಂದ್ರೆ ಅದೇನ್‌ ಮ್ಯೂಸಿಕಲ್‌ ಚೇರ್‌ ಅಂದ್ಕಂಡೀಯೇನು?’

‘ಹಂಗಾರೆ ಡೆಪ್ಯುಟಿ ಪಿಎಂ ಕುರ್ಚಿ ರೆಡಿ ಮಾಡ್ರಿ ನನಗ ಅಂತಾನೆ ನಮ್‌ ಕುಮಾರಣ್ಣ!’

‘ಕೈಪಕ್ಷದೊಳಗೂ ಇನ್ನಾ ಮೂರು ಡೆಪ್ಯುಟಿ ಸಿಎಂ ಮಾಡ್ರಿ ಅಂತ ಮುಸುಕಿನ ಗುದ್ದಾಟ ನಡೆದೈತಲ್ಲ’ ಎಂದೆ.

‘ಕೈಪಕ್ಷದವರು ಗ್ಯಾರಂಟಿ ಬಲದ ಮೇಲೆ ಹೆಂಗೋ ದಿನ ತಳ್ಳುತಾ ಇದ್ದರು… ಈಗ ಡಿಸಿಎಂ ಕುರ್ಚಿ ಗುದ್ದಾಟಗಳ ಜೊತಿಗಿ ಕಾವೇರಿ ಜ್ವರನೂ ಶುರುವಾಗೈತಿ. ಛೇ… ಪಾಪ’ ಬೆಕ್ಕಣ್ಣ ಲೊಚಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT