ಗುರುವಾರ , ಜನವರಿ 27, 2022
21 °C

ಚಿಂತೆ ಬಿಡಿ, ಕನ್ನಡ ಬರೆಯಲು ‘ಪದ’ ಇದೆ: ಲೋಹಿತ್ ಡಿ. ಎಸ್‌ ಏನೆನ್ನುತ್ತಾರೆ?

ಕೃಷ್ಣ ಭಟ್‌ Updated:

ಅಕ್ಷರ ಗಾತ್ರ : | |

Prajavani

ನಮಗೆ ಕನ್ನಡದಲ್ಲಿ ಅನುಕೂಲಕರವಾದ ತಂತ್ರಾಂಶ ಇವೆಯೇ ಎಂದು ನೋಡಿದರೆ, ಎಲ್ಲ ತಂತ್ರಾಂಶಗಳಲ್ಲೂ ಒಂದಲ್ಲ ಒಂದು ಕೊರತೆ ಎದ್ದು ಕಾಣುತ್ತದೆ. ಕೆಲವು ತಂತ್ರಾಂಶಗಳು ಕೆಲವೇ ಅಪ್ಲಿಕೇಶನ್‌ಗಳಿಗೆ ಬೆಂಬಲ ನೀಡುತ್ತವೆ. ಇನ್ನು ಕೆಲವು ತಂತ್ರಾಂಶಗಳು ಯುನಿಕೋಡ್ ಮಾತ್ರ ಬೆಂಬಲಿಸುತ್ತವೆ. ಹೀಗಾಗಿ, ಅದರಲ್ಲಿ ಫಾಂಟ್ ಆಯ್ಕೆಗಳಿಲ್ಲ. ಮುದ್ರಣಕ್ಕೆ ಸುಂದರವಾದ ಫಾಂಟ್ ಸಿಗುವುದಿಲ್ಲ ಎಂಬ ಕೊರಗಿನಿಂದ ಹಿಡಿದು ಹಲವು ರೀತಿಯ ತೊಂದರೆಗಳು ಕನ್ನಡದ ತಂತ್ರಾಂಶಗಳಲ್ಲಿವೆ.

ಬರವಣಿಗೆ ಎಂಬುದು ಪೆನ್ನು–ಹಾಳೆಯಿಂದ ಕಂಪ್ಯೂಟರ್‌ ಕೀಬೋರ್ಡ್‌, ಮಾನಿಟರ್‌ಗೆ ಬದಲಾಗಿ ಹಲವು ವರ್ಷಗಳೇ ಸಂದಿವೆ. ಬರೆದಾದ ನಂತರದ ಹಂತಗಳಿಗೆ ಅಂದರೆ, ಮುದ್ರಣ, ವೆಬ್‌ನಲ್ಲಿ ಪ್ರಸಾರ ಸೇರಿದಂತೆ ಇತರೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹೊಸ ಕಾಲದ ಬಹುತೇಕ ಬರಹಗಾರರು ಈಗ ಕೀಬೋರ್ಡ್‌ನಲ್ಲೇ ಬರೆಯುತ್ತಾರೆ. ಇನ್ನು, ಕೈಯಲ್ಲಿ ಬರೆದರೂ ಅದನ್ನು ನಂತರ ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು ಅತ್ಯಂತ ಸಹಜವಾದ ಪ್ರಕ್ರಿಯೆ.

ಆದರೆ, ಹಾಗೆ ಬರೆಯುವುದಕ್ಕೆ ನಮಗೆ ಕನ್ನಡದಲ್ಲಿ ಅನುಕೂಲಕರವಾದ ತಂತ್ರಾಂಶ ಇವೆಯೇ ಎಂದು ನೋಡಿದರೆ, ಎಲ್ಲ ತಂತ್ರಾಂಶಗಳಲ್ಲೂ ಒಂದಲ್ಲ ಒಂದು ಕೊರತೆ ಎದ್ದು ಕಾಣುತ್ತದೆ. ಕೆಲವು ತಂತ್ರಾಂಶಗಳು ಕೆಲವೇ ಅಪ್ಲಿಕೇಶನ್‌ಗಳಿಗೆ ಬೆಂಬಲ ನೀಡುತ್ತವೆ. ಇನ್ನು ಕೆಲವು ತಂತ್ರಾಂಶಗಳು ಯುನಿಕೋಡ್ ಮಾತ್ರ ಬೆಂಬಲಿಸುತ್ತವೆ. ಹೀಗಾಗಿ, ಅದರಲ್ಲಿ ಫಾಂಟ್ ಆಯ್ಕೆಗಳಿಲ್ಲ. ಮುದ್ರಣಕ್ಕೆ ಸುಂದರವಾದ ಫಾಂಟ್ ಸಿಗುವುದಿಲ್ಲ ಎಂಬ ಕೊರಗಿನಿಂದ ಹಿಡಿದು ಹಲವು ರೀತಿಯ ತೊಂದರೆಗಳು ಕನ್ನಡದ ತಂತ್ರಾಂಶಗಳಲ್ಲಿವೆ.

ಈ ಎಲ್ಲದರ ಮಧ್ಯೆಯೇ, ಈ ನಿಟ್ಟಿನಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತ ಬಂದಿರುವವರು ಲೋಹಿತ್ ಡಿ.ಎಸ್. ಸಾಫ್ಟ್‌ವೇರ್‌ ತಂತ್ರಜ್ಞ ಲೋಹಿತ್‌ ಹತ್ತಾರು ವರ್ಷಗಳ ಹಿಂದೆಯೇ ಪದ ಎಂಬ ಕನ್ನಡ ಬರೆಯುವ ಸಾಫ್ಟ್‌ವೇರ್‌ ಒಂದನ್ನು ಕನ್ನಡಿಗರಿಗೆ ನೀಡಿದ್ದರು. ಅದು ಸರಳ ಮತ್ತು ಸುಲಭವಾದ ಟೈಪಿಂಗ್ ಸೌಲಭ್ಯವನ್ನು ಒದಗಿಸುತ್ತಿದ್ದುದರಿಂದ ಬಹಳಷ್ಟು ಜನರು ಅದನ್ನು ಬಳಸುತ್ತಿದ್ದರು.

ಈಗ ಅದರ ಇನ್ನೊಂದು ಸುಧಾರಿತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇನ್ನಷ್ಟು ಜನರಿಗೆ ಅನುಕೂಲ ಮಾಡಿಕೊಡುವ ಮಹತ್ವದ ಕೆಲಸ ಮಾಡಿದ್ದಾರೆ. ಈ ಹೊಸ ಆವೃತ್ತಿಯಲ್ಲಿ ANSI ಶೈಲಿಯ ಬರವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ, ಈಗಾಗಲೇ ಜನಪ್ರಿಯವಾಗಿರುವ ಕನ್ನಡ ಗಣಕ ಪರಿಷತ್ತಿನ ಸಾಫ್ಟ್‌ವೇರ್‌ ನುಡಿ ಜೊತೆಗೆ ಲಭ್ಯವಾಗುವ ಎಲ್ಲ ಫಾಂಟ್‌ಗಳನ್ನೂ ಇದು ಬೆಂಬಲಿಸುವಂತಾಗಿದೆ. ಸಾಮಾನ್ಯವಾಗಿ ಫಾಂಟ್‌ಗಳ ಆಯ್ಕೆ ವಿಶಾಲವಾಗಿದೆ ಎಂಬ ಕಾರಣಕ್ಕೆ ಮುದ್ರಣದ ಉದ್ದೇಶಕ್ಕೆ ಬರೆಯುವವರು ಇನ್ನೂ ಆನ್ಸಿಯಲ್ಲೇ ಬರೆಯುತ್ತಿದ್ದಾರೆ. ಸುಂದರ ಫಾಂಟ್‌ಗಳ ಆಯ್ಕೆ ಅದರಲ್ಲಿದೆ ಎಂಬುದು ಒಂದು ಮುಖ್ಯ ಕಾರಣ. ಹೀಗಾಗಿ, ಮುದ್ರಣ ಉದ್ದೇಶಕ್ಕಾಗಿ ಬರೆಯುವವರಿಗೆ ಪದ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಪದ ಬಳಸುವವರು ಕೂಡ ಯೂನಿಕೋಡ್‌ನಲ್ಲಿ ಬರೆದು ನಂತರ, ಇತರ ಸಾಫ್ಟ್‌ವೇರ್ ಬಳಸಿಕೊಂಡು ಅದನ್ನು ಕನ್ವರ್ಟ್ ಮಾಡುವ ಅನಿವಾರ್ಯತೆ ಒದಗುತ್ತಿತ್ತು.

ಈ ಹೊಸ ಆವೃತ್ತಿಯಲ್ಲಿ, ಒಂದು ಕನ್ವರ್ಟರ್‌ ಅನ್ನೂ ಪದ ಒದಗಿಸಿದೆ. ಇದರಲ್ಲಿ ಆನ್ಸಿಯಲ್ಲಿ ಬರೆದ ಪದಗಳನ್ನು ಯೂನಿಕೋಡ್‌ಗೆ ಸುಲಭವಾಗಿ ಪರಿವರ್ತಿಸಬಹುದು.

ಕನ್ನಡದಲ್ಲಿ ಬರೆಯಲು ಆರಂಭಿಸುವವರಿಗಾಗಿ ಟೈಪಿಂಗ್ ಟ್ಯೂಟರ್ ಅನ್ನು ಈ ಹೊಸ ಆವೃತ್ತಿಯಲ್ಲಿ ಒದಗಿಸಲಾಗಿದೆ. ಈ ಹಿಂದಿನ ಆವೃತ್ತಿಯಲ್ಲಿ ಕೆ.ಪಿ. ರಾವ್ ಅಭಿವೃದ್ಧಿಪಡಿಸಿದ ಕೀಬೋರ್ಡ್‌ ವಿನ್ಯಾಸದಲ್ಲಿ ಮಾತ್ರ ಬರೆಯಲು ಅವಕಾಶವಿತ್ತು. ಆದರೆ ಈ ಆವೃತ್ತಿಯಲ್ಲಿ ಇನ್‌ಸ್ಕ್ರಿಪ್ಟ್‌ನಲ್ಲಿ ಬರೆಯುವ ಸೌಲಭ್ಯವನ್ನೂ ಒದಗಿಸಲಾಗಿದೆ. ಅಲ್ಲದೆ, ಕೆ.ಪಿ. ರಾವ್ ಅವರು ಅಭಿವೃದ್ಧಿಪಡಿಸಿದ ಕೀಬೋರ್ಡ್‌ ಎಂಬುದನ್ನು ಸ್ಮರಿಸಿಕೊಳ್ಳಲು ಆ ಕೀಬೋರ್ಡ್‌ ಹೆಸರನ್ನು ಕೆ.ಪಿ. ರಾವ್‌ ಎಂದೇ ಬದಲಿಸಿದ್ದೂ ಅಭಿನಂದನೀಯ ಕೆಲಸ. ಹಿಂದಿನ ಆವೃತ್ತಿಯಲ್ಲಿ ಇನ್‌ಸ್ಕ್ರಿಪ್ಟ್‌ ಕೀಬೋರ್ಡ್ ವಿನ್ಯಾಸ ಲಭ್ಯವಿರಲಿಲ್ಲ. ಇದರಿಂದ, ಇನ್‌ಸ್ಕ್ರಿಪ್ಟ್‌ನಲ್ಲಿ ಕನ್ನಡ ಬರೆಯವುದನ್ನು ರೂಢಿಸಿಕೊಂಡವರು ಪದಬಳಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಇವರ ವಿಶೇಷತೆಯೆಂದರೆ, ಇಡೀ ಸಾಫ್ಟ್‌ವೇರ್ ಅನ್ನು ಅವರು ಉಚಿತವಾಗಿ ಕನ್ನಡಿಗರಿಗೆ ಒದಗಿಸಿದ್ದು! ಕನ್ನಡದಲ್ಲಿ ಈಗಾಗಲೇ ಕನ್ನಡ ಬರೆಯುವುದಕ್ಕೆಂದು ಹಲವು ತಂತ್ರಾಂಶಗಳಿವೆ. ಈ ಪೈಕಿ ಹೆಚ್ಚಿನವರು ಬಳಸುತ್ತಿರುವ ನುಡಿ ಕನ್ನಡ ಗಣಕ ಪರಿಷತ್ತು ಅಭಿವೃದ್ಧಿ ಪಡಿಸಿರುವುದಾಗಿರುವುದರಿಂದ ಅದು ಉಚಿತವಾಗಿ ಸಿಗುತ್ತಿದೆ. ಉಳಿದಂತೆ ಬಹುತೇಕ ಎಲ್ಲ ಸಾಫ್ಟ್‌ವೇರ್‌ ಅನ್ನೂ ಹಣ ಕೊಟ್ಟು ಕೊಂಡುಕೊಳ್ಳಬೇಕಿದೆ.

ಆದರೆ, ಇವರು ತಾವು ಹಾಕಿದ ಶ್ರಮಕ್ಕೆ ಸ್ವಲ್ಪವೂ ಪ್ರತಿಫಲ ನಿರೀಕ್ಷಿಸದೇ ಕನ್ನಡಿಗರಿಗಾಗಿ ಈ ಸೌಲಭ್ಯವನ್ನು ಒದಗಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಜನರು ಇದರ ಉಪಯೋಗ ಪಡೆದಿದ್ದಾರೆ. ಒಂದು ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವಲ್ಲಿ ಹಲವು ದಿನಗಳ ಕಾಲ ಶ್ರಮ ಹಾಕಬೇಕಿರುತ್ತದೆ. ಈ ಬಗ್ಗೆ ಮಾತನಾಡಿದ ಲೋಹಿತ್‌ ಡಿ.ಎಸ್‌., ‘ಆನ್ಸಿ ಬೆಂಬಲಕ್ಕಾಗಿ ನಾವು ಹಲವು ಪ್ರಯೋಗಗಳನ್ನು ನಡೆಸಿದ್ದೇವೆ. ಪರಿಣತರನ್ನು ಬಳಸಿಕೊಂಡು ಅವರಿಂದ ಕನ್ನಡ ಹಾಗೂ ಸಂಸ್ಕೃತದ ಕ್ಲಿಷ್ಟ ಪದಗಳನ್ನೆಲ್ಲ ಬರೆದು ನೋಡಿದ್ದೇವೆ. ಸರಿಯಾಗಿ ಅಕ್ಷರಗಳು ಮೂಡಿ ಬರುತ್ತಿಲ್ಲದಿದ್ದಾಗ ಅದಕ್ಕೆ ಕಾರಣ ಹುಡುಕಿ ಸರಿಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಬ್ದಕೋಶ, ಇನ್ನಷ್ಟು ಸ್ವರಚಿಹ್ನೆಗಳನ್ನು ಬಳಸುವ ಆಯ್ಕೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸೇರಿಸುವ ಉದ್ದೇಶವಿದೆ’ ಎಂದು ಹೇಳಿದ್ದಾರೆ.

*

ಈ ಆವೃತ್ತಿಯಲ್ಲಿ ಆನ್ಸಿ ಸೌಲಭ್ಯ ಕಲ್ಪಿಸಲು ನಾವು ತುಂಬಾ ಪ್ರಯೋಗಗಳನ್ನು ನಡೆಸಿದ್ದೇವೆ. ಕನ್ನಡ ಹಾಗೂ ಸಂಸ್ಕೃತ ಕ್ಲಿಷ್ಟ ಪದಗಳನ್ನೆಲ್ಲ ಬರೆಯಲು ಸಾಧ್ಯವಾಗುತ್ತದೆಯೇ ಎಂದು ತಜ್ಞರೊಂದಿಗೆ ಪ್ರಯೋಗ ನಡೆಸಿದ್ದೇವೆ. ಅಲ್ಲದೆ, ಆನ್ಸಿ ಇಂದ ಯುನಿಕೋಡ್‌ಗೆ ಪದಗಳನ್ನು ರೂಪಾಂತರಿಸುವ ಸೌಲಭ್ಯವನ್ನೂ ಕೂಡಾ ಇದೇ ರೀತಿ ಪ್ರಯೋಗ ನಡೆಸಿ, ಹೆಚ್ಚು ನಿಖರವಾಗಿ ಇದು ಕೆಲಸ ಮಾಡುವ ಹಾಗೆ ನೋಡಿಕೊಂಡಿದ್ದೇವೆ. ಮುಂದಿನ ದಿನದಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಯೋಚನೆಯಲ್ಲಿದ್ದೇನೆ. ಇದು ಹೆಚ್ಚು ಜನರಿಗೆ ತಲುಪಬೇಕು ಎಂಬುದು ನನ್ನ ಉದ್ದೇಶ.

 ಲೋಹಿತ್ ಡಿ. ಎಸ್‌. ಪದ ತಂತ್ರಾಂಶದ ನಿರ್ಮಾತೃ

–––

ಲೇಖಕರು

ಕೃಷ್ಣ ಭಟ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು