ಸೋಮವಾರ, ಆಗಸ್ಟ್ 8, 2022
21 °C
ಖಾಸಗಿ ಕಂಪನಿ ಸಹಭಾಗಿತ್ವ: ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಂದ ಅಧ್ಯಯನ

ಪ್ಲಾಸ್ಟಿಕ್‌ ಕಸದಿಂದ ಡೀಸೆಲ್ ಉತ್ಪಾದನೆ: ಯೋಜನೆ ಜಾರಿಗೆ ರಾಮನಗರ ಜಿ. ಪಂ ಮುಂದಡಿ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ಮನಗರ: ಪ್ಲಾಸ್ಟಿಕ್‌ ಕಸದಿಂದ ಇಂಧನ ಉತ್ಪಾದಿಸುವ ಮಾದರಿ ಯೋಜನೆ ಜಾರಿಗೆ ಇಲ್ಲಿನ ಜಿಲ್ಲಾ ಪಂಚಾಯಿತಿ ಮುಂದಾಗಿದ್ದು, ಈ ಸಂಬಂಧ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರ ತಂಡ ಅಧ್ಯಯನ ನಡೆಸಿದೆ.

ಗ್ರಾಮೀಣ ಭಾಗದಲ್ಲಿನ ಕಸ ವಿಲೇವಾರಿ ಘಟಕಗಳನ್ನು ಇದಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲಿಗೆ ನಾಲ್ಕೈದು ಘಟಕಗಳಲ್ಲಿ ಯಂತ್ರೋಪಕರಣ ಅಳವಡಿಸಿ ಡೀಸೆಲ್‌ ಮಾದರಿಯ ಇಂಧನ ಉತ್ಪಾದನೆ ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ ಖಾಸಗಿ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸುಲಭವಾಗಿ ಪ್ಲಾಸ್ಟಿಕ್ ವಿಲೇವಾರಿ, ಮರುಬಳಕೆ ಸಾಧ್ಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಉತ್ಪಾದನೆ ಹೇಗೆ?

ಕನಕಪುರ ತಾಲ್ಲೂಕಿನ ದೊಡ್ಡಮರಳವಾಡಿ ಬಳಿಯ ಭೀಮಸಂದ್ರದೊಡ್ಡಿ ಬಳಿ ಕಂಪನಿ ಯೊಂದು ಸಣ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್‌ನಿಂದ ಇಂಧನ ಉತ್ಪಾದನೆ ಘಟಕ ನಡೆಸುತ್ತಿದೆ. ಇಲ್ಲಿ ಏಕಕಾಲದಲ್ಲಿ 5 ಕೆ.ಜಿ ಪ್ಲಾಸ್ಟಿಕ್ ಬಳಸಿ ಇಂಧನ ತಯಾರಿಸಲಾಗುತ್ತಿದೆ.

ಹಾಲಿನ ಕವರ್‌, ಟೆಟ್ರಾ ಪ್ಯಾಕ್‌ ಮೊದಲಾದ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ ನಿರ್ದಿಷ್ಟ ಉಷ್ಣಾಂಶದಲ್ಲಿ ಕುದಿಸಿದಾಗ ಹೊರಹೊಮ್ಮುವ ಆವಿಯಿಂದ ಇಂಧನ ಶೇಖರಣೆ ಮಾಡಲಾಗುತ್ತಿದೆ. ಈ ಇಂಧನವನ್ನು ಫಿಲ್ಟರ್‌ ಮಾಡಿದಾಗ ಪ್ರತಿ ಕೆ.ಜಿ. ಪ್ಲಾಸ್ಟಿಕ್‌ಗೆ 400–600 ಎಂ.ಎಲ್‌. ಡೀಸೆಲ್‌ ಸಿಗುತ್ತಿದೆ.

ಇದನ್ನು ಸದ್ಯ ಕಾರ್ಖಾನೆಗಳ ಜನರೇಟರ್‌, ಬಾಯ್ಲರ್‌ ಮೊದಲಾದವುಗಳಿಗೆ ಬಳಸಲಾಗುತ್ತಿದೆ. ವಾಹನಗಳ ಬಳಕೆಗೆ ಇನ್ನೂ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ.

ಪ್ಲಾಸ್ಟಿಕ್‌ ಕಾಯಿಸುವ ಪ್ರಕ್ರಿಯೆಯಲ್ಲಿ ಶೇ 15–20 ಪ್ರಮಾಣ ಆವಿ ಆಗುತ್ತಿದ್ದು, ಇದನ್ನೂ ಬಯೋ ಗ್ಯಾಸ್‌ ಮಾದರಿಯಲ್ಲಿ ಸಂಗ್ರಹಿಸಬಹುದಾಗಿದೆ. ಕಡೆಗೆ ಉಳಿಯುವ ಶೇ 40ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ರಸ್ತೆ ನಿರ್ಮಾಣ, ಮತ್ತಿತರ ಕಾಮಗಾರಿಗೆ ಡಾಂಬರ್ ರೂಪದಲ್ಲಿ ಬಳಸಬಹುದಾಗಿದೆ. ಇದರಿಂದ ಶೇಕಡ 100ರಷ್ಟು ಪ್ಲಾಸ್ಟಿಕ್ ಮರುಬಳಕೆ ಸಾಧ್ಯವಿದೆ ಎನ್ನುತ್ತಾರೆ ಕಾರ್ಖಾನೆಯ ಸಿಬ್ಬಂದಿ.

ಭೀಮಸಂದ್ರದೊಡ್ಡಿಯಲ್ಲಿನ ಈ ಕಾರ್ಖಾನೆಯ ಕಾರ್ಯವೈಖರಿಯನ್ನು ಅಧಿಕಾರಿಗಳ ತಂಡ ಅಧ್ಯಯನ ಮಾಡಿದ್ದು, ಇದನ್ನೇ ಖಾಸಗಿ ಸಹಭಾಗಿತ್ವದಲ್ಲಿ ದೊಡ್ಡಮಟ್ಟದಲ್ಲಿ ನಡೆಸಲು ಯೋಜಿಸುತ್ತಿದೆ. 10–15 ಕೆ.ಜಿ ಸಾಮರ್ಥ್ಯದ ಘಟಕದ ನಿರ್ಮಾಣಕ್ಕೆ ₹ 5 ಲಕ್ಷದಿಂದ ₹10 ಲಕ್ಷ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ ಪ್ರತಿ ಕ್ಲಸ್ಟರ್‌ಗೆ ಒಂದರಂತೆ 14 ಘನತ್ಯಾಜ್ಯ ವಿಲೇವಾರಿ ಘಟಕಗಳು ಇವೆ. ಇವುಗಳ ಆವರಣದಲ್ಲೇ ಈ ಯೋಜನೆ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ.

***

ಪ್ರತಿ ಕೆ.ಜಿ ಪ್ಲಾಸ್ಟಿಕ್‌ನಿಂದ 400–600 ಎಂ.ಎಲ್ ಡೀಸೆಲ್ ಉತ್ಪಾದನೆ ಮಾಡಬಹುದು. ಈ ಯೋಜನೆ ಅಡಿ ಶೇ 100ರಷ್ಟು ಪ್ಲಾಸ್ಟಿಕ್ ಮರುಬಳಕೆ ಸಾಧ್ಯವಿದೆ

-ಭರತ್, ಮಾಲೀಕ, ಲ್ಯಾನ್‌ಸನ್‌ ಕಂಪನಿ

***

ಪ್ಲಾಸ್ಟಿಕ್‌ನಿಂದ ಡೀಸೆಲ್‌ ಉತ್ಪಾದಿಸುವ ಘಟಕವನ್ನು ಅಧ್ಯಯನ ಮಾಡಿದ್ದೇವೆ. ಜಿ.ಪಂ.ನ ಕಸ ವಿಲೇವಾರಿ ಘಟಕಗಳಲ್ಲಿ ದೊಡ್ಡ ಮಟ್ಟದಲ್ಲಿ ಇದನ್ನು ಅಳವಡಿಸುವ ಚಿಂತನೆ ಇದೆ 

- ಶಿವಕುಮಾರ್ , ಯೋಜನಾ ನಿರ್ದೇಶಕ, ರಾಮನಗರ ಜಿ.ಪಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು