ಮಂಗಳವಾರ, ನವೆಂಬರ್ 24, 2020
22 °C

ಇಂದಿನಿಂದ ಮೊಬೈಲ್‌ನಲ್ಲಿ ಪಬ್‌ಜಿ ಸಿಗಲ್ಲ; ಗೇಮ್‌ನ ಎಲ್ಲ ಸೇವೆಗಳು ಸ್ಥಗಿತ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪಬ್‌ಜಿ ಮೊಬೈಲ್‌ –ಸಾಂದರ್ಭಿಕ ಚಿತ್ರ

ನವದೆಹಲಿ: ಇಂದಿನಿಂದ (ಅಕ್ಟೋಬರ್‌ 30) ಭಾರತದಲ್ಲಿ ಬಳಕೆದಾರರಿಗೆ 'ಪಬ್‌ಜಿ ಮೊಬೈಲ್‌' ಲಭ್ಯವಾಗುವುದಿಲ್ಲ. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಜನಪ್ರಿಯ ಪಬ್‌ಜಿ ಮೊಬೈಲ್‌ ಲೈಟ್‌ ಸೇರಿದಂತೆ ಇತರೆ 116 ಆ್ಯಪ್‌ಗಳನ್ನು ನಿಷೇಧಿಸಿತ್ತು.

ಸರ್ಕಾರ ಚೀನಾ ಮೂಲದ ಆ್ಯಪ್‌ಗಳನ್ನು ನಿಷೇಧಿಸಿ ಆದೇಶಿಸಿದ ನಂತರದಲ್ಲಿ ಗೂಗಲ್‌ ಪ್ಲೇ ಸ್ಟೋರ್‌, ಆ್ಯಪಲ್‌ ಆ್ಯಪ್‌ ಸ್ಟೋರ್‌ಗಳಿಂದ ಪಬ್‌ಜಿ ಮೊಬೈಲ್‌ ಮತ್ತು ಪಬ್‌ಜಿ ಲೈಟ್‌ ಗೇಮಿಂಗ್‌ ಅಪ್ಲಿಕೇಷನ್‌ಗಳನ್ನು ತೆಗೆಯಲಾಯಿತು. ಆದರೆ, ಅದಾಗಲೇ ಫೋನ್‌ಗಳು ಹಾಗೂ ಟ್ಯಾಬ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿದ್ದವರಿಗೆ ಗೇಮ್ ಆಡಲು ಅಡ್ಡಿಯಾಗಿರಲಿಲ್ಲ. ಇದೀಗ ಉಳಿದ ನಿಷೇಧಿತ ಆ್ಯಪ್‌ಗಳಂತೆಯೇ ಪಬ್‌ಜಿ ಮೊಬೈಲ್‌ ಸಹ ತೆರೆಗೆ ಸರಿದಿದೆ.

ದೇಶದಲ್ಲಿ ಪಬ್‌ಜಿ ಗೇಮ್‌ ವಿತರಣೆ ಮತ್ತು ಪ್ರಕಟಣೆ ಹಕ್ಕು ಪಡೆದಿದ್ದ ಟೆನ್‌ಸೆಂಟ್‌ ಗೇಮ್ಸ್‌, ಭಾರತದ ಬಳಕೆದಾರರಿಗೆ ಪಬ್‌ಜಿ ಆ್ಯಪ್‌ನ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಪಬ್‌ಜಿ ಫೇಸ್‌ಬುಕ್‌ನ ಪುಟದಲ್ಲಿ ಪ್ರಕಟಿಸಲಾಗಿದೆ. ಪಬ್‌ಜಿ ಮೊಬೈಲ್‌ (PUBG Mobile Nordic Map: Livik) ಮತ್ತು ಪಬ್‌ಜಿ ಮೊಬೈಲ್‌ ಲೈಟ್‌ (PUBG Mobile Lite) ಎರಡೂ ಆ್ಯಪ್‌ಗಳನ್ನು ಇನ್ನು ಮುಂದೆ ಬಳಸಲು ಅವಕಾಶವಿರುವುದಿಲ್ಲ.

ಬಳಕೆದಾರರ ಮಾಹಿತಿ ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ ಹಾಗೂ ಭಾರತದಲ್ಲಿನ ದತ್ತಾಂಶ ಸುರಕ್ಷತೆ ಕಾನೂನುಗಳು ಮತ್ತು ನಿಯಂತ್ರಣಗಳಿಗೆ ಬದ್ಧರಾಗಿದ್ದೇವೆ. ನಮ್ಮ ಖಾಸಗಿ ಮಾಹಿತಿ ನಿಯಮಗಳ ಅನ್ವಯ ಎಲ್ಲ ಬಳಕೆದಾರರ ಗೇಮ್‌ಪ್ಲೇ ಮಾಹಿತಿಯ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿ ನಡೆಯಲಿದೆ ಎಂದು ಪಬ್‌ಜಿ ಮೊಬೈಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 69ಎ ಅಡಿಯಲ್ಲಿ ಭಾರತ ಸರ್ಕಾರ ಚೀನಾ ಮೂಲದ ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಕ್ರಮದಿಂದಾಗಿ ಕೋಟ್ಯಂತರ ಮಂದಿ ಭಾರತೀಯ ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಳಕೆದಾರರ ಮಾಹಿತಿ ರಕ್ಷಿಸಿದಂತಾಗಲಿದೆ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಹಿಂದೆ ಪ್ರಕಟಿಸಿತ್ತು.

ಚೀನಾದ ಟೆನ್‌ಸೆಂಟ್‌ ಗೇಮ್ಸ್‌ನಿಂದ ಭಾರತದಲ್ಲಿ ಪಬ್‌ಜಿಗೆ ಸಂಬಂಧಿಸಿದ ವಿತರಣೆ ಮತ್ತು ಪ್ರಸಾರದ ಹಕ್ಕು ಹಿಂಪಡೆದಿರುವುದಾಗಿ ಪಬ್‌ಜಿ ಕಾರ್ಪೊರೇಷನ್‌ ಈಗಾಗಲೇ ಪ್ರಕಟಿಸಿದೆ. ಆದರೆ, ಅದರಿಂದ ದೇಶದಲ್ಲಿ ಗೇಮ್‌ನ ನಿಷೇಧದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. ಆದರೆ, ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌ (ವಿಪಿಎನ್‌) ಬಳಸಿ ಗೇಮ್‌ ಆಡುವುದು ಸಾಧ್ಯವೇ ಎಂಬುದರ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು