ಸೋಮವಾರ, ಅಕ್ಟೋಬರ್ 26, 2020
28 °C

PV Web Exclusive| ಇ-ಸಿಮ್ ಸ್ಕ್ಯಾಮ್... ಹುಷಾರು!

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಅವರು ಚಾಪೆ ಕೆಳಗೆ ತೂರಿದರೆ, ನೀನು ರಂಗೋಲಿ ಕೆಳಗೆ ತೂರು ಎನ್ನುವ ನಾಣ್ನುಡಿಯಂತೆ, ನಮ್ಮನ್ನು ದೋಚಲು ವಂಚಕರು ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಸದ್ಯ ಹೆಚ್ಚು ಪ್ರಚಲಿತದಲ್ಲಿ ಇರುವುದು ‘ಇ–ಸಿಮ್‌’ ಸ್ಕ್ಯಾಮ್‌. ಜನರ ಬ್ಯಾಂಕ್‌ ಖಾತೆಯಿಂದ ಹಣ ದೋಚಲು ವಂಚಕರು ಕಂಡುಕೊಂಡಿರುವ ಸುಲಭ ಮಾರ್ಗ ಇದಾಗಿದೆ.

ಈಚೆಗೆ ಅಂದರೆ ಕಳೆದ ಆಗಸ್ಟ್‌ನಲ್ಲಿ ಹೈದರಾಬಾದಿನ ನಾಲ್ವರು ಇ–ಸಿಮ್‌ ವಂಚಕರ ಬಲೆಗೆ ಬಿದ್ದು ಒಟ್ಟಾರೆಯಾಗಿ ₹ 21 ಲಕ್ಷ ಹಣ ಕಳೆದುಕೊಂಡಿದ್ದಾರೆ. ಇಂತಹದೇ ಇನ್ನೊಂದು ಪ್ರಕಣದಲ್ಲಿ ಫರಿದಾಬಾದ್‌ ಪೊಲೀಸರು ಜಾರ್ಖಂಡ್‌ನ ಜಾಮ್‌ತಾಢಾದ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ, ಈ ಆರೋಪಿಗಳು ಪಂಜಾಬ್, ಹರಿಯಾಣ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ 300ಕ್ಕೂ ಹೆಚ್ಚಿನ ಬ್ಯಾಂಕ್‌ ಖಾತೆಗಳ ಮೇಲೆ ನಿಯಂತ್ರಣ ಹೊಂದಿದ್ದರು. ಈ ಖಾತೆಗಳಿಂದ ₹ 10 ಸಾವಿರದಿಂದ ₹ 99 ಸಾವಿರದವರೆ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ.

ಏನಿದು ಇ–ಸಿಮ್

ಮೊಬೈಲ್‌ ಬಳಕೆಗೆ ಬಂದಾಗ ಅದರ ಜತೆ ಸಿಮ್‌ ಕಾರ್ಡ್‌ ಸಹ ಪರಿಚಯವಾಯಿತು. ಆರಂಭದಲ್ಲಿ ಗಾತ್ರದಲ್ಲಿ ದೊಡ್ಡದಾಗಿದ್ದ ಈ ಸಿಮ್‌ ಕಾರ್ಡ್‌ಗಳು ತಂತ್ರಜ್ಞಾನದಲ್ಲಿ ಬದಲಾವಣೆ ಆಗುತ್ತಿದ್ದಂತೆಯೇ ಗಾತ್ರದಲ್ಲಿ ಕಿರಿದಾಗುತ್ತಾ ಬಂದಿವೆ. ಸ್ಮಾರ್ಟ್‌ಫೋನ್‌ಗಳ ತಂತ್ರಜ್ಞಾನ, ವಿನ್ಯಾಸದಲ್ಲಿ ಬದಲಾವಣೆ ಆದಂತೆ ಸಿಮ್‌ಗಳ ಗಾತ್ರವು ಮೈಕ್ರೊ, ನ್ಯಾನೋ ಸಿಮ್‌ಗಳಿಗೆ ತಗ್ಗಿದೆ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ‘ಇ–ಸಿಮ್‌’ ಸಹ ಬಂದಿದೆ. ಇದನ್ನು ಎಲೆಕ್ಟ್ರಾನಿಕ್‌ ಸಿಮ್ ಎಂದೂ ಕರೆಯಲಾಗುತ್ತದೆ. ಇದು ಸ್ಮಾರ್ಟ್‌ಫೋನ್‌ ಸರ್ಕಿಟ್‌ ಬೋರ್ಡ್‌ನಲ್ಲಿ ಎಂಬೆಡ್ ಆಗಿರುತ್ತದೆ.  ಹೀಗಾಗಿ ಇಂತಹ ಸ್ಮಾರ್ಟ್‌ಫೋನ್‌ನಲ್ಲಿ ಒಂದು ಸಿಮ್‌ ಸ್ಲಾಟ್‌ ಮಾತ್ರವೇ ಇರುತ್ತದೆ. ಏರ್‌ಟೆಲ್‌, ರಿಲಯನ್ಸ್‌ ಜಿಯೊ ಮತ್ತು ವೊಡಾಫೋನ್‌ ಐಡಿಯಾ ಕಂಪನಿಗಳು ಇ–ಸಿಮ್‌ ಸೌಲಭ್ಯ ಕಲ್ಪಿಸುತ್ತಿವೆ.

ಭಾರತದಲ್ಲಿ ‌2019ರಲ್ಲಿ ಇ–ಸಿಮ್‌ ಬೆಂಬಲಿಸುವ 13 ಲಕ್ಷ ಸ್ಮಾರ್ಟ್‌ಫೋನ್‌ಗಳು ಇದ್ದವು. 2020ರಲ್ಲಿ ಇವುಗಳ ಸಂಖ್ಯೆ 35 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಸೈಬರ್‌ ಮೀಡಿಯಾ ರಿಸರ್ಚ್‌ (ಸಿಎಂಆರ್‌) ಅಂದಾಜು ಮಾಡಿದೆ. ಇ–ಸಿಮ್‌ಗೆ ಬೆಂಬಲಿಸುವ ಕಂಪನಿಗಳಲ್ಲಿ ಸದ್ಯ ಆ್ಯಪಲ್ ಶೇ 97.7, ಗೂಗಲ್ 1.8% ಮತ್ತು ಸ್ಯಾಮ್ಸಂಗ್‌ 0.5% ಪಾಲು ಹೊಂದಿವೆ.

ಇ–ಸಿಮ್‌ಗೆ ಬೆಂಬಲಿಸುವ ಕೆಲವು ಹ್ಯಾಂಡ್‌ಸೆಟ್‌ಗಳು: iPhone 12 Pro Max, iPhone SE, iPhone 11, 11 Pro, 11 Pro Max, Huawei P40 and P40 Pro, Google Pixel 3 & 3XL (Limited support ), Galaxy S20 Series

ಇ–ಸಿಮ್‌ ಪಡೆಯುವುದು ಹೇಗೆ 

ಉದಾಹರಣೆ ಏರ್‌ಟೆಲ್‌ ಇ–ಸಿಮ್‌ ಪಡೆಯುವ ಪ್ರಕ್ರಿಯೆ ನೋಡೋಣ.

1) eSIM<>registered email id to 121

2) ಮೊಬೈಲ್‌ ನಂಬರಿಗೆ 121 ಸಂಖ್ಯೆಯಿಂದಲೇ ಖಾತರಿ ಮೆಸೇಜ್‌ ಬರುತ್ತದೆ. ಆಗ ಅದೇ ಮೆಸೇಜ್‌ಗೆ 60 ಸೆಕೆಂಡ್‌ಗಳ ಒಳಗಾಗಿ ‘1’ ಎಂದು ರಿಪ್ಲೇ ಮಾಡಬೇಕು. ಹಾಗೆ ಮಾಡಿದರೆ ಭೌತಿಕ ಸಿಮ್‌ನಿಂದ ಇ–ಸಿಮ್‌ಗೆ ಬದಲಿಸುವ ಮನವಿ ಸಲ್ಲಿಕೆಯಾಗುತ್ತದೆ.

3) ಅದನ್ನು ಕಂಪನಿ ದೃಢೀಕರಿಸಿದ ಬಳಿಕ ಬಳಕೆದಾರರನೇ ನಿಜವಾಗಿಯೂ ಇ–ಸಿಮ್‌ ಪಡೆಯಲು ಬಯಸಿದ್ದಾರೆಯೇ ಎನ್ನುವುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಮೊಬೈಲ್‌ ನಂಬರ್‌ಗೆ ಕಾಲ್‌ ಬರುತ್ತದೆ.

4) ಕಾಲ್‌ ರಿಸೀವ್‌ ಮಾಡಿದ ಬಳಿಕ 121 ಸಂಖ್ಯೆಯಿಂದ ಮೆಸೇಜ್‌ ಬರುತ್ತದೆ. ನಿಮ್ಮ ಅಧಿಕೃತ ಇ–ಮೇಲ್‌ ವಿಳಾಸಕ್ಕೆ ಕ್ಯುಆರ್‌ ಕೋಡ್‌ ಕಳುಹಿಸಲಾಗಿದೆ, ಅದರ ಮೂಲಕ ನೀವು ನೋಂದಣಿ ಆಗಬೇಕು ಎಂದು ಮೆಸೇಜ್‌ನಲ್ಲಿ ಇರುತ್ತದೆ. ಕ್ಯುಆರ್‌ ಕೋಡ್‌ ಬಳಸಿ ರಿಜಿಸ್ಟರ್‌ ಮಾಡಿಕೊಂಡ 2 ಗಂಟೆಯ ಒಳಗಾಗಿ ಇ–ಸಿಮ್‌ ಆ್ಯಕ್ಟಿವೇಟ್‌ ಆಗುತ್ತದೆ.

ಕೆವೈಸಿ ನೆಪದಲ್ಲಿ ಮೋಸದ ಜಾಲ ಬೀಸುವ ವಂಚಕರು

ವಂಚಕರು ಕೆವೈಸಿ ಅಪ್‌ಡೇಟ್‌ ಹೆಸರಿನಲ್ಲಿ ಮೆಸೇಜ್‌ ಕಳುಹಿಸುತ್ತಾರೆ. 24 ಗಂಟೆಯೊಳಗೆ ನಿಮ್ಮ ಸಿಮ್ ಕಾರ್ಡ್‌ ಬ್ಲಾಕ್‌ ಆಗಲಿದೆ ಎಂದು ಮೆಸೇಜ್‌ನಲ್ಲಿ ಇರುತ್ತದೆ. ‌ನೀವು ಯಾವ ಕಂಪನಿಯ ಸಿಮ್‌ ಕಾರ್ಡ್‌ ಬಳಸುತ್ತಿದ್ದೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ಅದೇ ಕಂಪನಿ ಕಳುಹಿಸುವ ರೀತಿಯಲ್ಲಿಯೇ ನಕಲಿ ಮೆಸೇಜ್‌ ಬರುತ್ತದೆ. ಅದು ನಕಲಿ ಎಂದು ಗೊತ್ತಾಗುವುದೇ ಇಲ್ಲ!

ಅದಾದ ಕೆಲವೇ ಹೊತ್ತಿನಲ್ಲಿ ಟೆಲಿಕಾಂ ಕಂಪನಿಯ ಗ್ರಾಹಕ ಸೇವಾ ಕೇಂದ್ರದ ಹೆಸರು ಹೇಳಿಕೊಂಡು ವಂಚಕರು ಕಾಲ್‌ ಮಾಡುತ್ತಾರೆ. ಮೆಸೇಜ್‌ನಲ್ಲಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿ ಭರ್ತಿ ಮಾಡಿದರೆ ನಿಮ್ಮ ನಂಬರ್‌ ಬ್ಲಾಕ್‌ ಆಗದಂತೆ ತಡೆಯುವುದಾಗಿ ನಂಬಿಸುತ್ತಾರೆ. ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಗೂಗಲ್‌ ಫಾರಂ ಓಪನ್‌ ಆಗಿ ಅಲ್ಲಿ ಗ್ರಾಹಕರ ಬ್ಯಾಂಕ್‌ ಖಾತೆ, ಇ–ಮೇಲ್‌ ವಿಳಾಸವನ್ನು ಒಳಗೊಂಡು ವೈಯಕ್ತಿಕ ಮಾಹಿತಿ ತುಂಬಲು ಸೂಚನೆ ಇರುತ್ತದೆ.  ಈ ಪ್ರಕ್ರಿಯೆ ಆಗುತ್ತಿದ್ದಂತೆಯೇ ಭೌತಿಕ ಸಿಮ್‌ ಬ್ಲಾಕ್ ಆಗಿ, ಇ–ಸಿಮ್‌ ಸಕ್ರಿಯಗೊಳ್ಳುತ್ತದೆ. ಕೆಲವು ವಂಚಕರು ಮೆಸೇಜ್‌ನಲ್ಲಿ ಕಂಪನಿಯ ವಿಳಾಸಕ್ಕೆ ಹೋಲುವ ನಕಲಿ ಇ–ಮೇಲ್ ಐ.ಡಿ ಕಳುಹಿಸಿ ಅದಕ್ಕೆ ಮಾಹಿತಿ ಕಳುಹಿಸುವಂತೆಯೂ ಕೇಳುತ್ತಾರೆ.

ಇ–ಸಿಮ್‌ ಯಾಕೆ

ಜನರನ್ನು ವಂಚಿಸಲು ಇ–ಸಿಮ್‌ ಅನ್ನೇ ಯಾಕೆ ಬಳಸುತ್ತಾರೆ ಎನ್ನುವ ಪ್ರಶ್ನೆ ಮೂಡುತ್ತದೆ ಅಲ್ಲವೇ? ಏಕೆಂದರೆ, ಈಗ ಬ್ಯಾಂಕ್‌ನ ವ್ಯವಹಾರಗಳು ಒಟಿಪಿ ಮೂಲಕವೇ ನಡೆಯುತ್ತಿದೆ. ನೀವು ಹಣ ವರ್ಗಾವಣೆ ಮಾಡುವಾಗ ಬ್ಯಾಂಕ್‌ನಲ್ಲಿ ರಿಜಿಸ್ಟರ್‌ ಮಾಡಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನೀಡಿದರಷ್ಟೇ ಹಣ ವರ್ಗಾವಣೆ ಯಶಸ್ವಿಯಾಗುತ್ತದೆ. ಹೀಗಾಗಿ, ವಂಚಕರ ಜಾಲವು ಬಳಕೆದಾರರ ಭೌತಿಕ ಸಿಮ್‌ ಅನ್ನು ಇ–ಸಿಮ್‌ ಆಗಿ ಪರಿವರ್ತಿಸಿ ಆ ಮೂಲಕ ವಂಚನೆ ಮಾಡುತ್ತಿದ್ದಾರೆ.

ವಂಚನೆಯ ಮೂಲ ಎಲ್ಲಿ?: ದೇಶದಲ್ಲಿ ನಡೆಯುತ್ತಿರುವ ಹಲವು ಸೈಬರ್‌ ವಂಚನೆ ಪ್ರಕರಣಗಳ ಮೂಲ ಇರುವುದು ಜಾರ್ಖಂಡ್‌ನ ಜಾಮ್‌ತಾಢಾ. ಇದನ್ನು ಸೈಬರ್‌ ಅಪರಾಧಗಳ ರಾಜಧಾನಿ ಎಂದೂ ಹೇಳಲಾಗುತ್ತದೆ. ಸರ್ಕಾರವೇ ಹೇಳುವಂತೆ ಶೇ 50ಕ್ಕೂ ಅಧಿಕ ಸೈಬರ್‌ ವಂಚನೆ ಪ್ರಕರಗಳಿಗೆ ಜಾಮ್‌ತಾಢಾ ಕಾರಣ. ಜನಸಾಮಾನ್ಯರಷ್ಟೇ ಅಲ್ಲದೆ, ಜನಪ್ರಿಯ ನಟರು, ರಾಜಕಾರಣಿಗಳೂ ಇಲ್ಲಿನ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ. ಎಟಿಎಂ ಕಾರ್ಡ್‌ ರಿನಿವಲ್‌ ಮಾಡುವಂತೆ, ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆ ನೀಡುವಂತೆ, ಹೊಸ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ನೀಡುವಂತೆ, ಕೆವೈಸಿ ಅಪ್‌ಡೇಟ್‌ ಮಾಡುವಂತೆ ಹೀಗೆ ನಾನಾ ಬಗೆಯಲ್ಲಿ ವಂಚಿಸುತ್ತಿದ್ದಾರೆ.

ರಕ್ಷಣೆ ಹೇಗೆ? 

* ನಿಮ್ಮ ಇ–ಮೇಲ್ ವಿಳಾಸ, ಬಳಕೆದಾರರ ಐ.ಡಿ ಮತ್ತು ಪಾಸ್‌ವರ್ಡ್‌ ನೀಡುವಂತೆ ಬರುವ ಕರೆಗಳನ್ನು ನಿರ್ಲಕ್ಷಿಸಿ

* ನಿಮ್ಮ ಮೊಬೈಲ್‌ಗೆ ಬರುವ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ

* ಅಪರಿಚಿತ ಮೂಲಗಳಿಂದ ಬರುವ ಕ್ಯುಆರ್‌ ಕೋಡ್‌ಗಳನ್ನು ಸ್ಕ್ಯಾನ್‌ ಮಾಡದಿರಿ

* ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ

* ನಿಮ್ಮ ಅನುಮತಿ ಇಲ್ಲದೇ ಖಾತೆಯಿಂದ ಹಣ ವರ್ಗಾವಣೆ ಆಗುತ್ತಿದ್ದರೆ ಖಾತೆಯನ್ನು ಬ್ಲಾಕ್‌ ಮಾಡಿ, ಪೊಲೀಸರಿಗೆ ದೂರು ನೀಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು