ಮಂಗಳವಾರ, ಜನವರಿ 28, 2020
19 °C

ಕ್ವಾಂಟಂ ಕಂಪ್ಯೂಟರ್‌ ಮತ್ತು ಹೈಪರ್‌ಲೂಪ್‌

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಸಂಶೋಧನಾ ಕ್ಷೇತ್ರದಲ್ಲಿ ನಡೆದಿರುವ ಹೊಸ ಬೆಳವಣಿಗೆಗಳು ಕಲ್ಪನೆಗೂ ನಿಲುಕದ ಆವಿಷ್ಕಾರಗಳಿಗೆ ಕಾರಣವಾಗುತ್ತಿವೆ. ಹಾಗಾದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಹೊಸದೇನು ನಡೆಯುತ್ತಿದೆ? ನೋಡೋಣ ಬನ್ನಿ.

ಕಳೆದ ಶತಮಾನದಲ್ಲಿ ಊಹೆಗೆ ಸೀಮಿತವಾಗಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹಲವು ಸಂಗತಿಗಳು ವಾಸ್ತವಗಳಾಗಿ ಮೈದಳೆದು ಎರಡು ದಶಕಗಳಾಗಿವೆ. ಈ ಅವಧಿಯಲ್ಲಿ ಸಂಪರ್ಕ, ವಿದ್ಯುನ್ಮಾನ, ಆರೋಗ್ಯ, ಬಾಹ್ಯಾಕಾಶ, ಮನರಂಜನೆ, ಶಿಕ್ಷಣ ಕ್ಷೇತ್ರಗಳಲ್ಲಿ ಕಲ್ಪನೆಗೂ ನಿಲುಕದಷ್ಟು ಬದಲಾವಣೆಯಾಗಿವೆ. ವೈ-ಫೈ, 4G ತರಂಗ, ಜಿಪಿಎಸ್, ಸ್ಮಾರ್ಟ್‍ವಾಚ್, ತ್ರೀ–ಡಿ ಪ್ರಿಂಟಿಂಗ್, ಶಸ್ತ್ರ ಚಿಕಿತ್ಸೆ ಮಾಡಬಲ್ಲ ರೋಬೋಟ್‌, ಬ್ಯಾಟರಿಯಿಂದ ಚಲಿಸುವ ಕಾರು, ಹಕ್ಕಿಯಂತೆ ಹಾರಿ ಚಿತ್ರ ತೆಗೆಯುವ ಡ್ರೋನ್ ಕ್ಯಾಮೆರಾ, ವರ್ಚುಯಲ್ ರಿಯಾಲಿಟಿ ಕನ್ನಡಕ, ಧ್ವನಿ, ಮುಖ ಗುರುತಿಸಿ ಉತ್ತರಿಸುವ ಸ್ಮಾರ್ಟ್ ಕಂಪ್ಯೂಟರ್‌ಗಳೆಲ್ಲ ಈಗ ಹಳೆಯ ಮಾತು.

ಸಂಶೋಧನಾ ಕ್ಷೇತ್ರದಲ್ಲಿ ನಡೆದಿರುವ ಹೊಸ ಬೆಳವಣಿಗೆಗಳು ಕಲ್ಪನೆಗೂ ನಿಲುಕದ ಆವಿಷ್ಕಾರಗಳಿಗೆ ಕಾರಣವಾಗುತ್ತಿವೆ. ಹಾಗಾದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಹೊಸದೇನು ನಡೆಯುತ್ತಿದೆ? ನೋಡೋಣ ಬನ್ನಿ.

ದೈತ್ಯಶಕ್ತಿಯ ಕ್ವಾಂಟಂ ಕಂಪ್ಯೂಟರ್

ತಿಂಗಳ ಹಿಂದೆ ಗೂಗಲ್‍ನ ಮುಖ್ಯಸ್ಥ ಸುಂದರ್ ಪಿಚ್ಚೈ ತಮ್ಮ ಸಂಸ್ಥೆ ಇದುವರೆಗಿನ ಸೂಪರ್ ಕಂಪ್ಯೂಟರ್‌ಗಿಂತ ಅತ್ಯಂತ ಮುಂದುವರೆದ ಕಂಪ್ಯೂಟರನ್ನು ಸೃಷ್ಟಿಸಿದ್ದು ಹತ್ತು ಸಾವಿರ ವರ್ಷಗಳ ಕೆಲಸವನ್ನು ಕೇವಲ 200 ಸೆಕೆಂಡುಗಳಲ್ಲಿ ಮಾಡಿ ಮುಗಿಸುತ್ತದೆ, ಇದಕ್ಕೆ ಸಾಟಿಯಾದುದು ಮತ್ತೊಂದಿಲ್ಲ ಎಂದಿರುವುದು ‘ನೇಚರ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಎಪ್ಪತ್ತೇಳು ನುರಿತ ತಂತ್ರಜ್ಞರು ಸೇರಿ ತಯಾರಿಸಿರುವ ಕ್ವಾಂಟಂ ಬಿಟ್ ತಂತ್ರಜ್ಞಾನದ ‘ಸಿಕಾಮೋರ್’ ಪ್ರೊಸೆಸರ್ ಹೊಂದಿರುವ ಗೂಗಲ್‍ನ ಹೊಸ ಕಂಪ್ಯೂಟರ್, ಕಗ್ಗಂಟು ಬಿಡಿಸಲು ವರ್ಷಗಟ್ಟಲೆ ಕಾಲಾವಕಾಶ ಬೇಕಾದ ಸಮಸ್ಯೆಯನ್ನೂ ತನ್ನದೇ ಕ್ರಮಾವಳಿ ಬಳಸಿ ಕೆಲವೇ ನಿಮಿಷಗಳಲ್ಲಿ ಬಿಡಿಸಿ, ಸೂಕ್ತ ಫಲಿತಾಂಶ ನೀಡಿದೆ. 

ಸದ್ಯದ ಕಂಪ್ಯೂಟರ್‌ನ ಬಿಟ್‍ಗಳು ಮಾಹಿತಿಯನ್ನು ‘1’ ಇಲ್ಲವೆ ‘0’ ಎಂದು ಮಾತ್ರ ಶೇಖರಿಸುತ್ತವೆ. ಆದರೆ ಗೂಗಲ್‍ನ ಸಿಕಾಮೋರ್ ಪ್ರೊಸೆಸರ್‌ನ ಕ್ಯುಬಿಟ್‌ಗಳು (Qbit) ಮಾಹಿತಿಯನ್ನು ‘1’ ಅಥವಾ ‘0’ ಎಂದು ಏಕಕಾಲದಲ್ಲಿ ಶೇಖರಿಸಿಟ್ಟು ಸೂಪರ್‌ಪೊಸಿಷನ್ ನಿರ್ಮಿಸುತ್ತವೆ. ಅಂದರೆ ಸಮಸ್ಯೆ ಬಿಡಿಸಲು ಬೇಕಾದ ‘1’ ಅಥವಾ ‘0’ ಇಲ್ಲವೆ ಅವೆರಡರ ಮಧ್ಯದ ಸಂಖ್ಯೆಯನ್ನು ತೆಗೆದುಕೊಳ್ಳುವ ಅನುಕೂಲ ದೊರೆಯುವುದರಿಂದ ಸಮಸ್ಯೆ ಎಷ್ಟೇ ದೀರ್ಘವಾಗಿದ್ದರೂ ಕೆಲವೇ ಸೆಕೆಂಡುಗಳಲ್ಲಿ ಪರಿಹಾರ ಸಿಗುತ್ತದೆ. ಇದನ್ನು ಕ್ವಾಂಟಂ ಕಂಪ್ಯೂಟಿಂಗ್ ಎಂದು ಕರೆಯಲಾಗುತ್ತದೆ. ಈ ಕಂಪ್ಯೂಟರ್‌ ಅತ್ಯಂತ ದುಬಾರಿ ಆಗಿರುವುದರಿಂದ ಅದರ ಸೇವೆ ಕೊಡುವ - ಪಡೆಯುವ ಉದ್ಯಮವೇ ತಲೆಯೆತ್ತುವ ಸಾಧ್ಯತೆ ಇದೆ.

ನೋಗ್ಲಾಸ್ ತ್ರೀ–ಡಿ ಸಿನಿಮಾ

ಹಿಂದಿನ ಶತಮಾನದ ಮಧ್ಯಭಾಗದಿಂದಲೂ ಚಾಲ್ತಿಯಲ್ಲಿದ್ದ ತ್ರೀ–ಡಿ ಸಿನಿಮಾಗಳು ಮನರಂಜನೆಯ ಮುನ್ನೆಲೆಗೆ ಬಂದದ್ದು ‘ಅವತಾರ್’, ‘ಗ್ರ್ಯಾವಿಟಿ’, ‘ದಿ ವಾಕ್’, ‘ಜರ್ನಿ ಟು ದಿ ಸೆಂಟರ್ ಆಫ್ ಅರ್ಥ್’ನಂತಹ ತ್ರೀ–ಡಿ ಚಲನಚಿತ್ರಗಳು ಬಂದಮೇಲೆ. ನಿರ್ದೇಶಕರುಗಳಾದ ಜೇಮ್ಸ್‌ ಕ್ಯಾಮರನ್, ಅಲ್ಫಾನ್ನೊ ಕ್ಯುರಾನ್, ರಾಬರ್ಟ್ ಜೆಮೆಕಿಸ್‍ ಸಿನಿಮಾಗಳಿಗೆ ತಂತ್ರಜ್ಞಾನದ ಮಾಂತ್ರಿಕ ಸ್ಪರ್ಶ ನೀಡಿ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ವಾಪಸ್ ಕರೆತಂದು ಮನರಂಜನೆಯ ಹೊಸ ಎತ್ತರವನ್ನೇ ಪರಿಚಯಿಸಿದರು. ಅವತಾರ್‌ನಂಥ ಅದ್ಭುತ ಸಿನಿಮಾ ಮಾಡಿದ ಕ್ಯಾಮರನ್ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡಕವಿಲ್ಲದೇ ತ್ರೀ–ಡಿ ಸಿನಿಮಾ ತೋರಿಸುತ್ತೇನೆ, ಸ್ವಲ್ಪ ಕಾಯಿರಿ ಎಂದಿದ್ದಾರೆ. ಅವರ ನೋಗ್ಲಾಸ್ ತ್ರೀ–ಡಿ ಸಿನಿಮಾ ವಿಪರೀತ ಕುತೂಹಲ ಹುಟ್ಟಿಸಿದೆ.

ಚಾಲಕರಹಿತ ಕಾರು

ವಿಲಕ್ಷಣ ಮಾತು ಮತ್ತು ಸಂಶೋಧನಾ ಪ್ರವೃತ್ತಿಯಿಂದ ವಿಶ್ವದ ಗಮನ ಸೆಳೆದಿರುವ ಸ್ವೇಸ್ ಎಕ್ಸ್ ಮತ್ತು ಟೆಸ್ಲಾ ಕಂಪನಿಗಳ ಮಾಲೀಕ ಎಲಾನ್‍ ಮಸ್ಕ್ ಕೃತಕ ಬುದ್ಧಿಮತ್ತೆ ಆಧಾರಿತ ಚಾಲಕರಹಿತ ಕಾರುಗಳನ್ನು ಸೃಷ್ಟಿಸಿ ಕಾರುಪ್ರಯಾಣದ ಆಯಾಮವನ್ನೇ ಬದಲಿಸಲಿದ್ದಾನೆ. ಟೆಸ್ಲಾ ನಿರ್ಮಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ರೋಡ್‍ಸ್ಟರ್ ಕಾರು, ನಾಸಾ ಹಾರಿಸಿದ ರಾಕೆಟ್‍ನಲ್ಲಿ ಅಂತರಿಕ್ಷಕ್ಕೆ ತೆರಳಿ, ನೌಕೆಯಲ್ಲಿದ್ದುಕೊಂಡೇ ಭೂಮಿಯ ಸುತ್ತ ಗಿರಕಿ ಹೊಡೆಯುತ್ತದೆ.

ಎರಡು ಡಜನ್ ಅಲ್ಟ್ರಾಸಾನಿಕ್ ಸೆನ್ಸರ್, 360 ಡಿಗ್ರಿ ತಿರುಗಿ, 250 ಮೀಟರ್‌ ದೂರದವರೆಗಿನ ಚಿತ್ರ ಮತ್ತು ಶಬ್ದ ಗ್ರಹಿಸುವ ಹೈಡೆಫಿನಿಶನ್ ಕ್ಯಾಮೆರಾ, ಎರಡೆರಡು ರಡಾರ್ ಮತ್ತು 5G ಇಂಟರ್‌ನೆಟ್ ಬಳಸಿಕೊಂಡು ಚಾಲಕನ ನೆರವಿಲ್ಲದೇ ಚಲಿಸುವ ನೂರಾರು ಕಾರುಗಳು ರಸ್ತೆಗಿಳಿಯಲು ರೆಡಿಯಾಗಿವೆ. ಅಮೆರಿಕಾದ ನೆವಾಡ ಪ್ರಾಂತ್ಯ, ಬ್ರಿಟನ್, ಫ್ರಾನ್ಸ್‌, ಸ್ವಿಟ್ಜರ್ಲೆಂಡ್‌, ಸಿಂಗಾಪುರ ಮುಂತಾದ ಕಡೆ ತನ್ನ ಕಾರುಗಳ ಓಡಾಟಕ್ಕೆ ಮಸ್ಕ್ ಅನುಮತಿ ಕೇಳಿದ್ದಾನೆ. ನೆವಾಡ ಈಗಾಗಲೇ ಸಾರ್ವಜನಿಕ ಬಳಕೆಗೆ ಕಾನೂನಾತ್ಮಕ ಪರವಾನಿಗೆ ನೀಡಿದ ವಿಶ್ವದ ಮೊದಲ ರಾಜ್ಯವೆನಿಸಿದೆ. ಇದು ರಸ್ತೆಯ ಮೇಲಿನ ಓಡಾಟವಾಯಿತು.

ಹೈಪರ್‌ಲೂಪ್ ಪ್ರಯಾಣ

ರಸ್ತೆಯ ಕೆಳಗೆ, ಅಂದರೆ ಸುರಂಗ ಮಾರ್ಗದಲ್ಲಿ ಹನ್ನೊಂದು ಅಡಿ ವ್ಯಾಸದ ದುಂಡನೆಯ ಉಕ್ಕಿನ ಟ್ಯೂಬ್ ಮೂಲಕ ಗಂಟೆಗೆ 1,200 ಕಿ.ಮೀ ವೇಗದಲ್ಲಿ ವಾಹನ ಚಲಿಸುವ ವ್ಯವಸ್ಥೆಯನ್ನು ಬಹು ಹಿಂದೆಯೇ ಊಹಿಸಿದ್ದ ಮಸ್ಕ್, ಮುಂದಿನ ವರ್ಷದ ವೇಳೆಗೆ ಅದನ್ನು ಸಾರ್ವಜನಿಕರ ಬಳಕೆಗೆ ಒದಗಿಸುವ ತಯಾರಿ ನಡೆಸಿದ್ದಾರೆ. ಕಾಂತೀಯ ತೇಲುವಿಕೆಯಿಂದ (ಮ್ಯಾಗ್ನೆಟಿಕ್ ಲೆವಿಟೇಶನ್) ಚಲಿಸುವ ಕ್ಯಾಬ್‍ಗಳನ್ನು ಬಳಸಿ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ನಡುವಿನ 363 ಕಿ.ಮೀ ದೂರವನ್ನು ಕೇವಲ ಅರ್ಧ ಗಂಟೆಯಲ್ಲಿ ಕ್ರಮಿಸುವ ಮಸ್ಕ್‌ ಅವರ ಆಲೋಚನೆಗೆ ಸಹಕರಿಸುತ್ತಿರುವ ಕ್ಯಾಲಿಫೋರ್ನಿಯ ಮೂಲದ ಕಂಪನಿಗಳು ಉತ್ತರ ಅಮೆರಿಕ, ಏಷ್ಯಾ ಮತ್ತು ಯುರೋಪ್‍ನಲ್ಲಿ ಟ್ಯೂಬ್ ದಾರಿಯನ್ನು ನಿರ್ಮಿಸಲು ಕೆಲಸ ಪ್ರಾರಂಭಿಸಿವೆ.

ಕಾರು, ರೈಲು, ವಿಮಾನ, ಹಡಗುಗಳೆಲ್ಲ ಮಾಲಿನ್ಯ ಉಂಟುಮಾಡುತ್ತವೆ, ಹವಾಮಾನ ಏರುಪೇರಾದರೆ ಇವ್ಯಾವೂ ಕೆಲಸಕ್ಕೆ ಬರುವುದಿಲ್ಲ. ಆಗ ಹೈಪರ್‌ಲೂಪ್‌ ಪ್ರಯಾಣ ನೆರವಿಗೆ ಬರಲಿದೆ. ಬೇರೆಯವರು ತಡಮಾಡಿದರೆ ತನ್ನ ಯೋಜನೆ ನನೆಗುದಿಗೆ ಬೀಳಬಹುದೆಂದು ಹೆದರಿದ ಮಸ್ಕ್, ‘ಬೋರಿಂಗ್‘ ಹೆಸರಿನ ತಮ್ಮದೇ ಕಂಪನಿ ತೆರೆದು ಕೆಲಸ ಶುರುಮಾಡಿದ್ದು, ಹೈಪರ್‌ಲೂಪ್ ಪ್ರಯಾಣದ ದಿನಗಣನೆ ಶುರುವಾಗಿದೆ.

ಪ್ರೈವೇಟ್ ಸ್ಪೇಸ್ ಟೂರ್

1961ರಲ್ಲಿ ಅಧ್ಯಕ್ಷ ಜಾನ್ ಕೆನಡಿ ‘ಚಂದ್ರನಲ್ಲಿ ಮನುಷ್ಯನನ್ನಿಳಿಸುವ ಯೋಜನೆಗೆ ಧನಸಹಾಯ ಮಾಡಿ ಪ್ರಜಾಪ್ರಭುತ್ವದ ಶಕ್ತಿ ಪ್ರದರ್ಶಿಸಿ’ ಎಂದು ಸಂಸತ್ತಿನಲ್ಲಿ ಭಾಷಣ ಮಾಡಿದ್ದರು. ಈಗ ಹಣವಂತರನ್ನೇ ಅಂತರಿಕ್ಷ ಪ್ರವಾಸಕ್ಕೆ ಕಳುಹಿಸುವ ಯೋಜನೆಗಳು ಶುರುವಾಗಿವೆ. ಇಲಾನ್ ಮಸ್ಕ್ ಮತ್ತು ಜೆಫ್‍ ಬೆಜೋಸ್ ಪೈಪೋಟಿಗೆ ಬಿದ್ದು ಯೋಜನೆ ರೂಪಿಸುತ್ತಿದ್ದಾರೆ. ಬೋಯಿಂಗ್ ಮತ್ತು ಸ್ಪೇಸ್‍ಗಳ ಜತೆ ಒಪ್ಪಂದ ಮಾಡಿಕೊಂಡಿರುವ ನಾಸಾ, ಯಾತ್ರಿಗಳಿಗಾಗಿ ‘ಸ್ಪೇಸ್‌ ಕ್ಯಾಪ್ಶೂಲ್’ ತಯಾರು ಮಾಡುತ್ತಿದೆ. ಕಡಿಮೆ ಖರ್ಚಿನಲ್ಲಿ ಅಂತರಿಕ್ಷ ಪ್ರವಾಸ ಮಾಡಿಸುತ್ತೇನೆ ಎಂದು ಬೆಜೋಸ್ ಹೇಳಿದ್ದರೆ, ಮಸ್ಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2022ರ ವೇಳೆಗೆ ಮಂಗಳನಲ್ಲಿ ಮಾನವ ಶಿಬಿರ ಸ್ಥಾಪಿಸುತ್ತೇನೆ ಎಂದಿದ್ದಾರೆ. ಜನರನ್ನು ಹೊತ್ತೊಯ್ಯಲು ಬಿಗ್‍ ಫಲ್ಕನ್ ರಾಕೆಟ್ ರೆಡಿಯಾಗುತ್ತಿದೆಯಂತೆ.

ಇದಕ್ಕೂ ಮುಂಚೆ 1998ರಲ್ಲಿ ವರ್ಜೀನಿಯಾದ ಸ್ಪೇಸ್ ಅಡ್ವೆಂಚರ್ಸ್ ಕಂಪನಿ 12 ದಿನಗಳ ಕಾಲ ಪ್ರವಾಸಿಗರನ್ನು ‘ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಶನ್’ಗೆ ಕಳಿಸಿತ್ತು. ಅದು 500 ಲಕ್ಷ ಡಾಲರ್‌ನ ತುಟ್ಟಿ ಪ್ರವಾಸವಾಗಿತ್ತು. ಮಸ್ಕ್ ಜೊತೆ ಕೈಜೋಡಿಸಿರುವ ಜಪಾನಿನ ಶ್ರೀಮಂತ ಯುಸಾಕು ಮಜವ, 2023ರಲ್ಲಿ ಚಂದ್ರನ ಇನ್ನೊಂದು ತುದಿಗೆ ರಾಕೆಟ್ ಕಳಿಸುವ ಯೋಜನೆ ಹಮ್ಮಿಕೊಂಡಿದ್ದಾನೆ. 2019ರ ಮಾರ್ಚ್‍ನಲ್ಲಿ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣಕ್ಕೆ ‘ಗಗನಯಾತ್ರಿ’ಯನ್ನು ಕಳಿಸಿ ಯಶಸ್ವಿಯಾಗಿರುವ ಮಸ್ಕ್, ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಜನರಿಗಾಗಿ ಪ್ರವಾಸ ಏರ್ಪಡಿಸುತ್ತೇನೆ ಎಂದಿದ್ದಾರೆ. ವರ್ಜಿನ್ ಗೆಲಾಕ್ಟಿಕ್, ಆರ್ಕ್‍ಸ್ಪೇಸ್, ಸ್ಪೇಸ್ ಅಡ್ವೆಂಚರ್ಸ್ ಕಂಪನಿಗಳು ಸಹ ಖಾಸಗಿ ಅಂತರಿಕ್ಷ ಪ್ರವಾಸ ಏರ್ಪಡಿಸಲು ಹಲವು ಯೋಜನೆ ಹಮ್ಮಿಕೊಂಡಿವೆ.

ಕೃತಕ ಬುದ್ಧಿಮತ್ತೆ ಮತ್ತು 5G ಸಂಪರ್ಕ ಕ್ರಾಂತಿ

ನಾಲ್ಕನೆಯ ಕೈಗಾರಿಕಾ ಕ್ರಾಂತಿ ಎಂದೇ ಕರೆಯಲ್ಪಡುವ ಯಂತ್ರಗಳ ಸ್ವಯಂ ಕಲಿಕೆ ಮತ್ತು ಕೆಲಸ ನಿರ್ವಹಣೆಯ ಕೃತಕ ಬುದ್ಧಿಮತ್ತೆ ಈ ಶತಮಾನದುದ್ದಕ್ಕೂ ತನ್ನ ಪ್ರಭಾವ ಬೀರಲಿದೆ. ಮಸ್ಕ್‌ನ ಚಾಲಕರಹಿತ ಕಾರುಗಳಿಗೂ ಇದು ಬೇಕು. ಗೂಗಲ್‍ನ ಹೋಂ, ಅಮೆಜಾನ್‍ನ ಅಲೆಕ್ಸಾ, ಆ್ಯಪಲ್‍ನ ಸಿರಿ, ಮೈಕ್ರೋಸಾಫ್ಟ್‌ನ ಕೋರ್ಟನಾ – ಎಲ್ಲವೂ ಕೃತಕ ಬುದ್ಥಿಮತ್ತೆಯ ಮೂರ್ತ ರೂಪಗಳಾಗಿದ್ದು ನಮ್ಮ ದೈನಂದಿನ ಜೀವನಕ್ಕೆ ಹಲವು ಅನುಕೂಲಗಳನ್ನು ಕಲ್ಪಿಸಿವೆ.

ಅಪರಾಧ ಪತ್ತೆಗೆ ನೆರವು ನೀಡುವ ಐಬಿಎಂನ ಬ್ಲೂಕ್ಯಾಪ್, ಶಿಕ್ಷಣ, ಆರೋಗ್ಯ, ಕಾನೂನು ಸೇವೆಯ ನೆರವು ನೀಡುವ ಸ್ಟಾನ್‍ಫೋರ್ಡ್ ವಿವಿಯ ‘ವೊಬೋಟ್’, ಯು-ರಿಪೋರ್ಟ್, ಬಿಲ್ ಪಾವತಿಯ ಮೊಬೈಲ್ ಆ್ಯಪ್‍, ಕ್ಯಾಬ್ ಬುಕಿಂಗ್, ಮೊಬೈಲ್ ರೀಚಾರ್ಜಿಂಗ್, ಕ್ರಿಕೆಟ್ ಸ್ಕೋರ್ ತಿಳಿಸುವ ‘ನಿಕಿ’ ಸಾಧನಗಳೆಲ್ಲ ಕೃತಕ ಬುದ್ಧಿಮತ್ತೆಯಿಂದಲೇ ಕಾರ್ಯ ನಿರ್ವಹಿಸುತ್ತಿವೆ. ಆದರೆ ಮನುಷ್ಯನಿಂದ ನಿರ್ಮಿತವಾಗಿ, ಅವನಿಂದಲೇ ಬುದ್ಧಿ ಪಡೆದ ಯಂತ್ರಗಳು ಮನುಷ್ಯನ ಸ್ವಾರ್ಥವನ್ನೂ ಮೈಗೂಡಿಸಿಕೊಂಡರೆ ವಿನಾಶ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ತಜ್ಞರು. ಎಲ್ಲೆಂದರಲ್ಲಿ ಬೇಹುಗಾರಿಕೆ ನಡೆಸಬಹುದಾದ ಸಾಧನಗಳು ಪ್ರಜಾಪ್ರಭುತ್ವದ ಬುಡವನ್ನೇ ಅಲ್ಲಾಡಿಸಬಲ್ಲವು; ಅವುಗಳ ಮೇಲೆ ನಿಯಂತ್ರಣವಿರಲೇಬೇಕು ಎಂಬ ಆಗ್ರಹ ಕೇಳಿಬಂದಿದೆ.

ಇದರ ಜೊತೆಗೆ ಪ್ರತೀ ಸೆಕೆಂಡ್‌ಗೆ 70ರಿಂದ 100 ಜಿಬಿ ದತ್ತಾಂಶವನ್ನು ವರ್ಗಾಯಿಸಬಲ್ಲ 5G ಇಂಟರ್‌ನೆಟ್ ಸೌಲಭ್ಯ ಸೇವೆ ಒದಗಿಸಲು ಸಜ್ಜಾಗಿನಿಂತಿದೆ. ಅಗಾಧ ಪ್ರಮಾಣದ ಮಾಹಿತಿ ವರ್ಗಾವಣೆಯಾಗುವಾಗ ಮಾಹಿತಿ ಸೋರಿಕೆ, ಕಳ್ಳತನ, ಎತ್ತಂಗಡಿಗಳಿಗೆ ಹೆಚ್ಚಿನ ಅವಕಾಶ ದೊರೆಯುವುದರಿಂದ ಸಂಪರ್ಕ ಜಾಲವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ದೊಡ್ಡ ಸವಾಲು ಎದುರಾಗಿದೆ.

5G ಮತ್ತು ವೈ-ಫೈ ಜಾಲದಿಂದ ಮನೆಯ, ಕಚೇರಿಯ ಎಲ್ಲ ವಿದ್ಯುನ್ಮಾನ ಸಾಧನಗಳನ್ನು ಸಂಪರ್ಕದಲ್ಲಿರಿಸಿಕೊಂಡು ಮನೆ ಮತ್ತು ಆಫೀಸುಗಳನ್ನು ಸ್ಮಾರ್ಟ್ ಹೋಂ, ಸ್ಮಾರ್ಟ್ ಆಫೀಸ್‍ಗಳನ್ನಾಗಿ ಮಾಡುವ ಇಂಟರ್‌ನೆಟ್ ಆಫ್ ಥಿಂಗ್ಸ್ ಅಥವಾ ಐಓಟಿ ಈ ಶತಮಾನದ ನೂತನ ಅವಿಷ್ಕಾರವೆನಿಸಿ ಬರುವ ದಶಕಗಳಲ್ಲಿ ಎಲ್ಲರನ್ನೂ, ಎಲ್ಲವನ್ನೂ ಕನೆಕ್ಟ್ ಮಾಡಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು