ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆಗೆ ತಂತ್ರಾಂಶದ ‘ಧ್ವನಿ’

Last Updated 31 ಅಕ್ಟೋಬರ್ 2019, 10:57 IST
ಅಕ್ಷರ ಗಾತ್ರ

ವಾಗಕ್ಷರ

ಇದು ಕನ್ನಡದ ಮಟ್ಟಿಗೆ ಒಂದು ಕ್ರಾಂತಿಕಾರಕ ಹೆಜ್ಜೆ ಎನ್ನಬಹುದು. ಈವರೆಗೆ ಕನ್ನಡ ಅಕ್ಷರಗಳ ಪರಿಚಯ ಇರುವ, ಸರಿಯಾಗಿ ಬರೆಯಲು ಬರುವವರು ಮಾತ್ರವೇ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಟೈಪ್‌ ಮಾಡಬಹುದಿತ್ತು. ಆದರೆ, ಇನ್ನು ಮುಂದೆ ‘ವಾಗಕ್ಷರ’ ತಂತ್ರಾಂಶದ ಮೂಲಕ ಮಾತನಾಡಿದ್ದನ್ನು ಯಥಾವತ್ತಾಗಿ ಅಕ್ಷರ ರೂಪದಲ್ಲಿ ಪಡೆಯಬಹುದು.

ಕನ್ನಡ ಗಣಕ ಪರಿಷತ್‌ (ಕಗಪ) ಸಹಯೋಗದಲ್ಲಿ ‘ಜ್ಞಾನಿ’ ಎಂಬ‌ ಸಂಸ್ಥೆಯು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ವಾಗಕ್ಷರ ತಂತ್ರಾಂಶ ಮತ್ತು ಅದರ ಕಾರ್ಯನಿರ್ವಹಣೆ ಕುರಿತು ಕಗಪ ಕಾರ್ಯದರ್ಶಿ ನರಸಿಂಹಮೂರ್ತಿ ಅವರು ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ;

ಕನ್ನಡ ಟೈಪಿಸಲು ಬರದೇ ಇರುವವರೂ ತಾವು ಮಾತನಾಡಿದ್ದನ್ನೇ ಅಕ್ಷರವಾಗಿ ಪರಿವರ್ತಿಸಲು ಈ ತಂತ್ರಾಂಶ ನೆರವಾಗುತ್ತದೆ. ಪತ್ರಕರ್ತರು, ನ್ಯಾಯಾಧೀಶರು, ವಕೀಲರು, ಬರಹಗಾರರು, ಅನುವಾದಕರು, ಸಿನಿಮಾ–ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವವರು, ಶಿಕ್ಷಕರು ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಈ ತಂತ್ರಾಂಶದಿಂದ ಬಹಳಷ್ಟು ಅನುಕೂಲ ಆಗಲಿದೆ. ಕನ್ನಡದ ಜತೆಗೆ ಹಿಂದಿ, ತೆಲುಗು, ಇಂಗ್ಲಿಷ್, ತಮಿಳು, ಗುಜರಾತಿ, ಬಂಗಾಳಿ ಭಾಷೆಯಲ್ಲಿಯೂ ವಾಗಕ್ಷರ ಬಳಕೆಗೆ ಲಭ್ಯವಿದೆ.

ಆಡಳಿತದಲ್ಲಿ ಕನ್ನಡ

ಕರ್ನಾಟಕ ರಾಜ್ಯ ಸರ್ಕಾರದ ಆಡಳಿತದಲ್ಲಿ ‘ಇ–ಕಚೇರಿ’ ವಿಭಾಗವಿದೆ. ಕಾಗದ ರಹಿತ ಆಡಳಿತ ನೀಡುವುದು ಇದರ ಉದ್ದೇಶ. ಪ್ರತಿ ಜಿಲ್ಲೆಯಲ್ಲೂ ಈ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಆಡಳಿತದ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ತಂತ್ರಾಂಶದಲ್ಲಿ ಕನ್ನಡ ಬಳಕೆಯೂ ಹೆಚ್ಚಾಗಲಿದೆ. ಇನ್ನು ಮುಂದೆ ‘ಇ-ಕಚೇರಿ’ಗೂ ‘ವಾಗಕ್ಷರ’ ಅಳವಡಿಸಲು ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ. ಇದರಿಂದ ಆಡಳಿತದಲ್ಲಿ ಕನ್ನಡ ಬಳಕೆ ಇನ್ನಷ್ಟು ಹೆಚ್ಚಾಗಲಿದೆ.

ರೇವಾ ವಿಶ್ವವಿದ್ಯಾಲಯದ ಜತೆ ಒಪ್ಪಂದ ಮಾಡಿಕೊಂಡು, ದೇಶಿ ಭಾಷೆಗಳಿಗೆ ಅದರಲ್ಲಿಯೂ ಕನ್ನಡಕ್ಕೆ ಒತ್ತು ಕೊಟ್ಟು ಸಹಜ ಭಾಷಾ ಸಂಸ್ಕರಣೆ ಪ್ರಯೋಗಾಲಯ ಸ್ಥಾಪಿಸಲು ಮುಂದಾಗಿದೆ(ನ್ಯಾಷನಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಲ್ಯಾಬ್). ಕನ್ನಡ ಭಾಷೆ ವಿಚಾರದಲ್ಲಿ ಪರಿಷತ್ ನೆರವು ನೀಡಿದರೆ, ತಾಂತ್ರಿಕ ಅಗತ್ಯಗಳನ್ನು ವಿಶ್ವವಿದ್ಯಾಲಯ ಒದಗಿಸಲಿದೆ. ಇದರಿಂದ ಕನ್ನಡಕ್ಕೆ ಕಾಗುಣಿತ ಪರಿಶೀಲನೆ (ಸ್ಪೆಲ್ ಚೆಕ್), ವ್ಯಾಕರಣ ಪರಿಶೀಲನೆ (ಗ್ರಾಮರ್ ಚೆಕ್) ಯಂತಹ ಸೌಲಭ್ಯಗಳು ಸಿಗಲಿವೆ. ಆ ಬಳಿಕ ಬೇರೆ ಭಾಷೆಗಳಿಗೂ ವಿಸ್ತರಿಸಲಾಗುವುದು. ಈ ಬಗ್ಗೆ ಒಪ್ಪಂದ ನಡೆಯಲಿದೆ.

ವಾಗಕ್ಷರದ ಇತಿ–ಮಿತಿಗಳು

ಮಾತನಾಡಿದ್ದನ್ನು ಅಕ್ಷರ ರೂಪದಲ್ಲಿ, ಆಡಿಯೊ ರೂಪದಲ್ಲಿ ಸೇವ್‌ ಮಾಡಬಹುದು, ಷೇರ್ ಮಾಡುವ ಆಯ್ಕೆಯೂ ಇದೆ.

ಮಾತು ಅಕ್ಷರ ರೂಪಕ್ಕೆ ಬಂದ ಮೇಲೆ ಅದನ್ನು ಇನ್ನಷ್ಟು ಅಂದಗೊಳಿಸುವ, ಬುಲೆಟ್‌ ಪಾಯಿಂಟ್‌ ಹಾಕುವ, ವರ್ಡ್‌ನಲ್ಲಿ ಓಪನ್‌ ಮಾಡಿ ಫಾರ್ಮೆಟ್‌ಗಳನ್ನು ಬದಲಿಸುವ ಆಯ್ಕೆಗಳೂ ಇವೆ.

ಆಡು ಭಾಷೆ, ಪಠ್ಯ ಯಾವುದಾದರೂ ಸರಿ ಉಚ್ಛರಣೆ ಸ್ಪಷ್ಟವಾಗಿರಬೇಕು.ಯಾವುದೇ ರೀತಿಯ ಚಿಹ್ನೆಗಳು ಇಲ್ಲಿ ಬರುವುದಿಲ್ಲ.

ಗೌಜು, ಗದ್ದಲ ಇರುವ ಕಡೆಗಳಲ್ಲಿ ಪ್ರತ್ಯೇಕವಾದ ಮೈಕ್‌ ಒಂದನ್ನು ಮಾತನಾಡುವವರಿಗೆ ಅತಿ ಹತ್ತಿರದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಒಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್):ಹಳೆಯ ಪುಸ್ತಕಗಳ ಡಿಜಿಟಲೀಕರಣ ಅಥವಾ ಮರು ಮುದ್ರಣಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ. ಮುಂದಿನ ಮಾರ್ಚ್ ವೇಳೆಗೆ ಹೊರತರುವ ಯೋಜನೆ ಹೊಂದಿದ್ದೇವೆ. ಶೇ 90-95ರಷ್ಟು ಖಚಿತವಾಗಿರಲಿದೆ.

ತಳಹದಿ ಮರೆಯುವುದುಂಟೆ?

ಇಂದು ನಾವು ಕಂಪ್ಯೂಟರ್ ಮತ್ತು ಮೊಬೈಲ್‌ನಲ್ಲಿ ಸುಲಭವಾಗಿ ಕನ್ನಡ ಟೈಪಿಸಲು ಸಾಧ್ಯವಾಗುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ಕೆ.ಪಿ. ರಾವ್ (ಕಿನ್ನಿಕಂಬಳ ಪದ್ಮನಾಭ ರಾವ್). 1988ರಲ್ಲಿ ಸೇಡಿಯಾಪು ಎನ್ನುವ ಕನ್ನಡದ ಮೊದಲ ಲಿಪಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಇವರದ್ದು. ಇದನ್ನು ಉಚಿತವಾಗಿ ಬಳಕೆಗೆ ಲಭ್ಯವಾಗುವಂತೆ ಮಾಡಿ ಔದಾರ್ಯವನ್ನೂ ಮೆರೆದಿದ್ದಾರೆ. ಇದನ್ನೇ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ಎಂದು ರಾಜ್ಯ ಸರ್ಕಾರ ಮಾನ್ಯತೆ ನೀಡಿದೆ.ಕನ್ನಡ ಮಾತ್ರವಲ್ಲ ಭಾರತದ ಇತರ ಭಾಷೆಗಳನ್ನೂ ಕಂಪ್ಯೂಟರ್‌ನಲ್ಲಿ ಬಳಸಲು ಇದೇ ಕೀಲಿಮಣೆ ನೆರವಾಗಿದೆ. ಆ ನಂತರದಲ್ಲಿ ಕನ್ನಡವನ್ನೂ ಒಳಗೊಂಡು ಭಾರತೀಯ ಭಾಷೆಗಳನ್ನು ಕಂಪ್ಯೂಟರ್ ಮತ್ತು ಮೊಬೈಲ್‌ನಲ್ಲಿ ಬಳಸಲು ಹಲವು ವಿಧದಲ್ಲಿ ಹಲವರು ದುಡಿಯುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ಕೆ.ಪಿ.ರಾವ್ ಅವರು ಮೊದಲಿಗೆ ಹಾಕಿ ಕೊಟ್ಟಿರುವ ತಳಹದಿಯೇ ಸ್ಫೂರ್ತಿ ಎನ್ನುವುದು ವಾಸ್ತವ.

‘ಕ-ನಾದ’ದ ಇಂಪು

ಇದು ಧ್ವನಿ ಆಧಾರಿತ ಕೀಲಿಮಣೆ. ಇಂಗ್ಲಿಷ್ ಭಾಷೆಯ QWERTY ಕೀಲಿಮಣೆ ವಿನ್ಯಾಸಕ್ಕಿಂತ ಭಿನ್ನ. ಭಾರತೀಯ ಬ್ರಾಹ್ಮೀ ಲಿಪಿ ಮೂಲದ ಭಾಷೆಗಳ ಪ್ರಾಥಮಿಕ ಸ್ವರ ವಿನ್ಯಾಸ ಘಟಕಗಳ ಪ್ರಸ್ತಾರಗಳಿಗೆ ನೇರವಾಗಿ ಸಂಪರ್ಕಿಸಲು ಅನುಕೂಲ ಆಗವಂತೆ ಈ ಕೀಲಿಮಣೆಯನ್ನು ವಿನ್ಯಾಸಗೊಳಿಸಲಾಗಿದೆ.

ನಿಟ್ಟೂರು ಮೂಲದ ಅಮೆರಿಕದ ಸಾಫ್ಟ್‌ವೇರ್ ಉದ್ಯಮಿಡಾ. ಗುರುಪ್ರಸಾದ್ ಹಾಗೂ ಭಾಷಾ ತಜ್ಞ ಬಿ.ವಿ.ಕೆ. ಶಾಸ್ತ್ರಿ ಅವರ ತಂಡ ಈ ವಿಶಿಷ್ಟ ಕೀಲಿಮಣೆ ಅಭಿವೃದ್ಧಿಪಡಿಸಿದ್ದಾರೆ.ಹೆಚ್ಚಿನ ಮಾಹಿತಿಗೆ www.ka-naada.com

ಭಾ‌ರತವಾಣಿ

ಬಹುಮಾಧ್ಯಮಗಳ ಮೂಲಕ ಭಾರತೀಯ ಭಾಷೆಗಳ ಜ್ಞಾನವನ್ನು ಒಂದೇ ಜಾಲತಾಣದಲ್ಲಿ ಒದಗಿಸುವ ಯೋಜನೆಯೇ ಭಾರತವಾಣಿ. ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸಿದೆ.

ಮೊಬೈಲ್‌ ಅಪ್ಲಿಕೇಷನ್‌ ಮತ್ತು ಕಂಪ್ಯೂಟರ್ ಆಧಾರಿತ ಜಾಲತಾಣದ ಮೂಲಕ ಜನಪ್ರಿಯತೆ ಗಳಿಸಿದೆ. 150 ಡಿಜಿಟಲ್‌ ನಿಘಂಟುಗಳು ಇಲ್ಲಿ ಲಭ್ಯವಿವೆ.

ಎಲ್ಲಾ ಭಾಷೆಗಳ ನಿಘಂಟು ಇಲ್ಲಿ ಲಭ್ಯವಿವೆ. ಕನ್ನಡ ಸಾಹಿತ್ಯ ಪರಿಷತ್‌ನ 8 ನಿಘಂಟುಗಳನ್ನು ಸೇರಿಸಲಾಗಿದೆ.

‘ಧ್ವನಿ ಆ್ಯಪ್‌ನಲ್ಲಿ ರೆಕಾರ್ಡ್ ಮಾಡಲು 15 ಸೆಕೆಂಡ್‌ನ ಮಿತಿ ಇದೆ. ಆದರೆ, ವಾಗಕ್ಷರದಲ್ಲಿ ಮಿತಿ ಇಲ್ಲ. ಸಿಸ್ಟಂಗೆ ಮೈಕ್ರೊಫೋನ್ ಕನೆಕ್ಟ್ ಮಾಡಿ, ಲೈವ್ ಸ್ಪೀಚ್ ಅನ್ನೂ ಯಥಾವತ್ತಾಗಿ ಅಕ್ಷರ ರೂಪದಲ್ಲಿ ಪಡೆಯಬಹುದು’ ಎನ್ನುತ್ತಾರೆ ಜ್ಞಾನಿ ಸಂಸ್ಥೆಯ ಅನಂತ್ ಎನ್.

‘ಎಷ್ಟೇ ಗದ್ದಲವಿದ್ದರೂ ಸ್ಪಷ್ಟವಾಗಿ ರೆಕಾರ್ಡ್ ಆಗುವಂತಹ ಹಾಗೂ ಯಾವುದೇ ಫಾರ್ಮೆಟ್‌ನಲ್ಲಿರುವ ಆಡಿಯೊ ಫೈಲ್‌ಗಳನ್ನು ಟೆಕ್ಸ್ಟ್ ಆಗಿ ಪರಿವರ್ತಿಸುವ ಸೌಲಭ್ಯವೂ ಶೀಘ್ರ ಲಭ್ಯವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಭಾರತವಾಣಿಯು ಕಾರ್ಯಗಳು

* ಡಿಜಿಟಲ್‌ ರೂಪದಲ್ಲಿ ಭಾಷೆ ಮತ್ತು ಸಾಹಿತ್ಯಗಳ ದಾಖಲೀಕರಣ

* ಲಿಪಿ ಮತ್ತು ಟೈಪೋಗ್ರಫಿ ಸಂಕೇತಗಳನ್ನು ಸೂತ್ರೀಕರಿಸುವುದು/ವಿನ್ಯಾಸಗೊಳಿಸುವುದು

* ನಿಘಂಟುಗಳು ಮತ್ತು ಪದಕೋಶಗಳನ್ನು ಸಿದ್ಧಪಡಿಸುವುದು

* ಆಧುನಿಕ ಮತ್ತು ಶಾಸ್ತ್ರೀಯ ಭಾಷೆಗಳಲ್ಲಿರುವ ಸಾಹಿತ್ಯ ಮತ್ತು ಜ್ಞಾನಪಠ್ಯಗಳ(ಗ್ರಾಂಥಿಕ ಮತ್ತು ಮೌಖಿಕ) ಅನುವಾದ ಮಾಡುವುದು

* ಆನ್‌ಲೈನ್ ಭಾಷಾ ಬೋಧನೆ, ಕಲಿಕೆ, ಭಾಷಾ ಶಿಕ್ಷಕರ ತರಬೇತಿ ಮತ್ತು ಮೌಲ್ಯಮಾಪನ

ಸಂಪರ್ಕಕ್ಕೆ: 9845362956

ಪರಿಶೀಲನೆಗೆ ಲಿಂಕ್: https://dictation.gnani.ai

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT