ಗುರುವಾರ , ಜುಲೈ 29, 2021
23 °C

ಹೆಣ್ಣುಸೊಳ್ಳೆಗಳ ಶತ್ರು ಈ ಗಂಡುಸೊಳ್ಳೆ...

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಆಕ್ಸಿಟೆಕ್ ಅಭಿವೃದ್ಧಿಪಡಿಸಿರುವ ಈ ಕುಲಾಂತರಿ ಸೊಳ್ಳೆಗಳು ಮುಂದಿನ 12 ವಾರಗಳಲ್ಲಿ ಸುಮಾರು 12 ಸಾವಿರ ಸೊಳ್ಳೆಗಳನ್ನು ಉತ್ಪತ್ತಿ ಮಾಡುವ ನಿರೀಕ್ಷೆ ಇದೆ. ಒಂದೊಮ್ಮೆ ನಿರೀಕ್ಷೆಯಂತೆ ಈ ಯೋಜನೆ ಯಶಸ್ಸು ಕಂಡಿದ್ದೇ ಆದಲ್ಲಿ, ಎರಡು ಕೋಟಿ ಕುಲಾಂತರಿ ಸೊಳ್ಳೆಯನ್ನು ಇದೇ ವರ್ಷದಲ್ಲಿ ಬಿಡುಗಡೆ ಮಾಡಲಾಗುವುದು...

ಅಮೆರಿಕದ ಫ್ಲೋರಿಡಾದಲ್ಲಿ ಇಡಲಾಗಿದ್ದ ಸುಮಾರು ಹತ್ತು ಸಾವಿರ ಮೊಟ್ಟೆಗಳು ಒಡೆದು ಹೊರಬಂದ ಕುಲಾಂತರಿ ಸೊಳ್ಳೆಗಳು, ಪ್ರಯೋಗಾಲಯದಲ್ಲಿ ನಿರ್ಧಾರವಾದಂತೆ ತಮ್ಮ ಕೆಲಸ ಆರಂಭಿಸಿವೆ. ತಮ್ಮ ಪೂರ್ವಿಕರ ತಳಿಯನ್ನು ಪ್ರಯೋಗಾಲಯದಲ್ಲಿ ತಿದ್ದಿ ತೀಡಿ ಸಜ್ಜುಗೊಳಿಸಿದ ಕುಲಾಂತರಿ ‘ಏಡೀಸ್ ಈಜಿಪ್ಟೈ’ ತಳಿಯ ಗಂಡುಸೊಳ್ಳೆಗಳು ಅಮೆರಿಕದಲ್ಲಿ ಮೊದಲ ಬಾರಿಗೆ ಪ್ರಯೋಗಗೊಂಡ ಕುಲಾಂತರಿ ಸೊಳ್ಳೆ ಎಂಬ ಕೀರ್ತಿಗೂ ಪಾತ್ರವಾಗಿದೆ.

ಇಂಥದ್ದೊಂದು ಸೊಳ್ಳೆ ಉತ್ಪಾದನೆಗೆ ಐರೋಪ್ಯ ರಾಷ್ಟ್ರ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಆಕ್ಸಿಟೆಕ್ ತೆಗೆದುಕೊಂಡಿದ್ದು ಬರೋಬ್ಬರಿ 10 ವರ್ಷ. ದಶಕಗಳಿಂದ ಕಾಡುತ್ತಿರುವ ಝೀಕಾ, ಡೆಂಗಿ, ಚಿಕೂನ್‌ಗೂನ್ಯ, ಹಳದಿ ಜ್ವರಕ್ಕೆ ಸೊಳ್ಳೆಗಳೇ ಮೂಲಕಾರಣ. ಅದರಲ್ಲೂ ಸೊಳ್ಳೆತಳಿಯಲ್ಲಿ ಶೇ 4ರಷ್ಟಿರುವ ಏಡೀಸ್ ಈಜಿಪ್ಟೈ ಎಂಬ ಸೊಳ್ಳೆ ಈ ಕಾಯಿಲೆ ಹರಡಲು ಕಾರಣ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. 

ಆದರೆ ಸೊಳ್ಳೆಗಳ ನಾಶಕ್ಕೆ ಬಳಸುವ ಕೀಟನಾಶಕಗಳು ಜನರ ಆರೋಗ್ಯಕ್ಕೇ ಮಾರಕ. ಹೀಗಾಗಿ ಇದಕ್ಕೊಂದು ಪರಿಣಾಮಕಾರಿ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಆಕ್ಸಿಟೆಕ್‌ನ ವಿಜ್ಞಾನಿಗಳು ಕಾರ್ಯೋನ್ಮುಖರಾದರು. ಜೈವಿಕವಾಗಿ ಈ ಸೊಳ್ಳೆಗಳ ನಾಶಕ್ಕೆ ಯೋಜನೆ ರೂಪಿಸಿದರು. ಅಮೆರಿಕದ ಈ ಸಮಸ್ಯೆಗೆ ಅಲ್ಲಿನ ಐಟಿ ದಿಗ್ಗಜ ಬಿಲ್‌ ಗೇಟ್ಸ್‌ ಒಡೆತನದ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಪ್ರತಿಷ್ಠಾನವೂ ನೆರವು ನೀಡಿತು.

ಸಾಮಾನ್ಯವಾಗಿ ಸೊಳ್ಳೆಗಳಲ್ಲಿ ಹೆಣ್ಣುಸೊಳ್ಳೆಗಳು ಮಾತ್ರ ರಕ್ತ ಹೀರುತ್ತವೆ. ಗಂಡುಸೊಳ್ಳೆಗಳು ಆ ಉಸಾಬರಿಗೆ ಹೋಗುವುದಿಲ್ಲ. ಅವು ಏನಿದ್ದರೂ ಹುಲ್ಲಿನ ಮೇಲೆ ಹಾರಾಡಿ ಆಹಾರ ಹುಡುಕುವುದು; ಹೆಣ್ಣುಗಳ ಸಂಘ ಮಾಡುವುದಷ್ಟೇ. ಆದರೆ ಹೀಗೆ ಸಂಘದಿಂದ ಗರ್ಭ ಧರಿಸುವ ಹೆಣ್ಣುಸೊಳ್ಳೆಗಳಿಗೆ ಪೋಷಕಾಂಶಗಳನ್ನು ಹುಡುಕುತ್ತಿರುತ್ತದೆ. ಆಘ್ರಣಿಸುವ ಅಪಾರ ಶಕ್ತಿ ಹೊಂದಿರುವ ಈ ಹೆಣ್ಣುಸೊಳ್ಳೆಗಳು ಇಂಗಾಲದ ಡೈಆಕ್ಸೈಡ್‌ ಗಾಢವಾಗಿದ್ದಲ್ಲಿ ಪ್ರಾಣಿಗಳಿರುತ್ತವೆ ಎಂಬುದು ಗೊತ್ತು. ಹೀಗೆ ಸುಲಭವಾಗಿ ಸಿಗುವ ಮನುಷ್ಯರ ರಕ್ತವನ್ನು ಹೀರಿ ತನ್ನ ಪೋಷಕಾಂಶದ ಕೊರತೆಯನ್ನು ನೀಗಿಸಿಕೊಳ್ಳುತ್ತವೆ.

ಇದನ್ನೇ ನಿಯಂತ್ರಿಸುವುದು ವಿಜ್ಞಾನಿಗಳ ಮುಂದಿದ್ದ ಸವಾಲು. ಹೀಗಾಗಿ ಆಕ್ಸಿಟೆಕ್‌ನ ವಿಜ್ಞಾನಿಗಳು, ಹೆಣ್ಣುಸೊಳ್ಳೆಗಳನ್ನು ನಿಯಂತ್ರಿಸಲು ಗಂಡುಸೊಳ್ಳೆಗಳನ್ನು ಸಜ್ಜಗೊಳಿಸಲು ನಿರ್ಧರಿಸಿದರು. ತಳಿಯನ್ನೇ ಬದಲಾಯಿಸಿ ಅದರ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ವಿಭಿನ್ನವಾದ ರಾಸಾಯನಿಕವನ್ನು ಹೆಣ್ಣಿನ ಗರ್ಭದೊಳಗೆ ಕಳುಹಿಸುವಂತೆ ಸಜ್ಜುಗೊಳಿಸಿದರು. ಅದರ ಗುರಿಯೂ ಮುಂದೆ ಮೊಟ್ಟೆಯೊಡೆದು ಹುಟ್ಟುವ ಹೆಣ್ಣುಸೊಳ್ಳೆಗಳೇ.

ಸಾಮಾನ್ಯವಾಗಿ ಸೊಳ್ಳೆ ಕಚ್ಚಲು ಆರಂಭಿಸುವುದು ಗರ್ಭ ಧರಿಸಿದ ನಂತರ. ಆದರೆ ಗರ್ಭ ಧರಿಸುವ ಸ್ಥಿತಿಗೆ ತಲುಪುವ ಹೊತ್ತಿಗೆ ಹೆಣ್ಣುಸೊಳ್ಳೆಯೇ ಸಾಯುವಂತೆ ವಿಜ್ಞಾನಿಗಳು ತಳಿಯನ್ನು ಬದಲಾಯಿಸಿದ್ದಾರೆ. 

ಆಕ್ಸಿಟೆಕ್ ಅಭಿವೃದ್ಧಿಪಡಿಸಿರುವ ಈ ಕುಲಾಂತರಿ ಸೊಳ್ಳೆಗಳು ಮುಂದಿನ 12 ವಾರಗಳಲ್ಲಿ ಸುಮಾರು 12 ಸಾವಿರ ಸೊಳ್ಳೆಗಳನ್ನು ಉತ್ಪತ್ತಿ ಮಾಡುವ ನಿರೀಕ್ಷೆ ಇದೆ. ಒಂದೊಮ್ಮೆ ನಿರೀಕ್ಷೆಯಂತೆ ಈ ಯೋಜನೆ ಯಶಸ್ಸು ಕಂಡಿದ್ದೇ ಆದಲ್ಲಿ, ಎರಡು ಕೋಟಿ ಕುಲಾಂತರಿ ಸೊಳ್ಳೆಯನ್ನು ಇದೇ ವರ್ಷದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ಹೇಳಿದೆ.

ಇಂಥದ್ದೊಂದು ಕುಲಾಂತರಿ ಸೊಳ್ಳೆಯನ್ನು ಅಮೆರಿಕದಲ್ಲಿ ಪ್ರಯೋಗಿಸುವ ಮೊದಲು, ಕಂಪೆನಿಯು ಆ ಸೊಳ್ಳೆಗಳನ್ನು ಬ್ರೆಜಿಲ್, ಮಲೇಷಿಯಾ, ಪನಾಮದ ಆಯ್ದ ಭಾಗಗಳಲ್ಲಿ ಈ ಕುಲಾಂತರಿ ಸೊಳ್ಳೆಗಳನ್ನು ಹಾರಿಸಿದ್ದರು. ಅಲ್ಲಿ ಇದು ಶೇ 90ರಷ್ಟು ಪರಿಣಾಮಕಾರಿ ಮತ್ತು ನಿಸರ್ಗದ ಇತರ ಜೀವಿಗಳಿಗೆ ತೊಂದರೆ ಇಲ್ಲ ಎಂಬುದನ್ನು ವಿಜ್ಞಾನಿಗಳು ಅಮೆರಿಕದ ಎಫ್‌ಡಿಎಗೆ ಮನವರಿಕೆ ಮಾಡಿಕೊಟ್ಟಿತು. ಅಲ್ಲಿಂದ ಒಪ್ಪಿಗೆ ದೊರೆತ ಮೇಲೆ ಪ್ರಾಯೋಗಿಕವಾಗಿ ಸೊಳ್ಳೆಗಳನ್ನು ಕಂಪನಿ ವಾತಾವರಣಕ್ಕೆ ಬಿಟ್ಟಿದೆ. 

ಆದರೆ ಈ ಕುಲಾಂತರಿ ತಳಿಯ ಬಳಕೆಗೆ ಅಮೆರಿಕದ ವಿವಿಧ ಇಲಾಖೆಗಳು ಒಪ್ಪಿಗೆ ಸೂಚಿಸಿದ್ದರೂ ಫ್ಲೋರಿಡಾದ ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಲಾಂತರಿ ಸೊಳ್ಳೆಯನ್ನು ತಂದು ಇಲ್ಲಿ ಬಿಟ್ಟಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ. ಫ್ಲೋರಿಡಾ ವಿಜ್ಞಾನಿಗಳ ಪ್ರಯೋಗಾಲಯವಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ಪರಿಸರಕ್ಕೆ ಮಾರಕವಾಗಬಲ್ಲ ಕುಲಾಂತರಿ ಸೊಳ್ಳೆಯನ್ನು ಕೀಟನಾಶಕ ಸಿಂಪಡಿಸಿ ನಾಶಪಡಿಸುವ ಬೆದರಿಕೆಯೆನ್ನೂ ಹಾಕಿದ್ದಾರೆ. ಹೊಸ ತಂತ್ರಜ್ಞಾನ ಬಂದಾಗ ಇಂಥ ವಿರೋಧಗಳು ಸಾಮಾನ್ಯ ಎಂದಿರುವ ವಿಜ್ಞಾನಿಗಳು ಜನರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.

ಆದರೆ ಇಂಥ ಕುಲಾಂತರಿ ಕೀಟಗಳ ಅಭಿವೃದ್ಧಿ ಆಕ್ಸಿಟೆಕ್ ಕಂಪೆನಿಗೆ ಹೊಸತಲ್ಲ. ಈ ಹಿಂದೆ ಇದೇ ತಂತ್ರಜ್ಞಾನದಲ್ಲಿ ಡೈಮಂಡ್‌ಬ್ಯಾಕ್ ಎಂಬ ಚಿಟ್ಟೆಯನ್ನು ಇದೇ ಆಕ್ಸಿಟೆಕ್ ಕಂಪೆನಿಯು ನ್ಯೂಯಾರ್ಕ್‌ನಲ್ಲಿ ಹಾರಿಬಿಟ್ಟಿತ್ತು. ಅಷ್ಟು ಮಾತ್ರವಲ್ಲ ಗುಲಾಬಿ ಬಾಲ್‌ವರ್ಮ್‌ ಅನ್ನೂ ಅಭಿವೃದ್ಧಿಪಡಿಸಿ ಅರಿಝೋನಾದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಈ ಕುಲಾಂತರಿ ಸಂತತಿಗೆ ಏಡೀಸ್ ಈಜಿಪ್ಟೈ ಮತ್ತೊಂದು ಸೇರ್ಪಡೆ.

ಆಕ್ಸಿಟೆಕ್ ಕಂಪೆನಿ ಈಗ ಈ ಕುಲಾಂತರಿ ಸೊಳ್ಳೆಗಳನ್ನು ಭಾರತದಲ್ಲಿ ಹಾರಿಬಿಡುವ ಯೋಜನೆಯನ್ನೂ ರೂಪಿಸಿದೆ. ಭವಿಷ್ಯದ ತಂತ್ರಜ್ಞಾನದ ಭಾಗವಾಗಿ ಬೆಳೆ ನಾಶ ಮಾಡುವ ಹಾನಿಕಾರಕ ಕೀಟಗಳನ್ನು ನಾಶ ಮಾಡಲು ಇಂತಹ ಜೈವಿಕ ಕೀಟ ನಾಶಕಗಳನ್ನು ಬಳಸುವ ಹೊಸ ಸಾಧ್ಯತೆಯ ಕುರಿತು ವಿಜ್ಞಾನಿಗಳು ಸುಳಿವು ನೀಡಿದ್ದಾರೆ.

ಆದರೆ, ಈ ಕುಲಾಂತರಿ ಸೊಳ್ಳೆಯು ಜೈವಿಕ ತಂತ್ರಜ್ಞಾನದಲ್ಲಿ ಹೊಸ ಸಾಧ್ಯತೆಯನ್ನು ಹುಟ್ಟುಹಾಕಿದೆ. ಜಗತ್ತಿನಲ್ಲಿ 5ಲಕ್ಷ ಮಕ್ಕಳನ್ನು ಬಲಿ ಪಡೆದಿರುವ ಮಲೇರಿಯಾ ಹರಡುವ ಅನಾಫಿಲಿಸ್, ಡೆಂಗೀ ಹರಡುವ ಏಡೀಸ್‌ಗಳ ನಿಯಂತ್ರಣಕ್ಕೂ ಹೊಸ ಮಾರ್ಗೋಪಾಯ ದೊರೆತಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು