ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ‘ಪ್ಲೈಯಿಂಗ್‌–ವಿ’: ವೈಮಾನಿಕ ಕ್ಷೇತ್ರದ ಹೊಸ ಭರವಸೆ

Last Updated 9 ಸೆಪ್ಟೆಂಬರ್ 2020, 2:30 IST
ಅಕ್ಷರ ಗಾತ್ರ
ADVERTISEMENT
""
""

ಈ‌ ತಿಂಗಳಾರಂಭದಲ್ಲಿ ವಿಭಿನ್ನ ವಿನ್ಯಾಸದ ವಿಮಾನವೊಂದರ ಪುಟ್ಟ ಮಾದರಿ ವೈಮಾನಿಕ ಕ್ಷೇತ್ರದಲ್ಲಿ ಸದ್ದು ಮಾಡಿತು. ಕೋವಿಡ್‌–19 ಗದ್ದಲದ ನಡುವೆ ಅದು ಹೆಚ್ಚು ಸುದ್ದಿಯಾಗಲಿಲ್ಲ. ಅಮೆರಿಕ, ರಷ್ಯಾ, ಬ್ರಿಟನ್‌, ಚೀನಾ, ಜಪಾನ್‌ನಂತಹ ಮುಂದುವರಿದ ರಾಷ್ಟ್ರಗಳಲ್ಲಿ ಆ ಘಟನೆ ನಡೆದಿರಲಿಲ್ಲ. ಆ ಕಾರಣಕ್ಕೂ ಅದು ದೊಡ್ಡ ಸುದ್ದಿಯಾಗದೆ ಇರಬಹುದು. ಪಶ್ಚಿಮ ಯೂರೋಪ್‌ನ ಪುಟ್ಟ ರಾಷ್ಟ್ರ ನೆದರ್‌ಲ್ಯಾಂಡ್ಸ್‌ನ ತಂತ್ರಜ್ಞರು, ಜರ್ಮನಿಯಲ್ಲಿ ಮಾಡಿದ ಅತ್ಯಂತ ಮಹತ್ವದ ಸಾಧನೆ ಅದು.

ವಿಷಯ ಇಷ್ಟೇ; ಈಗಿನ ವಿಮಾನಗಳ ವಿನ್ಯಾಸಕ್ಕೆ ಭಿನ್ನವಾಗಿ, ಇಂಗ್ಲಿಷ್‌ನ ‘ವಿ’ (V) ಅಕ್ಷರವನ್ನು ಹೋಲುವ ವಿನ್ಯಾಸ ಹೊಂದಿರುವ ವಿಮಾನವೊಂದರ ಪುಟ್ಟ ಮಾದರಿಯನ್ನು ಅಭಿವೃದ್ಧಿ ಪಡಿಸಿ, ಡ್ರೋನ್‌ ಹಾಗೂ ಆಟೊಪೈಲಟ್‌ ತಂತ್ರಜ್ಞಾನದ ಮೂಲಕ ಟೇಕ್‌ ಆಫ್‌ ಮಾಡಿಸಿ ಆಗಸದಲ್ಲಿ ಒಂದಿಷ್ಟು ಹೊತ್ತು ಹಾರಿಸಿ, ಸುರಕ್ಷಿತವಾಗಿ ಧರೆಗಿಳಿಸಿದ್ದು.

ಅದು ದೊಡ್ಡ ವಿಮಾನವೇನಲ್ಲ. ಭಾರ ಕೇವಲ 22.5 ಕೆಜಿ. ಅಗಲ3.06 ಮೀಟರ್, ಉದ್ದ 2.72 ಮೀಟರ್‌ ‌ಮಾತ್ರ. ಆದರೂ, ಅದರ ಯಶಸ್ವಿ ಹಾರಾಟ ವೈಮಾನಿಕ ಕ್ಷೇತ್ರದವರ ಗಮನಸೆಳೆಯಿತು. ಅದಕ್ಕೆ ಒಂದು ಕಾರಣ, ಮಾದರಿ ವಿಮಾನದ ವಿನ್ಯಾಸ. ಇನ್ನೊಂದು ಪ್ರಮುಖ ಕಾರಣವಿದೆ; ವಿಮಾನದ ಇಂಧನ ಕ್ಷಮತೆ.

‘ಫ್ಲೈಯಿಂಗ್‌ –ವಿ’ ವಿಮಾನ ಮಾದರಿಯ ಮೇಲ್ಭಾಗದ ನೋಟಚಿತ್ರ ಕೃಪೆ: ಮಾಲ್ಕಮ್‌‌ ಬ್ರೌನ್‌, ಡೆಲ್ಫ್ಟ್‌ ತಂತ್ರಜ್ಞಾನ ವಿವಿ

ಮುಂದೊಂದು ದಿನ ‘V’ ವಿನ್ಯಾಸದ ಪ್ರಯಾಣಿಕರ ವಿಮಾನವನ್ನು ರೂಪಿಸಲು ಸಾಧ್ಯವಾದರೆ, ಅದಕ್ಕೆ ಈಗಿನ ವಿಮಾನಗಳು ಬಳಸುವ ಇಂಧನಕ್ಕಿಂತ ಶೇ 20ರಷ್ಟು ಕಡಿಮೆ ಇಂಧನ ಸಾಕು. ಈಗಿನ ವಿಮಾನಗಳಿಗೆ ಹೋಲಿಸಿದರೆ, ಹೊಸ ವಿಮಾನದ ಏರೊಡೈನಾಮಿಕ್‌ (ವಾಯು ಚಲನಾಶಾಸ್ತ್ರ) ವಿನ್ಯಾಸ ಇಂಧನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ವಿಮಾನದ ಒಟ್ಟಾರೆ ತೂಕವೂ ಕಡಿಮೆಯಾಗುವುದರಿಂದ ಇಂಧನ ಖರ್ಚು ಕಡಿಮೆಯಾಗುತ್ತದೆ.ದೂರದ ಪ್ರಯಾಣಕ್ಕೆ ಈ ವಿಮಾನ ಹೆಚ್ಚು ಸೂಕ್ತ ಎಂಬುದು ತಜ್ಞರ ಪ್ರತಿಪಾದನೆ.

ಅಂದ ಹಾಗೆ, ಈ ಹೊಸ ವಿಮಾನದ ಮಾದರಿಗೆ ‘ಫ್ಲೈಯಿಂಗ್‌–ವಿ' (Flying-V) ಎಂದು ಹೆಸರಿಡಲಾಗಿದೆ.

ನೆದರ್‌ಲ್ಯಾಂಡ್ಸ್‌ನ ಡೆಲ್ಫ್ಟ್‌ ತಂತ್ರಜ್ಞಾನ ವಿಶ್ವವಿದ್ಯಾಲಯದ (Delft University of Technology) ತಂತ್ರಜ್ಞರು ಇದರ ರೂವಾರಿಗಳು. ಇವರ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದು, ಶತಮಾನದ ಇತಿಹಾಸವಿರುವ ನೆದರ್‌ಲ್ಯಾಂಡ್ಸ್‌ನ ಕೆಎಲ್‌ಎಂ (KLM) ವಿಮಾನಯಾನ ಸಂಸ್ಥೆ. ಇತ್ತೀಚೆಗೆ ಜರ್ಮನಿಯ ವಾಯುನೆಲೆಯೊಂದರಲ್ಲಿ ನಡೆದ ವಿಮಾನದ ಮಾದರಿಯ ಪರೀಕ್ಷಾರ್ಥ ಹಾರಾಟಕ್ಕೆ ತಾಂತ್ರಿಕವಾಗಿ ಸಹಕಾರ ನೀಡಿದ್ದು, ವಿಮಾನಗಳ ತಯಾರಿಕಾ ಸಂಸ್ಥೆ ಏರ್‌ಬಸ್.

ಡೆಲ್ಫ್ಟ್‌ ತಂತ್ರಜ್ಞಾನ ವಿಶ್ವವಿದ್ಯಾಲಯದ ಡಾ.ರೋಲೊಫ್‌ ವೊಸ್ ನೇತೃತ್ವದ ಸಂಶೋಧಕರ ಹಾಗೂ ಎಂಜಿನಿಯರ್‌ಗಳ ತಂಡ ಕಳೆದ ಒಂದೂವರೆ ವರ್ಷದ ಹಿಂದೆ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಕೆಎಲ್‌ಎಂ ವಿಮಾನಯಾನ ಸಂಸ್ಥೆ ಪಾಲುದಾರಿಕೆಗೆ ಒಪ್ಪಿಕೊಂಡಿತ್ತು. 2019ರ ಅಕ್ಟೋಬರ್‌ನಲ್ಲಿ ನಡೆದ ಕೆಎಲ್‌ಎಂನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಈ ‘ಫ್ಲೈಯಿಂಗ್– ವಿ’ ವಿಮಾನದ ಮಾದರಿ ಅಭಿವೃದ್ಧಿ ಯೋಜನೆಯನ್ನು ಘೋಷಿಸಲಾಗಿತ್ತು. 11 ತಿಂಗಳ ಅವಧಿಯಲ್ಲಿ, ನೆಲಮಟ್ಟದಲ್ಲಿ ನಡೆಸಲಾದ ಹಲವು ಪರೀಕ್ಷೆಗಳ ನಂತರ ಬಳಿಕ ಪುಟ್ಟ ವಿಮಾನ ಮೊದಲ ಪರೀಕ್ಷಾರ್ಥ ಹಾರಾಟದಲ್ಲೇ ಯಶಸ್ವಿಯಾಗಿ ಟೇಕ್‌ಆಫ್‌ ಆಗಿ, ಬ್ಯಾಟರಿ ಚಾರ್ಜ್‌ ಮುಗಿಯುವವರೆಗೂ ಹಾರಾಡಿ, ನೆಲವನ್ನು ಸ್ಪರ್ಶಿಸಿದೆ.

ನಭಕ್ಕೆ ನೆಗೆದ ‘ಫ್ಲೈಯಿಂಗ್‌ –ವಿ’ ವಿಮಾನದ ಮಾದರಿಚಿತ್ರ ಕೃಪೆ: ಡೆಲ್ಫ್ಟ್‌ ತಂತ್ರಜ್ಞಾನ ವಿವಿ

ವಿಮಾನದ ವಿಶೇಷತೆ: ‘ಫ್ಲೈಯಿಂಗ್‌ –ವಿ’ ಮಾದರಿಯಲ್ಲಿ ಪ್ರಯಾಣಿಕರ ಆಸನಗಳು, ಸರಕು ತುಂಬುವ ಜಾಗ ಹಾಗೂ ಇಂಧನ ಟ್ಯಾಂಕ್‌ಗಳು‌ ವಿಮಾನದ ರೆಕ್ಕೆಗಳಲ್ಲಿವೆ.

ಜರ್ಮನಿಯ ವೈಮಾನಿಕ ನೆಲೆಯಲ್ಲಿ ನಡೆದ ಪರೀಕ್ಷೆಯ ಸಂದರ್ಭದಲ್ಲಿ,4 ಕಿಲೊವಾಟ್‌ನ ಎರಡು‌ ಎಲೆಕ್ಟ್ರಿಕ್‌ ಎಂಜಿನ್‌ ಹಾಗೂ 6 ಕೆಜಿ ಲೀಥಿಯಂ ಪಾಲಿಮರ್‌ ಬ್ಯಾಟರಿ ಅಳವಡಿಸಿದ್ದ ಪುಟ್ಟ ವಿಮಾನವು ಗಂಟೆಗೆ 80 ಕಿ.ಮೀ ವೇಗದಲ್ಲಿ ಸಂಚರಿಸಿ ಟೇಕ್‌ ಆಫ್‌ ಆಯಿತು. ಅಧ್ಯಯನ ತಂಡದ ನಿರೀಕ್ಷೆಗೂ ಮೀರಿ, ಟೇಕ್‌ ಆಫ್‌ ಆದ ತಕ್ಷಣಸಾಮಾನ್ಯ ವಿಮಾನಗಳಂತೆ ಸುಲಲಿತವಾಗಿ ತಿರುಗುತ್ತಾ (ರೊಟೇಷನ್‌) ಹಾರಾಡಿತು. ವಿಮಾನದ ವೇಗ, ಚಲನೆಯ ಕೋನ ಎಲ್ಲವೂ ಊಹೆ ಮಾಡಿದ ರೀತಿಯಲ್ಲೇ ಇತ್ತು ಎಂದು ತಂತ್ರಜ್ಞರು ಹೇಳಿದ್ದಾರೆ.

ಈ ವಿನ್ಯಾಸದಲ್ಲಿ ಸಣ್ಣ ಕೊರತೆ ಇರುವುದೂ ತಂತ್ರಜ್ಞರ ಗಮನಕ್ಕೆ ಬಂದಿದೆ. ಲ್ಯಾಂಡಿಂಗ್‌ ಆಗುವುದಕ್ಕೂ ಮೊದಲು ವಿಮಾನ ಓಲಾಡುತ್ತದೆ (ಇಂಗ್ಲಿಷ್‌ನಲ್ಲಿ ಡಚ್‌ ರೋಲ್‌ ಎಂದು ಕರೆಯಲಾಗುತ್ತದೆ). ಇದರಿಂದಾಗಿ ಲ್ಯಾಂಡಿಂಗ್‌ ಸಮಯದಲ್ಲಿ ಸ್ವಲ್ಪ ಘರ್ಷಣೆ ಉಂಟಾಗುತ್ತಿದೆ. ಹಾಗಾಗಿ, ವಿನ್ಯಾಸವನ್ನು ಇನ್ನಷ್ಟು ಪರಿಪಕ್ವಗೊಳಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಮೊದಲ ಹಂತದ ಪರೀಕ್ಷೆಯಲ್ಲಿ ಯಶಸ್ಸುಗಳಿಸಿರುವುದರಿಂದ, ಈ ಹಾರಾಟದಲ್ಲಿ ಸಂಗ್ರಹಿಸಿರುವ ದತ್ತಾಂಶಗಳನ್ನು ಆಧರಿಸಿ ತಂತ್ರಜ್ಞರು ಇನ್ನಷ್ಟು ಅಧ್ಯಯನ ನಡೆಸಲಿದ್ದಾರೆ. ಇದರ ಆಧಾರದಲ್ಲಿ ವಿಮಾನದ ಸಿಮ್ಯುಲೇಟರ್ ಅನ್ನು ಅಭಿವೃದ್ಧಿ ಪಡಿಸಬಹುದು. ಭವಿಷ್ಯದ ಅಧ್ಯಯನಕ್ಕೆ ಅದು ನೆರವಾಗಲಿದೆ. ಮುಂದಿನ ದಿನಗಳಲ್ಲಿ ನಡೆಸ‌ಲಿರುವ ಪರೀಕ್ಷಾರ್ಥ ಹಾರಾಟಕ್ಕಾಗಿ ತಂಡವು ವಿಮಾನದ ಮಾದರಿಯನ್ನು ಸಿದ್ಧಪಡಿಸಲಿದೆ ಎಂದುಡೆಲ್ಫ್ಟ್‌ ತಂತ್ರಜ್ಞಾನ ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ವಿನ್ಯಾಸದ ವಿಮಾನದ ಅಭಿವೃದ್ಧಿಯಲ್ಲಿ ಇದು ಆರಂಭಿಕ ಹೆಜ್ಜೆ ಮಾತ್ರ. ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊತ್ತೊಯ್ಯಬಲ್ಲ ‘ಫ್ಲೈಯಿಂಗ್‌– ವಿ’ ವಿಮಾನ ನಿಲ್ದಾಣಗಳಲ್ಲಿ ಕಾಣಸಿಗಬೇಕಾದರೆ ಹಲವು ವರ್ಷಗಳೇ ಬೇಕು. ನೆದರ್‌ಲ್ಯಾಂಡ್ಸ್‌ನ ಅಧ್ಯಯನಕಾರರು ಹಾಗೂ ಎಂಜಿನಿಯರ್‌ಗಳು ನಡೆಸಿರುವ ಈ ಪ್ರಯೋಗವು ಭಿನ್ನ ವಿನ್ಯಾಸದ, ಇಂಧನ ಕ್ಷಮತೆ ಹೆಚ್ಚಿರುವ ವಿಮಾನದ ಅಭಿವೃದ್ಧಿ ಪ್ರಕ್ರಿಯೆಗೆ ನಾಂದಿ ಹಾಡಿರುವುದಂತು ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT