ಗುರುವಾರ , ಆಗಸ್ಟ್ 18, 2022
25 °C

ಮಾರಾಟಕ್ಕಿದೆ ಡಿಜಿಟಲ್‌ ಸೈಟು! ಏನಿದು ಡಿಜಿಟಲ್‌ ರಿಯಲ್ ಎಸ್ಟೇಟ್?

ಕೃಷ್ಣ ಭಟ್ Updated:

ಅಕ್ಷರ ಗಾತ್ರ : | |

Prajavani

‘ಅಲ್ಲೊಂದು 30ಕ್ಕೆ 40 ಇದೆ. 5 ಸಾವ್ರ ಹೇಳ್ತಾವ್ರೆ. ಮಾಡ್ಕೊಂಬುಡಿ… ಚೆನ್ನಾಗೈತೆ’, ‘ಆ ಕಾರ್ನರ್ ಸೈಟು ಚೆನ್ನಾಗಿದೆ, ನೀವೇ ಹಾಕ್ಕೊಂಬುಡಿ’ … ಇಂಥ ಮಾತುಗಳೆಲ್ಲ ಟೀ ಬೆಂಗಳೂರಿನ ಜನಪ್ರಿಯ ಪ್ರದೇಶಗಳ ಮೂಲೆಯಲ್ಲಿರುವ ಟೀ ಅಂಗಡಿಯಲ್ಲಿ ಕಿವಿಗೆ ಬೀಳುವುದು ಸಾಮಾನ್ಯ. ಇದು ರಿಯಲ್ ಎಸ್ಟೇಟಿನ ಪ್ರಾಥಮಿಕ ಪದಪುಂಜಗಳು. ಆದರೆ, ಮುಂದಿನ ಕೆಲವು ವರ್ಷಗಳಲ್ಲಿ ಜನರು ಚದರಡಿಯ ಬದಲಿಗೆ ಪಿಕ್ಸೆಲ್‌ಗಳ ಬಗ್ಗೆ ಮಾತನಾಡಿದರೆ ಹೇಗಿರುತ್ತದೆ? ಈ ಭೂಮಿಯ ಮೇಲೆ ಇಲ್ಲದ, ಬೇರೆ ಗ್ರಹದಲ್ಲೂ ಇಲ್ಲದ, ಕಣ್ಣಿಗೆ ಕಾಣದೆಯೇ ಇರುವ ಸೈಟುಗಳ ಬಗ್ಗೆ ಮಾತನಾಡುವಂತಾದರೆ ಹೇಗಿರುತ್ತದೆ?

ಇಂಥದೊಂದು ಪರಿಕಲ್ಪನೆಗೆ ಮೆಟಾವರ್ಸ್‌ ಹೊಸ ಅವಕಾಶವನ್ನು ತೆರೆದಿದೆ. ಯಾರೂ ಊಹಿಸದಿದ್ದ ಹೊಸದೊಂದು ಹೂಡಿಕೆ ಅವಕಾಶ ಮೆಟಾವರ್ಸ್‌ನಿಂದ ಹುಟ್ಟಿಕೊಂಡಿದೆ. ಅದೇ ಡಿಜಿಟಲ್‌ ರಿಯಲ್ ಎಸ್ಟೇಟ್! ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳು ಈ ಡಿಜಿಟಲ್‌ ರಿಯಲ್‌ ಎಸ್ಟೇಟ್ ಉದ್ಯಮಕ್ಕೆ ಇಳಿದು ಕೋಟ್ಯಂತರ ಕಾಸು ಹೂಡಿಕೆ ಮಾಡಿವೆ ಎಂದರೆ ಅಚ್ಚರಿಯಾದೀತು. ಆದರೆ, ಅದು ನಿಜ!

ತೀರಾ ಇತ್ತೀಚೆಗೆ, ಕಳೆದ ಡಿಸೆಂಬರ್‌ನಲ್ಲಿ, ಪಾಪ್‌ ಸ್ಟಾರ್ ಸ್ನೂಪ್ ಡಾಗ್‌ ತನ್ನ ನೆರೆಮನೆಯ ಜಾಗವನ್ನು ₹3.45 ಕೋಟಿಗೆ ಮಾರಿದರಂತೆ. ಅದು ನ್ಯೂಯಾರ್ಕ್‌ನಲ್ಲೋ ಅಥವಾ ವಾಷಿಂಗ್ಟನ್‌ನಲ್ಲೋ ಅಲ್ಲ. ಬದಲಿಗೆ, ಮೆಟಾವರ್ಸ್‌ನಲ್ಲಿ! ಅಂದರೆ, ಭೂಮಿಯ ಮೇಲೆ ಆ ಜಾಗ ಇಲ್ಲ. ವಾಸ್ತವದಲ್ಲಿ ಆ ಜಾಗ ಎಂಬುದೇ ಇಲ್ಲ. ಅಲ್ಲಿ ಒಂದಷ್ಟು ಪಿಕ್ಸೆಲ್‌ಗಳಿವೆ ಅಷ್ಟೇ!

ಒಂದು ಅಂದಾಜಿನ ಪ್ರಕಾರ ಮೆಟಾವರ್ಸ್‌ನಲ್ಲಿ ಶುರುವಾಗಿರುವ ಈ ರಿಯಲ್‌ ಎಸ್ಟೇಟ್‌ ಕಳೆದ ಜನವರಿ ತಿಂಗಳೊಂದರಲೇ 8.5 ಕೋಟಿ ಡಾಲರ್‌ ವಹಿವಾಟು ಮಾಡಿದೆ.

ಏನಿದು ಡಿಜಿಟಲ್‌ ರಿಯಲ್ ಎಸ್ಟೇಟ್?

ಡಿಜಿಟಲ್ ರಿಯಲ್ ಎಸ್ಟೇಟ್ ಎಂಬುದು ಒಂದು ಭೂಮಿ ಮೇಲಿನ ಒಂದು ಸ್ಥಳದ ರೀತಿಯದ್ದೇ ಡಿಜಿಟಲ್‌ ಸ್ಪೇಸ್. ಇಲ್ಲಿ ನೀವು ಮನೆ ಕಟ್ಟಡಬಹುದು, ಮ್ಯೂಸಿಯಂ ಕಟ್ಟಬಹುದು, ಟವರ್‌ ಮಾಡಬಹುದು,... ಏನನ್ನು ಬೇಕಾದರೂ ನಿರ್ಮಿಸಬಹುದು. ಇದಕ್ಕಾಗಿ ಹಲವು ಸಂಸ್ಥೆಗಳು ಹುಟ್ಟಿಕೊಂಡಿವೆ. ಇವು ಡಿಜಿಟಲ್ ಸ್ಪೇಸ್ ಮಾರಾಟ ಮಾಡುತ್ತವೆ. ಸ್ಯಾಂಡ್‌ಬಾಕ್ಸ್‌, ಡಿಸೆಂಟ್ರಾಲ್ಯಾಂಡ್‌, ಕ್ರಿಪ್ಟೋವಾಕ್ಸೆಲ್ಸ್‌, ಸೋಮ್ನಿಯಮ್‌ ಪ್ರಮುಖ ಡಿಜಿಟಲ್‌ ರಿಯಲ್ ಎಸ್ಟೇಟ್ ಕಂಪನಿಗಳು. ಇವು ಒಟ್ಟಾಗಿ 2.68 ಲಕ್ಷ ತುಂಡು ಭೂಮಿಯನ್ನು ಹೊಂದಿವೆ. ಈ ಕಂಪನಿಗಳಲ್ಲಿ ಹಣ ಕೊಟ್ಟು ಎನ್‌ಎಫ್‌ಟಿ ಖರೀದಿ ಮಾಡಿಕೊಳ್ಳಬೇಕು. ಈ ಎನ್‌ಎಫ್‌ಟಿಯನ್ನು ನಾವು ಬಳಸಿಕೊಂಡು ಭೂಮಿ ಖರೀದಿ ಮಾಡಬಹುದು. ಈ ಕಂಪನಿಗಳು ಒಂದೊಂದು ಪ್ರಾಜೆಕ್ಟ್‌ ಮಾಡಿವೆ. ಈ ಪ್ರಾಜೆಕ್ಟ್‌ನಲ್ಲಿ ಈಗಾಗಲೇ ಖರೀದಿ ಮಾಡಿರುವವರ ಬಳಿಯೇ ಭೂಮಿ ಖರೀದಿಸಬಹುದು ಅಥವಾ ಪ್ರಾಜೆಕ್ಟ್‌ನಲ್ಲಿರುವ ಭೂಮಿಯನ್ನು ಖರೀದಿ ಮಾಡಬಹುದು. ಇಲ್ಲಿ ಮುಖ್ಯವಾಗುವುದು, ನಾವು ಎಲ್ಲಿ ಖರೀದಿ ಮಾಡುತ್ತೇವೆ ಎಂಬುದು.

ಜನಪ್ರಿಯ ತಾರೆಯರ ಪಕ್ಕದ ಜಾಗಕ್ಕೆ ಭಾರಿ ರೇಟು!

ಜನಪ್ರಿಯ ರ‍್ಯಾಪರ್‌ ಸ್ನೂಪ್‌ ಡಾಗ್‌ ಸ್ನೂಪ್‌ವರ್ಸ್‌ನಲ್ಲಿ ಒಂದು ಪ್ರಾಜೆಕ್ಟ್‌ ಮಾಡಿದ್ದಾರೆ. ಅದರಲ್ಲಿ ಅವರು, ಭೂಮಿಯಲ್ಲಿರುವ ತನ್ನ ಮನೆಯನ್ನೇ ಹೋಲುವ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಇಲ್ಲೇ ತಮ್ಮ ಕಾನ್ಸರ್ಟ್‌ ಅನ್ನೂ ಮಾಡಲಿದ್ದಾರಂತೆ. ಇವರ ಮನೆಯ ಪಕ್ಕದಲ್ಲಿರುವ ಜಾಗವನ್ನು ಇವರು ಮಾರಾಟ ಮಾಡಿದ್ದಾರೆ. ಅದು ₹3.45 ಕೋಟಿಗೆ ಮಾರಾಟವಾಗಿದೆ. ಇಲ್ಲಿ, ಸ್ನೂಪ್‌ ಡಾಗ್‌ ಮನೆಯ ಪಕ್ಕದಲ್ಲಿರುವ ಸ್ಥಳ ಎಂಬ ಕಾರಣಕ್ಕೇ ಇದಕ್ಕೆ ಇಷ್ಟು ದರ ಬಂದಿದೆ!

ಅಷ್ಟೇ ಅಲ್ಲ, ಹಲವು ಸೆಲೆಬ್ರಿಟಿಗಳು, ಬ್ರ್ಯಾಂಡ್‌ಗಳು, ಕಂಪನಿಗಳು ಈ ಡಿಜಿಟಲ್‌ ರಿಯಲ್‌ ಎಸ್ಟೇಟ್‌ನಲ್ಲಿ ಭಾರಿ ಹೂಡಿಕೆ ಮಾಡುತ್ತಿವೆ. ಹಿಲ್ಟನ್ ಹೋಟೆಲ್‌ ಸಂಸ್ಥಾಪಕರ ಮೊಮ್ಮಗಳು ಹಾಗೂ ಜನಪ್ರಿಯ ಹಾಲಿವುಡ್‌ ತಾರೆ ಪ್ಯಾರಿಸ್ ಹಿಲ್ಟನ್‌ ಕೂಡ ರಾಬ್ಲಾಕ್ಸ್‌ನಲ್ಲಿ ತನ್ನ ಡಿಜಿಟಲ್ ರಿಯಲ್ ಎಸ್ಟೇಟ್ ಮಾಡಿಕೊಂಡಿದ್ದು, ಕಳೆದ ಹೊಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲಿ ಸಂಗೀತ ಕಚೇರಿಯನ್ನೂ ನಡೆಸಿದ್ದರು. ಟಾಮಿ ಹಿಲ್ಫಿಗರ್, ನೈಕ್, ರೀಸ್ ವಿದರ್‌ಸ್ಪೂನ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳೂ ಈ ಡಿಜಿಟಲ್‌ ರಿಯಲ್ ಎಸ್ಟೇಟ್‌ಗೆ ಪ್ರಚಾರ ನೀಡುತ್ತಿವೆ.

ಎಚ್‌ಎಸ್‌ಬಿಸಿ, ಜೆಪಿ ಮಾರ್ಗನ್ಸ್‌, ಗೋಲ್ಡ್‌ಮನ್‌ ಸ್ಯಾಕ್ಸ್‌ ಸೇರಿದಂತೆ ದೊಡ್ಡ ದೊಡ್ಡ ಹಣಕಾಸು ಸಂಸ್ಥೆಗಳೂ ಈಗ ರಿಯಲ್ ಎಸ್ಟೇಟ್‌ಗೆ ಇಳಿದಿವೆ. ಸ್ಯಾಂಡ್‌ಬಾಕ್ಸ್‌ನಲ್ಲಿ ಎಚ್‌ಎಸ್‌ಬಿಸಿ ಹೂಡಿಕೆ ಮಾಡಿದ್ದರೆ, ಜೆಪಿ ಮಾರ್ಗನ್‌ ಡಿಸೆಂಟ್ರಲ್ಯಾಂಡ್‌ನಲ್ಲಿ ಹೂಡಿಕೆ ಮಾಡಿದೆ.

ಜಮೀನು ಅಸಲಿಯೇ?

ವಾಸ್ತವದಲ್ಲಿ, ಈ ಡಿಜಿಟಲ್‌ ರಿಯಲ್‌ ಎಸ್ಟೇಟ್‌ ಬಗ್ಗೆ ಎರಡೂ ಬಗೆಯ ವಾದಗಳು ಚಾಲ್ತಿಯಲ್ಲಿವೆ. ಇದು ಸದ್ಯ ಭಾರಿ ಸದ್ದು ಮಾಡುತ್ತಿರುವುದರಿಂದ ದರ ಏರಿಕೆಯಾಗುತ್ತಿದೆ. ಆದರೆ, ಮುಂದೊಂದು ದಿನ ಇದರ ಬೆಲೆ ನಗಣ್ಯವಾಗಲಿದೆ ಎಂದೂ ವಾದಿಸುವ ತಜ್ಞರಿದ್ದಾರೆ. ಏಕೆಂದರೆ, ಭೂಮಿಯ ಮೇಲೆ ಇರುವ ಸ್ಥಳಕ್ಕೆ ಮಿತಿ ಇದೆ. ಹೀಗಾಗಿ, ಇದರ ಬೆಲೆ ಏರಿಕೆಯಾಗುತ್ತದೆ. ಆದರೆ, ವರ್ಚುವಲ್‌ನಲ್ಲಿ ಸ್ಥಳಕ್ಕೆ ಮಿತಿ ಇಲ್ಲದ್ದರಿಂದ ಅದರ ಬೆಲೆ ಮುಂದಿನ ದಿನಗಳಲ್ಲಿ ಕುಸಿಯಲಿದೆ ಎಂಬುದು ಸಹಜ ಲೆಕ್ಕಾಚಾರ. ಆದರೆ, ಇದರಲ್ಲಿ ಹೂಡಿಕೆ ಮಾಡುತ್ತಿರುವವರ ವಾದವೂ ಸಕಾರಣವಾದುದೇ. ಮುಂದಿನ ದಿನಗಳಲ್ಲಿ ಜನರು ಭೌತಿಕ ಮಾಲ್‌ಗಳಿಗೋ, ಮನೋರಂಜನೆ ತಾಣಗಳಿಗೋ ಹೋಗುವುದಕ್ಕಿಂತ ಹೆಚ್ಚಾಗಿ ವರ್ಚುವಲ್ ತಾಣಗಳಿಗೇ ಹೆಚ್ಚು ಭೇಟಿ ಕೊಡತೊಡಗುತ್ತಾರೆ. ಹೀಗಾಗಿ, ವರ್ಚುವಲ್‌ನಲ್ಲಿ ಒಂದು ಮಾಲ್‌ಗೆ, ಶಾಪಿಂಗ್ ಕಾಂಪ್ಲೆಕ್ಸ್‌ಗೆ ಹೆಚ್ಚು ಮೌಲ್ಯವಿದೆ. ಮುಂದಿನ ದಿನಗಳಲ್ಲಿ ಇದರ ಮೌಲ್ಯ ಇನ್ನಷ್ಟು ಹೆಚ್ಚಲಿದೆ ಎಂಬುದು ಅವುಗಳ ವಾದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು