ಶುಕ್ರವಾರ, ಡಿಸೆಂಬರ್ 4, 2020
24 °C
ಆರಂಭದಲ್ಲಿ 2 ಕೋಟಿ ಮಂದಿಗೆ ಮಾತ್ರ

PV Web Exclusive: ಹಳ್ಳಿಗೂ ಡಿಜಿಟಲ್ ಆರ್ಥಿಕತೆ ವಿಸ್ತರಿಸಲಿದೆ ವಾಟ್ಸ್ಆ್ಯಪ್ ಪೇ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

WhatsApp Pay

ಗ್ರಾಮೀಣ ಭಾಗದ ಪುಟ್ಟ ಹಳ್ಳಿಯೊಂದರ ಪುಟ್ಟ ಅಂಗಡಿ.

ಗ್ರಾಹಕ: ಒಂದು ಪ್ಯಾಕೆಟ್ ಚಕ್ಲಿ ಕೊಡಪ್ಪಾ
ಅಂಗಡಿಯಾತ: ತಗೋ, 5 ರೂಪಾಯಿ
ಗ್ರಾಹಕ: ಸರಿ, ವಾಟ್ಸ್ಆ್ಯಪ್ ಮಾಡಿದ್ದೀನಿ, ಚೆಕ್ ಮಾಡ್ಕೋ
ಅಂಗಡಿಯಾತ: ಓ ಬಂದೇ ಬಿಡ್ತು!

ಇದು ಇನ್ನು ಮುಂದೆ ಹಳ್ಳಿ ಹಳ್ಳಿಗಳಿಗೆ ಡಿಜಿಟಲ್ ಕ್ರಾಂತಿ ತಲುಪುವ ಬಗೆ. ಇದುವರೆಗೆ ಆಗಿಲ್ಲವೇ ಅಂತ ನೀವು ಕೇಳಬಹುದು. ಖಂಡಿತಾ ಆಗಿದೆ. ಆದರೆ "ಅದೇನೋ ಯುಪಿಐ ಅಂತಪ್ಪಾ, ಅದೇನೋ ಗೂಗಲ್ ಪೇ, ಫೋನ್‌ಪೇ, ಪೇಟಿಎಂ... ಅದು ಹೇಗ್ ಮಾಡೋದೋ, ಎಷ್ಟು ಸುರಕ್ಷಿತವೋ..." ಅಂತೆಲ್ಲ ಕಲಿತುಕೊಳ್ಳಲು, ಅರಿತುಕೊಳ್ಳಲು ಹಿಂಜರಿಯುತ್ತಿದ್ದವರೇ ಹೆಚ್ಚು.

ಆದರೆ, ವಾಟ್ಸ್ಆ್ಯಪ್ ಹಾಗಲ್ಲ. ಮೊಬೈಲ್ ಇಂಟರ್ನೆಟ್ ಇರುವ ಬಹುತೇಕ ಮಂದಿಗೆ ಇದರ ಬಳಕೆ ಗೊತ್ತಿದೆ. ಅದರಲ್ಲೇ ಫೋಟೋ, ವಿಡಿಯೊ, ಪತ್ರ, ಸಂದೇಶ - ಎಲ್ಲವನ್ನೂ ಕಳುಹಿಸುವುದು ಗೊತ್ತಿದೆ. ಅದೇ ರೀತಿ ಇನ್ನು ಮುಂದೆ ವಾಟ್ಸ್ಆ್ಯಪ್ ಮೂಲಕವೂ ಹಣ ಕಳುಹಿಸಬಹುದು, ಒಂದು ಸಂದೇಶ ಕಳಿಸಿದಷ್ಟೇ ಸುಲಭ! ಅಲ್ಲದೆ, ಯುಪಿಐ (ಯೂನಿವರ್ಸಲ್ ಪೇಮೆಂಟ್ ಇಂಟರ್ಫೇಸ್ - ಏಕೀಕೃತ ಪಾವತಿ ವ್ಯವಸ್ಥೆ) ಸೇವೆ ನೀಡುವುದಕ್ಕಾಗಿ ಬೇರೆಯೇ ಒಂದು ಆ್ಯಪ್ ಇನ್‌ಸ್ಟಾಲ್ ಮಾಡಬೇಕಿಲ್ಲವಲ್ಲ! ಎಂಬುದೂ ಪ್ರಮುಖ ಕಾರಣ, ಈ ವಾಟ್ಸ್ಆ್ಯಪ್ ಆನ್‌ಲೈನ್ ಪಾವತಿ ವ್ಯವಸ್ಥೆಯು ಜನರಿಗೆ ಹತ್ತಿರವಾಗುವುದಕ್ಕೆ.

ವಾಟ್ಸ್ಆ್ಯಪ್‌ಗೆ ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಶುಕ್ರವಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ, ವಿಶೇಷವಾಗಿ ಗ್ರಾಮಾಂತರ ಭಾಗದಲ್ಲಿ ನಗದುರಹಿತ ವಹಿವಾಟು ಮತ್ತಷ್ಟು ಬೆಳೆಯಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಕಾರಣವೆಂದರೆ, ಜನ ಸಾಮಾನ್ಯರೂ ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ, ಅದರ ಬಳಕೆಯ ವಿಧಾನಗಳು, ಇಂಟರ್ಫೇಸ್ ಎಲ್ಲವೂ ಪರಿಚಿತವಾಗಿದೆ ಹಾಗೂ ಇನ್ನೊಂದು ಪ್ರತ್ಯೇಕ ಆ್ಯಪ್ ಬೇಕಾಗಿರುವುದಿಲ್ಲ ಎಂಬ ಸಮಾಧಾನ.

ಗೂಗಲ್ ಪೇ, ಫೋನ್‌ಪೇಗೆ ಸ್ಫರ್ಧೆ

ದೇಶದಲ್ಲಿ ಇರುವ ಯುಪಿಐ ಎಂಬ ಆನ್‌ಲೈನ್ ವಹಿವಾಟು ಸೇವೆ ಒದಗಿಸುವ ಥರ್ಡ್ ಪಾರ್ಟಿ (ಬ್ಯಾಂಕಿಂಗ್ ಸೇವೆ ಇಲ್ಲದ) ಆ್ಯಪ್‌ಗಳ ಸಂಖ್ಯೆ 21. ಇತ್ತೀಚೆಗಿನ ವರದಿಯೊಂದರ ಅನುಸಾರ, ಇವುಗಳಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಎಂಬ ಆ್ಯಪ್‌ಗಳದ್ದೇ ಸಿಂಹಪಾಲು ಎಂದರೆ ಶೇ.80ರಷ್ಟು. ತಲಾ ಸುಮಾರು ಶೇ.40ರಷ್ಟು ಪಾಲು.

ಇದನ್ನೂ ಓದಿ: 

ಎನ್‌ಪಿಸಿಐ ವರದಿ ಪ್ರಕಾರ, 2020 ಅಕ್ಟೋಬರ್ ತಿಂಗಳಲ್ಲಿ ಒಟ್ಟು ಸುಮಾರು 3.86 ಲಕ್ಷ ಕೋಟಿ ರೂಪಾಯಿ ಮೊತ್ತದ 207 ಕೋಟಿ ಯುಪಿಐ ಪಾವತಿ ಪ್ರಕ್ರಿಯೆಗಳು ನಡೆದಿವೆ. ಫೋನ್‌ಪೇ ಜೊತೆ 25 ಕೋಟಿ ನೋಂದಾಯಿತ ಬಳಕೆದಾರರಿದ್ದರೆ 2020ರ ಅಕ್ಟೋಬರ್ ತಿಂಗಳಲ್ಲಿ ಅದರ ಮೂಲಕ 83.50 ಕೋಟಿ ಬಾರಿ ಪಾವತಿ ವಹಿವಾಟು ಪ್ರಕ್ರಿಯೆಗಳು ನಡೆದಿವೆ. ಗೂಗಲ್ ಪೇ ಪಾಲು 82 ಕೋಟಿ, ಪೇಟಿಎಂ 24.5 ಕೋಟಿ, ಅಮೆಜಾನ್ ಪೇ 12.5 ಕೋಟಿ ವಹಿವಾಟುಗಳು ನಡೆದಿವೆ. ಇವುಗಳನ್ನು ಲೆಕ್ಕ ಮಾಡಿದರೆ, ಈ ನಾಲ್ಕು ಯುಪಿಐಗಳ ಪಾಲು ಶೇ.97 (202.5 ಕೋಟಿ) ಆಗಿದ್ದರೆ, ಉಳಿದ 17 ಯುಪಿಐಗಳ ಪಾಲು ಶೇ.3 ಮಾತ್ರ.

ಇದಕ್ಕಾಗಿಯೇ ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೊಸ ನಿಯಮವೊಂದನ್ನು ಗುರುವಾರವಷ್ಟೇ ಘೋಷಿಸಿದ್ದು, ಶುಕ್ರವಾರ ವಾಟ್ಸ್ಆ್ಯಪ್‌ಗೆ ಅನುಮತಿ ನೀಡಿದೆ.

ವಾಟ್ಸ್ಆ್ಯಪ್ ಪೇ ಎಲ್ಲರಿಗೂ ಲಭ್ಯವಾಗುವುದೇ?

ವಾಟ್ಸ್ಆ್ಯಪ್ ಮೂಲಕವೇ ಹಣ ಕಳುಹಿಸುವ ವ್ಯವಸ್ಥೆಯ ಬಗ್ಗೆ ಚರ್ಚೆ ಎರಡುವರೆ ವರ್ಷಗಳಿಂದಲೂ ಕೇಳಿಬಂದಿತ್ತು. ಈಗ ಅನುಮತಿ ಸಿಕ್ಕರೂ ಸದ್ಯಕ್ಕೆ ಎಲ್ಲರಿಗೂ ಇದರ ಸೇವೆ ಲಭ್ಯವಾಗುವುದಿಲ್ಲ. ಯಾಕೆಂದರೆ, ಅಗಾಧ ಪ್ರಗತಿ ಸಾಧಿಸುತ್ತಿರುವ ಯುಪಿಐ ವಹಿವಾಟಿನ ಕ್ಷೇತ್ರದಲ್ಲಿ ಏಕಸ್ವಾಮ್ಯ ತಪ್ಪಿಸಲೆಂದೇ ಗುರುವಾರವಷ್ಟೇ ರಾಷ್ಟ್ರೀಯ ಪಾವತಿ ನಿಗಮವು ಒಂದು ನಿಯಮವನ್ನು ಘೋಷಿಸಿದೆ.

ಅದೆಂದರೆ, ಥರ್ಡ್ ಪಾರ್ಟಿ ಯುಪಿಐ ಒಟ್ಟಾರೆ ವಹಿವಾಟಿನಲ್ಲಿ ಶೇ.30 ಪಾಲನ್ನು ಯಾರೂ ಮೀರುವಂತಿಲ್ಲ ಅಂತ. ಈ ನಿಯಮವು 2021ರ ಜನವರಿ 1ರಿಂದ ಜಾರಿಗೆ ಬರಲಿದೆ. ಈ ಕಾರಣಕ್ಕಾಗಿ, ವಾಟ್ಸ್ಆ್ಯಪ್‌ನಲ್ಲಿ ಆರಂಭಿಕ ಹಂತವಾಗಿ ಕೇವಲ 2 ಕೋಟಿ ಮಂದಿಗೆ ಮಾತ್ರ ಈ ಪಾವತಿ ಅವಕಾಶ ಲಭ್ಯವಾಗಲಿದೆ. ಮುಂದೆ ವಹಿವಾಟಿಗೆ ಅನುಗುಣವಾಗಿ ಅದು ಈ ಸಂಖ್ಯೆಯನ್ನು ವಿಸ್ತರಿಸಬಹುದು. ಈ ನಿಯಮವು ಗೂಗಲ್ ಪೇ ಹಾಗೂ ಫೋನ್‌ಪೇಗಳ ಕಣ್ಣು ಕೆಂಪಗಾಗಿಸಿದ್ದು ಸುಳ್ಳಲ್ಲ. ಇದೇ ವೇಳೆ, ಹೊಸ ನಿಯಮಕ್ಕೆ ಬದ್ಧವಾಗಿರಲು ಎಲ್ಲರಿಗೂ ಎರಡು ವರ್ಷ ಕಾಲಾವಕಾಶ ನೀಡಲಾಗಿದೆ. ಆದರೆ, ಗೂಗಲ್‌ಪೇ, ಫೋನ್‌ಪೇಗಳ ಶೇ.40 ಪಾಲನ್ನು ಶೇ.30ಕ್ಕೆ ಇಳಿಸಿಕೊಳ್ಳಲು ಹೇಳಿದರೆ, ಕೆಲವೊಂದು ಪಾವತಿಗಳೇ ವಿಫಲವಾಗುವ ಸಾಧ್ಯತೆ ಇದೆ ಎಂಬ ಆತಂಕವೂ ಕಾಣಿಸುತ್ತಿದೆ. ಇದಕ್ಕೆ ಕಾಲವೇ ಉತ್ತರಿಸಬೇಕು.

ನನ್ನಲ್ಲಿ ಈಗಾಗ್ಲೇ ಇದೆ, ಇದರಲ್ಲೇನು ಹೊಸತು ಅಂತೀರಾ?

ವಾಟ್ಸ್ಆ್ಯಪ್ ಎರಡುವರೆ ವರ್ಷಗಳ ಹಿಂದೆ ಪಾವತಿ ವ್ಯವಸ್ಥೆ ಕ್ಷೇತ್ರಕ್ಕೆ ಇಳಿಯುವುದಾಗಿ ಹೇಳಿದಾಗಲೇ ಭಾರತೀಯ ಸ್ಫರ್ಧಾ ಆಯೋಗಕ್ಕೆ ಈ ಕುರಿತು ದೂರು ಸಲ್ಲಿಸಲಾಗಿತ್ತು. ಯಾಕೆಂದರೆ 40 ಕೋಟಿ ಬಳಕೆದಾರರಿರುವ ದೈತ್ಯ ಸಂಸ್ಥೆಯದು. ಹೀಗಾಗಿ ಇದರ ವಿಚಾರಣೆ, ತನಿಖೆ ಎಲ್ಲವೂ ನಡೆದು ವಿಳಂಬವಾಗಿತ್ತು. ಈಗ ಕಾನೂನಿನ ಎಲ್ಲ ತೊಡಕುಗಳು ನಿವಾರಣೆಯಾಗಿ ಶುಕ್ರವಾರ ಮಾನ್ಯತೆ ಸಿಕ್ಕಿದೆ. ಆದರೆ 2018ರಿಂದಲೇ ಪ್ರಾಯೋಗಿಕವಾಗಿ ಅದು 10 ಲಕ್ಷ ಮಂದಿಗೆ ಈ ವ್ಯವಸ್ಥೆಯನ್ನು ಒದಗಿಸಿತ್ತು. ಪರೀಕ್ಷಾರ್ಥವಾಗಿ ಇದನ್ನು ನೀಡಲಾಗಿದ್ದು, ಅದರಲ್ಲಿರುವ ದೋಷಗಳನ್ನು ಪತ್ತೆ ಹಚ್ಚಿ ಸರಿಪಡಿಸುವ ಉದ್ದೇಶವಿತ್ತು. ಹೀಗಾಗಿ ಕೆಲವರು ಈಗಾಗಲೇ ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದಾರೆ.

ಏನಿದು ಯುಪಿಐ ವ್ಯವಸ್ಥೆ?

ಮೊಬೈಲ್ ಫೋನ್ ಮೂಲಕ ಫೋನ್ ನಂಬರ್ ಆಧಾರಿತವಾಗಿ ಎರಡು ಬ್ಯಾಂಕ್ ಖಾತೆಗಳ ನಡುವೆ ಕ್ಷಿಪ್ರವಾಗಿ ಹಣ ವಿನಿಮಯ ಮಾಡಿಕೊಳ್ಳುವ ಯುಪಿಐ ವ್ಯವಸ್ಥೆ ಭಾರತದಲ್ಲಿ ಚಾಲ್ತಿಗೆ ಬಂದಿದ್ದು 2016ರ ಏಪ್ರಿಲ್ ತಿಂಗಳಲ್ಲಿ. ಈಗಂತೂ ಗೂಗಲ್ ಒಡೆತನದ ಗೂಗಲ್ ಪೇ, ವಾಲ್‌ಮಾರ್ಟ್ ಒಡೆತನದ ಫೋನ್ ಪೇ, ಅಮೆಜಾನ್ ಒಡೆತನದ ಅಮೆಜಾನ್ ಪೇ ಮುಂತಾದವುಗಳೊಂದಿಗೆ ಪೇಟಿಎಂ, ಮೊಬಿಕ್ವಿಕ್ ಮುಂತಾದ ಥರ್ಡ್ ಪಾರ್ಟಿ ಆ್ಯಪ್‌ಗಳ ಜೊತೆಗೆ, ಎಲ್ಲ ಬ್ಯಾಂಕ್‌ಗಳೂ ತಮ್ಮದೇ ಆದ ಯುಪಿಐ ಸೇವೆಗಳನ್ನು ಪರಿಚಯಿಸಿವೆ. ಭಾರತ ಸರ್ಕಾರವೇ ತನ್ನ ನಾಗರಿಕರಿಗಾಗಿ ಸುರಕ್ಷಿತವಾದ ಭೀಮ್ (BHIM) ಎಂಬ ಏಕೀಕೃತ ಪಾವತಿ ವ್ಯವಸ್ಥೆಯನ್ನು ರೂಪಿಸಿದೆ. ಇಷ್ಟಲ್ಲದೆ ಸಾಕಷ್ಟು ಇತರ ಆ್ಯಪ್‌ಗಳೂ ಇವೆ.

ವಾಟ್ಸ್ಆ್ಯಪ್ ಪೇನ ಇತಿ ಮಿತಿಗಳೇನು?

ಕೇವಲ ಬ್ಯಾಂಕಿಂಗ್ ವಹಿವಾಟಿಗಾಗಿಯೇ ರೂಪುಗೊಂಡಿರುವ ಗೂಗಲ್ ಪೇ, ಫೋನ್ ಪೇ, ಅಮೆಜಾನ್ ಪೇ ಮುಂತಾದ ಆ್ಯಪ್‌ಗಳಂತಲ್ಲ ವಾಟ್ಸ್ಆ್ಯಪ್ ಪೇ. ಇದರ ಪ್ರಧಾನ ಉದ್ದೇಶ ಸಂದೇಶ ವಿನಿಮಯ. ಇದು ಬಳಕೆಗೆ ತೀರಾ ಸುಲಭ. ಈಗಷ್ಟೇ ಹಣ ಕಳುಹಿಸುವ ಹೊಸ ವೈಶಿಷ್ಟ್ಯ ಸೇರ್ಪಡೆಯಾಗಿದೆ.

ಇದನ್ನೂ ಓದಿ: 

ಬೇರೆ ಯುಪಿಐ ಆ್ಯಪ್‌ಗಳಾದ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮುಂತಾದವುಗಳಲ್ಲಿ ಸಾಧ್ಯವಿರುವಂತೆ, ಆನ್‌ಲೈನ್‌ನಲ್ಲಿ ಖರೀದಿಗೆ, ಬಿಲ್ ಪಾವತಿಗೆ, ರೀಚಾರ್ಜ್ ಮಾಡುವುದಕ್ಕೆ, ಬ್ಯಾಂಕ್ ಖಾತೆಗಳಿಗೆ ಹಣ ಹಾಕಲು, ಆನ್‌ಲೈನ್ ಗೇಮ್ ಆಡಲು, ಟಿಕೆಟ್ ಖರೀದಿಯೇ ಮೊದಲಾದ ಡಿಜಿಟಲ್ ವಹಿವಾಟುಗಳು ವಾಟ್ಸ್ಆ್ಯಪ್‌ನಿಂದ ನೇರವಾಗಿ ಸಾಧ್ಯವಿಲ್ಲ. ಹೀಗಾಗಿ, ವಾಟ್ಸ್ಆ್ಯಪ್ ಪೇ ವ್ಯವಸ್ಥೆಯು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಉಪಯೋಗಕ್ಕೆ ಬರಬಹುದು ಎಂಬುದೊಂದು ಲೆಕ್ಕಾಚಾರ. ರೀಟೇಲ್ ಮಳಿಗೆಗಳಲ್ಲಿ ಪಾವತಿಸಲು, ಸ್ನೇಹಿತರಿಗೆ, ಕುಟುಂಬಿಕರಿಗೆ ಹಣ ಕಳುಹಿಸಲು/ಸ್ವೀಕರಿಸಲು ಮಾತ್ರವೇ ಸದ್ಯಕ್ಕೆ ಇದನ್ನು ಬಳಸಬಹುದಾಗಿದೆ.

ನಿಮ್ಮಲ್ಲಿ ಕಾಣಿಸುವುದಿಲ್ಲವೇ?

ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಬೇಕೆನ್ನುವುದು ಇದಕ್ಕಾಗಿಯೇ. ಯಾವುದೇ ಆ್ಯಪ್‌ನಲ್ಲಿ ಹೊಸ ವೈಶಿಷ್ಟ್ಯಗಳ ಸೇರ್ಪಡೆಯಾಗಿರುತ್ತದೆ, ಸುರಕ್ಷತಾ ವ್ಯವಸ್ಥೆಯನ್ನೂ ಉನ್ನತೀಕರಿಸಲಾಗಿರುತ್ತದೆ. ಅದನ್ನು ಪರಿಷ್ಕರಿಸಿ, ಆ್ಯಪ್ ಸ್ಟೋರ್‌ಗಳಲ್ಲಿ ಇರಿಸಲಾಗುತ್ತದೆ. ಹೀಗಾಗಿ ಅಪ್‌ಡೇಟ್ ಮಾಡಿಕೊಂಡರಷ್ಟೇ ಹೊಸ ಹೊಸ ವೈಶಿಷ್ಟ್ಯಗಳು ನಮಗೆ ಲಭ್ಯವಾಗುತ್ತವೆ. ಅದಕ್ಕಾಗಿಯೇ ಪರಿಷ್ಕೃತ ಆ್ಯಪ್ ಅನ್ನೇ ಅಳವಡಿಸಿಕೊಳ್ಳಬೇಕು ಅಥವಾ ಅಪ್‌ಡೇಟ್ ಮಾಡಿಕೊಳ್ಳಬೇಕು.

ಹೇಗೆ ಹಣ ಕಳುಹಿಸುವುದು?

ವಾಟ್ಸ್ಆ್ಯಪ್‌ನಲ್ಲಿ ನಿಮ್ಮ ಲೊಕೇಶನ್ ಶೇರ್ ಮಾಡಿದಷ್ಟೇ ಅಥವಾ ಫೋಟೋ ಕಳುಹಿಸಿದಷ್ಟೇ ಸರಳ, ಸುಲಭ ಪ್ರಕ್ರಿಯೆ ಇದು. ಫೋಟೋ ಕಳುಹಿಸಲು ನೀವು ಅಟ್ಯಾಚ್‌ಮೆಂಟ್ ಬಟನ್ ಕ್ಲಿಕ್ ಮಾಡುತ್ತೀರಲ್ಲಾ? ಅಲ್ಲೇ ಈಗ 'Payment' ಎಂಬ ಹೊಸ ಆಯ್ಕೆ ಗೋಚರಿಸುತ್ತದೆ. ಇಲ್ಲವೇ, ವಾಟ್ಸ್ಆ್ಯಪ್ ತೆರೆದಾಗ ಬಲ ಮೇಲ್ಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಗಳ ಮೆನು ಬಟನ್ ಕ್ಲಿಕ್ ಮಾಡಿದರೂ, ಪೇಮೆಂಟ್ ಎಂಬ ಆಯ್ಕೆ ಗೋಚರಿಸುತ್ತದೆ.

ಅದನ್ನು ಕ್ಲಿಕ್ ಮಾಡಿದರೆ, ನಿಮ್ಮ ವಾಟ್ಸ್ಆ್ಯಪ್ ಫೋನ್ ನಂಬರ್‌ಗೆ (ಅದೇ ಫೋನ್‌ನಲ್ಲಿ ಆ ಫೋನ್ ಸಂಖ್ಯೆಯ ಸಿಮ್ ಕಾರ್ಡ್ ಇರಬೇಕು) ಜೋಡಿಸಲಾಗಿರುವ ಖಾತೆಯನ್ನು ಸಂಯೋಜಿಸಲು ಬ್ಯಾಂಕ್‌ಗಳ ಹೆಸರುಗಳ ಪಟ್ಟಿ ಕಾಣಿಸುತ್ತದೆ. ಅವುಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ ಆಯ್ಕೆ ಮಾಡಿದಾಗ, ತಾನಾಗಿ ಎಸ್ಎಂಎಸ್ ಒಟಿಪಿ ಕಳುಹಿಸಿ, ದೃಢೀಕರಣವಾಗುತ್ತದೆ. ನಂತರ ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆಗಾಗಿ ನೀವೊಂದು ಪಿನ್ ಸಂಖ್ಯೆ ಹೊಂದಿಸಬೇಕು. ಇದು ಸುರಕ್ಷತೆಗಾಗಿ. ಇಷ್ಟು ಪ್ರಕ್ರಿಯೆಯನ್ನು ಒಮ್ಮೆ ನೀವು ಹೊಂದಿಸಿಟ್ಟರಾಯಿತು.

ಇದನ್ನೂ ಓದಿ: 

ಮುಂದೆ, ಹಣ ಕಳುಹಿಸಬೇಕಿದ್ದರೆ ನಿಮ್ಮ ಸ್ನೇಹಿತನ ವಾಟ್ಸ್ಆ್ಯಪ್ ಚಾಟ್ ತೆರೆದು, ಅಟ್ಯಾಚ್ ಮಾಡಲು ಬಳಸುವ ಬಟನ್ ಒತ್ತಿ, 'ಪೇಮೆಂಟ್' ಆಯ್ಕೆ ಮಾಡಿಕೊಂಡು, ಎಷ್ಟು ಹಣ ಅಂತ ಬರೆದು ನಿಮ್ಮ ಪಿನ್ ನಂಬರ್ ದಾಖಲಿಸಿದರಾಯಿತು. ಚಿಟಿಕೆ ಹೊಡೆಯುವಷ್ಟರಲ್ಲಿ ಹಣ ರವಾನೆಯಾಗಿರುತ್ತದೆ.

ಯಾರು ಯಾರಿಗೆ ಕಳುಹಿಸಬಹುದು?

ಸದ್ಯಕ್ಕೆ ವಾಟ್ಸ್ಆ್ಯಪ್ ಐಸಿಐಸಿಐ, ಹೆಚ್‌ಡಿಎಫ್‌ಸಿ, ಆ್ಯಕ್ಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಿಯೋ ಪೇಮೆಂಟ್ಸ್ ಬ್ಯಾಂಕ್ ಜೊತೆ ಕೈಜೋಡಿಸಿ, ಅವರ ನೆರವಿನೊಂದಿಗೆ ತನ್ನ ಯುಪಿಐ ವ್ಯವಸ್ಥೆಯನ್ನು ನಡೆಸುತ್ತಿದೆ. ಹಾಗಂತ, ಈ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದವರಿಗೆ ಮಾತ್ರ ವಾಟ್ಸ್ಆ್ಯಪ್ ಪೇ ಬಳಸಬಹುದು ಎಂಬುದರ್ಥವಲ್ಲ. ಯುಪಿಐ ಬೆಂಬಲಿತ ವಾಟ್ಸ್ಆ್ಯಪ್ ಇರುವ ಯಾರಿಗೂ ಕೂಡ ವಾಟ್ಸ್ಆ್ಯಪ್ ಪೇ ಮೂಲಕ ಹಣ ಕಳುಹಿಸಬಹುದು.

ಇತರ ಯುಪಿಐಗಳಂತಲ್ಲದೆ, ಗ್ರಾಮೀಣ ಪ್ರದೇಶದಲ್ಲಿಯೂ ವಾಟ್ಸ್ಆ್ಯಪ್ ಬೆಳೆದಿದೆ. ಸರಳ ವಿನ್ಯಾಸವಿದೆ, ಜಾಹೀರಾತುಗಳಿಲ್ಲ (ಸದ್ಯಕ್ಕೆ). ವಾಟ್ಸ್ಆ್ಯಪ್‌ನಲ್ಲಿ ಸುರಕ್ಷತೆಯಿದೆ, ಖಾಸಗಿತನಕ್ಕೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ರಕ್ಷಣೆಯಿದೆ. ಪ್ರತೀ ಪಾವತಿಗೂ ಪಿನ್ ನಂಬರ್ ದಾಖಲಿಸಬೇಕಾಗುತ್ತದೆ. ರೈತರು, ಕಾರ್ಮಿಕರು, ಅಂಗಡಿ ನಡೆಸುವವರು... ಹೀಗೆ ಹೆಚ್ಚಿನವರ ಕೈಯಲ್ಲಿ ವಾಟ್ಸ್ಆ್ಯಪ್ ಇದೆ. ಹೀಗಾಗಿ ಡಿಜಿಟಲ್ ಆರ್ಥಿಕತೆಯಲ್ಲಿ ಗ್ರಾಮೀಣ ಭಾಗದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ವಾಟ್ಸ್ಆ್ಯಪ್ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ನಿರೀಕ್ಷೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು