ಗುರುವಾರ , ಮೇ 26, 2022
28 °C

ಕನ್ನಡದ ಪದಲೋಕದಲ್ಲಿ Wordalla.online

ಕೃಷ್ಣ ಭಟ್‌ Updated:

ಅಕ್ಷರ ಗಾತ್ರ : | |

Prajavani

ಕೆಲವೇ ತಿಂಗಳ ಹಿಂದೆ ಇಂಗ್ಲಿಷಿನಲ್ಲಿ ಬಿಡುಗಡೆಯಾಗಿದ್ದ ‘ವರ್ಡ್ಲ್‌’ ಎಂಬ ಪದಬಂಧದ ರೀತಿಯ ವೆಬ್‌ಸೈಟ್‌ ವ್ಯಾಪಕ ಜನಪ್ರಿಯವಾಗುತ್ತಿದೆ. ಶಬ್ದಗಳ ಜೊತೆ ಆಟವಾಡುವ ಮೇಲ್ನೋಟಕ್ಕೆ ಅತ್ಯಂತ ಸರಳವಾಗಿ ಕಂಡರೂ, ಕ್ಲಿಷ್ಟವಾದ ಪದಗಳನ್ನು ಹುಡುಕುವ ಅನಿವಾರ್ಯತೆ ಹುಟ್ಟಿಸುವ ವರ್ಡ್ಲ್ ಜನರಿಗೆ ಮೆಚ್ಚುಗೆಯಾಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಂತೂ ವರ್ಡ್ಲ್‌ನಲ್ಲಿನ ತಮ್ಮ ಸಾಧನೆಯನ್ನು ಜನರು ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ.

ಇಂಗ್ಲಿಷಿನಲ್ಲಿನ ಈ ವರ್ಡ್ಲ್ ಕನ್ನಡದಲ್ಲೂ ಸಿಗುವಂತಾಗಬೇಕು ಎಂದು ಶ್ರಮಿಸಿದವರು ಅಮೋಘ ಉಡುಪ. ಇದಕ್ಕೆ ‘ವರ್ಡಲ್ಲ’ ಎಂದು ಹೆಸರಿಟ್ಟಿದ್ದಾರೆ. Wordalla.onlineನಲ್ಲಿ ಕನ್ನಡದ ವರ್ಡ್ಲ್‌ ಲಭ್ಯವಿದೆ. ಜೋಷ್ ವಾರ್ಡ್ಲ್‌ ಪ್ರೋಗ್ರಾಮ್ ಮಾಡಿದ್ದನ್ನೇ ಗಿಟ್‌ಹಬ್‌ ಎಂಬ ಓಪನ್ ಸೋರ್ಸ್‌ ಪ್ಲಾಟ್‌ಫಾರ್ಮ್‌ನಿಂದ ತೆಗೆದುಕೊಂಡು ಅದನ್ನೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕನ್ನಡದಲ್ಲಿ ಪ್ರಕಟಿಸಿದರು. ‘ಕನ್ನಡ ಕೀಬೋರ್ಡ್‌, ಕನ್ನಡ ಅಕ್ಷರ/ಕಾಗುಣಿತ ಸರಿ ಇದೆಯೇ ಎಂದು ಪರೀಕ್ಷಿಸುವುದು ಮತ್ತು ಪದವೊಂದು ನಿಘಂಟಿನಲ್ಲಿ ಇದೆಯೇ ಎಂದು ಪರೀಕ್ಷಿಸುವ ಕೋಡ್ ಅಳವಡಿಸಿದೆ’ ಎಂದು ಅಮೋಘ ಹೇಳುತ್ತಾರೆ.

ಕನ್ನಡದ ವರ್ಡ್ಲ್‌ ಮಾಡಬೇಕು ಎನಿಸಿದಾಗ ಇವರು ಬೇರೆ ಭಾಷೆಗಳಲ್ಲಿ ಇರುವ ವರ್ಡ್ಲ್ ಅನ್ನೂ ಗಮನಿಸಿದ್ದಾರೆ. ತಮಿಳಿನಲ್ಲಿ ಮಾಡಿರುವ ವರ್ಡ್ಲ್‌ನಲ್ಲಿ ಇರುವ ಕೊರತೆಯನ್ನು ಇವರು ಕನ್ನಡದಲ್ಲಿ ನೀಗಿಸುವ ಪ್ರಯತ್ನ ಮಾಡಿದ್ದಾರೆ. ವ್ಯಂಜನ, ಸ್ವರ ಮತ್ತು ಒತ್ತಕ್ಷರಗಳನ್ನೂ ಬರೆಯುವ ಅವಕಾಶ ಕನ್ನಡದಲ್ಲಿ ಅಗತ್ಯವಿರುವುದನ್ನು ಗಮನಿಸಿ ತಂದಿದ್ದಾರೆ.

‘ಅಲರ್’ ಎಂಬ ಕನ್ನಡ ಶಬ್ದಕೋಶದಲ್ಲಿರುವ ಕನ್ನಡ ಪದಗಳನ್ನಷ್ಟೇ ಇದು ಸದ್ಯಕ್ಕೆ ಪದ ಎಂದು ಗುರುತಿಸುತ್ತದೆ.

ಇಂಗ್ಲಿಷಿನಲ್ಲಿ ಜೋಷ್‌ ವಾರ್ಡ್ಲ್‌ ತನ್ನ ಪತ್ನಿ ಪಲಕ್ ಷಾಗಾಗಿ ಈ ವರ್ಡ್ಲ್ ರಚಿಸಿದರು. ಇದಕ್ಕೆ ಯಾವುದೇ ಆ್ಯಪ್‌ ಇಲ್ಲ. ಕೇವಲ ಕ್ರೋಮ್ ಬ್ರೌಸರ್‌ನಲ್ಲಿ ಸರಿಯಾಗಿ ಕೆಲಸ ಮಾಡುತ್ತದೆ. ಸಫಾರಿ ಬ್ರೌಸರ್‌ನಲ್ಲಿ ಕೆಲಸ ಮಾಡುವುದಿಲ್ಲ. ದಿನಕ್ಕೆ ಒಂದೇ ಪದವನ್ನು ಕೊಟ್ಟಿರುತ್ತಾರೆ. ವಾರ್ಡ್ಲ್‌ ಪ್ರಕಾರ, ವ್ಯಕ್ತಿಯೊಬ್ಬ ಕೇವಲ 15 ನಿಮಿಷಗಳನ್ನು ಮಾತ್ರ ಇದಕ್ಕೆ ವೆಚ್ಚ ಮಾಡಬೇಕು. ಅದಕ್ಕಿಂತ ಹೆಚ್ಚು ಸಮಯವನ್ನು ಆತ ಇದರಲ್ಲಿ ವೆಚ್ಚ ಮಾಡಬಾರದು ಎಂಬ ಕಾರಣಕ್ಕೇ ಹೀಗೆ ಸೀಮಿತ ಮಾಡಿದ್ದೇವೆ. ವ್ಯಕ್ತಿಯೊಬ್ಬನ ಇಡೀ ದಿನವನ್ನು ತಿಂದುಹಾಕುವ ಗೇಮ್ ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಜೋಷ್ ವಾರ್ಡ್ಲ್ ಹೇಳುತ್ತಾರೆ.

ಏನಿದು ವರ್ಡಲ್ಲ?

ದಿನಕ್ಕೆ ಒಂದು ಶಬ್ದವನ್ನು ಕೊಡಲಾಗಿರುತ್ತದೆ. ಆ ಶಬ್ದವನ್ನು ಊಹಿಸುವುದೇ ಆಟ. ಎಂಟು ಪ್ರಯತ್ನದಲ್ಲಿ ಶಬ್ದವನ್ನು ಊಹಿಸಬೇಕು. ಐದು ಅಕ್ಷರಗಳ ಪದಗಳಿಗೆ ಮಾತ್ರ ಅವಕಾಶ. ಈಗ ನಾಲ್ಕು ಪದಗಳ ಆಯ್ಕೆಯನ್ನೂ ನೀಡಿದ್ದಾರೆ. ಇದರಲ್ಲಿ ಪ್ರತಿ ಬಣ್ಣವೂ ಒಂದೊಂದು ಸುಳಿವು ನೀಡುತ್ತದೆ. ಸರಿಯಾದ ಮನೆಯಲ್ಲಿ, ಸರಿಯಾದ ಒತ್ತು ಮತ್ತು ಕಾಗುಣಿತ ಸರಿ ಇದ್ದಲ್ಲಿ ಹಸಿರು ಬಣ್ಣದಲ್ಲಿ ಅಕ್ಷರವನ್ನು ಸೂಚಿಸುತ್ತದೆ. ಒಂದು ವೇಳೆ ಸರಿಯಾದ ಮನೆಯಲ್ಲಿ ವ್ಯಂಜನ ಸರಿ ಇದ್ದು, ಒತ್ತು ಅಥವಾ ಕಾಗುಣಿತ ತಪ್ಪಾಗಿದ್ದರೆ, ನೀಲಿಬಣ್ಣದಲ್ಲಿ ಅಕ್ಷರವನ್ನು ತೋರಿಸುತ್ತದೆ. ತಪ್ಪಾದ ಮನೆಯಲ್ಲಿ ಅಕ್ಷರವಿದ್ದು, ವ್ಯಂಜನ ಸರಿ ಇದ್ದರೆ ಅದನ್ನು ಹಳದಿಬಣ್ಣದಲ್ಲಿ ತೋರಿಸುತ್ತದೆ. ಹೀಗೆ ಕನ್ನಡಕ್ಕೇ ವಿಶಿಷ್ಟವಾದ ಹಲವು ಸುಳಿವುಗಳನ್ನು ಇದರಲ್ಲಿ ಸೇರಿಸಲಾಗಿದೆ.

ಇಂಗ್ಲಿಷಿನಲ್ಲಿ ಸುಳಿವುಗಳನ್ನು ನೀಡುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ. ಅದರಲ್ಲಿ ಮೂರೇ ಸುಳಿವುಗಳು ಇರುತ್ತವೆ. ದಿನದ ಪದದಲ್ಲಿ ಅಕ್ಷರ ಇದ್ದು, ಅದು ಸರಿಯಾದ ಸ್ಥಾನದಲ್ಲಿದ್ದರೆ, ಆಗ ಅದನ್ನು ಹಸಿರುಬಣ್ಣದಲ್ಲಿ ಸೂಚಿಸಲಾಗುತ್ತದೆ. ದಿನದ ಪದದಲ್ಲಿ ಅಕ್ಷರ ಇದ್ದು, ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ, ಅದನ್ನು ಹಳದಿಬಣ್ಣದಲ್ಲಿ ತೋರಿಸಲಾಗುತ್ತದೆ. ಯಾವ ಅಕ್ಷರವೂ ದಿನದ ಪದದಲ್ಲಿ ಇಲ್ಲದಿದ್ದರೆ ಅದನ್ನು ಬೂದು ಬಣ್ಣದಲ್ಲಿ ತೋರಿಸಲಾಗುತ್ತದೆ. ಆದರೆ, ಕನ್ನಡದಲ್ಲಿ ಅಕ್ಷರಗಳಿಗೆ ಒತ್ತು, ವ್ಯಂಜನ, ಸ್ವರಗಳೆಲ್ಲ ಸೇರುವುದರಿಂದ ಊಹಿಸುವುದನ್ನು ಇನ್ನಷ್ಟು ಸುಲಭ ಮಾಡುವುದಕ್ಕಾಗಿ ಸುಳಿವುಗಳನ್ನು ಹೆಚ್ಚು ಮಾಡಿದ್ದಾರೆ. ಇದಕ್ಕೆ ಅಮೋಘ ತುಂಬಾ ಶ್ರಮ ವಹಿಸಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ.

ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಸ್ಟರ್ಸ್‌ ಓದುತ್ತಿರುವ ಬೆಂಗಳೂರಿನ ಅಮೋಘ ಉಡುಪ ಚಳಿಗಾಲದ ರಜೆ ಹೊತ್ತಲ್ಲಿ ಇಂಥದ್ದೊಂದು ಪ್ರಯೋಗ ಮಾಡಿದ್ದಾರೆ. ಇವರ ಪ್ರಯತ್ನ ನಿಜಕ್ಕೂ ಶ್ಲಾಘನಾರ್ಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು