ಶುಕ್ರವಾರ, ಜನವರಿ 27, 2023
27 °C

ಸಿಗ್ನಲ್ ಸರಿ ಇಲ್ಲವೇ?ಮೊಬೈಲ್ ಸಂಖ್ಯೆ ಪೋರ್ಟಿಂಗ್ ಈಗ ಸುಲಭ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

ಮೊಬೈಲ್ ಕರೆ ದರ, ಇಂಟರ್ನೆಟ್ ಸೇವೆಗಳ ಉಚಿತ ಕೊಡುಗೆಗಳ ಭರಾಟೆ ನಿಂತಿದೆ. ಇನ್ನೇನಿದ್ದರೂ ಉತ್ತಮ ಸೇವೆ ನೀಡುವ ಮೂಲಕ ತಮ್ಮ ಚಂದಾದಾರರು ಅಂದರೆ ಗ್ರಾಹಕರನ್ನು ಉಳಿಸಿಕೊಳ್ಳುವ ಪ್ರಯತ್ನದ ಅನಿವಾರ್ಯತೆ ಈ ಮೊಬೈಲ್ ಸೇವಾದಾರ ಕಂಪನಿಗಳಿಗೆ. ಈ ನಡುವೆ, 'ದುಡ್ಡು ಕೊಡುವಾಗ ಒಳ್ಳೆಯ ಸೇವೆ ಯಾಕೆ ನೀಡುತ್ತಿಲ್ಲ? ನೀವು ನೀಡದಿದ್ದರೆ ಬೇರೊಬ್ಬರು ನೀಡುತ್ತಾರೆ, ಅವರ ಸೇವೆಗಳನ್ನು ನಾವು ಬಳಸಿಕೊಳ್ಳುತ್ತೇವೆ' ಎಂದು ಹೇಳುವ ಅಧಿಕಾರ ಗ್ರಾಹಕರಿಗಿದೆ. ಈ ಪರಿಕಲ್ಪನೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೆಲವು ವರ್ಷಗಳ ಹಿಂದೆ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ವ್ಯವಸ್ಥೆಯನ್ನು ಪರಿಚಯಿಸಿತ್ತು.

ಏನಿದು ಪೋರ್ಟಿಂಗ್?

ನಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ, ದೂರಸಂಪರ್ಕ ಸೇವಾದಾರರನ್ನು (ಸರ್ವಿಸ್ ಪ್ರೊವೈಡರ್) ಮಾತ್ರವೇ ಬದಲಾಯಿಸುವ ವ್ಯವಸ್ಥೆ. ಉದಾಹರಣೆಗೆ, ನಮ್ಮಲ್ಲಿ ಈಗಾಗಲೇ ಇರುವ ಮೊಬೈಲ್ ಫೋನ್ ಸಂಖ್ಯೆಯನ್ನು ಏರ್‌ಟೆಲ್, ಬಿಎಸ್ಸೆನ್ನೆಲ್, ವೊಡಾಫೋನ್-ಐಡಿಯಾ, ರಿಲಯನ್ಸ್ ಜಿಯೋ - ಇವರಲ್ಲಿ ಯಾರ ಸೌಕರ್ಯವು ಚೆನ್ನಾಗಿದೆಯೋ ಅದಕ್ಕೆ ಬದಲಾಯಿಸಿಕೊಳ್ಳುವ ಅವಕಾಶ. ಬ್ಯಾಂಕ್, ವಾಟ್ಸ್ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳಿಗೆಲ್ಲ ನಮ್ಮ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿರುವಾಗ, ಹೊಸ ನಂಬರ್ ಪಡೆದಾಗ (ಹೊಸ ಸಿಮ್ ಕಾರ್ಡ್) ಎಲ್ಲರಿಗೂ ಸೂಚನೆ ನೀಡಬೇಕಾಗುವ ತ್ರಾಸ ತಪ್ಪಿಸುವುದಕ್ಕಾಗಿ ಎಂಎನ್‌ಪಿ ವ್ಯವಸ್ಥೆ ಪರಿಚಯಿಸಲಾಗಿತ್ತು.

ಈಗ ಕರೆ ಮತ್ತು ಇಂಟರ್ನೆಟ್ ಸೇವೆಗೆ ಶುಲ್ಕ ಹೆಚ್ಚಿಸಲಾಗಿದೆ. ಈ ಸಂದರ್ಭದಲ್ಲಿ ಸರಿಯಾದ ಸೇವೆ ನೀಡದಿದ್ದರೆ ಹೇಗೆ? ಇದಕ್ಕಾಗಿ, ಎಎನ್‌ಪಿ ಅಂದರೆ, ಮೊಬೈಲ್ ಸಂಖ್ಯೆಯನ್ನು ಅನ್ಯ ಕಂಪನಿಗಳಿಗೆ ಪೋರ್ಟ್ ಮಾಡಿಸುವ ಪ್ರಕ್ರಿಯೆಯನ್ನು ಟ್ರಾಯ್ ಮತ್ತಷ್ಟು ಸರಳಗೊಳಿಸಿದೆ. ಈ ನಿಯಮಗಳಲ್ಲಿನ ಬದಲಾವಣೆಯಲ್ಲಿ ಎದ್ದುಕಾಣುವ ಅಂಶವೆಂದರೆ, ಬೇರೆ ನೆಟ್‌ವರ್ಕ್‌ಗೆ ಬದಲಾಯಿಸಿಕೊಳ್ಳಲು ಕನಿಷ್ಠ 15 ದಿನಗಳಾದರೂ ಬೇಕಿತ್ತು. ಇನ್ನು ಮುಂದೆ 3ರಿಂದ 5 ದಿನಗಳು ಮಾತ್ರ ಸಾಕು. ಅಲ್ಲದೆ, ಪೋರ್ಟ್ ಮಾಡಲು ಇರುವ ಮಾನದಂಡಗಳನ್ನು ಪೂರೈಸಿದವರಿಗೆ ಮಾತ್ರವೇ ವಿಶಿಷ್ಟ ಪೋರ್ಟಿಂಗ್ ಕೋಡ್ (ಯುಪಿಸಿ) ಲಭ್ಯವಾಗುತ್ತದೆ. ಸರಳೀಕರಿಸಿದ ಹೊಸ ನಿಯಮವು ಡಿ.16ರಿಂದ ಜಾರಿಗೆ ಬಂದಿದೆ.

ಹೇಗೆ ಪೋರ್ಟ್ ಮಾಡುವುದು?

PORT ಅಂತ ಬರೆದು ಒಂದು ಸ್ಪೇಸ್ ಕೊಟ್ಟು 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ, 1900 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿದರಾಯಿತು. ಪೋರ್ಟ್ ಮಾಡಲು ಬೇಕಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೆ ತಕ್ಷಣವೇ ವಿಶಿಷ್ಟ ಪೋರ್ಟಿಂಗ್ ಕೋಡ್ (ಯುಪಿಸಿ) ನಮ್ಮ ಮೊಬೈಲ್‌ಗೆ ಎಸ್ಎಂಎಸ್ ರೂಪದಲ್ಲಿ ಬರುತ್ತದೆ. ಅದನ್ನು ಹೊಸ ಮೊಬೈಲ್ ಸೇವಾ ಪೂರೈಕೆದಾರರಿಗೆ ನೀಡಿ ಸಂಬಂಧಪಟ್ಟ ಫಾರ್ಮ್ ತುಂಬಬೇಕಾಗುತ್ತದೆ. ಜತೆಗೆ ವಿಳಾಸ ಮತ್ತು ಗುರುತಿನ ಆಧಾರ ಒದಗಿಸಬೇಕಾಗುತ್ತದೆ.

ಪ್ರಮುಖ ನಿಯಮಗಳೇನು?

ಪೋಸ್ಟ್ ಪೇಯ್ಡ್ ಸಂಪರ್ಕವಾಗಿದ್ದರೆ, ಬಿಲ್ಲಿಂಗ್ ದಿನಾಂಕದ ಆಸುಪಾಸಿನಲ್ಲಿ, ಬಿಲ್ ಬಾಕಿ ಚುಕ್ತಾ ಮಾಡಿರಬೇಕು. ಕನಿಷ್ಠ 90 ದಿನಗಳಾದರೂ ಈ ಸಂಖ್ಯೆಯನ್ನು ಬಳಸಿರಬೇಕು. ಕಾನೂನಿನ ಅಥವಾ ಹಿಂದಿನ ಕಂಪನಿಯ ನಿಯಮಾವಳಿಯ ಪ್ರಕಾರ ಏನಾದರೂ ಬಾಧ್ಯತೆಗಳಿದ್ದಲ್ಲಿ (ಇಂತಿಷ್ಟು ಅವಧಿಗೆ ಸೇವೆ ಪಡೆಯುತ್ತೇನೆ ಎಂಬ ಕರಾರು ಇತ್ಯಾದಿ), ಅದನ್ನು ಪೂರ್ಣಗೊಳಿಸಿರಬೇಕು.
ಹೀಗಾಗಿ ತಡವೇಕೆ? ನಿಮ್ಮಲ್ಲಿರುವ ರಿಲಯನ್ಸ್ ಜಿಯೋ, ಏರ್‌ಟೆಲ್, ಬಿಎಸ್ಸೆನ್ನೆಲ್, ವೊಡಾಫೋನ್-ಐಡಿಯಾ ಸೇವೆ ಇಷ್ಟವಾಗಲಿಲ್ಲವೇ? ಮೊಬೈಲ್ ಸಂಖ್ಯೆಯನ್ನು ಬೇರೆ ಸೇವಾ ಪೂರೈಕೆದಾರ ಕಂಪನಿಗೆ ಪೋರ್ಟ್ ಮಾಡಿಬಿಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು