ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೋಸ ತಯಾರಿಸಿ ಟ್ವೀಟ್ ಮಾಡಿದ ಆಸ್ಟ್ರೇಲಿಯಾ ಪಿಎಂ: ಹೀಗಿತ್ತು ಮೋದಿ ಪ್ರತಿಕ್ರಿಯೆ

ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರು ಸಮೋಸ ತಯಾರಿಸಿ, ಅದನ್ನು ಟ್ರೇ ಒಂದರಲ್ಲಿ ಹಿಡಿದುಕೊಂಡಿರುವ ಚಿತ್ರವನ್ನು ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದು ವೈರಲ್ ಆಗಿದೆ.

‘ಮಾವಿನ ಚಟ್ನಿ ಜೊತೆ ಭಾನುವಾರದ ಸ್ಕೊಮೋಸಗಳು (ScoMoSas), ಎಲ್ಲವೂ ನಾನೇ ತಯಾರಿಸಿದ್ದು. ಈ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದೇನೆ. ಅವರು ಸಸ್ಯಹಾರಿ. ಅವರು ಜತೆಗೆ ಇದ್ದಿದ್ದರೆ ಇದನ್ನು ಅವರ ಜೊತೆ ಹಂಚಿಕೊಳ್ಳುತ್ತಿದ್ದೆ’ ಎಂದು ಮಾರಿಸನ್ ಟ್ವೀಟ್ ಮಾಡಿದ್ದಾರೆ.

ಮಾರಿಸನ್ ಅವರು ಪೋಸ್ಟ್ ಮಾಡಿದ ಕೇವಲ ನಾಲ್ಕು ಗಂಟೆಗಳ ಒಳಗೆ ಅದನ್ನು 10 ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ. ಸುಮಾರು 49 ಸಾವಿರ ಜನ ಲೈಕ್ ಮಾಡಿದ್ದಾರೆ. ಇದು ವೈರಲ್ ಆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.

‘ಹಿಂದೂಮಹಾಸಾಗರದಿಂದ ಸಂಪರ್ಕ ಹೊಂದಿರುವವರು, ಭಾರತೀಯ ಸಮೋಸದಿಂದ ಒಗ್ಗೂಡಿದ್ದೇವೆ. ಸ್ಕಾಟ್ ಮಾರಿಸನ್ ತಯಾರಿಸಿರುವ ಸಮೋಸ ನೋಡಲು ರುಚಿಕರವಾಗಿ ಇದ್ದಂತೆ ಕಾಣಿಸುತ್ತಿದೆ. ಕೊರೊನಾ ವಿರುದ್ಧ ನಾವು ವಿಜಯ ಸಾಧಿಸಿದ ಬಳಿಕ ಜೊತೆಯಾಗಿ ಕುಳಿತು ಸಮೋಸ ಸವಿಯೋಣ. 4ರಂದು ನಡೆಯಲಿರುವ ನಮ್ಮ ಮಾತುಕತೆಯನ್ನು ಎದುರುನೋಡುತ್ತಿದ್ದೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಉಭಯ ನಾಯಕರ ಟ್ವೀಟ್‌ಗಳಿಗೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಮಾರಿಸನ್ ಅವರು ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ ಆಗ ಆಸ್ಟ್ರೇಲಿಯಾದಲ್ಲಿ ಬಾರಿ ಕಾಡ್ಗಿಚ್ಚು ಉಂಟಾಗಿದ್ದರಿಂದ ಭೇಟಿಯನ್ನು ಮುಂದೂಡಲಾಗಿತ್ತು. ಬಳಿಕ ಮೇ ತಿಂಗಳಲ್ಲಿ ಅವರ ಭಾರತ ಪ್ರವಾಸ ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಪುನಃ ಭೇಟಿ ರದ್ದಾಗಿತ್ತು. ಹೀಗಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಜೂನ್ 4ರಂದು ಮಾತುಕತೆ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT