ಬುಧವಾರ, ಜನವರಿ 19, 2022
23 °C
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌, ಸರ್ಕಾರಿ ಕಡತಗಳ ಸುರಕ್ಷತೆ ಬಗ್ಗೆ ಜನರಿಂದ ತರಾಟೆ

ಸರ್ಕಾರಿ ಕಚೇರಿಯಿಂದ ಕಡತಗಳನ್ನು ಕಚ್ಚಿಕೊಂಡು ಓಡಿದ ಮೇಕೆ, ಸಿಬ್ಬಂದಿಗೆ ಪಜೀತಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Twitter

ಕಾನ್ಪುರ: ಸರ್ಕಾರಿ ಕಚೇರಿಯ ಒಳಗಿಂದ ಕಡತಗಳನ್ನು ಮೇಕೆಯೊಂದು ಕಚ್ಚಿಕೊಂಡು ಓಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಾನ್ಪುರದ ಚೌಬೆಪುರ್‌ ಬ್ಲಾಕ್‌ನ ಪಂಚಾಯತ್‌ ಕಾರ್ಯದರ್ಶಿಯ ಕಚೇರಿಯಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ.

ಕಚೇರಿಯ ಸಿಬ್ಬಂದಿ ಮೇಕೆಯ ಹಿಂದೆ ಫೈಲ್‌ಗಾಗಿ ಓಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. 'ಟೈಮ್ಸ್‌ ಆಫ್‌ ಇಂಡಿಯಾ'ದ ವರದಿ ಪ್ರಕಾರ ಕಾನ್ಪುರದ ಕಚೇರಿಯ ಕೋಣೆಯೊಂದರಲ್ಲಿ ಯಾರೂ ಇಲ್ಲದಿದ್ದಾಗ ಒಳಪ್ರವೇಶಿಸಿದ ಮೇಕೆ ಕೆಲವು ಕಡತಗಳನ್ನು ಕಚ್ಚಿಕೊಂಡು ಹೊರಗೆ ಹೋಗಿದೆ. ಕಚೇರಿಯ ಹೊರಗಿದ್ದ ಕೆಲವು ಸಿಬ್ಬಂದಿಗಳು ಕಡತಗಳನ್ನು ಕಚ್ಚಿಕೊಂಡು ಹೋಗುತ್ತಿರುವ ಮೇಕೆಯನ್ನು ನೋಡಿ ಬೊಬ್ಬೆ ಹಾಕಿದ್ದಾರೆ.

ಓರ್ವ ಸಿಬ್ಬಂದಿ ಫೈಲ್‌ಗಳನ್ನು ಮೇಕೆಯಿಂದ ಕಸಿದುಕೊಳ್ಳಲು ಅದರ ಹಿಂದೆ ಓಡಿದ್ದಾರೆ. ಈ ಸಂದರ್ಭ 'ಅರೆ ಯಾರ್‌ ತು ದೇ' (ಫೈಲ್‌ಗಳನ್ನು ವಾಪಸ್‌ ಕೊಡು) ಎಂದು ಹೇಳುತ್ತ ಸಿಬ್ಬಂದಿ ಓಡುತ್ತಿರುವ ವಿಡಿಯೊ ನೆಟ್ಟಿಗರಿಗೆ ವಿನೋದದ ಸರಕಾಗಿ ಪರಿಣಮಿಸಿದೆ.

ಅಂತಿಮವಾಗಿ ಕಡತಗಳನ್ನು ಮೇಕೆ ಅಗಿದು ಹಾಕುವ ಮೊದಲೇ ಕಸಿದುಕೊಳ್ಳುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಕಡತಗಳನ್ನು ಕಾಪಾಡುವಲ್ಲಿ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಿದು ಎಂದು ಹಲವರಿಂದ ಟೀಕೆ ವ್ಯಕ್ತವಾಗಿದೆ.

ಮೇಕೆ ಕೆಲವು ತ್ಯಾಜ್ಯ ಪೇಪರ್‌ಗಳನ್ನು ಕಚ್ಚಿಕೊಂಡು ಓಡಿ ಹೋಗಿತ್ತು. ಅವುಗಳು ಕಚೇರಿಯ ಕಡತಗಳಲ್ಲ ಎಂದು ಚೌಬೆಪುರ್‌ ಬ್ಲಾಕ್‌ ಅಭಿವೃದ್ಧಿ ಅಧಿಕಾರಿ ಮನುಲಾಲ್‌ ಯಾದವ್‌ 'ಎಎನ್‌ಐ'ಗೆ ಸ್ಪಷ್ಟಪಡಿಸಿದ್ದಾರೆ.

'ಕಚೇರಿ ಸಿಬ್ಬಂದಿ ಹೊರಗೆ ಕುಳಿತಿದ್ದರಿಂದ ಈ ಘಟನೆ ಸಂಭವಿಸಿದೆ. ಕಚೇರಿ ಅವಧಿಯಲ್ಲಿ ಕೊಠಡಿಯ ಒಳಗೆ ಕುಳಿತು ಕೆಲಸ ನಿರ್ವಹಿಸಲು ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ' ಯಾದವ್‌ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು