ಬೆಂಗಳೂರು: ಲಡ್ಡು ವಿವಾದದ ನಂತರ ಆಂಧ್ರಪ್ರದೇಶದ ರಾಜಕಾರಣ ತಿರುಪತಿಯ ಸುತ್ತ ಗಿರಕಿ ಹೊಡೆಯುತ್ತಿದೆ. ಅಲ್ಲದೇ ತಿರುಪತಿ ಸುದ್ದಿಯ ಕೇಂದ್ರ ಬಿಂದುವಾಗಿದೆ.
ಅನೇಕ ರಾಜಕೀಯ ನಾಯಕರು ಶುದ್ಧೀಕರಣದ ಮಾತನ್ನಾಡುವಾಗಲೇ ತೆಲಂಗಾಣದ ಬಿಜೆಪಿ ನಾಯಕಿ ಮಾಧವಿ ಲತಾ ಅವರು ಶುದ್ಧೀಕರಣದ ಪ್ರಕ್ರಿಯೆ ಎಂದು ಹೈದರಾಬಾದ್‌ನಿಂದ ತಿರುಪತಿಗೆ ವಂದೇ ಭಾರತ್ ರೈಲಿನಲ್ಲಿ ಗೋವಿಂದ ಗೋವಿಂದ ಎಂದು ಭಜನೆ ಮಾಡುತ್ತಾ ತೆರಳಿದ್ದಾರೆ.
ಮಾಧವಿ ಲತಾ ಅವರು ವಂದೇ ಭಾರತ್ ರೈಲಿನಲ್ಲಿ ಭಜನೆ ಮಾಡುತ್ತಿರುವ ದೃಶ್ಯಾವಳಿಗಳು ಹರಿದಾಡಿವೆ.
ಈ ವೇಳೆ ಕೆಲವರು ಮಾಧವಿ ಅವರಿಗೆ ಸಾತ್ ಕೊಟ್ಟಿದ್ದಾರೆ. ಎಲ್ಲ ಬೋಗಿಗಳಿಗೆ ತೆರಳಿ ಮಾಧವಿ ಅವರು ಭಜನೆ ಮಾಡಿದ್ದಾರೆ. ಬಳಿಕ ವೆಂಕಟೇಶ್ವರ ರಮಣ ಗೋವಿಂದ ಗೋವಿಂದ ಗೀತೆಯನ್ನು ಹಾಡಿದ್ದಾರೆ. ಕೆಲವರು ವಿಡಿಯೊ ಮೆಚ್ಚಿಕೊಂಡಿದ್ದರೆ ಇನ್ನೂ ಕೆಲವರು ದೇಶದ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲದೇ ಈ ರೀತಿ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಪಾಪ ತೊಳೆಯುವಂತೆ ವೆಂಕಟೇಶ್ವರನಲ್ಲಿ ಪ್ರಾರ್ಥಿಸಲು ಈ ಭಜನಾ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಒವೈಸಿ ವಿರುದ್ಧ ಸೋತಿದ್ದ ಮಾಧವಿ ಅವರು ಹಿಂದೂತ್ವ ವಾದದಿಂದ ಗಮನ ಸಳೆಯುತ್ತಿದ್ದಾರೆ.