ಶುಕ್ರವಾರ, ಅಕ್ಟೋಬರ್ 30, 2020
19 °C

Video| ಹಳ್ಳದಲ್ಲಿ ಕೊಚ್ಚಿಹೋದ ಎತ್ತಿನಬಂಡಿ

ರಾಯಚೂರು: ಬುಧವಾರ ರಾತ್ರಿಯಿಡೀ ಸುರಿದ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಎತ್ತಿನ ಬಂಡಿಯೊಂದು ಕೊಚ್ಚಿಹೋಗಿದ್ದು, ಎತ್ತುಗಳು ಮತ್ತು ಅದರಲ್ಲಿದ್ದ ಒಬ್ಬರು ಸೇರಿ ಮಹಿಳೆ ನಾಲ್ಕು ಮಂದಿಯನ್ನು ರಕ್ಷಿಸಿದ ಘಟನೆ ರಾಯಚೂರು ತಾಲ್ಲೂಕಿನ ಪುಚ್ಚಲದಿನ್ನಿ ಗ್ರಾಮದ ಹತ್ತಿರ ಗುರುವಾರ ನಡೆದಿದೆ. 

ತುಂಬಿ ಹರಿಯುವ ಹಳ್ಳದ ಆಳವನ್ನು ಲೆಕ್ಕಿಸದೆ ಬಂಡಿಯನ್ನು ಹಳ್ಳಕ್ಕೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯಲ್ಲಿ ತೆಗೆದುಕೊಂಡು ಹೋಗಿದ್ದರಿಂದ ಎಲ್ಲರೂ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಹಳ್ಳದಲ್ಲಿ ಬಂಡಿ ಕೊಚ್ಚಿಹೋಗುತ್ತಿದ್ದಂತೆ ನೊಗದಿಂದ ಬಿಡಿಸಿಕೊಂಡ ಎತ್ತುಗಳು ದಡಕ್ಕೆ ಸೇರಿವೆ. ಪಕ್ಕದಲ್ಲಿದ್ದ ರೈತರು ಓಡಿಹೋಗಿ ಅದರಲ್ಲಿದ್ದ ತಿಮ್ಮ, ಯೇಸು, ಡ್ಯಾನಿಯಲ್‌ ಹಾಗೂ ನರಸಮ್ಮ ಅವರನ್ನು ರಕ್ಷಿಸಿದ್ದಾರೆ. 

ಜಿಲ್ಲೆಯಲ್ಲಿ 16 ಎಂಎಂ ಮಳೆ: ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಡೀ ಮಳೆ ಸುರಿದಿದ್ದು ಮಾಪಕದಲ್ಲಿ 16 ಮಿಲಿಮೀಟರ್‌ ದಾಖಲಾಗಿದೆ.

ರಾಯಚೂರು ತಾಲ್ಲೂಕಿನಲ್ಲಿ 26 ಮಿಲಿಮೀಟರ್‌ ಅತಿಹೆಚ್ಚು ಮಳೆಯಾಗಿದ್ದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತಾಲ್ಲೂಕಿನ ಯರಗೇರಾ, ಗಿಲ್ಲೇಸುಗೂರು, ದೇವಸುಗೂರು, ಚಂದ್ರಬಂಡಾ ಹಾಗೂ ಕಲ್ಮಲಾ ಹೋಬಳಿಗಳಲ್ಲಿ ಭಾರಿ ಮಳೆ ಬಿದ್ದಿದೆ. ಹತ್ತಿ, ತೊಗರಿ, ಮೆಣಸಿನಕಾಯಿ, ಸೂರ್ಯಪಾನ ಬೆಳೆಗಳು ಹಾನಿಯಾಗಿವೆ.

ದೇವದುರ್ಗ 10, ಲಿಂಗಸುಗೂರು 22, ಮಾನ್ವಿ 25, ಸಿಂಧನೂರು 9, ಮಸ್ಕಿ 11 ಹಾಗೂ ಸಿರವಾರ 11 ಮಿಲಿಮೀಟರ್‌ ಮಳೆಯಾಗಿದೆ. ಎಲ್ಲ ಕಡೆಗಳಲ್ಲಿಯೂ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ.