ಮಂಗಳವಾರ, ಜೂನ್ 2, 2020
27 °C

ಮುಟ್ಟಿದರೆ ಸೋಂಕು ಹರಡುತ್ತೇವೆ | ಪೊಲೀಸರಿಗೆ ಬೆದರಿಕೆ ಹಾಕಿ ಪರಾರಿಯಾದ ಯುವಕರು

ಮಂಡ್ಯ: ‘ನಮಗೆ ಕೊರೊನಾ ಸೋಂಕಿದ್ದು ಕೈಯಲ್ಲಿ ಸೀಲ್‌ ಹಾಕಿದ್ದಾರೆ. ಮುಟ್ಟಿದರೆ ನಿಮಗೂ ಸೋಂಕು ಹರಡುತ್ತದೆ ’ಎಂದು ಕೆ.ಆರ್‌.ಪೇಟೆ ತಾಲ್ಲೂಕಿನ ಹಾದನೂರು ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರಿಗೆ ಬೆದರಿಕೆ ಹಾಕಿ ನಾಲ್ವರು ಯುವಕರು ಬುಧವಾರ ರಾತ್ರಿ ಪರಾರಿಯಾಗಿದ್ದಾರೆ.

ರಾತ್ರಿ 11 ಗಂಟೆ ವೇಳೆ ನಾಲ್ವರು ಯುವಕರು ಮೈಸೂರು ಕಡೆಯಿಂದ ಕೆ.ಆರ್‌.ಪೇಟೆ ಕಡೆಗೆ ಆಟೊದಲ್ಲಿ ಬಂದಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್‌ ಸಿಬ್ಬಂದಿ ತಡೆದಾಗ , ಹತ್ತಿರ ಬಂದರೆ ಮುಟ್ಟಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಬ್ಯಾರಿಕೇಡ್‌ಗಳನ್ನು ತಾವೇ ಪಕ್ಕಕ್ಕೆ ಸರಿಸಿ ಮುಂದಕ್ಕೆ ತೆರಳಿದ್ದಾರೆ.

ಪೊಲೀಸರು ಆಟೊವನ್ನು ಹಿಂಬಾಲಿಸಿದ್ದಾರೆ. ಆದರೆ ಯುವಕರು ಕತ್ತಲಲ್ಲಿ ರಾಜ್ಯ ಹೆದ್ದಾರಿ ಬಿಟ್ಟು ಹಳ್ಳಿ ರಸ್ತೆಯಲ್ಲಿ ತೆರಳಿರುವ ಕಾರಣ ಆಟೊ ಪತ್ತೆಯಾಗಿಲ್ಲ.

ಸ್ಥಳಕ್ಕೆ ಬಂದ ಕೆ.ಆರ್‌.ಪೇಟೆ ತಹಶೀಲ್ದಾರ್‌ ಎಂ.ಶಿವಮೂರ್ತಿ, ಪಟ್ಟಣ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬ್ಯಾಟರಾಯಗೌಡ ಚೆಕ್‌ಪೋಸ್ಟ್‌ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ತಾಲ್ಲೂಕಿನ ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ ಬಿಗಿಗೊಳಿಸಲಾಗಿದ್ದು ತಾಲ್ಲೂಕು ಪ್ರವೇಶ ಮಾಡಿರುವ ಅಪರಿಚಿತ ಯುವಕರನ್ನು ಪತ್ತೆ ಮಾಡಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.