ಶುಕ್ರವಾರ, ಮೇ 29, 2020
27 °C
ಉತ್ತಮ ಆಹಾರದಿಂದ ಒಳ್ಳೆಯ ಆರೋಗ್ಯ

ಅಂಧತ್ವ ತಡೆಯುವ ವಿಟಮಿನ್–ಎ

ಡಾ. ಮುರಲೀ ಮೋಹನ್ ಚೂಂತಾರು Updated:

ಅಕ್ಷರ ಗಾತ್ರ : | |

Deccan Herald

ವಿಟಮಿನ್‍ಗಳು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದ್ದು, ಅದರಲ್ಲೂ ವಿಟಮಿನ್-ಎ ಅತೀ ಅಗತ್ಯ. ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಬಲ ತುಂಬಲು ಮತ್ತು ಅಂಧತ್ವ ಬಾರದಂತೆ ತಡೆಯಲು ವಿಟಮಿನ್-ಎ ಬೇಕು. ಎಲುಬುಗಳ ಬೆಳವಣಿಗೆಗೆ, ಜೀವ ಕೋಶಗಳ ಚಯಾಪಚಯ ಕ್ರಿಯೆಗೆ ಮತ್ತು ಸಂತಾನೋತ್ಪತ್ತಿಯ ಪ್ರಕ್ರಿಯೆಗೂ ವಿಟಮಿನ್-ಎ ಬೇಕು.

ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸಲೂ ಇದು  ಅತ್ಯವಶ್ಯಕ. ಸಸ್ಯಾಹಾರ, ಬೆಳೆಯುತ್ತಿರುವ ಮಕ್ಕಳಲ್ಲಿ ಮತ್ತು ಆಲ್ಕೋಹಾಲ್ ಸೇವಿಸುವವರಲ್ಲಿ ವಿಟಮಿನ್-ಎ ಸತ್ವದ ಅಗತ್ಯ ಹೆಚ್ಚು.  

ವಿಟಮಿನ್–ಎ ಅಗತ್ಯ ವಯಸ್ಸಿನ ಮೇಲೆ ನಿರ್ಧರಿತವಾಗಿರುತ್ತದೆ. 14 ವರ್ಷ ದಾಟಿದವರಿಗೆ ದಿನವೊಂದಕ್ಕೆ 700- 900 ಮೈಕ್ರೊಗ್ರಾಂ ಬೇಕು. ಚಿಕ್ಕ ಮಕ್ಕಳಿಗೆ ಇದಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬೇಕಾಗಿರುತ್ತದೆ. ಹಾಲುಣಿಸುವ ತಾಯಂದಿರಿಗೆ 1200 ರಿಂದ 1300 ಮೈಕ್ರೊಗ್ರಾಂಗಳಷ್ಟು ಅಗತ್ಯವಿರುತ್ತದೆ.

ಸಸ್ಯಜನ್ಯ ಮತ್ತು ಮಾಂಸಜನ್ಯ ಆಹಾರಗಳಲ್ಲಿ ವಿಟಮಿನ್-ಎ ಇರುತ್ತದೆ. ಸೊಪ್ಪು, ಕ್ಯಾರೆಟ್, ಸಿಹಿಕುಂಬಳ, ಪಡುವಲಕಾಯಿ ಹೀರೆಕಾಯಿ, ಬಾಳೆಹಣ್ಣು, ಸೇಬು, ಮಾವು ಫರಂಗಿ ಮುಂತಾದ ಹಣ್ಣುಗಳಲ್ಲಿ, ಹಾಲು, ಮೊಸರು ಮುಂತಾದ ಡೈರಿ ಉತ್ಪನ್ನಗಳಲ್ಲಿ ವಿಟಮಿನ್-ಎ ಹೇರಳವಾಗಿರುತ್ತದೆ. ಸಾಲ್ಮನ್ ಮೀನುಗಳು ಮತ್ತು ಪ್ರಾಣಿಗಳ ಯಕೃತ್‍ಗಳಲ್ಲಿ ವಿಟಮಿನ್-ಎ ಹೇರಳವಾಗಿದೆ.

ಬೀಟಾ ಕೆರೋಟಿನ್ ಹೇರಳವಾಗಿರುವ ಪದಾರ್ಥ ತಿನ್ನುವವರಿಗೆ ಶ್ವಾಸಕೋಶದ ಕ್ಯಾನ್ಸರ್ ಮತ್ತು ವೃಷಣಗಳ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ. ವಿಟಮಿನ್-ಎ ನಮ್ಮ ದೇಹದ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ವಿಟಮಿನ್-ಎ ಕೊರತೆಯಿಂದ ಏನು ತೊಂದರೆ?

ವಿಟಮಿನ್-ಎ ನಿಮ್ಮ ದೃಷ್ಟಿಗೆ ಅತೀ ಅಗತ್ಯ. ವಿಟಮಿನ್ ಕೊರತೆಯಿಂದ ಉಂಟಾಗುವ ಮೊದಲ ತೊಂದರೆಯೇ ರಾತ್ರಿ ಅಂಧತ್ವ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದಿದ್ದಲ್ಲಿ ಪೂರ್ತಿ ಅಂಧತ್ವ ಉಂಟಾಗುತ್ತದೆ. ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ವಿಟಮಿನ್-ಎ ಕೊರತೆಯಿಂದ ಮಕ್ಕಳಲ್ಲಿ ಉಂಟಾಗುವ ಅಂಧತ್ವ ಬಹುದೊಡ್ಡ  ಸಮಸ್ಯೆ. ಇದೊಂದು ಸುಲಭವಾಗಿ ತಡೆಗಟ್ಟಬಹುದಾದ ರೋಗವಾಗಿದ್ದು, ಚಿಕಿತ್ಸೆಗೆ ವಿಶೇಷ ವೆಚ್ಚವೂ ಆಗುವುದಿಲ್ಲ. ಅದೇ ರೀತಿ ವಿಟಮಿನ್-ಎ ಕೊರತೆ ಇರುವ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆ ಜಾಸ್ತಿ ಇರುತ್ತದೆ.

ಬೆಳಕಿನ ತೀವ್ರತೆ ಕಡಿಮೆಯಾದಾಗ, ದೃಷ್ಟಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ವಿಟಮಿನ್-ಎ ಕೊರತೆಯಿಂದ ಉಂಟಾಗುತ್ತದೆ. ಮಂದ ಬೆಳಕಿನಲ್ಲಿ ಇಂತಹ ಮಕ್ಕಳಿಗೆ ವಸ್ತುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇಂತಹ ಮಕ್ಕಳು ಕತ್ತಲಿನಲ್ಲಿ ವಸ್ತುಗಳನ್ನು ಗುರುತಿಸಲು ಪರದಾಡುತ್ತಾರೆ. ಆದರೆ ಹಗಲು ಹೊತ್ತಿನಲ್ಲಿ ಅವರ ಕಣ್ಣಿನ ದೃಷ್ಟಿ ಸರಿಯಾಗಿರುತ್ತದೆ. ವಿಟಮಿನ್-ಎ ಕೊರತೆಯ ಮೊದಲ ಲಕ್ಷಣವೇ ರಾತ್ರಿಯ ಅಂಧತ್ವ. 

ರೋಡೊಪ್ಸಿನ್ ಎಂಬ ವರ್ಣವಸ್ತು ಮಂದ ಬೆಳಕಿನಲ್ಲಿ ವಸ್ತುಗಳನ್ನು ಗುರುತಿಸಲು ಅತೀ ಅಗತ್ಯ. ಇದು ಕಣ್ಣಿನ ರೆಟಿನಾದಲ್ಲಿ ಇರುತ್ತದೆ. ರೋಡೊಪ್ಸಿನ್ ಎಂಬ ವರ್ಣವಸ್ತು ವಿಟಮಿನ್-ಎ ಇದರ ಕ್ರಿಯಾತ್ಮಕ ಅಂಶವಾದ ರೆಟಿನಾಲ್ ಮತ್ತು ಓಪ್ಸಿನ್ ಎಂಬ ಪ್ರೋಟಿನ್‍ನ ಕೂಡುವಿಕೆಯಿಂದ ಉಂಟಾಗುತ್ತದೆ. ಆಹಾರದಲ್ಲಿ ವಿಟಮಿನ್-ಎ ಕೊರತೆ ಉಂಟಾದಲ್ಲಿ ರೆಟಿನಾಲ್ ಉತ್ಪಾದನೆ ಕುಂಠಿತವಾಗಿ ರೋಡೊಪ್ಸಿನ್ ವರ್ಣ ವಸ್ತುವಿನ ಉತ್ಪಾದನೆ ಉಂಟಾಗುವುದಿಲ್ಲ. ಈ ಕಾರಣದಿಂದ ಮಂದ ಬೆಳಕಿನಲ್ಲಿ ವಸ್ತುಗಳು ಕಾಣಿಸುವುದಿಲ್ಲ . ವಿಟಮಿನ್-ಎ ಇರುವ ಆಹಾರಗಳನ್ನು ಮಕ್ಕಳು ಹೇರಳವಾಗಿ ಸೇವಿಸಬೇಕು. ನೈಸರ್ಗಿಕವಾಗಿ ಸಿಗುವ ವಿಟಮಿನ್-ಎ ಹೇರಳವಾಗಿರುವ ಹಣ್ಣು ಹಂಪಲು ಮತ್ತು ಹಸಿ ತರಕಾರಿ ಸೇವಿಸಿ, ಇಂತಹ ಕಣ್ಣಿಗೆ ಬರುವ ದೃಷ್ಟಿ ತೊಂದರೆಗಳನ್ನು ಆರಂಭದಲ್ಲಿಯೇ ತಡೆಗಟ್ಟಬಹುದಾಗಿದೆ.

ವಿಟಮಿನ್-ಎ ಎಂಬುದು ಕೊಬ್ಬಿನಲ್ಲಿ ಕರಗುವಂತಹಾ ವಿಟಮಿನ್ ಆಗಿದ್ದು, ಹೆಚ್ಚಿನ ಎಲ್ಲಾ ಆಹಾರಗಳಲ್ಲಿ ಹೇರಳವಾಗಿ ಇರುತ್ತದೆ.  ವಿಟಮಿನ್-ಎ ಕೊರತೆಯಿಂದ ಬಳಲುತ್ತಿದ್ದಲ್ಲಿ ಸೂಕ್ತ ವೈದ್ಯರಿಂದ ಸರಿಯಾದ ಮಾರ್ಗದರ್ಶನ ಪಡೆದು ವಿಟಮಿನ್-ಎ ಪೂರಕ ಔಷಧಿಗಳನ್ನು ಸೇವಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು