ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರಂಗ: ಅಕ್ಷರ ದಾಮ್ಲೆ ಅವರ ಅಂಕಣ– ಅಸೂಯೆ ಯಾಕೆ?

ಪಕ್ಕದ ಮನೆಯ ಹೆಂಗಸಿಗೆ ದೇವರು ಎಲ್ಲಾ ಕೊಟ್ಟಿದ್ದಾರೆ. ಆದರೂ ಬೇರೆಯವರ ಬಗ್ಗೆ ಯಾವತ್ತೂ ಅಸೂಯೆ. ಯಾಕೆ ಹೀಗೆ?
ಅಕ್ಷರ ದಾಮ್ಲೆ
Published 21 ಜೂನ್ 2024, 23:10 IST
Last Updated 21 ಜೂನ್ 2024, 23:10 IST
ಅಕ್ಷರ ಗಾತ್ರ

ಪಕ್ಕದ ಮನೆಯ ಹೆಂಗಸಿಗೆ ದೇವರು ಎಲ್ಲಾ ಕೊಟ್ಟಿದ್ದಾರೆ. ಆದರೂ ಬೇರೆಯವರ ಬಗ್ಗೆ ಯಾವತ್ತೂ ಅಸೂಯೆ. ಯಾಕೆ ಹೀಗೆ?

ನಮ್ಮ ಸಮಾಜದಲ್ಲಿ ಎಲ್ಲಾ ವರ್ಗದ ಜನರಿದ್ದಾರೆ. ಪ್ರತಿಯೊಬ್ಬರಿಗೂ ಅವರವರದ್ದೇ ಆದಂತಹ ಜೀವನ ಶೈಲಿ ಇರುತ್ತದೆ. ಹಾಗೆಯೇ ತಮ್ಮದೇ ಆದಂತಹ ಸಮಸ್ಯೆಗಳೂ ಇರುತ್ತವೆ. ಆದರೆ, ಅನೇಕರಿಗೆ ಇರುವ ತುಡಿತ ಏನೆಂದರೆ, ತಾನು ಎಲ್ಲರಿಗಿಂತಲೂ ಶ್ರೇಷ್ಠರಾಗಿರಬೇಕು ಎಂಬುದು. ಈ ಸ್ಪರ್ಧೆಯ ಕಾರಣದಿಂದಾಗಿ ಎಷ್ಟೋ ಬಾರಿ ತಾನು ಎತ್ತರಕ್ಕೇರಬೇಕು ಎನ್ನುವ ಹಂಬಲದ ಜೊತೆಗೆ ಇತರರು ಕೆಳಕ್ಕೆ ಬೀಳಬೇಕು ಅಥವಾ ಅವರುಗಳು ಎತ್ತರಕ್ಕೆ ಏರುವುದನ್ನು ತಡೆಯಬೇಕು ಎನ್ನುವ ಮನೋಭಾವವೂ ಬಂದುಬಿಡುತ್ತದೆ. ಹಾಗಾಗಿ ತಮ್ಮ ಪಕ್ಕದಲ್ಲಿರುವವರು ಉತ್ತಮರಾದರೆ ನಮ್ಮ ಮನದಲ್ಲಿ ಅವರ ಬಗ್ಗೆ ಅಸೂಯೆ ಮೂಡುತ್ತದೆ. ಅಸಹನೆ ಮೂಡುತ್ತದೆ. ಹಾಗಾಗಿ ಅವರ ಕುರಿತು ಕೆಟ್ಟದ್ದನ್ನು ಮಾತನಾಡುವುದು, ಅಥವಾ ಅವರಿಗೆ ಕೆಡುಕನ್ನು ಬಯಸುವುದು ಹೀಗೆ ಅನೇಕ ಋಣಾತ್ಮಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ.

ಆದರೆ ಇಂತಹ ವ್ಯಕ್ತಿಗಳಿಗೆ ಅರ್ಥವಾಗದ ಕೆಲವು ವಿಚಾರಗಳು ಏನೆಂದರೆ, ನಾವು ಎಷ್ಟು ಶ್ರೇಷ್ಟರೆಂದು ಅಂದುಕೊಳ್ಳುತ್ತೇವೋ, ಅಷ್ಟೇ ಅಥವಾ ಅದನ್ನೂ ಮೀರಿಸುವ ಅನೇಕರಿರುತ್ತಾರೆ. ಅದು ಒಂದು ರೀತಿ, ಬೆಟ್ಟಗಳ ಸಾಲುಗಳ ಹಾಗೆ. ಒಂದು ಎತ್ತರವಾದ ಬೆಟ್ಟವನ್ನು ಹತ್ತಿದಾಗ ಮತ್ತೊಂದು ದೊಡ್ಡ ಬೆಟ್ಟ ಕಾಣಿಸುತ್ತದೆ. ಅದನ್ನು ಹತ್ತಿದಾಗ ಮಗದೊಂದು ಕಾಣಿಸುತ್ತದೆ. ಹಾಗಾಗಿ ನಮ್ಮ ಜೀವನದಲ್ಲಿ ನಮಗೆ ಏನೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಿದೆಯೋ, ಅಷ್ಟನ್ನು ಮಾಡಿಕೊಂಡು ಹೋದರೆ ಅದರಿಂದ ಸಿಗುವ ಸಂತುಷ್ಟಿಯೇ ಬೇರೆ. ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ, ನಾವು ನಮ್ಮ ಆಸುಪಾಸಿನಲ್ಲಿರುವವರನ್ನು ಮೇಲೇರದಂತೆ ತಡೆಯಬಹುದೇ ವಿನಃ ಎಲ್ಲರನ್ನೂ ತಡೆಯಲು ಸಾಧ್ಯವಿಲ್ಲವಲ್ಲಾ? ದೂರದಲ್ಲಿರುವ ಯಾರೋ ಒಬ್ಬರು ನಿಮಗಿಂತಲೂ ಮೇಲೆ ಏರುತ್ತಿರಬಹುದು ಅಥವಾ ಈಗಾಗಲೇ ಏರಿರಬಹುದು. ಹಾಗಿದ್ದ ಮೇಲೆ, ನಿಮ್ಮ ಪಕ್ಕದವರೇ ಏರಿದರೆ ಏನು ಸಮಸ್ಯೆ? ಬದಲಾಗಿ ಅದರಿಂದ ನಮಗೆ ಲಾಭವೇ ಜಾಸ್ತಿ. ಆದರೆ ಅದನ್ನು ನಾವು ಅರ್ಥಮಾಡಿಕೊಳ್ಳುವುದಿಲ್ಲ. ನಾವು ಸದೃಢವಾಗಿ ಬೆಳೆಯಬೇಕಾದರೆ, ನಮ್ಮ ಆಸುಪಾಸಿನಲ್ಲಿರುವವರೂ ಬೆಳೆಯಬೇಕು. ಆವಾಗಲೇ ಒಂದು ಸಮಾಜವಾಗಿ ನಮಗೆ ಬೆಳೆಯುವುದಕ್ಕೆ ಸಾಧ್ಯ. ಇನ್ನೊಬ್ಬರ ಕುರಿತು ಅಸೂಯೆ ಪಡುವ ಬದಲು ಅವರ ಏಳಿಗೆಯನ್ನು ಹರ್ಷಿಸಿದರೆ ಅದು ನಮ್ಮ ಏಳಿಗೆಗೂ ಧನಾತ್ಮಕ ಶಕ್ತಿಯನ್ನು ಕೊಡುತ್ತದೆ. ಅವೆಲ್ಲದಕ್ಕಿಂತಲೂ ಮಿಗಿಲಾಗಿ ಇತರರ ಬಗ್ಗೆ ಚಿಂತಿಸುವ ಬದಲು ನಾವೆಲ್ಲಿದ್ದೇವೆ ಅಂತ ಗಮನ ಹರಿಸಿದರೆ, ಇನ್ನೂ ಉತ್ತಮರಾಗಬಹುದೇನೋ!

ಅದನ್ನೇ ಡಿ.ವಿ.ಜಿ ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಹೇಳಿದ್ದಾರೆ:

ಅವರೆಷ್ಟು ಧನವಂತರ್, ಇವರಷ್ಟು ಬಲವಂತರ್|
ಅವರೆಷ್ಟು ಯಶವಂತರ್ ಎನ್ನುವ ಕರುಬಿನಲಿ ||
ಭವಿಕ, ನಿನಗೆಷ್ಟಿಹುದೋ ಮರೆತು ನೀಂ ಕೊರಗುವುದು!
ಶಿವನಿಗೆ ಕೃತಜ್ಞತೆಯೇ? ಮಂಕುತಿಮ್ಮ!


ಅಕ್ಷರ ದಾಮ್ಲೆ
ಮನಃಶಾಸ್ತ್ರಜ್ಞ ಮತ್ತು ಸಂಸ್ಥಾಪಕ
ಮನೋಸಂವಾದ
www.manosamvaada.com

Manjunath C. Bhadrashetti
Manjunath C. Bhadrashetti

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT