ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ, ನೀ ಸೂಪರ್‌!

Last Updated 10 ಮೇ 2019, 19:31 IST
ಅಕ್ಷರ ಗಾತ್ರ

ಅದೊಂದು ಪ್ರಶಸ್ತಿ ಪ್ರದಾನ ಸಮಾರಂಭ.ಪುರಸ್ಕೃತ ವಿದ್ಯಾರ್ಥಿಗಳು,ಪೋಷಕರು.. ಸಭಾಂಗಣದ ಭರ್ತಿ.

‘ಇಂದಿನ ನಿಜವಾದ ಜಯಶಾಲಿಗಳು ಫಲಕ ಗಳಿಸಿದ ವಿದ್ಯಾರ್ಥಿಗಳಲ್ಲ ..’ ಅತಿಥಿಯ ಮಾತಿನ ನಡುವೆ ಒಂದು ಕ್ಷಣ ಮೌನ.

‘ಅವರ ಹಿಂದೆ ಎಲೆಮರೆ ಕಾಯಾಗಿ ನಿಂತಿರುವ ಆ ಮಕ್ಕಳ ಅಮ್ಮಂದಿರು ..’

ಸಭೆಯಲ್ಲಿ ಚಪ್ಪಾಳೆಯ ಸುರಿಮಳೆ!

ಇದು ಖಾದ್ಯ ತೈಲವೊಂದರ ಜಾಹೀರಾತಿನ ದೃಶ್ಯಾವಳಿ

ಹೌದು, ಮಹಿಳೆಯರ ಸಾಧನೆ ಕಲ್ಪನೆಗೂ ನಿಲುಕದ್ದು. ಗಳಿಸಿದ ಶಿಕ್ಷಣ, ಆಯ್ಕೆ ಮಾಡಿಕೊಂಡ ಉದ್ಯೋಗ ಎಲ್ಲದರಲ್ಲೂ ಶಕ್ತಿ ಮೀರಿ ಸಾಧನೆ ಮಾಡುವ ಅದಮ್ಯ ಉತ್ಸಾಹ. ಎಷ್ಟೋ ಕ್ಷೇತ್ರದಲ್ಲಿ ಪುರುಷರನ್ನೂ ಮೀರಿಸಿ ಮುನ್ನಡೆಯುವ ಗುರಿ. ಏನೇ ಕೆಲಸ ಮಾಡಲಿ ಬದ್ಧತೆ, ಶಿಸ್ತು ಎಲ್ಲವೂ.

ಈಗ ಸ್ವಲ್ಪ ಈಚೆ ಬನ್ನಿ. ಅಂತಹ ಸಾಧನೆ ಮಾಡಿದ ಯುವತಿಯರು ಎಲ್ಲಿ ಹೋದರು ಈಗ ಎಂದು ಒಮ್ಮೆ ರಿಯಲಿಟಿ ಚೆಕ್‌ ಮಾಡಿ. ಮದುವೆ ಮಾಡಿಕೊಂಡರು; ಮಕ್ಕಳಾದವು. ಅವರೀಗ ಅಮ್ಮಂದಿರು. ಅಮ್ಮಂದಿರೆಂದರೆ ಭಿನ್ನವಾಗಿ ನಿಲ್ಲುವವರು. ಅವರ ಆದ್ಯತೆ ಎಂದರೆ ಮೊದಲು ಮಕ್ಕಳು, ಆಮೇಲೆ ಪತಿ, ನಂತರ ಅತ್ತೆ– ಮಾವಂದಿರು.. ಕೊನೆಗೆ ಉದ್ಯೋಗ. ನಿಜ,ಅಮ್ಮ ಎನ್ನುವ ಈ ಎರಡಕ್ಷರದ ಆಳ- ಅಗಲ ಅಳತೆಗೆ ಮೀರಿದ್ದು.

ತ್ಯಾಗಮಯಿ ಅಮ್ಮಂದಿರು

ನಿತ್ಯದ ಕೆಲಸ ಕಾರ್ಯ ಜಂಜಾಟಕ್ಕೆ ತಿರುಗಿದಾಗ ಕೈತುಂಬ ಸಂಬಳ ತರುವ ಉದ್ಯೋಗವನ್ನಾದರೂ ಬಿಟ್ಟಾರು, ಅದರಿಂದ ಖರೀದಿಸಬಹುದಾದ ಆಧುನಿಕ ಸೌಕರ್ಯಗಳನ್ನಾದರೂ ತ್ಯಜಿಸಿಯಾರು.. ಮಕ್ಕಳು -ಅವುಗಳ ಕ್ಷೇಮಪಾಲನೆಗಾಗಿಎಂತಹರಾಜಿಗೂ ಸಿದ್ಧ. ನೌಕರಿ, ಪ್ರಮೋಷನ್, ವಿದೇಶ ಪ್ರವಾಸಗಳ ಆಮಿಷ ಎಲ್ಲವೂಹಿಂದಕ್ಕೆ ಸರಿದು ಮಗುವಿನ ಪೋಷಣೆಯೊಂದೇ ಅವಳ ಗುರಿ. ಆದರೆ ಮಗುವನ್ನು ನೋಡಿಕೊಳ್ಳುವ, ಅದನ್ನು ಬೆಳೆಸಿ ಭವಿಷ್ಯದಲ್ಲಿ ಯೋಗ್ಯ ವ್ಯಕ್ತಿಯನ್ನಾಗಿ ಮಾಡುವ ಕರ್ತವ್ಯದಿಂದ ಬಹಿರ್ಮುಖವಾಗುವುದು ಮಾತ್ರ ಯೋಚನೆಗೂ ನಿಲುಕದ್ದು.

ಅಂದರೆ ತಾಯ್ತನವೇ ಮುಂಚೂಣಿಯಲ್ಲಿ ನಿಲ್ಲುವಂತಹದ್ದು. ಇದು ನಮ್ಮ ದೇಶದಲ್ಲಿ ಸಾವಿರಾರು ಅಲ್ಲ, ಲಕ್ಷಾಂತರ ತಾಯಂದಿರ ಕತೆ. ಬೇಸರವನ್ನು ಹಿಂದಕ್ಕೆ ತಳ್ಳಿ ಮಗುವಿನ ಮೇಲೆ ಪ್ರೀತಿಯ ಮಳೆ ಸುರಿಸುತ್ತ ತಾಯ್ತನದ ಸುಖವನ್ನು ಅನುಭವಿಸುವುದರ ಮುಂದೆ ಉದ್ಯೋಗ, ಹಣ ನಗಣ್ಯ ಎಂದು ಕನಸಿಗೆ ಕತ್ತರಿ ಹಾಕಿದವರು.

ಕೆಲವೇ ವರ್ಷಗಳು, ಮಕ್ಕಳು ಬೆಳೆದು, ಶಿಕ್ಷಣ ಮುಗಿಸಿ, ಉದ್ಯೋಗ ಹುಡುಕಿಕೊಂಡು, ಸಂಗಾತಿಯನ್ನೂ ಪಡೆದುಕೊಂಡು ರೆಕ್ಕೆ ಅಗಲಿಸಿ ಹಾರಿ ಹೋಗಲು; ಗಂಡ ಮನೆ, ಕಾರು ಎಂದು ಇಎಂಐ ಕಟ್ಟಲು ಹೋರಾಡುತ್ತ, ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತ ಇರಲು.. ಅಮ್ಮ ತನ್ನ ಶಿಕ್ಷಣ, ತ್ಯಜಿಸಿದ ಉದ್ಯೋಗ, ಅಂದಕಾಲತ್ತಿನ ಸಾಧನೆಯನ್ನು ನೆನೆಯುತ್ತ ಕೂರಬೇಕಾಗುತ್ತದೆ.

ಅಮ್ಮನ ರೆಕ್ಕೆಯನ್ನು ಕತ್ತರಿಸಿದವರಾರು? ಯಾರೂ ಅಲ್ಲ, ಸ್ವತಃ ಆಕೆಯೇ!

ಮಿಲೆನಿಯಲ್‌ ಅಮ್ಮಂದಿರ ಯುಗ

ಈಗ ಕೊಂಚ ಮಿಲೆನಿಯಲ್‌ ಅಮ್ಮಂದಿರ ಪ್ರವರ ಕೇಳೋಣ.

ಇಂದು ತಾಯ್ತನವೆಂದರೆ ಅತ್ಯಂತ ಸವಾಲಿನದ್ದು. ನಿತ್ಯ ಜಂಜಾಟವಲ್ಲ, ಅದು ಯಶಸ್ವಿ ಹೋರಾಟ. ಅಂಗೈಯಲ್ಲಿರುವ ಆರ್ಥಿಕ ಸ್ವಾತಂತ್ರ್ಯ, ಪ್ರಪಂಚವನ್ನೇ ಕಿರಿದು ಮಾಡಿದ ಸಂಪರ್ಕ ಕ್ರಾಂತಿ, ತಂತ್ರಜ್ಞಾನದಲ್ಲಿ ಕೌಶಲ.. ಇವೆಲ್ಲವೂ ಮಗುವನ್ನು ಬೆಳೆಸಲು ಸಾಕಷ್ಟು ಬಲ ನೀಡಿವೆ. ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ, ಮಗು ಹುಟ್ಟುವ ಮೊದಲೇ ಪೇರೆಂಟಿಂಗ್‌ ಕೌಶಲದ ಬಗ್ಗೆ ಆನ್‌ಲೈನ್‌ ತರಬೇತಿ, ಮಗುವಿನ ಶಾಲೆ, ಉಡುಪು, ಆಟಿಕೆ, ತಾನು ಕಚೇರಿಗೆ ಹೋದಾಗ ನೋಡಿಕೊಳ್ಳಲು ಕ್ರಶ್‌.. ಎಲ್ಲವನ್ನೂ ಆನ್‌ಲೈನ್‌ನಲ್ಲಿ ಹುಡುಕಾಡಿ ಪಕ್ಕಾ ಮಾಡುವಷ್ಟು ಕುಶಲರು. ಕೇವಲ ಉದ್ಯೋಗಸ್ಥ ಯುವತಿ ಮಾತ್ರವಲ್ಲ, ಮನೆಯಲ್ಲಿರುವ ಗೃಹಿಣಿ ಕೂಡ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಮಕ್ಕಳನ್ನು ತಯಾರು ಮಾಡುವಲ್ಲಿ ಅಹರ್ನಿಶಿ ದುಡಿಯುತ್ತಾಳೆ. ತನ್ನ ಮಗು ಹೆಚ್ಚು ವಿದ್ಯಾವಂತ ಮಾತ್ರವಲ್ಲ, ಬದುಕಿಗೆ ಬೇಕಾದ ಕೌಶಲ ಕಲಿಯಬೇಕೆಂದು ಏಗುತ್ತಾಳೆ.

ಕೇವಲ ಮಹಾನಗರ ಮಾತ್ರವಲ್ಲ, ಸಣ್ಣ ಪಟ್ಟಣಗಳಲ್ಲಿ ಕೂಡ ತನ್ನ ಮಗು ಡಾನ್ಸ್‌, ಸಂಗೀತ, ಕರಾಟೆ, ಕಂಪ್ಯೂಟರ್‌, ಟ್ಯೂಷನ್‌.. ಹೀಗೆ ಕಲಿಕೆಯಲ್ಲಿ ಮುಂದಿರಬೇಕೆಂದು ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಸುತ್ತುವವಳು ನಮ್ಮ ಸೂಪರ್‌ ಮಾಮ್‌. ಇದಕ್ಕೆ ತಂತ್ರಜ್ಞಾನ, ಸಾಮಾಜಿಕ ಜಾಲತಾಣ, ಹೆಚ್ಚಿರುವ ಸಂಪರ್ಕ ಜಾಲ ಎಲ್ಲವೂ ನೆರವಿಗೆ ನಿಂತಿವೆ. ಕಷ್ಟವಾದರೂ ಸರಿ, ಹೋರಾಟ ಮಾಡಿಯಾದರೂ ಓಕೆ, ಮಗುವನ್ನು ಒಂದು ಒಳ್ಳೆಯ ಸ್ಥಾನಕ್ಕೆ ತಂದು ನಿಲ್ಲಿಸಬೇಕೆಂಬ ಛಲ ಇಂದಿನ ಈ ಮಿಲೆನಿಯಲ್‌ ತಾಯಂದಿರಲ್ಲಿ ಕಾಣಬಹುದು. ಈ ದಾರಿಯಲ್ಲಿ ಕಲ್ಲುಮುಳ್ಳುಗಳೂ ಇವೆ. ಆದರೆ ತಾಯ್ತನದ ಮುಂದೆ ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ಹೋರಾಟದ ಮನೋಭಾವವೂ ಇದೆ.

ಸ್ವಂತ ಹವ್ಯಾಸಕ್ಕೂ ಆದ್ಯತೆ

ಆದರೂ ತನ್ನ ಸ್ವಂತ ಹವ್ಯಾಸ, ಕೆಲಸ ಕಾರ್ಯಗಳನ್ನು ಕಡೆಗಣಿಸಿ ತ್ಯಾಗಮಯಿ ಎನಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಮಗುವಿಗೆ ಉಡುಪು ಕೊಳ್ಳುವಾಗ, ತನಗೊಂದು ಉಡುಪು, ಸೀರೆ ಖರೀದಿ. ಮಕ್ಕಳ ಹೋಂವರ್ಕ್‌ಗೆ ಸಹಾಯ ಮಾಡುವುದರ ಜೊತೆಗೆ ಮಧ್ಯೆ ಬಿಡುವು ಮಾಡಿಕೊಂಡು ತನ್ನ ಇಷ್ಟದ ಪುಸ್ತಕದ ಓದು, ಸಿನಿಮಾ ವೀಕ್ಷಣೆ. ಬ್ಯೂಟಿ ಪಾರ್ಲರ್‌ಗೆ ಭೇಟಿ. ಹೀಗೆ ಸ್ವಂತ ಹವ್ಯಾಸಗಳಿಗೂ ಆದ್ಯತೆ.

ಉದ್ಯೋಗವನ್ನೂ ತೊರೆಯದೆ, ಮಗುವಿನ ಏಳ್ಗೆಯನ್ನೂ ಎತ್ತರಕ್ಕೇರಿಸುತ್ತ, ಆಧುನಿಕ ಬದುಕಿನ ಹೊಸ ಬಗೆಯ ಸವಾಲುಗಳನ್ನು ಎದುರಿಸುತ್ತ ಸಾಗಿರುವ ಆಕೆ ನಿಜಕ್ಕೂ ಸೂಪರ್‌ ಮಾಮ್‌!

***

ಹವ್ಯಾಸ ರೂಢಿಸಿಕೊಳ್ಳಿ

ಮಕ್ಕಳಿಗಾಗಿ ತ್ಯಾಗ ಮಾಡಿದ ಅಮ್ಮಂದಿರು ಗತಕಾಲ ನೆನೆಯುತ್ತ ಕುಗ್ಗುವ ಅವಶ್ಯಕತೆ ಇಲ್ಲ. ವಯಸ್ಸಿನ ಹಂಗಿಲ್ಲದೇ ಏನಾದರೂ ಹೊಸದನ್ನು ಕಲಿಯಬಹುದು. ಅದನ್ನೇ ಸಣ್ಣ ಉದ್ಯಮವನ್ನಾಗಿ ಬದಲಾಯಿಸಿಕೊಂಡು ಬೆಳೆಯಬಹುದು. ಸಮಾಜಕ್ಕೆ ಒಳಿತನ್ನುಂಟು ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಬೀದಿ ಮಕ್ಕಳಿಗೆ ಪಾಠ ಮಾಡಬಹುದು, ಕೌಶಲವನ್ನು ಇತರರಿಗೆ ಹಂಚಬಹುದು. ಬ್ಲಾಗ್‌ ತೆರೆದು ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಬಹುದು. ಪುಸ್ತಕಗಳನ್ನು ಓದಿ. ಹೊಲಿಗೆ, ಕಸೂತಿ, ಸಂಗೀತ ಮೊದಲಾದ ಹವ್ಯಾಸ ಬೆಳೆಸಿಕೊಳ್ಳಿ. ವ್ಯಾಯಾಮ ಮಾಡಿ. ವಾಕಿಂಗ್‌ ಮಾಡಿ. ಯೋಗ ತರಗತಿ ಸೇರಿ.

**

* ಗುರಿಯನ್ನು ಸಾಧಿಸಲು ಯತ್ನಿಸಿ, ಆದರೆ ಸುತ್ತ ಇರುವವರ ಜೊತೆ ಸ್ಪರ್ಧೆ ಬೇಡ

* ಮಗುವಿಗೆ ಯಾವುದು ಒಳಿತು, ಯಾವುದು ಕೆಡುಕು ಎಂಬುದರ ಮೇಲೆ ಗಮನವಿರಲಿ

* ಮಗುವಿನ ಮೇಲೆ ಒತ್ತಡ ಹೇರಬೇಡಿ.

* ಟೀಕೆಗಳಿಗೆ ಕುಗ್ಗಬೇಡಿ. ಅದನ್ನು ಧನಾತ್ಮಕವಾಗಿ ಸ್ವೀಕರಿಸಿ.

* ಸಮಯ ಬಂದಾಗ ಮಗುವಿನ ಅಜ್ಜ– ಅಜ್ಜಿಯರ ನೆರವು ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT