ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ತನದ ತಳಮಳವೇಕೆ?

Last Updated 10 ಮೇ 2019, 19:30 IST
ಅಕ್ಷರ ಗಾತ್ರ

ತಾಯ್ತನ ಎಂಬುದು ಅವರ್ಣನೀಯ ಅನುಭವ. ಅದನ್ನು ಅನುಭವಿಸಿಯೇ ತಿಳಿಯಬೇಕು. ಮಗುವಿಗೆ ಜನ್ಮ ನೀಡಿ ಅದನ್ನು ಬೆಳೆಸುವ ಪ್ರಕ್ರಿಯೆ ಕುತೂಹಲ, ಖುಷಿಯ ವಿಷಯವಾದರೂ ಅದರಲ್ಲಿ ಕೂಡ ಹಲವು ಸಮಸ್ಯೆಗಳು ಅಡಕವಾಗಿವೆ. ಮಗುವಿನ ಮೇಲೆ ಎಲ್ಲಾ ಸಮಯವನ್ನು ವ್ಯಯಿಸಿ ತಮ್ಮ ಆರೋಗ್ಯವನ್ನು ಕಡೆಗಣಿಸುವ ತಾಯಂದಿರು ಒಂದು ಕಡೆಯಾದರೆ, ನೈಸರ್ಗಿಕವಾಗಿಯೇ ಕೆಲವು ತೊಂದರೆಗಳು ಈ ಸಂದರ್ಭದಲ್ಲಿ ಕಾಡುತ್ತವೆ.

ಮಹಿಳೆಯರು ಭಾವನೆಗಳ ವಿಷಯ ಬಂದಾಗ ಪುರುಷರಿಗಿಂತ ಎರಡು ಪಟ್ಟು ಅದರ ಪ್ರಭಾವಕ್ಕೆ ಒಳಗಾಗುತ್ತಾರೆ. ಭಾವನೆಗಳ ಕುಸಿತದಿಂದ ಸಂಭವಿಸುವ ಸಮಸ್ಯೆಗಳು ಹಲವಾರು. ಗಾಯದ ಮೇಲೆ ಬರೆ ಎಳೆಯುವಂತೆ ಸಮಸ್ಯೆಯ ಆಳವನ್ನು ಹೆಚ್ಚಿಸುವುದು ಹಾರ್ಮೋನ್‌ ಏರಿಳಿತ. ಗರ್ಭಿಣಿಯರು, ಚೊಚ್ಚಲ ತಾಯಂದಿರು, ಬಾಣಂತಿಯರು ಇಂತಹ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ಪ್ರಕರಣಗಳು ಜಾಸ್ತಿ. ಇಂತಹ ಸಮಸ್ಯೆಗಳಲ್ಲಿ ಕೆಲವು ಅಂತಹ ಗಂಭೀರ ಪರಿಣಾಮಗಳನ್ನು ಬೀರದಿದ್ದರೂ ಕಡೆಗಣಿಸುವುದು ಸರಿಯಲ್ಲ. ಸೂಕ್ಷ್ಮವಾಗಿ ಅವಲೋಕಿಸಿ, ತಕ್ಷಣ ತಜ್ಞರ ಸಲಹೆಯನ್ನು ಪಡೆಯುವುದು ಒಳಿತು.

ಗರ್ಭ ಧರಿಸುವ ಮುನ್ನ ಆತಂಕ (ಆ್ಯಂಕ್ಸೈಟಿ)

ಗರ್ಭಧಾರಣೆ ವಿಫಲವಾದಾಗ ಆತಂಕದ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಿರಂತರ ಭಯ, ಯಾವಾಗಲೂ ಕಿರಿಕಿರಿಯಾಗುವುದು, ಮತ್ತೆ ಮತ್ತೆ ಗರ್ಭ ಧಾರಣೆಯ ಚಿಹ್ನೆಗಳನ್ನು ಪರೀಕ್ಷಿಸುವುದು ಮೊದಲಾದ ಸಮಸ್ಯೆಗಳು ತಲೆದೋರಬಹುದು. ಇದರಿಂದ ಒತ್ತಡದ ಹಾರ್ಮೋನ್‌ ಮಟ್ಟ ಹೆಚ್ಚಾಗುವುದಲ್ಲದೇ ಗರ್ಭ ಧರಿಸಲು ಇದು ತಡೆಯೊಡ್ಡುತ್ತದೆ.

ಐವಿಎಫ್‌ (ಪ್ರನಾಳ ಶಿಶು ಪಡೆಯಲು ಚಿಕಿತ್ಸೆ)

ಈ ಚಿಕಿತ್ಸೆ ಪಡೆಯುವಾಗ ವಿವಿಧ ಬಗೆಯ ಭಾವನೆಗಳ ಏರುಪೇರು ಹಾಗೂ ಆತಂಕದಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಚಿಕಿತ್ಸೆಗೆ ನೀಡುವ ಚುಚ್ಚುಮದ್ದಿನ ನೋವು, ಹೆಚ್ಚುವರಿಯಾಗಿ ನೀಡುವ ಹಾರ್ಮೋನ್‌ ಮಾತ್ರೆಗಳು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ಇಂತಹ ಚಿಕಿತ್ಸೆ ಪಡೆಯುವ ಯುವತಿಯರಿಗೆ ಕುಟುಂಬದವರ ನಿರಂತರ ಬೆಂಬಲ ಅಗತ್ಯ.

ಗರ್ಭಿಣಿಯರಲ್ಲಿ ಖಿನ್ನತೆ, ಆತಂಕ

ಗರ್ಭಿಣಿಯರಲ್ಲಿ ಭಾವನೆಗಳು ಕುಸಿದು ವಿನಾಕಾರಣ ದುಃಖಿತರಾಗುವುದು ಅಥವಾ ಭಯ ತಲೆದೋರುವುದು ಸಾಮಾನ್ಯ. ಪರೀಕ್ಷೆಗೆ ತಯಾರಿ ನಡೆಸುವಾಗ ಅನುಭವಿಸುವ ಆತಂಕದಂತಹ ಲಕ್ಷಣಗಳೇ ಗರ್ಭಿಣಿಯಾದಾಗಲೂ ತಲೆದೋರಬಹುದು. ಆದರೆ ಇಂತಹ ಸಮಸ್ಯೆಗಳು ನಿದ್ರೆ, ಹಸಿವು ಅಥವಾ ಸಾಮಾಜಿಕ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಶುರುವಾದರೆ ಚಿಕಿತ್ಸೆ ಅವಶ್ಯಕ.

ಹೆರಿಗೆ ನಂತರದ ವಿಷಣ್ಣತೆ

ಮಗು ಜನಿಸಿದ ನಂತರ ತಾಯಿಗೆ ಸಂತಸವಾಗುವುದು ಸಹಜ. ಆದರೆ ಶೇ 70–80ರಷ್ಟು ತಾಯಂದಿರಲ್ಲಿ ಭಾವೋದ್ವೇಗ ಅಥವಾ ಭಾವನಾರಹಿತ ಮನಸ್ಥಿತಿ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಹೆರಿಗೆಯಾದ 3–7 ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಇದು ಸಹಜವಾದರೂ, ಇಂತಹ ಭಾವೋದ್ವೇಗ ಅಥವಾ ನಿರುತ್ಸಾಹ ಖಿನ್ನತೆಗೆ ತಿರುಗಿದರೆ ಅಪಾಯ.
ವಿಷಣ್ಣತೆ ಅಥವಾ ಹತಾಶ ಮನೋಭಾವ ಕೆಲವೇ ದಿನಗಳಿರುವಂಥದ್ದು. ಆದರೆ ಖಿನ್ನತೆ 2–3 ವಾರಗಳಿಗಿಂತಲೂ ಹೆಚ್ಚು ಕಾಲ ಇರಬಹುದು. ಹೀಗಾಗಿ ತಜ್ಞರ ಮೊರೆ ಹೋಗುವುದು ಒಳಿತು.

ಬಾಣಂತಿ ಮನೋವಿಕಾರ

ಬಾಣಂತಿ ಬಾಹ್ಯ ಪ್ರಪಂಚ ಅಥವಾ ವಾಸ್ತವದ ಜೊತೆ ನಿಧಾನವಾಗಿ ಸಂಪರ್ಕವನ್ನು ಕಳಚಿಕೊಂಡು ತನಗೆ ತಾನೇ ಅಪಾಯ ತಂದುಕೊಳ್ಳಬಹುದು. ಮೆದುಳಿನಲ್ಲಾಗುವ ನ್ಯೂರೊಜೀವರಾಸಾಯನಿಕಗಳ ಬದಲಾವಣೆಯಿಂದ ಈ ರೀತಿ ಆಗಬಹುದು. ಇದಕ್ಕೆ ಸನ್ನಿಪಾತವೆಂದೂ ಕರೆಯುವುದು ರೂಢಿ.

ಅಪರಾಧಿ ಮನೋಭಾವ

ಮಗುವಾದ ನಂತರ ಉದ್ಯೋಗಕ್ಕೆ ಮರಳುವ ಯುವತಿಯರಲ್ಲಿ ಅಪರಾಧಿ ಮನೋಭಾವ ಕಾಡಬಹುದು. ಮಗುವನ್ನು ಮನೆಯಲ್ಲಿ ಅಥವಾ ಕ್ರಶ್‌ನಲ್ಲಿ ಬಿಟ್ಟು ಬಂದಿರುವುದಕ್ಕೆ ತಾನೊಬ್ಬಳು ಕೆಟ್ಟ ತಾಯಿ ಎಂಬಂತಹ ಭಾವನೆ ಉದ್ಭವಿಸಬಹುದು. ಬೇರೆ ತಾಯಂದಿರನ್ನು ನೋಡಿ ಈ ಭಾವನೆಗಳನ್ನು ಬಿಡುವುದು ಒಳಿತು.

ಖಾಲಿತನ

ಮಕ್ಕಳು ಬೆಳೆದು ಶಾಲೆ, ಕಾಲೇಜಿಗೆ ಹೋಗಲಾರಂಭಿಸಿದಾಗ ತಾಯಂದಿರಿಗೆ ಸ್ವಲ್ಪ ಬಿಡುವು ಸಿಗುತ್ತದೆ. ಆ ಸಂರ್ಭದಲ್ಲಿ ಈ ಹಂತಕ್ಕೆ ಒಗ್ಗಿಕೊಳ್ಳುವುದು ಕೆಲವರಿಗೆ ಕಷ್ಟವಾಗುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಕುಟುಂಬದವರ ಜೊತೆ ನಿರಂತರ ಸಂಪರ್ಕದಲ್ಲಿರಿ.

(ಲೇಖಕರು ಅಮೆರಿಕದ ಸಿನ್ಸಿನಾಟಿಯಲ್ಲಿ ವೈದ್ಯರು)

***

* ಮಾನಸಿಕ ಒತ್ತಡ ನಿರ್ವಹಣೆಗೆ ಯೋಗ, ಪ್ರಾಣಾಯಾಮ, ಧ್ಯಾನ ಮಾಡಿ.

* ಲಕ್ಷಣಗಳು ಕಾಣಿಸಿಕೊಂಡಾಗ ಕುಟುಂಬದವರು ನಿಗಾ ಇಡುವುದು ಒಳಿತು.

* ಸಮಸ್ಯೆ ಉಲ್ಬಣಿಸುವ ಮುನ್ನವೇ ವೈದ್ಯರ ನೆರವು ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT