ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು

ಸೌಮ್ಯರಾಜಗುರು
Published 3 ಮೇ 2024, 23:30 IST
Last Updated 3 ಮೇ 2024, 23:30 IST
ಅಕ್ಷರ ಗಾತ್ರ
ಅಕ್ಷಯ ತದಿಗೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗೆಬಗೆಯ ಸರ ವಿಶೇಷಗಳ ಮಾಹಿತಿಯನ್ನು ಸೌಮ್ಯರಾಜಗುರು ಇಲ್ಲಿ ನೀಡಿದ್ದಾರೆ.

ಮೂಗುತಿಯಾದರೂ ಇರಲಿ, ಸಣ್ಣದೊಂದು ಸ್ಟಡ್ಸ್‌, ಕಿವಿಮುತ್ತಾದರೂ ಇರಲಿ, ಚಿಕ್ಕದೊಂದು ನಗ ಮನೆಗೆ ಬರಲಿ. ಅಕ್ಷಯ ತೃತೀಯದ ಆಕರ್ಷಣೆಯೇ ಅಂಥದ್ದು. ಅಂದು ಏನೇ ಮಾಡಿದರೂ ಅದು ಅಕ್ಷಯವಾಗುತ್ತದೆ ಎನ್ನುವುದೊಂದು ನಂಬಿಕೆ.

ಅದಕ್ಕೇ ಉತ್ತರ ಕರ್ನಾಟಕದಲ್ಲಿ ಹೋಳಿಗೆ ಶೀಕರಣಿ ಮಾಡಿ ಉಣ್ಣುತ್ತಾರೆ. ಬದುಕು ಸವೆಸುವಾಗ ಹೀಗೆ ಸವಿಯಾಗಿರಲಿ. ಸವಿಯಾಗಿರುವುದು ಸಿಹಿಯಾಗಿರುವುದು ಅಕ್ಷಯವಾಗಲಿ ಎಂದು ಬಯಸುತ್ತಾರೆ. ಚಿನ್ನ ಕೊಳ್ಳುವುದು ಕಡ್ಡಾಯವಾಗಿದ್ದು ಯಾವಾಗಿನಿಂದ ಎಂಬುದು ನಿಖರವಾಗಿ ಹೇಳಲಾಗದು. ಆದರೆ ಚಿನ್ನ ಬೆಳ್ಳಿಯನ್ನು ಇಂದು ಕೊಳ್ಳಲಾಗದಿದ್ದರೂ ಜಗುಲಿಯ ಮೇಲಿಟ್ಟು, ಪೂಜಿಸಿ, ಎತ್ತಿಡುವುದೂ ಇದೆ. ಹೊನ್ನ ಉಂಗುರದೊಳಗೆ ಮುತ್ತಿದ್ದು, ಮುತ್ತಿನುಂಗುರ ಧರಿಸಿದರೆ ಪ್ರೀತಿ ಅಕ್ಷಯ ಎಂಬುದೂ ಇಂಥದ್ದೇ ಒಂದು ಪ್ರತೀತಿ. ಆರತಿ ಎತ್ತುವಾಗ, ಕಳಸ ಹಿಡಿಯುವಾಗ ಮುತ್ತಿನುಂಗುರವಿರಲಿ ಮುತ್ತೈದೆಗೆ ಎಂದು ಹಾಡಿಯೂ ಹೇಳಿದ್ದಾರೆ ಜನಪದರು.

ಯುಗಾದಿ ಮುಗಿದು, ವಾರ್ಷಿಕ ವಹಿಗಳೆಲ್ಲ ಒಂದು ಹಂತಕ್ಕೆ ಬಂದಾಗ, ಉಳಿತಾಯದ ಹಣದಲ್ಲಿ ಒಲವಿನ ಮಡದಿಯ ವಡ್ಯಾಣಕ್ಕೆಷ್ಟು? ವಾತ್ಸಲ್ಯದ ಮಗಳ ಮದುವೆಗೆ ಕೂಡಿಡಲು ಬೆಳ್ಳಿಯೆಷ್ಟು ಎಂದು ಲೆಕ್ಕಾಚಾರ ಹಾಕುವ ಪದ್ಧತಿ ಈಗಲೂ ಕೃಷಿಕರಲ್ಲಿದೆ. ಹಬ್ಬಕ್ಕೆ ಒಂದೊಂದು ಹೂ ಕೊಂಡು, ಅಥವಾ ಪದಕಗಳನ್ನು ಕೊಳ್ಳುತ್ತ ಕೂಡಿಡುತ್ತಾರೆ. ಅವುಗಳನ್ನು ಕೂಡಿಡುತ್ತ ಪದಕದ ಹಾರ ಮಾಡಿಕೊಳ್ಳುವ ಪದ್ಧತಿ ಹೆಂಗಳೆಯರ ಉಳಿತಾಯದ ದ್ಯೂತಕವಾಗಿ ಈಗಲೂ ಹೊಳೆಯುತ್ತವೆ. ಬೋರಮಾಳ ಎಂದು ಕರೆಯುವ ಬುಲೆಟ್‌ ಥರದ ಮಣಿಗಳ ಸರ, ಈಗಲೂ ಜನಪ್ರಿಯ. ಬೇರೆಬೇರೆ ಆಕಾರದಲ್ಲಿ ಬರುವ ಈ ಸರಗಳಲ್ಲಿ ಗಟ್ಟಿ ಗುಂಡುಗಳಿದ್ದರೆ ಗೌಡಶ್ಯಾನಿಯ ಸರವೆಂದು ಕರೆಯುತ್ತಿದ್ದರು. ಒಳಗೆ ಅರಗು ತುಂಬಿ, ಬಂಗಾರದ ಹೊದಿಕೆಯಿದ್ದರೆ ತೋರುಣಕಿಯ ಬೋರಮಾಳ ಎನ್ನುತ್ತಿದ್ದರು. 

ಹೆಂಗಳೆಯರೆಲ್ಲ ಮೋಹಿಸುವ ಇನ್ನೊಂದು ಬಗೆಯಸರವೆಂದರೆ ಮೋಹನಮಾಲಾ ಗುಂಡು, ಈ ಗುಂಡಿನ ಸರವಿಲ್ಲದಿದ್ದರೆ ಕೊರಳು ಖಾಲಿ ಖಾಲಿ ಎಂದು ದುಃಖಿಸುತ್ತಿದ್ದರಂತೆ. ಅಷ್ಟು ಮೋಹ ಹುಟ್ಟಿಸುವ ಈ ಗುಂಡಿನ ಸರಗಳಲ್ಲಿ ಈಗೀಗ ಹಲವಾರು ವಿಧಗಳ ಗುಂಡು ಬಂದಿವೆ. ಮೋಹನಮಾಲಾದಷ್ಟೇ ಅಪೇಕ್ಷೆ ಪಟ್ಟು ತೊಡುವ ಸರ ನೆಲ್ಲಿಕಾಯಿ ಸರ. ನೆಲ್ಲಿಕಾಯಿಯನ್ನು ಹೋಲುವ ಗುಂಡುಗಳ ಈ ಸರದೊಂದಿಗೆ ದಾರದ ಗಂಟುಗಳಿರುವಂತೆ ಸರ ಹೆಣೆಯಲಾಗುತ್ತದೆ. ಈ ಎಲ್ಲ ಗುಂಡುಗಳ ಕಿರಿಮರಿಯೆನಿಸುವಂತಹ ಸರವೇ ಗೆಜ್ಜೆಟೀಕಿ. ಗೆಜ್ಜೆಗಳ ಆಕಾರದಲ್ಲಿರುವ ಗುಂಡುಗಳ ಈ ಸರಕ್ಕೆ ತೌಷಿ ಎಂದೂ ಕರೆಯುತ್ತಾರೆ. ಅದ್ಯಾಕೆ ಹಾಗೆ ಕರೆಯುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಟೀಕಾ ಎಂದು ಕರೆಯಲಾಗುವ ಬೈತಲೆ ಮಣಿಯನ್ನೇ ಹೋಲುವ ಪದಕವೊಂದು ಈ ಸರಕ್ಕೆ ಇರುವುದರಿಂದ ಗೆಜ್ಜೆ ಟೀಕಿ ಎಂದು ಇದನ್ನು ಕರೆಯುತ್ತಾರೆ. ಇವಿಷ್ಟೂ ಸರಗಳಿದ್ದರೆ ಮದುವೆಯ ಹೆಣ್ಣು ತವರುಮನೆಯಿಂದ ಸಾಲಂಕೃತವಾಗಿ ನೀಡಿದಂತೆ. ಇನ್ನು ಅತ್ತೆ ಮನೆಯವರು ತಮ್ಮ ಸೌಭಾಗ್ಯ ಲಕ್ಷ್ಮಿಯನ್ನೂ ಹಾಗೆಯೇ ಬರಮಾಡಿಕೊಳ್ಳಲು ಸಾಧ್ಯವೇ? ಅವರೂ ತಮ್ಮ ಶಕ್ತ್ಯಾನುಸಾರ ಚಪಲ್ಹಾರ (ಎಲ್ಲ ಹೆಂಗಳೆಯರೂ ಚಪಲ ಪಡುವಂಥ ಹಾರ) ನೀಡುತ್ತಾರೆ. ಇದು ಮೂರೆಳೆ, ಐದೆಳೆ, ಏಳು ಎಳೆಗಳ ಸರವಾಗಿರುತ್ತದೆ. ಮೂರೆಳೆಯದ್ದು ನೀಡಿ, ನೀ ಏಳೆಳೆ, ಒಂಬತ್ತೆಳೆ ಮಾಡಿಸಿಕೊಳ್ಳುವಷ್ಟು ಸಮೃದ್ಧಿ ಬರಲಿ ಎಂದೂ ಹಿರಿಯರು ಹಾರೈಸುತ್ತಿದ್ದರು. ಉಳಿಕೆಯ ಮತ್ತು ಗಳಿಕೆಯ ಸವಾಲೂ ಹಾಕುತ್ತಿದ್ದರು. ಲಕ್ಷ್ಮಿ ಚಿತ್ರ ಇರುವ ಕಾಸಿನ ಸರ, ಅವಲಕ್ಕಿ ಸರ ಇವುಗಳಲ್ಲಿ ಒಂದಾದರೂ ನೀಡಿ ಸ್ವಾಗತಿಸಿಕೊಳ್ಳುತ್ತಾರೆ. ಯಾಕಿಷ್ಟು ಬಂಗಾರದ ಮೋಹ? ಎಂಬ ಪ್ರಶ್ನೆ ಸುಳಿಯದೇ ಇರದು. ಆಪತ್ಕಾಲದಲ್ಲಿ ಹಣವೆಲ್ಲ ಸೋರಿ ಹೋದಾಗ, ಒಡ್ಯಾಣಗಳು ಒಲವು ಉಳಿಸುತ್ತವೆ. ಬಂಗಾರ, ಬದುಕು ಬಂಗಾರವಾಗಿಸುತ್ತದೆ ಎಮಬ ದೂರದೃಷ್ಟಿಯಿಂದ ಈ ಆಭರಣಗಳನ್ನು ನೀಡಲಾಗುತ್ತಿತ್ತು. ಬಂಡವಾಳ ಹೂಡಿಕೆಯಂತೆ ಈ ದಿನಗಳಲ್ಲಿ ಕೊಳ್ಳಲಾಗುತ್ತದೆ. ಆದರೆ ಹೊನ್ನು ಯಾವತ್ತಿದ್ದರೂ ಆಪದ್ಧನ ಎಂಬ ನಂಬಿಕೆಯೇ ಪೂರ್ವಿಕರದ್ದಾಗಿತ್ತು.ಹೊನ್ನಕಣಜದಿಂದ ಕಣವೊಂದೂ ತೆಗೆಯದಂತಿರಲಿ ಎಂದು ಹರಸಲಾಗುತ್ತದೆ. ಆದರೆ ಅಗತ್ಯಬಿದ್ದಾಗ ಕಣಕಣಗಳನ್ನೂ ತೆಗೆದುಕೊಡುವಷ್ಟು ನಿರ್ಮೋಹಿಗಳಾಗಿರಬೇಕೆಂದೂ ಈ ಬದುಕು ಕಲಿಸಿಕೊಡುತ್ತದೆ. ಆಪದ್ಧನವೆನಿಸುವ ಚಿನ್ನ ಅಕ್ಷಯವಾಗಲಿ, ಕಣಜ ಬೆಳ್ಳಿ, ಹೊನ್ನಿನಿಂದ ತುಂಬಲಿ ಎಂಬ ಆಶಯವಂತೂ ಈ ಅಕ್ಷಯ ತದಿಗೆಗೆ ಇದು. ಅಷ್ಟಿಷ್ಟೆನದೆ, ಇನಿತಾದರೂ ಉಳಿಸಿ, ಉಳಿಸಿದ್ದು ಗಳಿಸಿದೆವು ಎಂದು ಸಂಭ್ರಮಿಸಿ. ಆ ಸಂಭ್ರಮ ಅಕ್ಷಯವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT