ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದ ಯಶೋಗಾಥೆಗಳ ಹೊನಲು

Published 16 ಮಾರ್ಚ್ 2024, 23:51 IST
Last Updated 16 ಮಾರ್ಚ್ 2024, 23:51 IST
ಅಕ್ಷರ ಗಾತ್ರ

ಬೆಳಗಾವಿ: ಅಲ್ಲಿ ನೆರವೇರಿದ್ದು ಭಾವುಕ ಕ್ಷಣಗಳ ಅರ್ಥಪೂರ್ಣ ಮೆರವಣಿಗೆ. ಸಾಧಕರ ಮೊಗದಲ್ಲಿ ಸಂಭ್ರಮವಿದ್ದರೆ, ಅವರೊಡನೆ ಬಂದವರ ಮನಸ್ಸಿನಲ್ಲಿ ಹೆಮ್ಮೆಯ ಭಾವವಿತ್ತು. ‘ನಾವು ಅವರಂತೆಯೇ ಸಾಧನೆ ಮಾಡಬೇಕು’ ಎಂದು ಕೆಲವರು ಪಣತೊಟ್ಟರೆ, ಇನ್ನೂ ಕೆಲವರು, ‘ಅಂಥ ಸಾಧಕರೊಂದಿಗೆ ನಾವು ಸದಾ ಜೊತೆಗೆ ಇರುತ್ತೇವೆ’ ಎಂದು ದೃಢವಾಗಿ ಹೇಳಿದರು. ಒಟ್ಟಾರೆ ಆವರಣವು ಸ್ಫೂರ್ತಿದಾಯಕವಾಗಿತ್ತು.

ಇವೆಲ್ಲವೂ ಕಂಡು ಬಂದಿದ್ದು ನಗರದ ಫೇರಫೀಲ್ಡ್‌ ಮ್ಯಾರಿಯಟ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರಜಾವಾಣಿ ಸಾಧಕಿಯರು’ ಕಾರ್ಯಕ್ರಮದಲ್ಲಿ. ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ 10 ಸಾಧಕಿಯರನ್ನು ಸತ್ಕರಿಸುವ ಸಂದರ್ಭದಲ್ಲಿ ಎಲ್ಲರ ಕರತಾಡನ ಮುಗಿಲು ಮುಟ್ಟಿತು.

ಸಮಾಜದ ಪರಿವರ್ತನೆಗೆ ಕಾರಣರಾದ ಹಾಗೂ ಎಲೆ ಮರೆಯ ಕಾಯಿಗಳಂತೆ ಸದ್ದಿಲ್ಲದೆ ಸಮಾಜಕ್ಕೆ ಕೊಡುಗೆ ನೀಡಿದ ಮತ್ತು ವಿಶಿಷ್ಟ ರೀತಿಯಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ‘ಪ್ರಜಾವಾಣಿ ಸಾಧಕಿಯರು’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಬ್ರಿಟಿಷರ ವಿರುದ್ಧ ಹೋರಾಡಿದ ಧೀರೆಯ ಪುಣ್ಯನೆಲದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಹೆಮ್ಮೆ ಎನ್ನಿಸುತ್ತದೆ ಎಂಬ ಮಾತುಗಳು ಸಾಧಕಿಯರ ಮನದಲ್ಲಿ ಮೂಡಿದವು. ಪ್ರತಿಯೊಬ್ಬ ಸಾಧಕಿಯು ತಾನು ಬೆಳೆದು ಬಂದ ಹಾದಿ, ಎದುರಿಸಿದ ಸಂಕಷ್ಟಗಳನ್ನು ಹೇಳುತ್ತಾ ಹೋದಂತೆ ನೆರೆದ ನೂರಾರು ಮಹಿಳೆಯರ ಕಣ್ಣಂಚಿನಲ್ಲಿ ನೀರ ಹನಿ ಜಿನುಗಿತು.

ನಟಿ ತಾರಾ ಅನೂರಾಧಾ ಮತ್ತು ಮಹಿಂದ್ರಾ ಸಂಸ್ಥೆಯ ಸಚಿನ್‌ ಶಾ ಅವರು ಯು.ವರ್ಷಾ, ಅಮೃತವಲ್ಲಿ, ಸಿಸ್ಟರ್‌ ಶೋಭನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್‌ ಅವರು ಕೆ.ಪಿ.ಅಶ್ವಿನಿ, ಶಿವಲಿಂಗಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಡಾ.ವಿಜಯಲಕ್ಷ್ಮಿ ದೇಶಮಾನೆ, ಎ.ಶೀಲಾರಾಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಶಾರದಾ ಬಡಿಗೇರ, ರೂಪಾ ಮರಡಿ ಮತ್ತು ಸುಜಾತಾ ಮರಡಿ ಅವರಿಗೆ ಪ್ರಶಸ್ತಿ ವಿತರಿಸಿದರು.

ಎಲ್ಲರನ್ನೂ ಸ್ವಾಗತಿಸಿದ ಟಿಪಿಎಂಎಲ್‌ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮನ್‌ ಶಂಕರ್‌ ಮಾತನಾಡಿ, ‘ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರತಿ ಸಾಧಕಿಯರ ಸೇವೆ ಸ್ಫೂರ್ತಿದಾಯಕ. ಇಂತಹ ಸಾಧಕರ ಸಂಖ್ಯೆ ಹೆಚ್ಚಾಗಬೇಕು’ ಎಂದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬೆಳಗಾವಿಯನ್ನು ಕುಂದಾನಗರ ಎಂದು ಕರೆಯುತ್ತಾರೆ. ಯಾವ ವಿಷಯದಲ್ಲಿಯೂ ಇಲ್ಲಿಯ ಜನರು ಕುಂದುವುದಿಲ್ಲ ’ ಎಂದರು. 

‘76 ವರ್ಷಗಳಿಂದ ಪ್ರಜಾವಾಣಿಯು ಮಹಿಳೆಯರಿಗೆ ಆದ್ಯತೆ ನೀಡಿದೆ. ಮಹಿಳೆಯರ ಕುರಿತ ಮೊದಲ ಪುರವಣಿ ಹೊರತಂದಿತು. ಮೊದಲ ಜಿಲ್ಲಾ ವರದಿಗಾರರನ್ನಾಗಿ ಮಾಡಿದ್ದು ಪ್ರಜಾವಾಣಿ’ ಎಂದರು. ಕಾರ್ಯಕ್ರಮವನ್ನು ನಿಕಿತಾ ಅವರು ನಿರ್ವಹಿಸಿದರು.

ಟಿಪಿಎಂಎಲ್ ಜಾಹೀರಾತು ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ ಬಿಲ್ಡಿಕರ್ ಉಪಸ್ಥಿತರಿದ್ದರು. ಮಹೀಂದ್ರಾ ಸಂಸ್ಥೆ, ಗೋಲ್ಡ್ ವಿನ್ನರ್, ರೀಚ್ ರೂಟ್, ಕೆಂಟ್ ಮಿನರಲ್ ಆರ್‌ಒ, ವಿಕ್ಕೊ, 100 ಎಂಸಿಬಿಎಲ್, ಹರ್ಷ ಶುಗರ್ಸ್ ಮತ್ತು ವಿಸ್ತಾರ ಸಂಸ್ಥೆ ಸಹ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT