ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯುಸಿನೆಸ್‌ ಮಿಂಟ್ ಪ್ರಶಸ್ತಿ 2020: ಯುವ ಮಹಿಳಾ ಉದ್ಯಮಿ ಸ್ನೇಹಾ ರಾಕೇಶ್

Last Updated 18 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

2020ರ ಬ್ಯುಸಿನೆಸ್ ಮಿಂಟ್ ಅತ್ಯುತ್ತಮ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಹಾಸನ ಮೂಲದ ಸ್ನೇಹಾ ರಾಕೇಶ್‌.ತಂತ್ರಜ್ಞಾನ ಉದ್ಯಮದಲ್ಲಿ ಅವರ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

‘ಜೀವನದಲ್ಲಿ ಹಣಕ್ಕಿಂತ ಜ್ಞಾನವೇ ಮುಖ್ಯ’ ಎನ್ನುವ ಸ್ನೇಹಾ,ದೇಶ–ವಿದೇಶಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿದ ಬಗೆಯನ್ನು ‘ಪ್ರಜಾ ಪ್ಲಸ್‌’ ಜೊತೆಗೆ ಹಂಚಿಕೊಂಡರು. ಅವರದು ಹಾಸನದ ಚೆನ್ನರಾಯಪಟ್ಟಣದ ಹುಲ್ಲೇನಹಳ್ಳಿ. ಬಡತನದಲ್ಲೇ ಹುಟ್ಟಿ ಬೆಳೆದ ಕಾರಣ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಅವರಲ್ಲಿತ್ತು. ಜೊತೆಗೆ ಓದುವ ಹಂಬಲವೂ ಜೊತೆಯಾಗಿತ್ತು. ತಂತ್ರಜ್ಞಾನದ ಮೇಲಿನ ಒಲವು ಹಾಗೂ ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕೌಶಲಗಳಿಂದ ಇಂದು ತಂತ್ರಜ್ಞಾನ ಲೋಕದಲ್ಲಿ ಯಶಸ್ಸಿ ಉದ್ಯಮಿ ಎನಿಸಿಕೊಂಡಿದ್ದಾರೆ.

ಶೈಕ್ಷಣಿಕ ಹಿನ್ನೆಲೆ

ಒಂದರಿಂದ 10ನೇ ತರಗತಿವರೆಗೆ ಮೊರಾರ್ಜಿ ದೇಸಾಯಿ ಸರ್ಕಾರಿ ಶಾಲೆಯಲ್ಲಿ ಓದಿ ನಂತರ ಹಾಸನದ ಶ್ರೀಮತಿ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಡಿಪ್ಲೊಮ ಪದವಿ ಪಡೆಯುತ್ತಾರೆ. ಓದುವ ದಿನಗಳಲ್ಲಿ ಓದಿನ ಖರ್ಚು ಸರಿದೂಗಿಸುವ ಸಲುವಾಗಿ ಪ್ರಾಜೆಕ್ಟ್‌ಗಳನ್ನು ಮಾಡಲು ಆರಂಭಿಸುತ್ತಾರೆ. ನಂತರ ಎಂ.ಎಸ್.ರಾಮಯ್ಯ ಸ್ಕೂಲ್ ಆಪ್ ಅಡ್ವಾನ್ಸ್ಡ್‌ ಸ್ಟಡೀಸ್‌ನಲ್ಲಿ ಎಂಜಿನಿಯರಿಂಗ್ ಮುಗಿಸುತ್ತಾರೆ. ಕೆಲಸ ಮಾಡಿಕೊಂಡೇ ಕಂಪ್ಯೂಟರ್ ಸೈನ್ಸ್ ಹಾಗೂ ನೆಟ್‌ವರ್ಕಿಂಗ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.

ಉದ್ಯಮಿಯಾಗಿ ಸ್ನೇಹಾ

19ನೇ ವಯಸ್ಸಿನಲ್ಲೇ ಸಾಫ್ಟ್‌ವೇರ್ ಉದ್ಯೋಗಿ ಎನ್ನಿಸಿಕೊಂಡಿದ್ದ ಸ್ನೇಹಾ ಮೊದಲು ಸ್ವತಂತ್ರ ಉದ್ಯಮಿಯಾಗಿ ಕೆಲಸ ಮಾಡಿದ್ದರು. ಸಣ್ಣ, ಪುಟ್ಟ ಪ್ರಾಜೆಕ್ಟ್‌ಗಳನ್ನು ಮಾಡುತ್ತಾ ಆ ಕ್ಷೇತ್ರದಲ್ಲಿ ಹೆಸರು ಗಳಿಸುತ್ತಾರೆ. ಪ್ರಾಜೆಕ್ಟ್‌ಗಳು ಹೆಚ್ಚು ಹೆಚ್ಚು ಬರಲು ಆರಂಭವಾದಾಗ2012ರಲ್ಲಿ ಅಧಿಕೃತವಾಗಿ ‘ವಿ ಕ್ರಿಯೇಟ್ ಸಾಫ್ಟ್‌ವೇರ್ ಸಲ್ಯೂಷನ್’‌ ಕಂಪನಿ ಆರಂಭಿಸುತ್ತಾರೆ. ಉದ್ಯಮ ಇನ್ನಷ್ಟು ಯಶಸ್ಸು ಕಂಡ ನಂತರ 2015ರಲ್ಲಿ ‘ಅರ್ಕಮ್ಯಾಕಸ್ಸ್‌ ಟೆಕ್ ಪ್ರೈವೇಟ್ ಲಿಮಿಟೆಡ್’ ಎಂದು ಕಂಪನಿಯ ಹೆಸರು ಬದಲಿಸುತ್ತಾರೆ. ಸದ್ಯ ಸಿಂಗಪುರ, ದುಬೈ, ಯುಕೆ, ಬೆಲ್ಜಿಯಂ, ಯೂರೋಪ್‌ನಂತಹ ದೇಶಗಳಲ್ಲಿ ಇವರ ಕಂಪನಿಗಳಿವೆ. ಇವರ ಕೈಕೆಳಗೆ 120 ಮಂದಿ ಕೆಲಸ ಮಾಡುತ್ತಿದ್ದಾರೆ.

ಫೋಬ್ಸ್ ಪತ್ರಿಕೆಯ ಗೌರವ

ಫೋಬ್ಸ್‌ ಪತ್ರಿಕೆ ಇವರ ಸಾಧನೆ ಗುರುತಿಸಿ ಅವರ ಬಗ್ಗೆ ಲೇಖನವನ್ನು ಪ್ರಕಟಿಸಿದೆ. ಆ ಮೂಲಕ ಕರುನಾಡಿನ ಮಹಿಳಾ ಉದ್ಯಮಿಯ ಸಾಧನೆಯನ್ನು ಜಗತ್ತಿಗೆ ಪರಿಚಯಿಸಿದೆ.

‘ದುಡ್ಡಿನಿಂದ ಮಾತ್ರ ವ್ಯವಹಾರ ಹುಟ್ಟುವುದಿಲ್ಲ. ದುಡ್ಡಿನೊಂದಿಗೆ ಜ್ಞಾನವೂ ತುಂಬಾ ಮುಖ್ಯ. ವ್ಯವಹಾರಕ್ಕೆ ಜ್ಞಾನವೇ ಬಂಡವಾಳ’ ಎನ್ನುವ ಸ್ನೇಹಾ, ‘ಸಮಗ್ರ ಅಭಿವೃದ್ಧಿ’ ಎಂಬ ಹೆಸರಿನ ಟ್ರಸ್ಟ್‌ವೊಂದನ್ನು ನಡೆಸುತ್ತಿದ್ದಾರೆ.ಆ ಮೂಲಕ ಹಳ್ಳಿಯಿಂದ ಬಂದ ಪ್ರತಿಭಾವಂತರಿಗೆ ಉಚಿತವಾಗಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ತರಬೇತಿ ನೀಡುತ್ತಿದ್ದಾರೆ. ಉದ್ಯೋಗ ಹುಡುಕಬೇಡಿ, ಉದ್ಯೋಗ ಸೃಷ್ಟಿಸಿ ಎನ್ನುವುದು ಅವರ ಸಮಗ್ರ ಅಭಿವೃದ್ಧಿ ಟ್ರಸ್ಟ್‌ನ ಧ್ಯೇಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT