ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಬೇಕು ಜೀವನ ಪಾಠ!

Last Updated 29 ಜನವರಿ 2020, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಮೂಲಭೂತ ನಡವಳಿಕೆಗಳನ್ನು ಮನೆಯಲ್ಲೇ ಹೆತ್ತವರು ಹೇಳಿಕೊಡಬೇಕು. ಇಲ್ಲದಿದ್ದರೆ ಹೊರಗಡೆ ಹೋದಾಗ ಹೇಗೆ ವರ್ತಿಸಬೇಕು ಎಂದು ಮಕ್ಕಳಿಗೂ ತಿಳಿಯುವುದಿಲ್ಲ. ಇಂತಹ ಜೀವನ ಪಾಠ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶಿ.

ಪಠ್ಯ ಹಾಗೂ ಪಠ್ಯೇತರ ಶಿಕ್ಷಣದ ಜೊತೆಗೆ ಮಕ್ಕಳಿಗೆ ಒಂದಿಷ್ಟು ನಡವಳಿಕೆಯನ್ನು ಎಳೆವಯಸ್ಸಿನಲ್ಲಿಯೇ ಹೇಳಿಕೊಡಬೇಕು. ಮಾತನಾಡುವಾಗ ಅಥವಾ ಊಟ ಮಾಡುವಾಗ ಮಕ್ಕಳ ನಡವಳಿಕೆ ಮತ್ತೊಬ್ಬರಿಗೆ ಮುಜುಗರ ತರಿಸುವಂತೆ ಇರಬಾರದು. ಮನೆ ಇರಲಿ, ಹೊರಗಡೆ ಆಗಲಿ ಅಥವಾ ಸ್ನೇಹಿತರೊಂದಿಗೆ ಕುಳಿತು ಊಟ- ತಿಂಡಿ ಮಾಡುವಾಗ ‘ಟೇಬಲ್ ಮ್ಯಾನರ್ಸ್‌’ ಬಹಳ ಮುಖ್ಯ.

ಮಕ್ಕಳು ಚಿಕ್ಕವರಿರುವಾಗಲೇ ಎಲ್ಲಾ ವಿಷಯಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಾರೆ. ಏನು ಹೇಳಿಕೊಟ್ಟರೂ ಶೀಘ್ರವಾಗಿ ಕಲಿಯುತ್ತಾರೆ. ದೇಹ ಹಾಗೂ ಬುದ್ಧಿ ಬೆಳೆಯುವ ಹಂತವದು. ಮಕ್ಕಳಿಗೆ ಕೆಲವೊಂದು ಮೂಲಭೂತ ವಿಚಾರಗಳನ್ನು ತಿಳಿಸಿ ಹೇಳುವುದಕ್ಕೆ ಇದಕ್ಕಿಂತ ಸೂಕ್ತ ಸಂದರ್ಭ ಮತ್ತೊಂದು ಸಿಗುವುದಿಲ್ಲ.

ಎಲ್ಲಿಂದ ಆರಂಭವಾಗಬೇಕು ಈ ಪಾಠ?

ಅಮ್ಮಂದಿರು ಕೆಲವೊಮ್ಮೆ ಒಂದಿಷ್ಟು ಊಟ ಮಗುವಿನ ಹೊಟ್ಟೆಗೆ ಹೋದರೆ ಸಾಕು ಎಂಬ ಮನೋಭಾವದಿಂದ ಪುಟ್ಟ ಬಾಯಿಗೆ ತುತ್ತು ಕೊಡುವ ಹೊತ್ತಲ್ಲಿ ಅರ್ಧ ತುತ್ತು ಬಾಯಿಗೆ ಹೋಗಿ ಇನ್ನರ್ಧ ತುತ್ತು ಮಗುವಿನ ಮೈಗೆಲ್ಲ ಚೆಲ್ಲುತ್ತದೆ. ಮಗುವಿನ ತಟ್ಟೆಗೆ ಊಟ ಹಾಕಿ ಕೊಟ್ಟಾಗ ಅದೂ ತಾಯಿ ಊಟ ಮಾಡಿಸಿದ ಕ್ರಮವನ್ನೇ ಅನುಕರಣೆ ಮಾಡಬಹುದು. ಸುತ್ತೆಲ್ಲ ಚೆಲ್ಲಿಕೊಂಡು ಮೈಗೆಲ್ಲ ಅಂಟಿಸಿಕೊಂಡು ಒಟ್ಟಿನಲ್ಲಿ ಹೊಟ್ಟೆಗೆ ಊಟ ಹೋದರೆ ಆಯಿತಷ್ಟೆ.

ಮಕ್ಕಳಿಗೆ ಉಣಿಸುವಾಗ ಆದಷ್ಟು ಶುಚಿತ್ವದ ಕಡೆಗೆ ಗಮನ ಕೊಡಿ. ಕೈಯಲ್ಲಿ ಊಟ ಮಾಡಿಸುವುದು ಕಷ್ಟವಾದಲ್ಲಿ ಚಮಚ ಬಳಸಿ ಅದರ ಸಹಾಯದಿಂದ ಊಟ ಮಾಡಿಸಿ. ಈ ಕ್ರಮವನ್ನು ನೋಡಿದ ಮಗು ದೊಡ್ಡಾದಾದ ಮೇಲೂ ಊಟ ಮಾಡುವಾಗ ಚೆಲ್ಲಬಾರದು ಎಂಬ ಸಣ್ಣ ಪರಿಕಲ್ಪನೆಯನ್ನು ಮೂಡಿಸಿಕೊಳ್ಳುತ್ತದೆ.

ಪೋಷಕರು ಕಲಿಸಬೇಕಾದ ಅಂಶಗಳು

* ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈತೊಳೆದುಕೊಳ್ಳುವುದು.

* ಸ್ನೇಹಿತರ ಅಥವಾ ಬಂಧುಗಳ ಮನೆಗೆ ಹೋದಾಗ ಊಟದ ಸಮಯಕ್ಕೆ ಡೈನಿಂಗ್ ಟೇಬಲ್‌ ಮೇಲೆ ಆಹಾರ ಪದಾರ್ಥ, ಊಟದ ತಟ್ಟೆ ಇಡಲು ಸಹಾಯ ಮಾಡಬೇಕೇ ಎಂದು ಕೇಳುವುದು.

* ಟೇಬಲ್‌ ಸುತ್ತ ಕುಳಿತು ಊಟ ಮಾಡುವಾಗ ನೀವು ಮಾಡುವುದನ್ನು ಗಮನಿಸುವಂತೆ ಹೇಳಬೇಕು.

* ಎಲ್ಲರ ತಟ್ಟೆಗೆ ಬಡಿಸಿ ಆಗುವವರೆಗೂ ಕಾದು ನಂತರ ನಿಧಾನವಾಗಿ ತಿನ್ನುವ ಅಭ್ಯಾಸ ಮಾಡಿಸಿ. ತಿನ್ನುವಾಗ ಆಹಾರದ ತುಣುಕು ತುಟಿಯ ಅಂಚಿನಲ್ಲಿ ಅಂಟಿಕೊಂಡರೆ ನ್ಯಾಪ್‌ಕಿನ್ ಅಥವಾ ಟಿಷ್ಯೂ ಪೇಪರ್‌ನಿಂದ ಅದನ್ನು ಒರೆಸಿಕೊಳ್ಳುವಂತೆ ತಿಳಿಹೇಳಿ.

* ಪಕ್ಕ ಕುಳಿತವರು ಊಟ ಮಾಡುತ್ತಿರುವಾಗ ಅವರಿಗೆ ತೊಂದರೆಯಾಗದ ರೀತಿಯಲ್ಲಿ ಮಾತನಾಡುವುದು.

* ಊಟ ಮಾಡುವಾಗ ಶಬ್ದ ಆಗದಂತೆ ಎಚ್ಚರವಹಿಸಿ. ಹಾಗೆಯೇ ಬಾಯಲ್ಲಿ ಊಟ ಇಟ್ಟುಕೊಂಡು ಮಾತನಾಡಬಾರದು, ಕೆಲವೊಮ್ಮೆ ಆಹಾರದ ತುಣುಕು ಹೊರಗೆ ಬೀಳುವ ಸಾಧ್ಯತೆ ಇರುತ್ತದೆ. ಸೀನು ಅಥವಾ ಕೆಮ್ಮು ಬಂದಲ್ಲಿ ನ್ಯಾಪ್‌ಕಿನ್ ಅಥವಾ ಟಿಷ್ಯೂ ಪೇಪರ್ ಅನ್ನು ಅಡ್ಡ ಹಿಡಿಯುವುದನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿ.

* ಊಟದ ಬಗ್ಗೆ ಟೀಕೆ ಮಾಡಬಾರದು ಎಂಬುದನ್ನು ಅವರ ಅರಿವಿಗೆ ತರಬೇಕು.

* ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳುವುದನ್ನು ತಿಳಿಸಿ ಹೇಳಿ. ಸ್ಪೂನ್, ಫೊರ್ಕ್ ಅನ್ನು ಉಪಯೋಗಿಸುವುದನ್ನು ಹೇಳಿಕೊಡಿ.

* ಎಲ್ಲಾ ಮಕ್ಕಳಿಗೂ ನೆಚ್ಚಿನ ತಿನಿಸು ಎಂದು ಇದ್ದೇ ಇರುತ್ತದೆ. ಆದರೆ ಹೊರಗಡೆ ಹೋದಾಗ ಏನು ಸಿಗುತ್ತದೊ ಅದನ್ನು ತಿನ್ನುವುದನ್ನು ಮಕ್ಕಳಿಗೆ ಕಲಿಸಬೇಕು.

* ಊಟ ಆದ ಬಳಿಕ ಥ್ಯಾಂಕ್ಸ್ ಹೇಳುವುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT