ಬುಧವಾರ, ಡಿಸೆಂಬರ್ 2, 2020
25 °C
ಬಾಲಪ್ರೌಢಿಮೆ: ನಲುಗದಿರಲಿ ಮಕ್ಕಳು

PV Web Exclusive: ಪುಟ್ಟ ಪೋರಿ ದೊಡ್ಡದಾಯಿತೆ!

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಪ್ರಜ್ಞಾ ಈಗ ತಾನೆ 10 ದಾಟಿದ ಪುಟ್ಟ ಪೋರಿ. ಮುಟ್ಟು ಮತ್ತದರ ಸುತ್ತ ಇರುವ ಸಂಗತಿಗಳ ಬಗ್ಗೆ ಒಂದಿಷ್ಟೂ ಅರಿಯದ ಕೂಸು. ಅವರಮ್ಮ ಪವಿತ್ರಾ ಕೂಡ ಮಗಳನ್ನು ಈ ಬದಲಾವಣೆಗೆ ಸಿದ್ಧಗೊಳಿಸಿರಲಿಲ್ಲ. ‘ಏನವಸರ? ಮುಂದೆ ಹೇಳಿದರಾಯ್ತು’ ಎನ್ನುವ ನಿರಾಳತೆಯಲ್ಲೇ ಇದ್ದವಳು, ಮುಟ್ಟಿನ ಬಗ್ಗೆ ಪ್ರಾಥಮಿಕ ಮಾಹಿತಿ ನೀಡುವ ಮಹತ್ತರ ಕೆಲಸವನ್ನು ಮುಂದೂಡಿದ್ದಳು. ಅದೇನೊ ಇದ್ದಕ್ಕಿದ್ದಂತೆ ಒಂದಿನ ಮಗಳು ಮನದ ತುಂಬ ದುಗುಡ ಹೊತ್ತು, ಅಳುಕಿನಿಂದ ರಕ್ತದ ಕಲೆ ತೋರಿಸಿದಾಗ ಏನೊ ಇರಬೇಕೆಂದುಕೊಂಡಳು. ಎರಡನೇ ದಿನವೂ ರಕ್ತ ಕಾಣಿಸಿದಾಗ ದವಾಖಾನೆಗೆ ದೌಡಾಯಿಸಿದಳು. ಹೌದು ಇದು ಅವಳ ಮೊದಲ ಮುಟ್ಟು ಎಂದರು ವೈದ್ಯರು.

***

ಇಬ್ಬರಲ್ಲೂ ದುಗುಡ–ಕಳವಳ. ಹೃದಯವೇ ಕಿತ್ತು ಕೈಗೆ ಬಂದಂತೆ ದುಃಖಿಸುವ ಪ್ರಜ್ಞಾ. ಅವಳಿಗೆ ಹೇಗೆ ಸಾಂತ್ವನ ಹೇಳುವುದೆಂದೇ ತೋಚದೇ ಮೌನ ಹೊದ್ದ ತಾಯಿ ಪವಿತ್ರಾ. ತಾನು, ತನ್ನಮ್ಮ, ತನ್ನಜ್ಜಿಯೂ 14ರ ಆಸುಪಾಸು ಮುಟ್ಟಾಗಿದ್ದಲ್ಲವೇ, ದಿಢೀರನೇ ಮಗಳು ದೊಡ್ಡವಳಾದಳು. ಅವಳ ಮನಸ್ಸಿನ್ನೂ ಸಣ್ಣದು, ಅವಳ ತಿಳಿವಳಿಕೆಯೂ ಅಷ್ಟೇ ಸಣ್ಣದು. ಒಂದೇ ದಿನದಲ್ಲಿ ಈ ಬದಲಾವಣೆಯನ್ನು ಒಪ್ಪಿಕೊಂಡೀತೇ ಕೂಸು? ತಾಯಿ–ಮಗಳೂ ಇಬ್ಬರೂ ದುಗುಡವನ್ನು ಹೊತ್ತುಕೊಂಡೇ ಆ ದಿನಗಳನ್ನು ದೂಡಿದರು…

ಆದರೆ ಹೀಗಾಗಬಾರದು ಎನ್ನುತ್ತಾರೆ ಮಕ್ಕಳ ತಜ್ಞರು.

ಈಗೀಗ ಮಕ್ಕಳು ಬಹಳ ಬೇಗ ಪ್ರೌಢರಾಗುತ್ತಿದ್ದಾರೆ. ಈಗಿನ ಮಕ್ಕಳಿಗೆ ಬಾಲ್ಯವೇ ಸಿಗುತ್ತಿಲ್ಲ ಎನ್ನುವುದು ವಾಸ್ತವ. ಉಂಡಾಡುವ ವಯಸ್ಸಿನಲ್ಲಿ ಮೊದಲ ಮುಟ್ಟು ಕಾಣಿಸಿಕೊಂಡಾಗ ಗಾಬರಿಯಾಗುವುದು ಸಹಜವೇ. ಆದರೆ ಮೊದಲೇ ಮನೆಯಲ್ಲಿ ಪೋಷಕರು (ಅದರಲ್ಲೂ ತಾಯಿ), ಶಾಲೆಯಲ್ಲಿ ಶಿಕ್ಷಕಿಯರು ಈ ಬಗ್ಗೆ ಸಣ್ಣ ತಿಳಿವಳಿಕೆ ಕೊಟ್ಟಿದ್ದರೆ ಈ ಬೆಳವಣಿಗೆಗೆ ಮಕ್ಕಳು ಪ್ರತಿಕ್ರಿಯಿಸುವ ರೀತಿಯೇ ಬದಲಾಗುತ್ತದೆ. ಹೆಣ್ಣುಮಕ್ಕಳಿಗೆ 9 ವರ್ಷವಾಗುತ್ತಲೇ ಮುಟ್ಟಿನ ಬಗೆಗೆ ಇರುವ ಸಂಗತಿಗಳನ್ನು ತಿಳಿಸುತ್ತ ಹೋಗಬೇಕು ಎನ್ನುವುದು ತಜ್ಞರ ಕಿವಿಮಾತು.

ಕೆಲವು ಮಕ್ಕಳಲ್ಲಿ ಪ್ರೌಢಾವಸ್ಥೆಯ ಲಕ್ಷಣಗಳು ವರ್ಷಾರು ತಿಂಗಳು ಮುಂಚಿತವಾಗಿಯೇ ಗೋಚರಿಸುತ್ತವೆ. ಕೆಲವು ಮಕ್ಕಳಲ್ಲಿ ಯಾವ ಲಕ್ಷಣಗಳೂ ಗೋಚರಿಸುವುದೇ ಇಲ್ಲ. ಮುಟ್ಟು ಆರಂಭವಾದ ನಂತರವೇ ಕೆಲವರಲ್ಲಿ ಲಕ್ಷಣಗಳು ಕಾಣಿಸಲು ಆರಂಭವಾಗಬಹುದು. ಮೊದಲ ಮುಟ್ಟು ಕಾಣಿಸಿಕೊಳ್ಳುವ ವಯಸ್ಸು ಹಾಗೂ ಅದರ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗುತ್ತ ಹೋಗುತ್ತವೆ. ಅನುವಂಶೀಯ ಕಾರಣಗಳು ಮುಖ್ಯವಾದರೂ ಅದೊಂದೇ ನಿರ್ಧಾರಕ ಅಂಶವೆಂದು ಹೇಳಲಾಗದು. ತಾಯಿ ಮೊದಲು ಮುಟ್ಟಾದ ವಯಸ್ಸಿನಲ್ಲೇ ಮಗಳೂ ಆಗಬೇಕು ಎಂದೇನೂ ಇಲ್ಲ, ಇಂದಿನ ಆಹಾರ ಪದ್ಧತಿ, ಪರಿಸರ, ತಂದೆತಾಯಿ ಮತ್ತು ಕುಟುಂಬದವರ ಲಾಲನಾ ಪಾಲನಾ ವಿಧಾನ, ವೈದ್ಯಕೀಯ ಕಾರಣಗಳು ಇದನ್ನು ನಿರ್ಧರಿಸುತ್ತವೆ.

‘8–9ನೇ ವರ್ಷಕ್ಕೇ ಕಿಶೋರಿಯರಲ್ಲಿ ಮೊದಲ ಮುಟ್ಟು ಕಾಣಿಸಿಕೊಂಡರೆ ಅದನ್ನು ಬಾಲಪ್ರೌಢಿಮೆ ಎನ್ನಲಾಗುತ್ತದೆ. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳಲಾಗದು. ದೇಹದ ಪ್ರಕೃತಿ, ಕೌಟುಂಬಿಕ ಇತಿಹಾಸ, ವರ್ಣತಂತು, ಅಂಗರಚನೆಯ ವಿಕೃತಿಗಳು, ಹಾರ್ಮೋನುಗಳ ಸ್ರವಿಸುವಿಕೆ, ಸ್ಥೂಲಕಾಯತೆ, ಆರೋಗ್ಯ ಸಮಸ್ಯೆ ಸೇರಿದಂತೆ ಯಾವುದೇ ಒಂದು ಅಥವಾ ಹಲವು ಅಂಶಗಳು ಬಾಲಪ್ರೌಢಿಮೆಗೆ ಕಾರಣವಾಗಬಹುದು. ದೇಹದ ಕೊಬ್ಬು ಈಸ್ಟ್ರೊಜೆನ್ ಉತ್ಪತ್ತಿಯನ್ನು ಹೆಚ್ಚಿಸುವುದಲ್ಲದೇ, ಆ ಮೂಲಕ ಬಾಲಪ್ರೌಢಿಮೆಯನ್ನು ಪ್ರಚೋದಿಸುತ್ತದೆ. ಥೈರಾಯ್ಡ್‌, ಟೆಸ್ಟೋಸ್ಟಿರಾನ್ ಹಾಗೂ ಈಸ್ಟ್ರೋಜನ್ ಹಾರ್ಮೋನುಗಳ ವ್ಯತ್ಯಾಸದಿಂದಲೂ ಬಾಲಪ್ರೌಢಿಮೆ ಉಂಟಾಗಬಹುದು. ಅಷ್ಟೇ ಏಕೆ, ಮಾನಸಿಕ ಆಘಾತದಿಂದ ನರಮಂಡಲಕ್ಕೆ ಹಾನಿಯಾದಾಗಲೂ ಬಾಲಪ್ರೌಢಿಮೆ ಕಾಣಿಸಿಕೊಳ್ಳಬಹುದು’ ಎನ್ನುತ್ತಾರೆ ಆಂಕೊಸರ್ಜನ್ ಡಾ. ನಂದಾ ರಜನೀಶ್‌.

 ಏನಿದರ ಅಡ್ಡ ಪರಿಣಾಮ?

ಬಹಳಷ್ಟು ಪ್ರಕರಣಗಳಲ್ಲಿ ಬಾಲಪ್ರೌಢಿಮೆಯಿಂದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳದೇ ಇರಬಹುದು. ಆದರೆ ಕೆಲವೊಮ್ಮೆ ಬಾಲಪ್ರೌಢಿಮೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಮೊದಲರ್ಧ ಭಾಗದಲ್ಲಿ ಅತೀ ವೇಗವಾಗಿ ಬೆಳೆಯುವ ಮಕ್ಕಳು, ನಂತರದ ದಿನಗಳಲ್ಲಿ ಬಹಳ ನಿಧಾನವಾಗಿ ಬೆಳೆಯಬಹುದು. ಹಾಗೆಯೇ ಮಾನಸಿಕವಾಗಿ ಕುಗ್ಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಸಮಾನ ವಯಸ್ಕರಿಗಿಂತ ಬೇಗನೇ ಪ್ರೌಢರಾಗುವ ಮಕ್ಕಳು ತಮ್ಮಲ್ಲಿ ಆಗುತ್ತಿರುವ ದೈಹಿಕ ಬದಲಾವಣೆಗಳ ಬಗ್ಗೆ ಆತಂಕಕ್ಕೆ ಒಳಗಾಗಬಹುದು. ಇದರಿಂದ ಅಂತರ್‌ಮುಖಿಗಳಾಗಿ ಖಿನ್ನತೆಗೆ ಜಾರುವ ಸಾಧ್ಯತೆಯೂ ಇರುತ್ತದೆ. ಪೋಷಕರು ಇಂತಹ ಬದಲಾವಣೆಗಳನ್ನು ಗುರುತಿಸುವುದು ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವುದು ಬಹಳ ಮುಖ್ಯ.

ತಡೆಯುವುದು ಹೇಗೆ?

ಶಸ್ತ್ರಚಿಕಿತ್ಸೆ: ಕೆಲವು ನಿರ್ಧಿಷ್ಟ ವೈದ್ಯಕೀಯ ಕಾರಣಗಳಿಂದ ಮಕ್ಕಳು ಪ್ರೌಢರಾದಲ್ಲಿ ಅದಕ್ಕೆ ಚಿಕಿತ್ಸೆಯ ಅಗತ್ಯವಿರುತ್ತದೆ. ಉದಾಹರಣೆಗೆ ಕೆಲವೊಮ್ಮೆ ಗಡ್ಡೆಗಳು ಹಾರ್ಮೋನುಗಳ ಕಾರ್ಯಚಟುವಟಿಕೆಗಳನ್ನು ಪ್ರಚೋದಿಸಿ ಬಾಲಪ್ರೌಢಿಮೆಗೆ ಕಾರಣವಾಗಿರುವ ಸಾಧ್ಯತೆ ಇರುತ್ತದೆ. ಆಗ ಆ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಲಾಗುತ್ತದೆ.

ಚಿಕಿತ್ಸೆ: ಕೆಲವು ವಿಶೇಷ ಸಂದರ್ಭಗಳಲ್ಲಿ GnRH ಎನ್ನುವ ಹಾರ್ಮೋನು ಪ್ರಚೋದಕ ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ. ಇದನ್ನು ತಿಂಗಳಿಗೊಮ್ಮೆ ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ವೇಗದ ಬೆಳವಣಿಗೆಯನ್ನು ಸಾಮಾನ್ಯ ಹಂತಕ್ಕೆ ತರಬಹುದು. ಮಗು ಆರೋಗ್ಯಕರ ಪ್ರೌಢತೆಯ ಹಂತವನ್ನು ತಲುಪುವವರೆಗೆ ಈ ಚಿಕಿತ್ಸೆಯನ್ನು ಮುಂದುವರೆಸಬಹುದು.

ಆಹಾರ: ಈಸ್ಟ್ರೊಜೆನ್ ಹಾರ್ಮೋನ್‌ ಅನ್ನು ಪ್ರಚೋದಿಸುವ ಆಹಾರ–ಖಾದ್ಯಗಳಿಂದ ದೂರ ಇಡುವ ಮೂಲಕವೂ ಇದನ್ನು ತಡೆಯಬಹುದು. ತರಕಾರಿ ಪ್ರೋಟೀನ್ ಮತ್ತು ಫೈಬರ್ ಅಂಶವನ್ನು ಒಳಗೊಂಡ ಆಹಾರವನ್ನು ನೀಡಬೇಕು. ಮಾಂಸಾಹಾರದ ಪ್ರೋಟೀನ್, ಸಕ್ಕರೆ-ಸಿಹಿ, ತಂಪು ಪಾನೀಯಗಳನ್ನು ಕೊಡಬಾರದು.

ನಿದ್ರೆ: ನಿದ್ರೆಯ ಕೊರತೆ, ಅಥವಾ ಅಸಹಜ ನಿದ್ರಾವಧಿಯೂ ಇದಕ್ಕೆ ಕಾರಣವಾಗಬಹುದು.

ಮಾನಸಿಕ ಒತ್ತಡ: ಸ್ಪರ್ಧೆಗಳ ಒತ್ತಡ, ಸಾಮಾಜಿಕ ಒತ್ತಡ, ಕೌಟುಂಬಿಕ ಹಿಂಸೆಯಿಂದ ಉಂಟಾಗುವ ಒತ್ತಡಗಳೂ ಸಹ ಇದಕ್ಕೆ ಕಾರಣ. ಇಂತಹ ವಾತಾವರಣ ಪ್ರಬುದ್ಧವಾಗಿ ಯೋಚಿಸಲು ಮತ್ತು ಕಾರ್ಯನಿರ್ವಹಿಸಲು ಮಕ್ಕಳ ಮೆದುಳನ್ನು ಪ್ರಚೋದಿಸುವುದರಿಂದ ಉತ್ಪತ್ತಿಯಾಗುವ ಹಾರ್ಮೋನುಗಳು ಬಾಲಪ್ರೌಢಿಮೆಗೆ ಅನುವು ಮಾಡಿಕೊಡುತ್ತವೆ.

ಸ್ಥೂಲಕಾಯ: ಆರೋಗ್ಯಕರ ತೂಕವನ್ನು ಕಾಪಾಡುವುದೂ ಸಹ ಅಷ್ಟೇ ಮುಖ್ಯ.

 ಪೋಷಕರ ಪಾತ್ರ

* ಮಕ್ಕಳು ಬಾಲ್ಯಾವಸ್ಥೆಯನ್ನು ದಾಟುವ ಹಂತ ಬರುತ್ತಿದ್ದಂತೆ ನಿಧಾನಕ್ಕೆ ಮೊದಲ ಮುಟ್ಟು ಹಾಗೂ ಅದರ ಸುತ್ತ ಇರುವ ಸಂಗತಿಗಳ ಬಗ್ಗೆ ಚರ್ಚೆ ಆರಂಭಿಸಬೇಕು.

* ಮುಟ್ಟಿನ ಸುತ್ತ ಇರುವ ಮಿಥ್ಯಗಳ ಬಗ್ಗೆ ತಿಳಿವಳಿಕೆ ನೀಡಬೇಕು.

* ಮಕ್ಕಳ ಬೆಳವಣಿಗೆಯ ಮೇಲೆ ಗಮನ ಇಡಬೇಕು.

* ಮಕ್ಕಳ ಮನೋ-ದೈಹಿಕ ಬೆಳವಣಿಗೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡಾಗ ಕೂಡಲೇ ಗಮನಿಸಬೇಕು.

* ದೈಹಿಕ ಬದಲಾವಣೆಗಳು ಆರಂಭವಾದ ಸಂದರ್ಭದಲ್ಲಿ ಮಕ್ಕಳು ಸಾಕಷ್ಟು ಆತಂಕ ಹಾಗೂ ಒತ್ತಡದಲ್ಲಿರುತ್ತಾರೆ. ಅವರೊಂದಿಗೆ ಮುಕ್ತವಾಗಿ ಚರ್ಚಿಸಬೇಕು, ಮಾತಾಡಬೇಕು, ಅವರ ಮಾತಿಗೆ ಕಿವಿ ಕೊಡಬೇಕು.

ಪ್ರೌಢಾವಸ್ಥೆ ಒಂದು ಸಹಜ ಮತ್ತು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ಪ್ರತಿಯೊಬ್ಬರ ಜೀವನದಲ್ಲಿ ಅದೊಂದು ಮಹತ್ವದ ಘಟ್ಟ. ಅದರಲ್ಲೂ ಪುಟ್ಟ ಮಕ್ಕಳು ಇನ್ನೂ ತಮ್ಮ ಗೊಂಬೆ, ಆಟಿಕೆಗಳ ಮುಗ್ಧ ಜಗತ್ತಿನಲ್ಲಿ ವಿಹರಿಸುವಾಗ ಈ ಬದಲಾವಣೆ ಎದುರಾದರೆ ಅದು ಆತಂಕಕಾರಿಯೇ. ಆದರೆ ಇತ್ತೀಚೆಗೆ, ಅದರಲ್ಲೂ ಮೆಟ್ರೊ/ನಗರ ಪ್ರದೇಶಗಳಲ್ಲಿ ಈ ಪ್ರವೃತ್ತಿ ಬೆಳೆಯುತ್ತಿದೆ. ಗ್ರಾಮೀಣ ಪ್ರದೇಶದ ಬಾಲಕಿಯರಿಗಿಂತ ನಗರದ ಮಕ್ಕಳು 2–4 ವರ್ಷ ಬೇಗನೇ ಪ್ರೌಢರಾಗುತ್ತಿದ್ದಾರೆ. ಆದರೆ ಇಂತಹ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವಷ್ಟು, ಒಪ್ಪಿಕೊಳ್ಳುವಷ್ಟು ಸಮಾಜವೂ/ಕುಟುಂಬಗಳೂ ಬದಲಾಗಿರುವುದು ಸ್ವಾಗತಾರ್ಹ.

ಎಚ್ಚರ!


ಡಾ. ನಂದಾ ರಜನೀಶ್, ಆಂಕೊಸರ್ಜನ್, ಲ್ಯಾಪರೊಸ್ಕೋಪಿಕ್ ಸರ್ಜನ್

ಹಾರ್ಮೋನ್‌ ಇಂಜೆಕ್ಷನ್‌ ನೀಡಲಾದ ಹಸುಗಳ ಹಾಲು, ಮಾಂಸ, ಅಂತಹ ಇಂಜೆಕ್ಷನ್‌ಗೆ ಒಡ್ಡಿಕೊಂಡ ಕೋಳಿ ಮೊಟ್ಟೆ, ಅದರ ಮಾಂಸ ಹಾಗೂ ಅತಿಯಾದ ಫಾಸ್ಟ್‌ ಫುಡ್‌ ಸೇವನೆ ಮಾಡುವ ಮಕ್ಕಳಲ್ಲಿ ಬಾಲಪ್ರೌಢಿಮೆ ಹಾಗೂ ಸ್ತನಗಳ ವಕ್ರ ಬೆಳವಣಿಗೆಯ ಅಪಾಯ ಹೆಚ್ಚು. ಪಾಲಕರು ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು. ದಿನದಲ್ಲಿ 3 ಗಂಟೆಗಳಿಗಿಂತ ಹೆಚ್ಚು ಕಾಲ ಟೀವಿ ನೋಡುವ ಮಕ್ಕಳು ಬಾಲಪ್ರೌಢಿಮೆಗೆ ಒಳಗಾಗುವ ಸಾಧ್ಯತೆ 2.46 ಪಟ್ಟು ಅಧಿಕ. ಕಾರಣ -3 ಗಂಟೆಗಳಿಗಿಂತ ಹೆಚ್ಚು ಟೀವಿ ವೀಕ್ಷಿಸುವುದರಿಂದ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಗೆ ಅಡ್ಡಿಯುಂಟಾಗುತ್ತದೆ. ಇದರಿಂದಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಸಂಶ್ಲೇಷಣೆಯ ಮಾರ್ಗಗಳು ಸಕ್ರಿಯಗೊಳ್ಳುತ್ತವೆ. ವಯಸ್ಕ ಚಲನಚಿತ್ರಗಳನ್ನು ದೀರ್ಘಕಾಲದವರೆಗೆ ನೋಡುವುದರಿಂದಲೂ ಬಾಲಪ್ರೌಢಿಮೆ ಕಾಣಿಸಿಕೊಳ್ಳಬಹುದು. ಅಲ್ಲದೆ, ಅತಿ ಸಣ್ಣ ವಯಸ್ಸಿನಲ್ಲಿ ಮೊದಲ ಮುಟ್ಟು ಕಾಣಿಸಿಕೊಂಡ ಮಕ್ಕಳು ಸ್ತನ ಕ್ಯಾನ್ಸರ್‌ಗೆ ಬಲಿಯಾಗುವ ಸಾಧ್ಯತೆ 2.2 ಪಟ್ಟು ಅಧಿಕ ಎನ್ನುತ್ತವೆ ಅಧ್ಯಯನಗಳು.

-ಡಾ. ನಂದಾ ರಜನೀಶ್, ಆಂಕೊಸರ್ಜನ್, ಲ್ಯಾಪರೊಸ್ಕೋಪಿಕ್ ಸರ್ಜನ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು