ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಎಂಡೋಮೆಟ್ರಿಯಾಸಿಸ್; ಅಮ್ಮನಾಗುವ ಕನಸ ಕಸಿದೀತು

Last Updated 21 ಏಪ್ರಿಲ್ 2021, 11:21 IST
ಅಕ್ಷರ ಗಾತ್ರ

‘ಎಂಡೋಮೆಟ್ರಿಯಾಸಿಸ್’ ಇದು ಕೇಳಲು ಜಟಿಲವೆನಿಸುವ ಆದರೆ ಸಾಮಾನ್ಯ ಲಕ್ಷಣಗಳನ್ನು ಹೊಂದಿರುವ ಅಸ್ವಸ್ಥತೆ. ಮುಟ್ಟಿನ ಅವಧಿಯಲ್ಲಿ ಹೊಟ್ಟೆನೋವು ಕಾಣಿಸಿಕೊಳ್ಳುವುದು ಇದರ ಆರಂಭಿಕ ಮತ್ತು ಸಾಮಾನ್ಯ ಲಕ್ಷಣ. ತಿಂಗಳಿಗೊಮ್ಮೆ ನೋವು ಅನುಭವಿಸಿದರೆ ಮುಗಿಯಿತು ಎನ್ನುವ ಅಸಡ್ಡೆ ಈ ರೋಗದ ಉಲ್ಭಣಕ್ಕೆ ಕಾರಣ. ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯದೇ ಹೋದರೆ ಇದು ತಾಯಿಯಾಗುವ ನಿಮ್ಮ ಕನಸನ್ನು ಕಿತ್ತುಕೊಳ್ಳಬಹುದು. ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದರೆ ನಿಮ್ಮ ತಾಯ್ತನವೇ ಈ ರೋಗಕ್ಕೆ ಮದ್ದಾಗಲೂಬಹುದು.

ಡಾ. ಪಲ್ಲವಿ ಪ್ರಸಾದ್
ಡಾ. ಪಲ್ಲವಿ ಪ್ರಸಾದ್

ಏನಿದು ಎಂಡೋಮೆಟ್ರಿಯಾಸಿಸ್? ಆರಂಭದಲ್ಲಿ ಗುರುತಿಸುವುದು ಹೇಗೆ, ಲಕ್ಷಣಗಳೇನು? ಚಿಕಿತ್ಸೆಯ ಮಾರ್ಗಗಳೇನು? ಇದಕ್ಕೂ ತಾಯ್ತನಕ್ಕೂ ಇರುವ ಸಂಬಂಧವೇನು? ಕಡೆಗಣಿಸಿದಲ್ಲಿ ತಾಯಿಯಾಗುವ ಅವಕಾಶವನ್ನೇ ಕಿತ್ತುಕೊಳ್ಳುವುದೇ? ಈ ಎಲ್ಲ ಪ್ರಶ್ನೆಗಳಿಗೆ ಸವಿವರ ಮಾಹಿತಿ ನೀಡಿದ್ದಾರೆ ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರದ ಫರ್ಟಿಲಿಟಿ ಸಲಹಾ ತಜ್ಞೆ ಡಾ. ಪಲ್ಲವಿ ಪ್ರಸಾದ್.

ಏನಿದು ಎಂಡೋಮೆಟ್ರಿಯಾಸಿಸ್?

ಗರ್ಭಾಶಯದ ಹೊರಗಿನ ಅಂಗಾಂಶಗಳಲ್ಲಿ ಗರ್ಭಾಶಯದ ಜೀವಕೋಶಗಳು ಬೆಳೆಯುವುದನ್ನು ಎಂಡೋಮೆಟ್ರಿಯಾಸಿಸ್ ಎಂದು ಕರೆಯಲಾಗುತ್ತದೆ. ಇದು ಬೆಳೆಯುತ್ತಾ ಹೋದಂತೆ ಗರ್ಭಾಶಯದ ಹೊರಗೆ ಗಡ್ಡೆಯಾಗಿಯೂ ಪರಿವರ್ತನೆ ಆಗಬಹುದು. ಇದರಿಂದ ಮುಟ್ಟಿನ ಅವಧಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಇದು ಫಾಲೋಪಿಯನ್ ಟ್ಯೂಬ್‌ಗಳನ್ನು ತಡೆಯುವ ಅಥವಾ ಅಂಡಾಣುಗಳನ್ನು ಹಾಳು ಮಾಡುವ ಮೂಲಕ ಗರ್ಭಾವಸ್ಥೆಗೆ ಅಡೆತಡೆಯನ್ನುಂಟು ಮಾಡಬಹುದು. ಎಂಡೋಮೆಟ್ರಿಯಾಸಿಸ್ ಹೊಂದಿರುವ ಶೇ 30ರಿಂದ 50ರಷ್ಟು ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳುತ್ತದೆ.

ಇದನ್ನು ಗುರುತಿಸುವುದು ಹೇಗೆ?

ಕೆಲವು ಸಾಮಾನ್ಯ ಲಕ್ಷಣಗಳಿಂದ ಇದನ್ನು ಗುರುತಿಸಬಹುದು. ಅವುಗಳೆಂದರೆ–

· ಮುಟ್ಟಿನ ಮೊದಲು ಮತ್ತು ಆ ಸಮಯದಲ್ಲಿ ಅಸ್ವಸ್ಥತೆ, ನೋವು ಹಾಗೂ ಭಾರೀ ರಕ್ತಸ್ರಾವ

· ಮುಟ್ಟಿನ ಅವಧಿ ಮುಗಿದ ನಂತರವೂ ಮಧ್ಯೆ ಮಧ್ಯೆ ರಕ್ತಸ್ರಾವ ಆಗುವುದು

· ಅನಿಯಂತ್ರಿತ ಮತ್ತು ನೋವಿನಿಂದ ಕೂಡಿದ ಮೂತ್ರ ವಿಸರ್ಜನೆ

· ಮುಟ್ಟಿನ ಸಮಯದಲ್ಲಿ ಅಸಹಜ ಕರುಳಿನ ಚಲನೆ

· ಸುಸ್ತು, ಆಯಾಸ, ಬಳಲಿಕೆ

· ಗರ್ಭಧಾರಣೆಗೆ ಅಡೆತಡೆ, ಬಂಜೆತನ

ಇವೆಲ್ಲಾ ಎಂಡೋಮೆಟ್ರಿಯಾಸಿಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. ಆದಾಗ್ಯೂ, ಕೆಲವೊಮ್ಮೆ ಶೇ 15ರಿಂದ 20ರಷ್ಟು ಮಹಿಳೆಯರಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.ಅಂತಹ ಸಂದರ್ಭದಲ್ಲಿ ವೈದ್ಯರು ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ.

ಎಂಡೋಮೆಟ್ರಿಯಾಸಿಸ್‌ನಿಂದ ಆರೋಗ್ಯದಲ್ಲಿ ಬೇರೆ ರೀತಿಯ ಏರುಪೇರುಗಳು ಉಂಟಾಗುತ್ತವೆಯೇ?

ಹೌದು, ಎಂಡೋಮೆಟ್ರಿಯಾಸಿಸ್‌ ಇರುವ ಮಹಿಳೆಯರಲ್ಲಿ ಆಸ್ತಮಾ, ಎಸ್ಜಿಮಾ (ಚರ್ಮ ರೋಗ) ಮತ್ತು ಫೈಬ್ರೊಮ್ಯಾಲ್ಗಿಯದಂತಹ ಕೆಲವು ರೋಗನಿರೋಧಕ ಕಾಯಿಲೆಗಳು ಕಂಡುಬರಬಹುದು. ಕೆಲವು ಮಹಿಳೆಯರಲ್ಲಿ ಎಂಡೋಮೆಟ್ರಿಯಾಸಿಸ್‌ ಗಂಭೀರವಾದಂತೆ ತೀವ್ರವಾದ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಮತ್ತು ಕೆಲವರಿಗೆ ಯಾವುದೇ ರೋಗಲಕ್ಷಣಗಳಿಲ್ಲದೇ ತೀವ್ರವಾದ ಎಂಡೋಮೆಟ್ರಿಯಾಸಿಸ್‌ ಕಾಣಿಸಿಕೊಳ್ಳಬಹುದು.

ಎಂಡೋಮೆಟ್ರಿಯಾಸಿಸ್ ಫಲವತ್ತತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಎಂಡೋಮೆಟ್ರಿಯಾಸಿಸ್ ಉರಿಯೂತ ಮತ್ತು ಕಿರಿಕಿರಿಯಿಂದಾಗಿ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಈ ಕಾಯಿಲೆ ಇರುವವರಲ್ಲಿ ಅಂಡಾಣುವನ್ನು ಫಾಲೋಪಿಯನ್ ಟ್ಯೂಬ್‌ಗೆ ಕೊಂಡೊಯ್ಯುವ ಫಿಂಬ್ರಿಯಾ ಉಬ್ಬಿಕೊಳ್ಳುತ್ತದೆ ಮತ್ತು ಊತ ಹಾಗೂ ಗಾಯ ಉಂಟಾಗುತ್ತದೆ. ಇದರಿಂದಾಗಿ ಅಂಡಾಣು ತನ್ನ ಉದ್ದೇಶಿತ ಗಮ್ಯಸ್ಥಾನವನ್ನು ತಲುಪಲು ಸಾಧ್ಯವಾಗುವುದಿಲ್ಲ. ಮತ್ತು ಫಲವತ್ತತೆಯ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಎಂಡೋಮೆಟ್ರಿಯಾಸಿಸ್‌ನಿಂದ ಉಂಟಾಗುವ ಉರಿಯೂತವು ವೀರ್ಯಾಣು ಮತ್ತು ಅಂಡಾಣುಗಳು ಕೂಡಿಕೊಳ್ಳುವ ಮೊದಲೇ ಅವುಗಳನ್ನು ನಾಶಪಡಿಸುತ್ತದೆ. ಫಾಲೋಪಿಯನ್ ಟ್ಯೂಬ್‌ಗಳನ್ನು ನಿರ್ಬಂಧಿಸಲು ಸಹ ಇದು ಕಾರಣವಾಗಬಹುದು.

ಚಿಕಿತ್ಸೆ?

ಎಂಡೋಮೆಟ್ರಿಯಾಸಿಸ್‌ನ ಹಂತವನ್ನು ಆಧರಿಸಿ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಪೆಲ್ವಿಕ್‌ ಪರೀಕ್ಷೆ, ಅಲ್ಟ್ರಾಸೌಂಡ್‌, ಎಂಆರ್‌ಐ ಸ್ಕ್ಯಾನ್‌ ಮೂಲಕ ರೋಗನಿರ್ಣಯವನ್ನು ಮಾಡಲಾಗುತ್ತದೆ. ಕೆಲ ಔಷಧಗಳು, ಹಾರ್ಮೋನ್‌ ಥೆರಪಿ, ಲ್ಯಾಪ್ರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆ ಮುಂತಾದ ಚಿಕಿತ್ಸೆಗಳು ಲಭ್ಯವಿವೆ. ಆದರೆ ನೀವು ಮುಂದೆ ಗರ್ಭಧರಿಸಲು ಬಯಸುವಿರಾ ಎನ್ನುವುದರ ಮೇಲೆ ಚಿಕಿತ್ಸೆಯ ಆಯ್ಕೆ ನಿರ್ಧಾರವಾಗುತ್ತದೆ. ನಿಮ್ಮ ವೈದ್ಯರು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಎಂಡೊಮೆಟ್ರಿಯೊಸಿಸ್ ಸಂಖ್ಯೆ, ಸ್ಥಾನ ಮತ್ತು ಆಳವನ್ನು ಆಧರಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಮೊದಲ ಹಂತದಲ್ಲಿದ್ದರೆ ಗುಣವಾಗುವ ಸಾಧ್ಯತೆ ಹೆಚ್ಚು. ಅದು ಕೊನೆಯ ಹಂತ ತಲುಪಿದಲ್ಲಿ ಗರ್ಭಧಾರಣೆ ಕಷ್ಟಸಾಧ್ಯ ಮತ್ತು ಮುಂದುವರಿದ ಫಲವತ್ತತೆಯ ಚಿಕಿತ್ಸೆ ಅಗತ್ಯವಾಗುತ್ತದೆ.

ಎಂಡೋಮೆಟ್ರಿಯಾಸಿಸ್ ಮತ್ತು ಗರ್ಭಧಾರಣೆ

ಎಂಡೋಮೆಟ್ರಿಯಾಸಿಸ್‌ನ ಹಂತವು ಇಲ್ಲಿ ಬಹಳ ಮುಖ್ಯ ಎಂದು ಹೇಳುವುದು ಇದೇ ಕಾರಣಕ್ಕೆ. ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಇದು ನಿಮ್ಮ ತಾಯಿಯಾಗುವ ಕನಸಿಗೆ ಅಡ್ಡಿ ಬರದು. ಮಾತ್ರವಲ್ಲ, ಗರ್ಭಧಾರಣೆಯು ಎಂಡೋಮೆಟ್ರಿಯಾಸಿಸ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಅವಧಿಯಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು ಬಹುಪಾಲು ಎಂಡೋಮೆಟ್ರಿಯಾಸಿಸ್ ಅನ್ನು ಪರಿಹರಿಸಲು ಕಾರಣವಾಗುವುದರಿಂದ, ಲ್ಯಾಪರೊಸ್ಕೋಪಿ ನಡೆಸುವ ಮೊದಲು ಗರ್ಭಿಣಿಯಾಗುವಂತೆ ರೋಗಿಗೆ ಸೂಚಿಸಲಾಗುತ್ತದೆ. ಎಂಡೋಮೆಟ್ರಿಯಾಸಿಸ್ ಗಂಭೀರ ಸ್ವರೂಪ ತಾಳಿದಾಗ ಮಾತ್ರ ಗರ್ಭಧಾರಣೆ ಅಸಾಧ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಲ್ಯಾಪರೊಸ್ಕೋಪಿಯ ಅಗತ್ಯ ಬೀಳುತ್ತದೆ. ಗರ್ಭಧಾರಣೆಯ ನಂತರ ಎಂಡೋಮೆಟ್ರಿಯಾಸಿಸ್ ಮರುಕಳಿಸದಂತೆ ವೈದ್ಯರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಸ್ತನ್ಯಪಾನ ಮತ್ತುಜನನ ನಿಯಂತ್ರಣ ಮಾತ್ರೆಗಳು ಸಹ ಎಂಡೋಮೆಟ್ರಿಯಾಸಿಸ್ ಬೆಳವಣಿಗೆಯನ್ನು ವಿಳಂಬಗೊಳಿಸುತ್ತವೆ. ಆದ್ದರಿಂದ ಸ್ತನ್ಯಪಾನ ಅವಧಿ ಮುಗಿದ ನಂತರ, ಜನನ ನಿಯಂತ್ರಣ ಮಾತ್ರೆಗಳನ್ನು ಪ್ರಾರಂಭಿಸುವಂತೆ ರೋಗಿಗೆ ಸೂಚಿಸಲಾಗುತ್ತದೆ. ಮತ್ತೊಮ್ಮೆ ಗರ್ಭಿಣಿಯಾಗುವವರೆಗೆ ಅವರು ಈ ತಂತ್ರವನ್ನು ಮುಂದುವರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT