ಬುಧವಾರ, ಜನವರಿ 22, 2020
25 °C
ಭೂಮಿಕಾ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ –2020

ಜೀವದಾಯಿನಿಯರ ಜಲಗಾಥೆ!

ಮಾಲತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಒರತೆಯಾಗಿ ಹುಟ್ಟುವ ನದಿ ಹರಿಯುತ್ತ, ತನ್ನ ಪಾತ್ರವನ್ನು ತಾನೇ ಸೃಷ್ಟಿಸುತ್ತ, ಬಿದ್ದ ಮಳೆನೀರನ್ನು ಒಡಲೊಳಗೆ ಸೇರಿಸಿಕೊಳ್ಳುತ್ತ, ಹರಿವಿನಲ್ಲಿಯೇ ಶುದ್ಧವಾಗುತ್ತ, ಜೀವದಾಯಿನಿಯಾಗಿರುವಂತೆ ಥೇಟ್ ಹೆಂಗಸರ ಬದುಕು.

ಧಾರವಾಡದ ನಮ್ಮ ಮನೆ ಇರುವ ಬಡಾವಣೆಗೆ ನಗರಪಾಲಿಕೆಯವರು ಎಂಟು ದಿನಕ್ಕೊಮ್ಮೆ ಮೂರು ತಾಸು ಮಲಪ್ರಭಾ ನದಿ ನೀರು ಬಿಡುತ್ತಾರೆ. ನೀರು ಬಂದ ದಿನ ಇಡೀ ಬಡಾವಣೆಯಲ್ಲಿ ಹಬ್ಬದ ವಾತಾವರಣ. ಧೂಳಾಗಿ ಗಬ್ಬೆದ್ದು ಹೋದ ಕಾರು, ಸ್ಕೂಟರುಗಳನ್ನು ತೊಳೆಯುವವರು, ಮನೆಯ ಕಿಟಕಿ, ಗೋಡೆಗೆಲ್ಲ ನೀರೆರಚಿ ಸ್ವಚ್ಛ ಮಾಡುವವರು, ದಪ್ಪ ದಪ್ಪ ಚಾದರ, ಕೌದಿಗಳನ್ನೆಲ್ಲ ನೀರಲ್ಲಿ ಮುಳುಮುಳುಗಿಸಿ ತೊಳೆದು ಗೇಟಿಗೆ, ಕಾಂಪೌಂಡ್‌ ಮೋಟು ಗೋಡೆಗೆ ಒಣಹಾಕುವವರು, ಎಂಟು ದಿನದ ಹಿಂದೆ ತುಂಬಿಟ್ಟ ನೀರನ್ನು ಮೈಲಿಗೆ ಎಂದು ಭ್ರಮಿಸಿ ಗಿಡಕ್ಕೆ ಹಾಕುವವರು, ಆಗಾಗ ನಲ್ಲಿಗೆ ಜೋಡಿಸಿಟ್ಟ ಪೈಪು ಕಿತ್ತುಬಿದ್ದು ಹರಿದುಹೋಗುವ ನೀರನ್ನು ನೋಡಿ ಗೋಳಾಡುವವರು.. ಎಲ್ಲ ಸರಿ ಸುಮಾರಾಗಿ ಹೆಂಗಸರೇ.

ಒಂದೇ ಕಾಂಪೌಂಡಿನಲ್ಲಿ ನಾಲ್ಕಾರು ಮನೆಗಳಿದ್ದರೆ ನೀರು ಬಂದ ದಿನ ಒಗೆಯುವ ಕಲ್ಲಿಗಾಗಿಯೂ ಜಗಳವಾಗುತ್ತದೆ. ತಾಮ್ರ, ಹಿತ್ತಾಳೆಯ ಡ್ರಮ್ಮು, ಕೊಡಗಳೆಲ್ಲ ಹುಣಸೆಹಣ್ಣು, ಉಪ್ಪಿನಲ್ಲಿ ಮೈಯುಜ್ಜಿಸಿಕೊಂಡು ಥಳ ಥಳನೇ ಹೊಳೆಯುತ್ತ ಮತ್ತೆ ಹೊಸ ನೀರು (?) ತುಂಬಿಕೊಳ್ಳಲಣಿಯಾಗುತ್ತವೆ. ನೀರು ಬರುತ್ತದೆ ಎಂದು ಕಾಯುತ್ತಿರುವಾಗ (ಇದ್ದ ನೀರನ್ನೆಲ್ಲ ಗಿಡಗಳಿಗೆ ಸುರಿದು ಮುಗಿಸಿದಾಗ) ಒಮ್ಮೊಮ್ಮೆ ನೀರಿನ ಬದಲು ಅಲ್ಲೆಲ್ಲೋ ಪೈಪ್ ಒಡೆದಿದೆಯಂತೆ ಎಂಬ ಸುದ್ದಿ ಬರುತ್ತದೆ. ‘ಹಿಂಗಾದ್ರೆ ಹೆಂಗ್ ಜೀವ್ನಾ ಮಾಡೂದ್ರೀ ನೀವ ಹೇಳ್ರಿ. ಮೊದಲಿಕ್ಕ ಎಂಟ ದಿನಕ್ಕೊಮ್ಮೆ ನೀರ.. ಅಷ್ಟರ ಮ್ಯಾಲ ಇಂಥಾದ್ದೊಂದು ಸುದ್ದಿ..’ ಎಂದು ಜಲಸಂತ್ರಸ್ತ ಹೆಂಗಸರು ಸಮಾನಮನಸ್ಕ ಗೆಳತಿಯರಾಗಿ ದುಃಖ ಹಂಚಿಕೊಳ್ಳುತ್ತಿದ್ದರು.

‘ಹೆಣ್ಣಮಕ್ಕಳಾಗಬಾರದ್ರಿ. ನೀರಿನ ಚಿಂತೆ ಮಾಡಿ ಮಾಡಿ ಅರಜೀವಾಗ್ತೇವಿ ನೋಡ್ರೀ. ನನ ಗಂಡಾ ಕಂಠ ಭರ್ತಿ ಉಪ್ಪಿಟ್ಟು ತಿಂದು, ಚಾ ಕುಡಿದು, ಭೇಷಾಗಿ ಇಸ್ತ್ರೀ ಅರಬಿ ಹಾಕ್ಕೊಂಡು ಆಫೀಸಿಗೆ ಹೋದಾ.. ನಾ ಇಡೀ ದಿನಾ ಆಗಾಗ ನಳಾ ತಿರುಗಿಸಿ ನೀರು ಬಂತೇನು ಎಂದು ನೋಡ್ತಾ ಇರಬೇಕು. ಒಂದೇ ಮನಿಯಾಗಿರೊ ನನ್ನ ನಶೀಬೇನು, ಅವನ ಅದೃಷ್ಟೇನು!’ ಎನ್ನುವ ಪಾರ್ವತಿ ವೈನಿಯ ಕಾಮೆಂಟರಿ ಕೇಳಲು ಬಲು ಸೊಗಸು.

ಒಮ್ಮೆ ತುದಿ ಮನೆಯ ಜಲಜಾಕ್ಷಿ ನೀರು ಬರಬಹುದು ಎಂದು ಅಡುಗೆ ಮನೆಯ ನಳ ತಿರುಗಿಸಿ ನೋಡಿ ಬಂದ್ ಮಾಡಲು ಮರೆತು ಬೆಳಿಗ್ಗೆ ತಿಂದ ಉಪ್ಪಿಟ್ಟಿನ ಪಾತ್ರೆ, ತಟ್ಟೆ, ಬಟ್ಟಲನ್ನು ಸಿಂಕಿನಲ್ಲಿಟ್ಟು ಕೊಲ್ಲಾಪುರಕ್ಕೆ ಮದುವೆಗೆ ಹೋದಳು. ಅವಳು ಹೋಗಿ ಅರ್ಧ ಗಂಟೆಗೆ ನದಿ ನೀರು ಬಿಟ್ಟರು. ಅಡುಗೆ ಮನೆಯ ಸಿಂಕಿನಲ್ಲಿ ರಭಸದಿಂದ ಸುರಿಯಲಾರಂಭಿಸಿತು. ನೀರು ಹರಿದು ಹೋಗುವುದಕ್ಕೂ ಅವಕಾಶವಿರದೇ ಸಿಂಕಿನ ಹೊರಗೆ ಸುರಿದು ಬಾಗಿಲ ಚೌಕಟ್ಟಿಲ್ಲದ ಅವರ ಮನೆಯ ತುಂಬ ತುಂಬಿಕೊಂಡಿತು. ಸಂಜೆ ಅವರು ಮನೆಯ ಬಾಗಿಲು ತೆರೆದರೆ ಇಡೀ ಮನೆಯಲ್ಲಿ ಒಂದಡಿ ನೀರು ನಿಂತಿತ್ತು. ಪಾತ್ರೆಗಳು, ಬಟ್ಟೆಗಳೆಲ್ಲ ತೇಲಾಡುತ್ತಿದ್ದವು. ಮನೆಯ ಸ್ಥಿತಿ ನೋಡಿ ಕಂಗಾಲಾದ ಜಲಜಾಕ್ಷಿ ಅಳುತ್ತಾ ಮನೆ ಕ್ಲೀನ್ ಮಾಡುತ್ತಿದ್ದರೆ ಅವಳ ಗಂಡ ಸಹಾಯ ಮಾಡುವ ಬದಲು ‘ಬೇಜವಾಬ್ದಾರಿಯವಳು ನೀನು. ಇನ್ನು ನೀರಿನ ಬಿಲ್ ಎಷ್ಟು ಬರುತ್ತದೆಯೋ ಏನೋ?’ ಎಂದು ಬೈಯುತ್ತಾ ಕುಳಿತಿದ್ದನಂತೆ.

ಗದಗಿನ ಸಮೀಪವಿರುವ ಒಂದು ಹಳ್ಳಿಯಲ್ಲಿ ಕುಡಿಯುವ ನೀರಿಗೇ ತತ್ವಾರವಿತ್ತು. ಪ್ಲೋರೈಡ್‌ಯುಕ್ತ ಬೋರ್‌ವೆಲ್ ನೀರನ್ನು ಕುಡಿದು ಫ್ಲೋರೋಸಿಸ್ ರೋಗದಿಂದ ಬಳಲುತ್ತಿದ್ದರು. ಊರಿಗೆ ಸ್ವಯಂಸೇವಾ ಸಂಸ್ಥೆಯೊಂದು ಮಳೆಗಾಲದಲ್ಲಿ ಛಾವಣಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಅರಿವು ಮೂಡಿಸಲು ಪ್ರಾರಂಭಿಸಿತು. ಮನೆ ಮನೆಗೆ ಕಾರ್ಯಕರ್ತರು ಹೋಗಿ ಮಳೆನೀರನ್ನು ಸಂಗ್ರಹಿಸುವ ವಿಧಾನಗಳನ್ನು ಹೇಳಲು ಯತ್ನಿಸಿದರೆ ಅವರ ಪ್ರತಿಕ್ರಿಯೆಗಳು ಬಲು ಸ್ವಾರಸ್ಯಕರವಾಗಿದ್ದವು.

‘ನಿಮಗೆ ಮಾಡಾಕ ಬ್ಯಾರೆ ಕೆಲಸಿಲ್ಲೇನು? ಭೂಮ್ಯಾಗಿರೋ ನೀರು, ಹರಿಯೋ ನೀರು ಅಷ್ಟ ಕುಡಿಯಾಕ ಬರೂದು. ದೊಡ್ಡ ಬಂದುಬಿಟ್ಟಿರೀ ಮಳೆ ನೀರು ಹಿಡ್ರಿ ಅನ್ನಾಕ. ಛಾವಣಿ ಮ್ಯಾಲ ಹಕ್ಕಿಪಕ್ಕಿ ಹೊಲಸ ಮಾಡಿದ್ದೆಲ್ಲ ನಮ್ಮ ಹೊಟ್ಟಿಗೇ ಸೇರಬೇಕಂತೀರೇನು? ಅಲ್ಲಾ ನಮ್ಮ ಅಂಗೈ ಅಗಲದ ಛಾವಣಿ ಮ್ಯಾಲ ಅಪರೂಪಕ್ಕೊಮ್ಮೆ ಮಳೆ ಬರೋ ನಮ್ಮೂರಿನ್ಯಾಗೆ ಅದೆಷ್ಟು ನೀರು ಬೀಳತತ್ರಿ? ಟಾಕಿ ತುಂಬತತ್ತೇನ್ರಿ?’ ಎಂದೆಲ್ಲ ಕಾರ್ಯಕರ್ತರ ಜನ್ಮ ಜಾಲಾಡುತ್ತಿದ್ದರು. ಆದರೂ ಕಾರ್ಯಕರ್ತರು ಹಠ ಬಿಡದೇ ಒಂದು ವರ್ಷದ ಪ್ರಯತ್ನದಲ್ಲಿ ಸಾವಿರಾರು ಮನೆಗೆ ಛಾವಣಿ ನೀರಿನ ತೊಟ್ಟಿಗಳನ್ನು ಕಟ್ಟಿಸಿದರು. ಮಳೆ ನೀರು ಸಂಗ್ರಹಿಸಿ ಬಳಸಲಾರಂಭಿಸಿ ಊರಿನವರ ಆರೋಗ್ಯ ಸುಧಾರಿಸಿತು. ಈಗ ಆ ಊರ ಹೆಂಗಸರು ನೀರಿನ ತೊಟ್ಟಿಗಳಿಗೆ ಬೀಗ ಹಾಕಿಡುತ್ತಾರೆ! ನೀರನ್ನು ನಿಧಿಯಂತೆ ಕಾಪಾಡುತ್ತಾರೆ. ಅಷ್ಟೇ ಅಲ್ಲ ಸಂಸ್ಥೆಯ ಕಾರ್ಯಕರ್ತರಿಗೆ ಸನ್ಮಾನವನ್ನೂ ಮಾಡಿದ್ದಾರೆ!

ಇನ್ನೊಂದು ಸ್ವಯಂಸೇವಾ ಸಂಸ್ಥೆಯವರು ರಾಯಚೂರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಒಂದು ಕಿಲೋ ಮೀಟರ್ ದೂರದ ಕೆರೆಯಿಂದ ಜನರು ನೀರು ಹೊತ್ತು ತರುವುದನ್ನು ನೋಡಿ ಮರುಗಿ ಕುಡಿಯುವ ನೀರಿಗೆ ಛಾವಣಿ ನೀರು ಸಂಗ್ರಹ ಮಾಡುವುದನ್ನು ಕಲಿಸಿದರು. ಪೈಪ್ ಲೈನ್ ಮಾಡಿಸಿ ಕೆರೆಯ ನೀರನ್ನು ಮನೆ ಮನೆಗೆ ಬರುವಂತೆ ಮಾಡಿದರು. ಮನೆ ಮನೆಗೆ ಶೌಚಾಲಯ ಕಟ್ಟಲು ಸಹಾಯಧನ ನೀಡಿ ಕಟ್ಟಿಸಿಕೊಟ್ಟರು. ಎಲ್ಲ ಕೆಲಸಗಳು ಯಶಸ್ವಿಯಾಗಿ ಮುಗಿದಾಗ ಸಂಸ್ಥೆಯ ಮುಖ್ಯಸ್ಥರು ಆ ಊರಿಗೆ ಭೇಟಿ ನೀಡಿ ಮಹಿಳೆಯರಿಗೆ ‘ಅಮ್ಮಾ ಈಗ ನಿಮಗೆ ಅನುಕೂಲ ಆಗಿದೆ ಅಲ್ವಾ?‘ ಎಂದು ಕೇಳಿದರು.


ಮಾಲತಿ ಹೆಗಡೆ

‘ಇದೆಲ್ಲಾ ಯಾಕೆ ಮಾಡಿಸಿದ್ರಿ ಸಾರ್? ನಾವು ಹರೇದ ಹೆಂಗಸೂರು ಮುಂಜಾನೆ ಒಂದು ಕಪ್ ಕುಡಿದು ಕ್ಯಾರ ಚರಿಗಿ(ಕಕ್ಕಸಿಗೆ) ತಗೊಂಡು ಹೊಲದ ಕಡೆ ಹ್ವಾದ್ರೆ ಒಂದು ತಾಸು ಮನಿ ಕೆಲ್ಸಾ ತಪ್ಪತಿತ್ತು. ನಾಸ್ಟಾ ಮಾಡಿ ಕೆರಿಗೆ ನೀರು ತರಾಕ ಗೆಳತ್ಯಾರು ಸೇರಿಕೊಂಡು ಹೋಗತಿದ್ವಿ. ಕಷ್ಟಾ ಸುಖಾ ಮಾತಾಡಿಕೊಂತ, ನಕ್ಕೊಂತ, ಕೆಲಕೊಂತ ಕೆರ‍್ಯಾಗ ಅರಬಿ ತೊಳದು ಒಣಾ ಹಾಕಿ ಹೊಲದಾಗ ಅಡ್ಯಾಡಿ ಶೇಂಗಾ, ಸೌತೆಕಾಯಿ, ಕಡ್ಲೇಕಾಯಿ ತಿಂದು ಊಟದ ಟೈಮಿಗೆ ಒಣಾ ಅರಬಿಗಂಟು, ಒಂದ ಕೊಡಾ ನೀರು ಮನಿಗೆ ಹೊತಗೊಂಡು ಬರೂದ್ರಾಗ ಮನ್ಯಾಗಿರೋ ಮುದುಕ್ಯಾರು (ಅತ್ತೆಯೋ ಅಮ್ಮನೋ) ಅಡಗಿ ಮಾಡಿಟ್ಟಿರತಿದ್ರು. ಪಾಪ ದೂರದಿಂದ ನೀರು ತಂದಾರು ಅಂತ ಕಕ್ಕುಲಾತಿಲಿ ಊಟಾ ಹಾಕತಿದ್ರು. ಉಂಡು ಮಕ್ಕೊಂಡರ ಸಂಜಿ ತನಾ ನಿದ್ದಿ ಮಾಡಾಕ ಬಿಡತಿದ್ರು. ಹಿಂದಕ್ಕ ನಾವು ಸುಖವಾಗಿದ್ವಿ. ಈಗ ಮನಿಯಾಗ ಸಂಡಾಸು. ಮನಿ ಮುಂದಿನ ನಳಾ ತಿರುಪಿ ನೀರು ತುಂಬಿದ್ರಾತು. ನಿನಗೇನು ಕಷ್ಟ, ಮೂರು ಹೊತ್ತು ನಮಗ ಅಡುಗೆ ಮಾಡು ಅಂತಾರ‍್ರೀ ಮನಿಮಂದಿ. ಗೆಳತ್ಯಾರ ಜೋಡಿ ಮಾತಿಲ್ಲ ಕತಿ ಇಲ್ಲ. ಅರ ಗಳಿಗಿ ಕುಂದ್ರೂ ಹಂಗಿಲ್ಲ’ ಎಂದು ಹರೆಯದ ಹೆಂಗಸರು ತರಾಟೆಗೆ ತೆಗೆದುಕೊಂಡಾಗ ಸಂಸ್ಥೆಯ ಮುಖ್ಯಸ್ಥ ಕಂಗಾಲು.

ಮಲೆನಾಡಿನ ಆರ್ಭಟದ ಮಳೆಯಲ್ಲಿ ಇಡೀ ದಿನ ಸೊಂಟ ಬಗ್ಗಿಸಿ ನಿಂತು ಹೆಂಗಸರು ಗದ್ದೆ ನೆಟ್ಟಿ ಮಾಡುವುದನ್ನು ನೋಡಿ ಮರುಗುತ್ತ, ಅವರನ್ನು ಮಾತಾಡಿಸಿ ಬರಬೇಕೆಂದು ಒಂದು ದಿನ ಗದ್ದೆಗೆ ಹೋದೆ. ಅವರ ಹತ್ತಿರ ಹೋದಂತೆ ‘ಸೋ ಎನ್ನಿರೆ ಸೋಬಾನೆ ಎನ್ನಿರೆ..’ ಎಂದು ಸಂತೋಷದಿಂದ ಹೇಳುವ ಹಾಡು ಕೇಳಲಾರಂಭಿಸಿತು! ಬೊಚ್ಚು ಬಾಯಿ ದೇವಜ್ಜಿ ನಗುತ್ತಾ ‘ಯಾವೂರಾಕಿ ನೀ ಮಾಯಕಾತ್ರಿ?’ ಎಂದು ಹಾಡಿನಲ್ಲಿಯೇ ನನ್ನನ್ನು ಪ್ರಶ್ನಿಸಿದಳು. ಉಳಿದವರು ಗೊಳ್ ಎಂದು ನಕ್ಕರು. ಇತ್ತೀಚೆಗೆ ಮದುವೆಯಾದ ಹುಡುಗಿಯ ಬಳಿ ರಸಿಕ ಪ್ರಶ್ನೆಗಳನ್ನೆಸೆಯುತ್ತ ನಾ ಮುಂದೆ ತಾ ಮುಂದೆ ಎಂದು ಸ್ಪರ್ಧೆಯ ಮೇಲೆ ಭತ್ತದ ಸಸಿಗಳನ್ನು ಸಾಲಾಗಿ ನೆಡುತ್ತಿದ್ದರು. ಜೊತೆಗೆ ನಾಟಿ ಕೆಲಸ ಮುಗಿದು ಕೈಸೇರುವ ದುಡ್ಡಿನಿಂದ ಡಿಸ್ಕೌಂಟ್ ಸೇಲಿಗೆ ಹೋಗಿ ತರುವ ಸೀರೆಗಳ ಬಗ್ಗೆ ಚರ್ಚೆ ಆರಂಭಿಸಿದರು. ಶ್ರಮವನ್ನು ಸಂತೋಷವಾಗಿಸಿಕೊಳ್ಳುವ ಅವರ ಜೀವನ ಪ್ರೀತಿ ಮೆಚ್ಚಿಕೊಳ್ಳುವಂಥದ್ದು.

ಕೊಪ್ಪಳದ ಭತ್ತದ ಗದ್ದೆಗಳಲ್ಲಿ ರಾಸಾಯನಿಕಯುಕ್ತ ಗೊಬ್ಬರ ಬೆರೆತ ನೀರಿನಲ್ಲಿ ಕೆಲಸ ಮಾಡುವ ಹೆಂಗಸರ ಕೈಸಂದುಗಳೆಲ್ಲ ಕೊಳೆಯಲಾರಂಭಿಸಿವೆ. ಅವರು ಮಾಡಿದ ಅಡುಗೆಯನ್ನು ಅವರ ಮಕ್ಕಳೂ ತಿನ್ನಲು ಹಿಂದೇಟು ಹಾಕುತ್ತಾರಂತೆ. ಪಾದ ಮುಳುಗುವ ನೀರಿನಲ್ಲಿ ನಿಂತು ನಾಟಿ ಮಾಡುವ ಲಕ್ಷಾಂತರ ಹೆಂಗಸರು ಬಸಿದ ಬೆವರಿನ ಪರಿಮಳ ಉಣ್ಣುವ ಅನ್ನದಲ್ಲಿದೆ. ದುಡಿಮೆಗಾಗಿ ದಿನವಿಡೀ ಮನೆಯಿಂದಾಚೆ ಕಳೆಯುವ ಸಂದರ್ಭಗಳಲ್ಲಿ ಬಾಯಾರಿಕೆಯಾದರೂ ಜಲಬಾಧೆಗೊಳಗಾಗುವ ಭಯದಿಂದ ನೀರು ಕುಡಿಯಲಾರದ ಮಹಿಳೆಯರ ಕಷ್ಟ ಬಣ್ಣಿಸಲು ಅಕ್ಷರಗಳು ಸೋಲುತ್ತವೆ.

ರೇಡಿಯೊದಲ್ಲಿ ‘ಇಳಿದು ಬಾ ತಾಯಿ, ಇಳಿದು ಬಾ ಹರನ ಜಡೆಯಿಂದ..’ ಎಂಬ ಹಾಡು ಕೇಳಿದೊಡನೆ ಗಂಗೆಯ ಕಥೆ ನೆನಪಾಯಿತು. ಇಕ್ಷ್ವಾಕು ವಂಶದ ಸಗರ ರಾಜನ ಅರವತ್ತು ಸಾವಿರ ಮಕ್ಕಳು ಕಪಿಲ ಮಹರ್ಷಿಯ ಶಾಪಕ್ಕೆ ತುತ್ತಾಗಿ ಸುಟ್ಟು ಬೂದಿಯಾಗುತ್ತಾರೆ. ಮುಂದೆ ಅದೇ ವಂಶದ ಭಗೀರಥನ ತಪಸ್ಸಿಗೆ ಒಲಿದ ಗಂಗೆ ಭುವಿಗಿಳಿದು ಅರಸುಕುವರರಿಗೆ ಸದ್ಗತಿ ನೀಡುತ್ತಾಳೆ. ತುಂಗೆ, ಕಾವೇರಿ, ಗೋದಾವರಿ, ಮಣಿಕರ್ಣಿಕಾ, ಶರಾವತಿ.. ಮುಂತಾದ ಹೆಣ್ಣು ಹೆಸರಿನ ನದಿಗಳು ಯಾರೆಲ್ಲರ ಪಾಪವನ್ನು ತೊಳೆದಿವೆಯೋ ದೇವನೇ ಬಲ್ಲ! ಕೆರೆಗೆ ಹಾರವಾದ ಭಾಗೀರಥಿಯ ಕಥನ ಗೀತೆ ಹೃದಯವಿದ್ರಾವಕವಾದದ್ದು. ಇತಿಹಾಸದ ಪುಟ ತಿರುವಿದರೆ ಕೆರೆ, ಬಾವಿಗಳನ್ನು ಕಟ್ಟಿಸಿದ ರಾಣಿಯರ, ವೇಶ್ಯೆಯರ ಸಾಲು ಸಾಲು ಹೆಸರುಗಳು ಸಿಗುತ್ತವೆ.

ಒರತೆಯಾಗಿ ಹುಟ್ಟುವ ನದಿ ಹರಿಯುತ್ತ, ತನ್ನ ಪಾತ್ರವನ್ನು ತಾನೇ ಸೃಷ್ಟಿಸುತ್ತ, ಬಿದ್ದ ಮಳೆನೀರನ್ನು ಒಡಲೊಳಗೆ ಸೇರಿಸಿಕೊಳ್ಳುತ್ತ, ಹರಿವಿನಲ್ಲಿಯೇ ಶುದ್ಧವಾಗುತ್ತ, ಜೀವದಾಯಿನಿಯಾಗಿರುವಂತೆ ಥೇಟ್ ಹೆಂಗಸರ ಬದುಕು. ನೀರಿನೊಂದಿಗೆ ಒಡನಾಡುತ್ತ, ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ನೀರಿಗಾಗಿಯೇ ವ್ಯಯಿಸುತ್ತ, ಜನರ ಬದುಕಿಗಾಧಾರವಾಗುವವರ ಒಡಲೊಳಗೆ ನೀರಿನ ಸಂತಸದ, ಪರದಾಟದ, ಹೋರಾಟದ ಕಥೆಗಳಿವೆ. 

**

ತೀರ್ಪುಗಾರರ ಮಾತು

ಅಂತಿಮ ಸುತ್ತಿನಲ್ಲಿದ್ದ 23 ಪ್ರಬಂಧಗಳಲ್ಲಿ ಮೊದಲ ಬಹುಮಾನ ಪಡೆದ ಪ್ರಬಂಧ ‘ಜೀವದಾಯಿನಿಯರ ಜಲಗಾಥೆ’. ನೀರಿಗಾಗಿ ಪಡುವ ತಾಪತ್ರಯದಿಂದ ಆರಂಭವಾಗಿ ಪ್ರಸ್ತುತಕ್ಕೆ ಅತ್ಯಗತ್ಯವಾದ ಛಾವಣಿ ನೀರು ಸಂಗ್ರಹದಂತಹ ವಿಷಯ ಕೂಡಾ ಪ್ರಬಂಧದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ನೀರಿನೊಂದಿಗೆ ನೀರೆಯರಿಗಿರುವ ಅವಿನಾಭಾವ ಸಂಬಂಧದ ಆಪ್ತ ಚಿತ್ರಣ.

ದ್ವಿತೀಯ ಸ್ಥಾನ ಪಡೆದಿರುವ ‘ಯಾರಿಗ್ಹೇಳೋಣಾ ನನ್ನ ಪ್ರಾಬ್ಲೆಮ್ಮು?’ ಈ ಕಾಲದಲ್ಲಿ ಮನೆಯಲ್ಲಿ ನಾಲ್ಕೈದು ಟಾಯ್ಲೆಟ್‌ಗಳು, ಬಾತ್‌ರೂಮ್‌ಗಳನ್ನು ಕಟ್ಟಿಸಿಕೊಳ್ಳುವುದರಿಂದ ಆರಂಭವಾಗಿ ಬಯಲು ಶೌಚಾಲಯ, ಬಾಗಿಲಿಲ್ಲದ ಬಚ್ಚಲುಮನೆಗಳ ಕಾಲಕ್ಕೆ ಹಿಮ್ಮುಖವಾಗಿ ಹೊರಳುತ್ತದೆ. ಅನೇಕರ ಅನುಭವವಾಗಿರಬಹುದಾದ ಲಲಿತ ಪ್ರಬಂಧ.

ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟದಾಗಿ ನಡೆದುಕೊಳ್ಳುವ ಗಂಡಸರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಪದ್ಬಾಂಧವನಂತೆ ಕೆಲಸ ಮಾಡುವ ಹೇರ್‌ಪಿನ್‌ ಕುರಿತಾದ ಲಲಿತ ಪ್ರಬಂಧ ಮೂರನೇ ಸ್ಥಾನ ಪಡೆದ ‘ಅಲಂಕಾರಕ್ಕೆ ಸೈ, ಆಪದ್ಬಾಂಧವಳಿಗೆ ಜೈ’. ಹೇರ್‌ಪಿನ್‌ ಮೇಲೆ ಹೆಣ್ಣುಮಕ್ಕಳಿಗಿರುವ ಒಲವಿನೊಂದಿಗೆ ನಿರ್ಜೀವ ವಸ್ತುವೊಂದು ಆಪ್ತಬಂಧುವಿನಂತೆ ಸಮಯಕ್ಕೊದಗುವ ಕುರಿತಾದ ಪ್ರಬಂಧ.

ಮೆಚ್ಚುಗೆ ಪಡೆದ ಪ್ರಬಂಧ ‘ಎಮ್ಮಾಯಣ’ ಹಳ್ಳಿಮನೆಯಲ್ಲಿರುವ ಗೃಹಿಣಿಯೊಬ್ಬಳು ಕೊಟ್ಟಿಗೆಯಲ್ಲಿ ಸಾಕಿಕೊಂಡಿರುವ ಎಮ್ಮೆಗಳ ಕುರಿತಾಗಿ ಆಪ್ತವಾಗಿ ಹಂಚಿಕೊಳ್ಳುವ ಬರಹ. ಆ ಅನುಭವದಿಂದಷ್ಟೇ ಸಾಧ್ಯವಾಗುವಂತಹದ್ದು.

ಓದಿನ ನಂತರ ಮನದಲ್ಲೊಂದು ವಿಷಾದಭಾವವನ್ನು ಉಳಿಸಿಬಿಡುವ ಪ್ರಬಂಧ ‘ಏರಿದ ಬಸ್ಸಲಿ ಬೆರೆತಾಗ’. ಬಸ್ಸಿನ ಪ್ರಯಾಣದ ಸುಖದುಃಖಗಳನ್ನು ನೆನಪಿಸಿಕೊಳ್ಳುತ್ತಾ ತಂತಮ್ಮ ಸ್ಥಳ ಬಂದಾಗ ಎಲ್ಲರೂ ಪಯಣ ಮುಗಿಸಲೇಬೇಕಾದ ಅಧ್ಯಾತ್ಮದ ಸ್ಪರ್ಶದೊಂದಿಗೆ ಮುಕ್ತಾಯಗೊಳ್ಳುವ ಗಂಭೀರ ಪ್ರಕಾರದ ಪ್ರಬಂಧ.

ಒಟ್ಟಿನಲ್ಲಿ ಹೆಚ್ಚಿನ ಎಲ್ಲಾ ಪ್ರಬಂಧಗಳೂ ವರ್ತಮಾನದಿಂದ ಭೂತಕಾಲಕ್ಕೆ ಹೊರಳಿ, ಹಳೆಗಾಲದ ನೆನಪುಗಳನ್ನು ಮೆಲುಕು ಹಾಕುತ್ತಾ, ಅದರಲ್ಲಿನ ಸುಖದುಃಖಗಳನ್ನು, ಸ್ವಾರಸ್ಯವನ್ನು ದಾಖಲಿಸುವ ವಿವರಗಳೊಂದಿಗೆ ತಾದಾತ್ಮ್ಯ ಪಡೆದಿವೆ.

–ವಸುಮತಿ ಉಡುಪ

**

ಸಮೃದ್ಧ ಅನುಭವ ಮತ್ತು ಸಶಕ್ತ ನಿರೂಪಣಾಶೈಲಿ ದಕ್ಕಿದರೆ ಲೀಲಾಜಾಲವಾಗಿ ಲಲಿತ ಪ್ರಬಂಧ ಹೆಣೆಯಬಹುದೆಂಬುದು ನನ್ನ ಎಣಿಕೆ. ಅನುಭವಗಳಿಗೆ ಅಕ್ಷರ ರೂಪ ಕೊಡುವಾಗ ಅದಕ್ಕೆ ಓದಿಸಿಕೊಂಡು ಹೋಗುವ ಗುಣ ಎಷ್ಟರಮಟ್ಟಿಗೆ ಒದಗಿದೆ ಎನ್ನುವುದರ ಮೇಲೆ ಪ್ರಬಂಧ ಬರವಣಿಗೆಯ ಯಶಸ್ಸು ನಿಂತಿರುತ್ತದೆ.

ಸ್ಪರ್ಧೆಗೆ ಬಂದಿದ್ದ ಲಲಿತ ಪ್ರಬಂಧಗಳ ವೈವಿಧ್ಯಮಯ ವಸ್ತು ವಿನ್ಯಾಸ ಗಮನಿಸಿದಾಗ ಕೆಲವು ಮನಸ್ಸಿಗೆ ನಾಟುವ ನಿರೂಪಣೆಯಿಂದಾಗಿ ಗಮನ ಸೆಳೆಯುವಂತಿದ್ದವು. ಪ್ರಥಮ ಬಹುಮಾನ ಪಡೆದ ‘ಜೀವದಾಯಿನಿಯರ ಜಲಗಾಥೆ’ ವಸ್ತು ಹಾಗೂ ಸಶಕ್ತ ನಿರೂಪಣೆಯಿಂದಾಗಿ ಗಮನ ಸೆಳೆಯುತ್ತದೆ. ‘ನೀರು ಬಂದ ದಿನ ಇಡೀ ಬಡಾವಣೆಯಲ್ಲಿ ಹಬ್ಬದ ವಾತಾವರಣ’ ಎಂದು ಆರಂಭವಾಗುವ ಪ್ರಬಂಧವು ಸ್ತ್ರೀಯರಿಗೂ ನೀರಿಗೂ ಅವಿನಾಭಾವ ಬಾಂಧವ್ಯವಿದೆ ಎಂಬುದನ್ನು ಸೂಚಿಸುತ್ತದೆ. ಜೀವನದಾಯಿನಿಯಾದ ಜಲದ ಬಗೆಗೆ ಲೇಖಕಿ ಅಗಾಧ ಅರ್ಥವ್ಯಾಪ್ತಿ ನೀಡುತ್ತಾರೆ.

ದ್ವಿತೀಯ ಬಹುಮಾನ ಪಡೆದ ‘ಯಾರಿಗ್ಹೇಳೋಣಾ ನನ್ನ ಪ್ರಾಬ್ಲೆಮ್ಮು?’ ಪ್ರಬಂಧದಲ್ಲಿ ಮಧ್ಯಮ ವರ್ಗದ ಮಹಿಳೆ, ಕಟ್ಟಲಿರುವ ಹೊಸ ಮನೆಯಲ್ಲಿ ಬಚ್ಚಲು ಮತ್ತು ಸಂಡಾಸು ಕೋಣೆಗಳು ಎಲ್ಲಿ, ಹೇಗಿರಬೇಕೆಂಬ ಜಿಜ್ಞಾಸೆ ನಡೆಸುತ್ತಾರೆ. ಮನೆಯಾಕೆಗೆ ಇರಬೇಕಾದ ಮನೆವಾಳ್ತೆಯ ಸಹಜ ಕಾಳಜಿಯಿಂದ ಪ್ರಬಂಧ ಓದಿಸಿಕೊಂಡು ಹೋಗುತ್ತದೆ.

ತೃತೀಯ ಬಹುಮಾನಕ್ಕೆ ಆಯ್ಕೆಯಾದ ‘ಅಲಂಕಾರಕ್ಕೆ ಸೈ ಆಪದ್ಬಾಂಧವಳಿಗೆ ಜೈ’ ಪ್ರಬಂಧ ಕೂಡ ತೀವ್ರ ಗಮನ ಸೆಳೆಯುವ ಗುಣ ಹೊಂದಿದೆ. ‘ಯಾಕೊ ಏನೋ ಈ ಹೇರ್‌ಪಿನ್ ನನ್ನನ್ನು ಚಿಕ್ಕಂದಿನಿಂದಲೂ ಕಾಡುವ ವಸ್ತುವಾಗಿದೆ’ ಎಂದು ಆರಂಭವಾಗಿ, ‘... ಹೆಣ್ಣು ಮಕ್ಕಳನ್ನು ಸಂಭಾಳಿಸುವಲ್ಲಿ ಅನಿವಾರ್ಯವಾಗುವ ಪರಿ’ಯನ್ನು ಆಪ್ತವಾಗಿ ವಿವರಿಸುತ್ತದೆ.

 ಇನ್ನು ಮೆಚ್ಚುಗೆ ಪಡೆದ ಪ್ರಬಂಧಗಳಲ್ಲಿ ‘ಎಮ್ಮಾಯಣ’ದಲ್ಲಿ ಹಳ್ಳಿಯ ಬದುಕಿನಲ್ಲಿ ಎಮ್ಮೆ ಸಾಕುವುದರ ಹಿಂದಿನ ಸುಖ ಸವಲತ್ತನ್ನು ಗಾಢವಾಗಿ ಲೇಖಕಿ ವಿವರಿಸುತ್ತಾರೆ. ನಿರೂಪಣೆಗೆ ಸಹಜವಾದ ಆಪ್ತತೆ ದಕ್ಕಿದೆ.

‘ಏರಿದ ಬಸ್ಸಲಿ ಬೆರೆತಾಗ’ ಪ್ರಬಂಧವೂ ಅಷ್ಟೇ. ಲೇಖಕಿಗೆ ಬಸ್ ಪ್ರಯಾಣದಲ್ಲಿ ದಕ್ಕಿದ ತಮ್ಮ ಖಾಸಾ ಅನುಭವಗಳನ್ನು ನಿರಾಯಾಸವಾಗಿ ಬರೆದುಕೊಂಡು ಹೋಗಿದ್ದಾರೆ. ಕೊನೆಯಲ್ಲಿ, ಬಸ್ಸಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಮಹಿಳೆಯೊಬ್ಬಳ ಮಗ ಅಮೆರಿಕದಲ್ಲಿ ನೆಲೆ ನಿಂತ ಪರಿಣಾಮವಾಗಿ, ಪತಿಯನ್ನೂ ಕಳೆದುಕೊಂಡು, ‘ಈಗ ವೃದ್ಧಾಶ್ರಮ ಸೇರಲು ಹೊರಟಿದ್ದೇನೆ’ ಎಂದು ಹೇಳಿದಾಗ ದಿಗ್ಭ್ರಮೆಯಾಗುತ್ತದೆ.

ಮಹಿಳೆಯರು ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳಿಗೆ ಅಕ್ಷರ ರೂಪ ಕೊಡುವ ಇಲ್ಲಿನ ಪ್ರಯತ್ನಕ್ಕೆ ಮೆಚ್ಚುಗೆಯಾಗುತ್ತದೆ.
–ಈರಪ್ಪ ಎಂ. ಕಂಬಳಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು