ಪಟ್ಟೇದಂಚಿನ ಸೀರಿಯುಟ್ಟು ಪಟ್ಟಕ್ಕ ಏರ್ಯಾಳ ಗೌರಿ, ಮಾವ ಉಡಿಸಿದ ಸೀರಿಯುಟ್ಟು ಮದುಮಗಳು ಆಗ್ಯಾಳ ಗೌರಿ

ಹೀಗೆ ಹಾಡು ಹೇಳುವಾಗ ಸೋದರ ಮಾವ ತಂದಿರುವ ಸೀರೆ ಉಡಿಸುವ ಸಂಪ್ರದಾಯ ಉತ್ತರ ಕರ್ನಾಟಕದ ಮದುವೆಗಳಲ್ಲಿದೆ.

ಪಟ್ಟೇದಂಚಿನ ಸೀರೆ ಕೈಮಗ್ಗದಲ್ಲಿ ನೇಯಲಾಗುತ್ತಿತ್ತು. ಕಡುಕೆಂಪು ಬಣ್ಣದ ಕುಂಕುಮದ ಒಡಲು, ಅರಿಸಿಣ ಬಣ್ಣದ ಅಂಚು, ಅದರೊಳಗೆ ಮತ್ತೆ ಕೆಂಬಣ್ಣದ ಪಟ್ಟಿ, ಸಣ್ಣೆಳೆಯ ಚೌಕಡಿಗಳಿರುವ ಸೀರೆ ಇದು. ಅರಿಸಿಣ–ಕುಂಕುಮ ಸೌಭಾಗ್ಯದ ಲಕ್ಷಣ ಆದ್ರ ಚೌಕಡಿಗಳು ಮನಿಯನ್ನ, ಮನಿತನದ ಗೌರವ ಹೊದ್ದು ನಡೀಬೇಕು ಅಂತ್ಹೇಳ್ತಿತ್ತು.

ಹತ್ತನೇ ಶತಮಾನದಿಂದ ಲಿಂಗಾಯತ ಸಮುದಾಯದ ಹೆಣ್ಣುಮಕ್ಕಳ ಅಸ್ಮಿತೆಯಂತಿದ್ದ ಈ ಸೀರೆ, ಸಹಸ್ರಮಾನದಿಂದ ಈಚೆಗೆ ಮಾಯವಾಗಿತ್ತು. ಆದರೆ ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಒತ್ತಿದೆ.

ಕಾರಣ, ಇವನ್ನು ಎರಡೂ ಬದಿಯಲ್ಲಿ ಉಡಬಹುದು. ಶತಮಾನಗಳ ಕಾಲ ಈ ಸೀರೆ ಬಾಳಿಕೆ ಬರುತ್ತದೆ. ಬಣ್ಣ ಮಾಸುವುದಿಲ್ಲ. ಚರ್ಮಕ್ಕೆ ಹಿತವಾಗಿರುತ್ತದೆ. ಮೈಗಂಟಿಕೊಂಡು, ಉಡುವ, ಒಪ್ಪ ಓರಣ ಮಾಡುವ ಗೊಡವೆಯೇ ಇರುವುದಿಲ್ಲ. ಈ ಸೀರೆಗಳಿಗೆ ಗೊತ್ತು, ನೀರೆಯರ ಮೈಗುಣ.

ಈಗ ಪಟ್ಟೇದಂಚಿನ ಸೀರೆ, ಗೋಮಿ ತೆನಿ ಸೀರೆ, ಗಾಡಿದಡಿ ಸೀರೆ... ಹೀಗೆ ಒಂದೆರಡಲ್ಲ 14 ಬಗೆಯ ಸಾಂಪ್ರದಾಯಿಕ ನೇಯ್ಗೆಯ ಬಗೆಗಳನ್ನು ಪುನರುಜ್ಜೀವನಗೊಳಿಸಲಾಯಿತು.

ಅರೆರೆ ಇರಿ, ಈ ಕತೆಯೇ ಪುನರುಜ್ಜೀವನದ್ದು. ‘ಪುನರ್ಜೀವನ’ ಎಂಬ ಸಂಸ್ಥೆಯದ್ದು. ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ಹೇಮಲತಾ ಜೈನ್ ಎಂಬ ಜವಳಿ ತಜ್ಞೆ. ಅಮೆರಿಕದಲ್ಲಿ ನೈಜ ಬಣ್ಣಗಳ ಕುರಿತು ಸಂಶೋಧನೆ ಮಾಡುತ್ತಿದ್ದ ಹೇಮಲತಾ ಜೈನ್ ಅವರಿಗೆ ಬಣ್ಣಗಳು ಸೆಳೆದು ತಂದಿದ್ದು ಕರ್ನಾಟಕದ ಗದಗ ಜಿಲ್ಲೆಯ ಗಜೇಂದ್ರಗಢಕ್ಕೆ.

ಜನರ ಆಡುಮಾತಿನಲ್ಲಿ ‘ಗಢ’ ಎಂದು ಕರೆಯಲಾಗುವ ಈ ಊರಿನಲ್ಲಿ ಲಗಾಯ್ತಿನಿಂದಲೂ ಬಟ್ಟೆಗೆ ಬಣ್ಣ ಹಾಕುವ ಕೆಲಸ ಮಾಡಲಾಗುತ್ತದೆ. ಅಳಿಯದ ಬಣ್ಣ, ಗಾಢ ಬಣ್ಣಗಳನ್ನು ಮಗ್ಗದ ನೂಲಿಗೆ ಹಾಕಿ ಕೊಡುವ ‘ರಂಗರೇಜಿ’ಗಳ ಗಲ್ಲಿಗಳೇ ಈ ಊರಲ್ಲಿದ್ದವು. ಇವನ್ನೇ ಹುಡುಕಿಕೊಂಡು ಬಂದಾಗ, ನಗರೀಕರಣದ ಪರಿಣಾಮ ಎಂಬಂತೆ, ಮಗ್ಗಗಳೇ ಕಡಿಮೆಯಾಗಿದ್ದವು. ಕೈ ಮಗ್ಗಗಳೆಲ್ಲ ಮೂಲೆಗುಂಪಾಗಿದ್ದವು.

ನೈಜ ಬಣ್ಣಗಳ ಬಗ್ಗೆ ಹುಡುಕಲು ಹೋದ ಹೇಮಲತಾ ಅಲ್ಲಿಯ ಸಾಂಪ್ರದಾಯಿಕ ನೇಯ್ಗೆ ಸೀರೆಗಳತ್ತ ಇನ್ನಷ್ಟು ಆಕರ್ಷಿತರಾದರು. ಪಟ್ಟೇದ ಅಂಚಿನ ಸೀರೆಗಳ ಬಗ್ಗೆ ದಾಖಲೆಗಳನ್ನು ಹುಡುಕತೊಡಗಿದರು. ಬಣ್ಣಕ್ಕೆ ಬಂದವರು, ಇಲ್ಲಿಯ ನೇಕಾರಿಕೆಯ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಕಟಿಬದ್ಧರಾದರು.

ಇಲ್ಲಿಯ ಗೋಮಿತೆನಿ (ಗೋಧಿ ತೆನೆಯ ಚಿತ್ತಾರ ಇರುವ ಅಂಚುಗಳಿರುತ್ತವೆ) ಹುಬ್ಬಳ್ಳಿ ಅಥವಾ ಗಾಡಿದಡಿ ಹುಬ್ಬಳ್ಳಿ ಗದುಗಿನ ನಡುವೆ ಹೊಸತಾಗಿ ರೈಲು ಶುರುವಾದಾಗ, ನೇಕಾರರು ರೈಲು ಹಳಿ ಮತ್ತು ಗಾಲಿಗಳ ಚಿತ್ರದ ದಡಿ ತಯಾರಿಸಿದರು. ಇದು ಗಾಡಿದಡಿಯಾಗಿ ಬದಲಾಯಿತು. ಆನೆಯ ಚಿತ್ತಾರ ಬಾಗಲಕೋಟೆಯಿಂದ ಜನಪ್ರಿಯವಾದರೆ, ನವಲಗುಂದದಿಂದ ನವಿಲಿನ ಚಿತ್ತಾರ. ಜೊತೆಗೆ ರುದ್ರಾಕ್ಷಿಯ ಚಿತ್ತಾರಗಳ ಖಣಗಳು ಬಂದಂತೆ ಅಂಜುಗಳಲ್ಲಿಯೂ ಬಂದವು. ಆನೆ ಹೆಜ್ಜೆಯ ಚಿತ್ರಗಳ ಸೀರೆಗಳೂ ಬಂದವು.

ಶತಮಾನದ ಸೀರೆ...

ಪಟ್ಟೇದಂಚು ಸೀರೆಯ ಮಾದರಿ ಹುಡುಕುವಾಗ ಸವದತ್ತಿಯತ್ತ ಹೇಮಾ ಪಯಣ ಬೆಳೆಸಿದರು. ಅಲ್ಲಿದ್ದ ದೇವದಾಸಿ ಒಬ್ಬರ ಬಳಿ ಪಟ್ಟೇದಂಚಿನ ಸೀರೆ ಇತ್ತು. ಅಧ್ಯಯನಕ್ಕೆ ಕೇಳಿದಾಗ, ದೇವಿ ಉಡುಗೆ ಇದು, ಯಾರಿಗೂ ಕೊಡಲಾರೆ ಎಂದು ನಿರಾಕರಿಸಿದರು. ಆಗ ಒಂದೆರಡು ಎಳೆಗಳನ್ನು ಬಿಡಿಸಿ ತಂದ ಹೇಮಾ, ಆ ಎಳೆಯನ್ನು ಪ್ರಯೋಗಾಲಕ್ಕೆಯ ಕಳುಹಿಸಿದರು. ಸುಟ್ಟು ನೋಡಿದರು. ಆ ಎಳೆ ಒಂದೆರಡಲ್ಲ, 200 ವರ್ಷಗಳ ಇತಿಹಾಸವನ್ನೇ ಹೊಂದಿತ್ತು. ಪರಿಶುದ್ಧ ಹತ್ತಿಯ ಎಳೆಯಿಂದ ಮಾಡಿದ ಈ ಎಳೆಯ ಬಣ್ಣ, ಬಾಳಿಕೆಗಳು ಇವರ ಕಣ್ಣರಳಿಸುವಂತೆ ಮಾಡಿದ್ದವು.

ಗಜೇಂದ್ರ ಗಢದ ಬಡ ನೇಕಾರರ ಮನೆಗೆ ಹೋದಾಗ, ಇವರು ಬೆಂಗಳೂರಿನವರು ಇವರಿಗೇನು ಗೊತ್ತು ನಮ್ಮ ಕಷ್ಟ ಎಂಬಂತೆ ಕಾಣಲಾಗುತ್ತಿತ್ತು. ಆದರೆ ಅವರಿಗೆ ನೂಲು, ಕಚ್ಚಾ ವಸ್ತುಗಳನ್ನು ನೀಡಿ ಮಗ್ಗಗಳನ್ನು ಆರಂಭಿಸಲು ಪ್ರೋತ್ಸಾಹಿಸಲಾಯಿತು. ಮತ್ತೆ ಮಗ್ಗಗಳ ‘ಡಕ್ಡಕ್ ಡಕ್ ಡಕ್’ ಸದ್ದು ಲಯಬದ್ಧವಾಗಿ ಕೇಳಿಸತೊಡಗಿದಾಗ ಪರಂಪರೆಯೊಂದು ಮತ್ತೊಮ್ಮೆ ಆರಂಭವಾಯಿತು.

ಮೊದಲು ಅಲ್ಲೊಂದು, ಇಲ್ಲೊಂದು ಕಾರ್ಯನಿರ್ವಹಿಸುತ್ತಿದ್ದ ಕೈಮಗ್ಗಗಳು ಇದೀಗ ನೂರಾರು ಆಗಿವೆ. ನೂರಾರು ಜನ ಮಹಿಳೆಯರು ತರಬೇತಿ ಪಡೆದಿದ್ದಾರೆ. ‘ಪುನರ್ಜೀವನ’ ಸಂಸ್ಥೆಯೊಂದಿಗೆ ಅಜಮಾಸು 80 ಜನ ನೇಕಾರರು ಕೈಜೋಡಿಸಿದ್ದಾರೆ. ಒಂದೊಂದು ಸೀರೆಗೆ ₹250–1,350 ರ ವರೆಗೂ ಕೂಲಿ ಪಡೆಯುತ್ತಿದ್ದಾರೆ.

ಭಾರತೀಯ ಕರಕುಶಲ ಮಂಡಳಿ (ಇಂಡಿಯನ್ ಕ್ರಾಫ್ಟ್ ಕೌನ್ಸಿಲ್)ನ ಮಾನ್ಯತೆ ಸಿಕ್ಕ ನಂತರ ಉತ್ತರ ಕರ್ನಾಟಕದ ನೇಕಾರಿಕೆಯ ಸೀರೆಗಳು, ಅರೆ ಹೊಲಿದ ಕುಬಸಗಳು, ಕೈಚೀಲಗಳು, ಸ್ಟೋಲ್ಗಳು ಜನರ ಮನ ಸೆಳೆಯುತ್ತಿವೆ.

ಇದೆಲ್ಲವೂ ಸಾಧ್ಯವಾಗಿದ್ದು 2015ರಲ್ಲಿ ‘ಪುನರ್ಜೀವನ’ ಸಂಸ್ಥೆ ಆರಂಭವಾದಾಗಿನಿಂದ. ರಸೂಲ್ ಸಾಬ್ ಅವರು ಒಂದು ಮಗ್ಗದಿಂದ ಶುರುಮಾಡಿದ್ದರು. ಇದೀಗ ಎಂಟಕ್ಕೂ ಹೆಚ್ಚು ಮಗ್ಗಗಳಿವೆ. ಯಾವ ಜಾತಿ ಬೇಧವಿಲ್ಲದೆ ನೂಲಿನೆಳೆಗಳನ್ನು ನೇಯುತ್ತ, ಕರ್ನಾಟಕದ ಜವಳಿ ಪರಂಪರೆಯ ಹಿರಿಮೆಯನ್ನು ‘ಪುನರ್ ಜೀವನ’ ಸಂಸ್ಥೆ, ಹೇಮಲತಾ ಜೈನ್ ಎತ್ತಿ ಹಿಡಿಯುತ್ತಿದ್ದಾರೆ. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.