ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲೂ ಅರಳಲಿ ಹವ್ಯಾಸದ ಹೂ

Last Updated 1 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಹವ್ಯಾಸದ ಹಾದಿಗೆ ವಯಸ್ಸಿನ ಅಂತರವಿಲ್ಲ. ಮೂರರ ಮಗುವಿನಿಂದ ಅರವತ್ತು ವಯಸ್ಸಿನವರೆಗೂ ಹವ್ಯಾಸದಲ್ಲಿ ತೊಡಗಿಕೊಳ್ಳಬಹುದು. ಎಳವೆಯಲ್ಲೇ ಮಕ್ಕಳಿಗೆ ಹವ್ಯಾಸವನ್ನು ರೂಢಿಸಿದರೆ ಅದು ಅವರ ಭವಿಷ್ಯದ ಬದುಕಿಗೆ ವರವಾಗುವುದರಲ್ಲಿ ಸಂಶಯವಿಲ್ಲ.

ಹವ್ಯಾಸ ಅನೇಕರ ಬದುಕಿನ ಭಾಗ. ಇದು ಬರೀ ಸಮಯ ಕಳೆಯಲು ಮಾತ್ರವಲ್ಲ; ಬದುಕಿನ ಅನೇಕ ಹೆಜ್ಜೆಗಳಲ್ಲಿ ನಮಗೆ ನೆರವಾಗುತ್ತದೆ. ಹಾಗಾದರೆ ಈ ಹವ್ಯಾಸದ ಪ್ರವೃತ್ತಿ ಕೇವಲ ಹಿರಿಯರಲ್ಲಿ ಮಾತ್ರ ಬೆಳೆಯಬೇಕೇ? ಖಂಡಿತ ಇಲ್ಲ. ಮಕ್ಕಳೂ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಬಾಲ್ಯದಿಂದಲೇ ಮಕ್ಕಳನ್ನು ಬೇರೆ ಬೇರೆ ಹವ್ಯಾಸಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದರೆ ಅವರ ಭವಿಷ್ಯದ ಹೆಜ್ಜೆ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪೋಷಕರು ಯೋಚಿಸಬೇಕು. ಅಲ್ಲದೇ ಪೋಷಕರ ಪ್ರೋತ್ಸಾಹವು ಮಕ್ಕಳ ಹವ್ಯಾಸಕ್ಕೆ ಬುನಾದಿ.

ಹವ್ಯಾಸಗಳು ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರುವ ಜೊತೆಗೆ ಅವರ ಸಂಪೂರ್ಣ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಅದರೊಂದಿಗೆ ಅವರಲ್ಲಿ ಸಾಮಾಜಿಕ, ಕ್ರಿಯಾತ್ಮಕ ಹಾಗೂ ಶೈಕ್ಷಣಿಕ ಕೌಶಲವೂ ವೃದ್ಧಿಗೊಳ್ಳುತ್ತದೆ.

ಮನಸ್ಸಿಗೆ ಮುದ ಹಾಗೂ ನೆಮ್ಮದಿ ಸಿಗಲು ಹವ್ಯಾಸ ಒಂದು ಉತ್ತಮ ದಾರಿ. ಇದು ತೀರಾ ವೈಯಕ್ತಿಕವಾದದ್ದು ಕೂಡ. ಜೊತೆಗೆ ನಮ್ಮ ಮನಸ್ಸಿಗೆ ಇಷ್ಟವಾಗುವುದನ್ನಷ್ಟೇ ನಾವು ಹವ್ಯಾಸವನ್ನಾಗಿಸಿಕೊಳ್ಳಲು ಸಾಧ್ಯ. ಅದು ಕಪ್ಪೆಚಿಪ್ಪುಗಳನ್ನು ಸಂಗ್ರಹಿಸುವುದು, ಹೂದೋಟ ಮಾಡುವುದು, ಪೇಂಟಿಂಗ್ ಮಾಡುವುದು ಹೀಗೆ ಹವ್ಯಾಸಗಳ ಹಾದಿ ಮುಂದುವರಿಯುತ್ತದೆ.

ವಯಸ್ಕರಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ಕೆಲಸಗಳು ಹಾಗೂ ಬದ್ಧತೆಯ ಕಾರಣದಿಂದ ಹವ್ಯಾಸವನ್ನು ರೂಢಿಸಿಕೊಳ್ಳುವುದು ಕಷ್ಟವಾಗಬಹುದು. ಆದರೆ ಮಕ್ಕಳಿಗೆ ಹಾಗಲ್ಲ. ಅವರು ತಮ್ಮ ವಯಸ್ಸು ಹಾಗೂ ಆಸಕ್ತಿಗೆ ಅನುಗುಣವಾಗಿ ಬೇರೆ ಬೇರೆ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಅಮೆರಿಕದ ಚೈಲ್ಡ್ ಡೆವಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಹೇಳುವ ಪ್ರಕಾರ ‘ಹವ್ಯಾಸಗಳಿಂದ ಮಕ್ಕಳಿಗೆ ವಿವಿಧ ರೀತಿಯ ಲಾಭಗಳಿವೆ. ಇದರಿಂದ ಮಕ್ಕಳು ತಮ್ಮ ಮನದ ಭಾವನೆಗಳನ್ನು ಹೊರ ಹಾಕಲು, ತಾವು ಮಾಡಿದ ಆವಿಷ್ಕಾರಗಳನ್ನು ಪ್ರಸ್ತುತಪಡಿಸಲು ಹಾಗೂ ಮಕ್ಕಳಲ್ಲಿ ಆತ್ಮಾಭಿಮಾನ ಹೆಚ್ಚಲು ಇದು ಸಹಕಾರಿ.

ಹವ್ಯಾಸದಲ್ಲಿ ಶೈಕ್ಷಣಿಕ ಅಂಶಗಳು ಇರುವುದರಿಂದ ಮಕ್ಕಳ ಕಲಿಕೆಗೂ ಸಹಕಾರಿ. ಮಕ್ಕಳಲ್ಲಿ ಕಲ್ಲುಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ ಭೂವಿಜ್ಞಾನ ಹಾಗೂ ವಿಜ್ಞಾನ, ಮಗುವಿನಲ್ಲಿ ಬರವಣಿಗೆಯ ಹವ್ಯಾಸವಿದ್ದರೆ ಉತ್ತಮವಾಗಿ ವಾಕ್ಯರಚನೆ ಹಾಗೂ ವ್ಯಾಕರಣಗಳ ಬಳಕೆಯನ್ನು ಕಲಿಯಬಹುದು. ಹವ್ಯಾಸಗಳು ಮಕ್ಕಳಲ್ಲಿ ಗುರಿ ಸಾಧನೆಗೆ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಾಗೂ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತವೆ. ಅದರೊಂದಿಗೆ ಮಕ್ಕಳು ತಮ್ಮ ಭವಿಷ್ಯದಲ್ಲಿ ಏನಾಗಬಹುದು ಎಂಬುದನ್ನು ಅವರ ಹವ್ಯಾಸದಿಂದಲೇ ತಿಳಿದುಕೊಳ್ಳಬಹುದು.

ಹಾಗಾದರೆ ಹವ್ಯಾಸಗಳು ಮಕ್ಕಳು ಹೈಸ್ಕೂಲ್‌ಗೆ ಬಂದ ಮೇಲೆ ಕಲಿಯಬೇಕೇ? ಖಂಡಿತ ಇಲ್ಲ. 6 ವರ್ಷದ ಒಳಗಿನ ಮಕ್ಕಳಲ್ಲೂ ಹವ್ಯಾಸವನ್ನು ರೂಢಿಸಬಹುದು. ಅಂತಹ ಕೆಲವು ಹವ್ಯಾಸಗಳು ಮಕ್ಕಳ ಭವಿಷ್ಯಕ್ಕೆ ಉತ್ತಮವಾಗಿಸುವುದರಲ್ಲಿ ಸಂಶಯವಿಲ್ಲ.

ಹೂದೋಟ ಮಾಡುವುದು
ಹೂದೋಟ ಮಾಡುವುದು ಆಸಕ್ತಿದಾಯಕ ಕೆಲಸ. ಜೊತೆಗೆ ಇದರಿಂದ ಮನರಂಜನೆಯೂ ಸಿಗುತ್ತದೆ. ಮಕ್ಕಳು ಮಣ್ಣಿನ ಪಾತಿಗಳನ್ನು ಮಾಡಬಹುದು, ಸ್ಯಾಂಡ್‌ಪಿಟ್‌ನೊಂದಿಗೆ ಆಟವಾಡಬಹುದು, ಪಾಟ್‌ಗಳಲ್ಲಿ ಮಣ್ಣು ತುಂಬಿಸಬಹುದು ಮತ್ತು ಬೀಜಗಳನ್ನು ಬಿತ್ತಬಹುದು. ತಾವೇ ಬಿತ್ತಿ ಬೆಳೆದ ಗಿಡಗಳಲ್ಲಿ ಹೂ ಹಣ್ಣನ್ನು ನೋಡಿ ಮಕ್ಕಳು ಖುಷಿಪಡುತ್ತಾರೆ. ಜೊತೆಗೆ ಎಳವೆಯಲ್ಲೇ ಹೂ, ಹಣ್ಣು, ತರಕಾರಿಗಳನ್ನು ಮನೆಯಲ್ಲೇ ಬೆಳೆದು ತಿನ್ನುವ ಹವ್ಯಾಸವೂ ರೂಢಿಯಾಗುತ್ತದೆ.ಇದರಿಂದ ಮಕ್ಕಳಿಗೆ ಜೀವನಚಕ್ರ ಹೇಗೆ ಆರಂಭವಾಗುತ್ತದೆ ಹಾಗೂ ಗಿಡ–ಮರಗಳನ್ನು ಹೇಗೆ ಪೋಷಿಸಬೇಕು ಎಂಬುದರ ಕುರಿತು ಅರಿವು ಮೂಡುತ್ತದೆ. ಅದರೊಂದಿಗೆ ಗಾರ್ಡ್‌ನಿಂಗ್‌ ಮಾಡುವುದರಿಂದ ಮಕ್ಕಳಲ್ಲಿ ತಾಳ್ಮೆಯ ಜೊತೆಗೆ ಕಠಿಣ ಪರಿಶ್ರಮದ ಅರಿವು ಮೂಡುತ್ತದೆ.

ಪೇಂಟಿಂಗ್‌
ಚಿತ್ರ ಬಿಡಿಸಲು ಹಾಗೂ ಬಣ್ಣ ಹಚ್ಚಲು ಕಲಾವಿದರೇ ಆಗಿರಬೇಕೆಂದೇನಿಲ್ಲ. ಪೇಂಟಿಂಗ್ ಕಲಿಯುವುದರಿಂದ ಮಕ್ಕಳಿಗೆ ಅನೇಕ ಉಪಯೋಗಗಳಿವೆ. ಇದರಿಂದ ಮಗುವಿಗೆ ಖುಷಿ ಸಿಗುತ್ತದೆ, ಬಣ್ಣಗಳ ಮಿಶ್ರಣದ ಅರಿವು ಮೂಡುತ್ತದೆ, ಹೊಸ ಛಾಯೆ ಬಗ್ಗೆ ತಿಳಿಯುತ್ತದೆ, ವಿನ್ಯಾಸದ ಗುರುತು ಸಿಗುತ್ತದೆ. ಜೊತೆಗೆ ಮಕ್ಕಳು ಕೈ, ಬ್ರಷ್‌ ಹಾಗೂ ಸ್ಪಾಂಜ್‌ಗಳನ್ನು ಬಳಸಿ ಯಾವೆಲ್ಲಾ ರೀತಿಯ ಪ್ರಯೋಗಗಳನ್ನು ಮಾಡಲು ಸಾಧ್ಯ ಎಂಬುದನ್ನೆಲ್ಲಾ ಅರಿಯಬಹುದು. ಕೊನೆಯದಾಗಿ ಇದರ ಮೂಲಕ ಮಕ್ಕಳು ಪರಿಣಾಮಕಾರಿಯಾಗಿ ಹೇಗೆ ಬಣ್ಣಗಳನ್ನು ಬಳಸಿಕೊಂಡು ಒಂದು ಸುಂದರ ಚಿತ್ರವನ್ನು ಹೊರತರಬಹುದು, ಬೇರೆ ಬೇರೆ ಬಣ್ಣದ ಶೇಡ್‌ಗಳ ಮೂಲಕ ಹೇಗೆ ಒಂದು ಚಿತ್ರವನ್ನು ಬಿಡಿಸಬಹುದು ಎಂಬುದಕ್ಕೆಲ್ಲಾ ಇದು ಸಹಕಾರಿ. ಇದು ಅವರ ಶೈಕ್ಷಣಿಕ ಬದುಕಿಗೂ ಸಹಾಯ ಮಾಡುತ್ತದೆ.

ಸ್ಕ್ರ್ಯಾಪ್ ಬುಕ್ಕಿಂಗ್
ಮೂರು ಆಯಾಮಗಳ ಆಕೃತಿಗಳನ್ನು ರಚಿಸುವುದು ನಿಜಕ್ಕೂ ತುಂಬಾ ಉತ್ತಮ ಹವ್ಯಾಸ. ಪೋಷಕರ ಮಾರ್ಗದರ್ಶನದಲ್ಲಿ ಮಗು ಕಾರ್ಡ್‌ಬೋರ್ಡ್‌ನ ಸಹಾಯದಿಂದ ಮನೆ ಅಥವಾ ಟ್ರಕ್‌ಗಳನ್ನು ರಚಿಸುವುದನ್ನು ಕಲಿಯಬೇಕು. ಹೀಗೆ ಅಂತಿಮವಾಗಿ ಮಗು ತನ್ನಷ್ಟಕ್ಕೆ ತಾನು, ಯಾರ ಸಹಾಯವೂ ಇಲ್ಲದೇ ಹೇಗೆ ರಚಿಸಬಹುದು ಎಂಬುದನ್ನು ಕಲಿಯುತ್ತದೆ. ಇದರೊಂದಿಗೆ ಮಕ್ಕಳಿಗೆ ಹೆಚ್ಚು ಮನೋರಂಜನೆ ಸಿಗಬೇಕು ಎಂದರೆ ಲೆಗೊದಂತಹ ಗೊಂಬೆ ಅಥವಾ ಬಿಲ್ಡಿಂಗ್ ಬ್ಲಾಕ್‌ಗಳನ್ನು ತೋರಿಸಿ. ಇದರಿಂದ ಸುಲಭವಾಗಿ ಕಲಾಕೃತಿಗಳನ್ನು ರಚಿಸಲು ನೆರವಾಗುತ್ತವೆ. ಮಕ್ಕಳ ಕಲ್ಪನೆಯನ್ನು ವಿವರಿಸಲು ಸಾಧ್ಯವಿಲ್ಲ. ಆ ಕಾರಣಕ್ಕೆ ಅವರು ಪ್ರಾಣಿಗಳ ಬೊಂಬೆಗಳನ್ನು ರಚಿಸಬಹುದು, ಮನೆ ಹಾಗೂ ವಾಹನದಂತಹ ಯಾವುದೇ ವಸ್ತುಗಳನ್ನು ತಯಾರಿಸಬಹುದು. ಇದರಿಂದ ಅವರ ಕಲ್ಪನಾಶಕ್ತಿ ಹೆಚ್ಚಲು ನೆರವಾಗುತ್ತದೆ.

ಡಾನ್ಸಿಂಗ್
ನೃತ್ಯದ ಹವ್ಯಾಸವನ್ನು ಎಳವೆಯಿಂದಲೇ ರೂಢಿಸಿಕೊಳ್ಳಬಹುದು. ಈ ಹವ್ಯಾಸವು ಮಕ್ಕಳಲ್ಲಿ ಶಕ್ತಿ ತುಂಬುವ ಜೊತೆಗೆ ತ್ರಾಣವನ್ನು ಹೆಚ್ಚಿಸುತ್ತದೆ. ಅವರನ್ನು ಸದೃಢರನ್ನಾಗಿಸುವ ಜೊತೆಗೆ ದೇಹ ಎಲ್ಲವಕ್ಕೂ ಒಗ್ಗಿಕೊಳ್ಳುವಂತೆ ಮಾಡುತ್ತದೆ. ಅದರೊಂದಿಗೆ ನೃತ್ಯಕ್ಕೆ ಯಾವುದೇ ರೀತಿಯ ತಯಾರಿಯ ಅಗತ್ಯವಿರುವುದಿಲ್ಲ. ಹಾಗಾಗಿ ಮಗುವಿಗೆ ಕೇವಲ ಡಾನ್ಸಿಂಗ್ ಶೂ ಧರಿಸಲು ಹೇಳಿ ಡಾನ್ಸ್‌ ಮಾಡಿಸಿ.

ಇದರೊಂದಿಗೆ ಇನ್ನು ಅನೇಕ ಹವ್ಯಾಸಗಳನ್ನು ಮಗು ರೂಢಿಸಿಕೊಳ್ಳಬಹುದು. ಆದರೆ ತಂದೆ-ತಾಯಿಗಳ ಪ್ರೋತ್ಸಾಹ ತುಂಬಾ ಮುಖ್ಯ. ತಂದೆ-ತಾಯಿಗಳು ವಯಸ್ಸಿಗೆ ತಕ್ಕ ಹಾಗೇ ಬೇರೆ ಬೇರೆ ಹವ್ಯಾಸಗಳಲ್ಲಿ ತೊಡಗಿಕೊಳ್ಳುವಂತೆ ಮಕ್ಕಳನ್ನು ಹುರಿದುಂಬಿಸಬೇಕು. ಮಕ್ಕಳು ಬೆಳೆಯುತ್ತಿದ್ದಂತೆ ಹವ್ಯಾಸ ಎಂಬುದು ಕೇವಲ ಮನೋರಂಜನೆ ಮಾತ್ರವಲ್ಲ ಇದು ಮಕ್ಕಳು ತಮ್ಮ ಬಗ್ಗೆ ತಾವೇ ತಿಳಿದುಕೊಳ್ಳಲು ಹಾಗೂ ಪ್ರಪಂಚವನ್ನು ಅರಿಯಲು ನೆರವಾಗುತ್ತದೆ.

ಕಲ್ಲು, ಕಪ್ಪೆಚಿಪ್ಪುಗಳ ಸಂಗ್ರಹ
ವಸ್ತುಗಳನ್ನು ಸಂಗ್ರಹಿಸುವುದೇ ಒಂದು ದೊಡ್ಡ ಹವ್ಯಾಸ. ಈ ಹವ್ಯಾಸದಿಂದ ವಿಭಿನ್ನ ಹಾಗೂ ಅಪರೂಪದ ವಸ್ತುಗಳನ್ನು ಸಂಗ್ರಹಿಸಿದ ಹೆಮ್ಮೆ ಮಗುವಿನಲ್ಲಿರುತ್ತದೆ. ಪೋಷಕರು ಮಕ್ಕಳಿಗೆ ಹೇಗೆ ಸಂಗ್ರಹಿಸಬೇಕು ಹಾಗೂ ಸಂಗ್ರಹಿಸಿದ ಕಲ್ಲು ಹಾಗೂ ಕಪ್ಪೆಚಿಪ್ಪನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ತೋರಿಸಬೇಕು ಹಾಗೂ ಕಲಿಸಬೇಕು. ಉದಾಹರಣೆಗೆ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಸಿಗುವ ಕಲ್ಲುಗಳು ನೋಡಲು ಭಿನ್ನವಾಗಿರುತ್ತವೆ ಹಾಗೂ ಅವುಗಳನ್ನು ಸಂಗ್ರಹಿಸುವ ಅನುಭವವೇ ಭಿನ್ನ. ಅವುಗಳ ವಿನ್ಯಾಸವು ಮನಸ್ಸನ್ನು ಸೆಳೆಯುತ್ತದೆ. ಆ ಕಲ್ಲುಗಳ ಗಾತ್ರ, ವಿನ್ಯಾಸ ಹೇಗೆ ವಿಶಿಷ್ಟ ಎಂಬುದರ ಕುರಿತು ಪೋಷಕರು ಮಕ್ಕಳಿಗೆ ತಿಳಿಸಿ ಹೇಳುವ ಮೂಲಕ ಅವರಲ್ಲಿ ಜ್ಞಾನವನ್ನು ಹೆಚ್ಚಿಸಬಹುದು. ಎಳೆಯ ಮಕ್ಕಳಿಗೆ ಇದು ಒಂದು ರೀತಿಯ ಉಲ್ಲಾಸವನ್ನು ಮೂಡಿಸುತ್ತದೆ. ಜೊತೆಗೆ ಅವರು ಹೆಚ್ಚು ಹೆಚ್ಚು ತಿಳಿದುಕೊಂಡು ಅದನ್ನು ಪ್ರಯೋಗಕ್ಕೆ ಒಳಪಡಿಸುತ್ತಾರೆ ಹಾಗೂ ನಿಸರ್ಗದ ಬಗ್ಗೆ ಇನ್ನಷ್ಟು ತಿಳಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT