ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂದಿ ಅಲರ್ಜಿ ಪರಿಹಾರಕ್ಕಿದೆ ಸರಳ ಮನೆಮದ್ದು

Last Updated 5 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳು ಎಷ್ಟೇ ಮೇಕಪ್‌ ಮಾಡಿಕೊಂಡರೂ ಕೊನೆಯಲ್ಲಿ ಅವರ ಅಂದ ಹೆಚ್ಚಿಸುವುದು ಹಣೆಯ ಮೇಲೆ ಕಂಗೊಳಿಸುವ ಬಿಂದಿ. ಹಿಂದೆಲ್ಲಾ ಪುಡಿ ಅಥವಾ ದ್ರವರೂಪದ ಕುಂಕುಮವನ್ನು ಬಿಂದಿ ರೂಪದಲ್ಲಿ ಇರಿಸಿಕೊಳ್ಳುತ್ತಿದ್ದರು. ಆದರೆ ಕಾಲ ಬದಲಾದಂತೆ ಬಿಂದಿಯ ಜಾಗವನ್ನು ಬಗೆ ಬಗೆ ವಿನ್ಯಾಸದ, ಬಣ್ಣದ ಸ್ಟಿಕ್ಕರ್‌ಗಳು ಅಲಂಕರಿಸಿವೆ. ಆದರೆ ಇತ್ತೀಚೆಗೆ ಮಹಿಳೆಯರಲ್ಲಿ ಬಿಂದಿ ಇರಿಸುವ ಜಾಗದಲ್ಲಿ ತ್ವಚೆಯ ಅಲರ್ಜಿ ಸಮಸ್ಯೆ ಹೆಚ್ಚು ಕಾಡುತ್ತಿದೆ. ಬದಲಾದ ಬಿಂದಿಯ ಸ್ವರೂಪದ ಕಾರಣದಿಂದ ಆ ಜಾಗದಲ್ಲಿ ತುರಿಕೆ, ಅಲರ್ಜಿ ಹಾಗೂ ಕೆಂಪು ದದ್ದಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸ್ಟಿಕ್ಕರ್‌ಗೆ ಅಂಟಿಸುವ ಗಮ್‌ ಕೂಡ ಇದಕ್ಕೆ ಕಾರಣ ಎನ್ನಬಹುದು. ಜೊತೆಗೆ ಬಿಂದಿಗೆ ಬಳಸುವ ರಾಸಾಯನಿಕವೂ ಅಲರ್ಜಿಗೆ ಕಾರಣವಾಗಬಹುದು.

ಬಿಂದಿ ಅಲರ್ಜಿಯ ಲಕ್ಷಣಗಳು

* ಪ್ರತಿದಿನ ಬಿಂದಿ ಬಳಸುವವರಲ್ಲಿ ಬಿಂದಿ ಇಡುವ ಜಾಗದಲ್ಲಿ ಅತಿಯಾದ ತುರಿಕೆ ಹಾಗೂ ಕಿರಿಕಿರಿ ಉಂಟಾಗುವುದು.

* ಬಿಳಿ ಮಚ್ಚೆಗಳು ಉಂಟಾಗುವುದು.

* ದದ್ದು ಉಂಟಾಗುವುದು ಅಥವಾ ಆ ಜಾಗ ಸಂಪೂರ್ಣವಾಗಿ ಕೆಂಪಾಗುವುದು.

* ಬಿಂದಿ ಇಟ್ಟ ಜಾಗದ ಸುತ್ತ ಚಿಕ್ಕ ಚಿಕ್ಕ ಕೆಂಪು ಗುಳ್ಳೆಗಳಾಗುವುದು.

* ನಿರಂತರ ತುರಿಕೆ.

ಬಿಂದಿ ಅಲರ್ಜಿಗೆ ಮನೆಮದ್ದು

ಬಿಂದಿ ಅಲರ್ಜಿ ಕಾಣಿಸಿಕೊಂಡ ತಕ್ಷಣ ಬಿಂದಿ ಬಳಕೆಯನ್ನು ನಿಲ್ಲಿಸುವುದೇ ಮೊದಲ ಮದ್ದು. ಬಿಂದಿ ಬದಲು ಶುದ್ಧ ಕುಂಕುಮ ಇರಿಸಿಕೊಳ್ಳುವುದು ಸೂಕ್ತ. ಶುದ್ಧ ಕುಂಕುಮ ಔಷಧಿಯಾಗಿಯೂ ಕೆಲಸ ಮಾಡುತ್ತದೆ, ಅಲ್ಲದೇ ಇದರಿಂದ ಚರ್ಮಕ್ಕೆ ಯಾವುದೇ ಕಿರಿಕಿರಿ ಇರುವುದಿಲ್ಲ. ಬಿಂದಿಯಿಂದ ಉಂಟಾದ ಚರ್ಮದ ಕಿರಿಕಿರಿಯನ್ನು ತ‌ಪ್ಪಿಸಲು ಶುದ್ಧ ಕುಂಕುಮವನ್ನು ವ್ಯಾಸಲಿನ್‌ನೊಂದಿಗೆ ಬಳಸಬೇಕು. ಇದು ಬೇಗನೆ ಅಲರ್ಜಿಯನ್ನು ಕಡಿಮೆ ಮಾಡುತ್ತದೆ.

ಜೇನುಮೇಣ ಹಾಗೂ ತುಳಸಿ: ಜೇನುಮೇಣ ಹಾಗೂ ತುಳಸಿ ಮಿಶ್ರಣವನ್ನು ಹಚ್ಚಿಕೊಂಡು ಅದರ ಮೇಲೆ ಕುಂಕುಮ ಹಚ್ಚುವುದರಿಂದ ಚರ್ಮದ ಅಲರ್ಜಿಯನ್ನು ತಪ್ಪಿಸಬಹುದು. ಜೇನುಮೇಣ ಹಾಗೂ ತುಳಸಿರಸವನ್ನು ಮಿಶ್ರಣ ಮಾಡಿ ಹುಬ್ಬುಗಳ ನಡುವೆ ಹಚ್ಚಿ ಅದರ ಮೇಲೆ ಕುಂಕುಮ ಇರಿಸಿಕೊಳ್ಳಿ.

ಅರಿಸಿನ ಮತ್ತು ಬೇವು: ಒಂದು ಚಮಚ ಅರಿಸಿನ ಹಾಗೂ 1 ಚಮಚ ಬೇವಿನಸೊಪ್ಪನ್ನು 2 ಕಪ್ ನೀರಿಗೆ ಸೇರಿಸಿ 1ಕಪ್‌ಗೆ ಇಳಿಯುವಂತೆ ಚೆನ್ನಾಗಿ ಕುದಿಸಿ. ಆ ನೀರಿನಿಂದ ಅಲರ್ಜಿ ಉಂಟಾದ ಜಾಗವನ್ನು ದಿನಕ್ಕೆ 4 ರಿಂದ 5 ಬಾರಿ ತೊಳೆಯಿರಿ.

ತೆಂಗಿನೆಣ್ಣೆ: ಚರ್ಮದ ಅಲರ್ಜಿಗೆ ತೆಂಗಿನೆಣ್ಣೆ ಉತ್ತಮ ಮದ್ದು. ಅಲರ್ಜಿ ಉಂಟಾದ ಜಾಗದಲ್ಲಿ ತೆಂಗಿನೆಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.

ಲೋಳೆಸರದ ತಿರುಳು: ಲೋಳೆಸರದ ತಿರುಳು ಚರ್ಮ ಕೆಂಪಾಗುವುದು, ತುರಿಕೆ ಹಾಗೂ ಸುಟ್ಟ ಗಾಯದಂತಾಗುವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಲೋಳೆಸರದ ಎಲೆಯಿಂದ ತಿರುಳನ್ನು ತೆಗೆದು ಅಲರ್ಜಿ ಉಂಟಾದ ಜಾಗದಲ್ಲಿ ಉಜ್ಜಿ.

ತುಳಸಿ ಎಲೆಗಳು: ತುಳಸಿಎಲೆಯನ್ನು ಜಜ್ಜಿ ಪೇಸ್ಟ್ ತಯಾರಿಸಿ ಅದಕ್ಕೆ ಉಪ್ಪು ಸೇರಿಸಿ. ಅಲರ್ಜಿ ಉಂಟಾದ ಜಾಗಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದು ನೋವು ಕಡಿಮೆ ಮಾಡುವುದಲ್ಲದೇ ಅಲರ್ಜಿಯಿಂದ ಉಂಟಾದ ದದ್ದನ್ನು ನಿವಾರಿಸುತ್ತದೆ. ತುಳಸಿರಸ ತಲೆನೋವಿಗೂ ಮದ್ದು.

ಅಡುಗೆ ಸೋಡಾ: ಅಡುಗೆಸೋಡವನ್ನು ಹತ್ತಿಯಲ್ಲಿ ಅದ್ದಿ ಅಲರ್ಜಿ ಉಂಟಾದ ಜಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಆ್ಯಪಲ್‌ ಸೈಡರ್ ವಿನೆಗರ್‌: ಆ್ಯಪಲ್‌ ಸೈಡರ್‌ ವಿನೆಗರ್‌ನಲ್ಲಿ ಆಸಿಟಿಕ್ ಆಮ್ಲದ ಅಂಶ ಇರುವುದರಿಂದ ಇದು ಬೇಗನೆ ಗಾಯವನ್ನು ಗುಣ ಮಾಡುತ್ತದೆ.

ನಿಂಬೆರಸ ಹಾಗೂ ಜೇನುತುಪ್ಪ: ಜೇನುತುಪ್ಪ ಹಾಗೂ ನಿಂಬೆರಸ ಎರಡರಲ್ಲೂ ಅಲರ್ಜಿಯ ವಿರುದ್ಧ ಹೋರಾಡುವ ಗುಣವಿದೆ. ಒಂದು ಬೌಲ್‌ನಲ್ಲಿ ಜೇನುತುಪ್ಪ ಹಾಕಿ ಅದಕ್ಕೆ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಬಿಂದಿ ಅಲರ್ಜಿಯಾದ ಜಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

(ಲೇಖಕ: ಆಯುರ್ವೇದ ವೈದ್ಯರು ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT