ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಶೋಷಕರಿಂದ ಮಕ್ಕಳ ರಕ್ಷಣೆ ಹೇಗೆ?

Last Updated 2 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

40ರ ಗೃಹಿಣಿ ಸುಧಾ ನನ್ನ ಕೋಣೆಯ ಒಳಬಂದವರೇ ಇಲ್ಲಿನ ವಾತಾವರಣ ಸುರಕ್ಷಿತವೇ ಎಂದು ಪರೀಕ್ಷಿಸುವಂತೆ ಸುತ್ತಲೂ ಒಮ್ಮೆ ಕಣ್ಣಾಡಿಸಿ ಕುರ್ಚಿಯಲ್ಲಿ ಮುದುರಿ ಕುಳಿತರು. ಪರಿಚಯದ ನಂತರ ನಮ್ಮ ಮಾತುಕತೆ ಮುಂದುವರಿದಂತೆ ನನ್ನ ಮೇಲೆ ಭರವಸೆಯಿಡುವ ಹಂತಕ್ಕೆ ಬಂದಾಗ ತನ್ನ ಜೀವನದ ದುರಂತ ಕತೆಯನ್ನು ಹೇಳತೊಡಗಿದರು. ಬಾಲ್ಯದಿಂದ ಪದೇ ಪದೇ ತಂದೆಯಿಂದಲೇ ಅವರು ಲೈಂಗಿಕ ಶೋಷಣೆ ಅನುಭವಿಸಿದ್ದರು. ಉನ್ನತ ವಿದ್ಯಾಭ್ಯಾಸ ಪಡೆದಿದ್ದ ತಂದೆ ಸರ್ಕಾರಿ ಹುದ್ದೆಯಲ್ಲಿದ್ದು ಸಾಮಾಜಿಕ ಮಾನ್ಯತೆಯನ್ನೂ ಗಳಿಸಿದ್ದರು. ವಿದ್ಯಾವಂತೆಯಾದ ಅಮ್ಮನ ಹತ್ತಿರ ವಿಷಯ ಹೇಳಿದರೂ ಯಾವುದೇ ಬದಲಾವಣೆಯಾಗಿರಲಿಲ್ಲ. ಇವೆಲ್ಲಾ 30 ವರ್ಷಗಳ ಹಿಂದೆ ನಡೆದಿದ್ದಾದರೂ ಸ್ನಾತಕೋತ್ತರ ಪದವಿ ಪಡೆದು ಒಳ್ಳೆಯ ಉದ್ಯೋಗದಲ್ಲಿರುವ ಸುಧಾ ಆ ಘಟನೆಗಳನ್ನು ನನ್ನೆದುರು ಹೇಳುವಾಗ ತೀವ್ರವಾದ ದೈಹಿಕ ಮಾನಸಿಕ ನೋವನ್ನು ಅನುಭವಿಸುತ್ತಿದ್ದರು.

ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆ ಅತ್ಯಾಚಾರಗಳು ಉಳಿಸಿಹೋಗುವ ಆಘಾತದಿಂದ ಹೊರಬರು ವುದು ಅಷ್ಟು ಸುಲಭವಲ್ಲ. ಅವರಿಗೆ ಜೀವನದ ಎಲ್ಲಾ ಸಂಬಂಧಗಳು ಸಹಜತೆಯನ್ನು ಕಳೆದುಕೊಳ್ಳುತ್ತವೆ. ‘ನನ್ನ ಮಗಳನ್ನು ಅವಳ ಅಪ್ಪನ (ಅಂದರೆ ತನ್ನ ಪತಿಯ) ಹತ್ತಿರ ಬಿಡುವುದಕ್ಕೂ ನನಗೆ ಭಯವಾಗುತ್ತದೆ‘ ಎನ್ನುವ ಸುಧಾ ಅವರ ಮಾತುಗಳೇ ಇದಕ್ಕೆ ಸಾಕ್ಷಿ. ಸೋದರಮಾವನಿಂದ ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದ 25 ರ ಇನ್ನೊಬ್ಬ ಯುವತಿ ನಾನು ಯಾವ ಗಂಡಸನ್ನೂ ನಂಬುವುದಿಲ್ಲ ಎಂದು ನನ್ನೆದುರು ಹೇಳಿದ್ದರು. ತಂದೆಯಿಂದ ಹಿಂಸೆಯನ್ನು ಅನುಭವಿಸಿದ್ದ 11ರ ಕಿಶೋರಿಯೊಬ್ಬಳು ಯಾವುದೇ ಪುರುಷ ಹತ್ತಿರ ಬಂದರೂ ಭಯದಿಂದ ಕಲ್ಲಾಗುತ್ತಿದ್ದಳು.

ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಪ್ರಕರಣಗಳ ಅಂಕಿಸಂಖ್ಯೆಗಳನ್ನು ಅಂದಾಜು ಮಾಡುವುದು ಕಷ್ಟ. ಲಕ್ಷಕ್ಕೆ ಒಂದೆರೆಡು ಪ್ರಕರಣಗಳು ಕಾನೂನಿನ ಕಣ್ಣಿಗೆ ಬೀಳಬಹುದು. ಹೆಚ್ಚಿನ ಪ್ರಕರಣಗಳನ್ನು ಮಕ್ಕಳು ಪೋಷಕರ ಜೊತೆ ಕೂಡ ಹಂಚಿಕೊಂಡಿರುವುದಿಲ್ಲ. ಗೊಂದಲ ಪಾಪಪ್ರಜ್ಞೆ ಅವಮಾನ ಕೀಳರಿಮೆ, ಹೀಗೆ ಹಿಂಜರಿಕೆಗಳ ಭಾರ ಹೊತ್ತಿರುವ ಮಕ್ಕಳು ಜೀವನವಿಡೀ ನರಳುತ್ತಾರೆ. ಎಷ್ಟೋ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ. ವೈಶ್ಯಾವಾಟಿಕೆಗೆ ಇಳಿದಿರುವವರು ಮತ್ತು ನಶೆಗೆ ದಾಸರಾಗಿರುವವರಲ್ಲಿ ಹೆಚ್ಚಿನವರು ಬಾಲ್ಯದಲ್ಲಿ ಲೈಂಗಿಕ ಶೋಷಣೆಗೆ ಒಳಗಾಗಿರುತ್ತಾರೆ ಎಂದು ಕೆನಡಾದ ವೈದ್ಯ ಬರಹಗಾರ ಮನೋಚಿಕಿತ್ಸಕ ಗಾಬೋರ್‌ ಮಾಟೆ ಹೇಳುತ್ತಾನೆ.

ಇನ್ನೂ ಅಪಾಯಕಾರಿಯಾದ ವಿಚಾರವೆಂದರೆ ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆಯಲ್ಲಿ ಸುಮಾರು ಶೇ 90ರಷ್ಟು ಕುಟುಂಬದವರು ಮತ್ತು ಪರಿಚಿತರಿಂದಲೇ ಆಗಿರುತ್ತದೆ. ಹಾಗಾಗಿ ಹೆಚ್ಚಿನ ಪ್ರಕರಣಗಳು ಬೆಳಕು ಕಾಣುವುದಿಲ್ಲ. ಇಂತಹ ಕೃತ್ಯವೆಸುಗುವವರಿಗೆ ಸಾಮಾಜಿಕ ಧಾರ್ಮಿಕ ರಾಜಕೀಯ ಅಥವಾ ಹಣದ ಪ್ರಭಾವವಿದ್ದರಂತೂ ಕಾನೂನಿನ ಸಹಾಯ ಕೇಳುವದಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲ.

ಕುಟುಂಬಗಳ ಮಟ್ಟದಲ್ಲಿ ಪೋಷಕರು ಮಕ್ಕಳ ಕುರಿತು ಹೆಚ್ಚು ಎಚ್ಚರವಹಿಸಬೇಕು. ಮಕ್ಕಳಲ್ಲಿ ಭಯಹುಟ್ಟಿಸದೆ ಶೋಷಣೆಗೆ ಪ್ರತಿಭಟಿಸುವ ಮತ್ತು ತಮ್ಮನ್ನು ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಕಲಿಸಬೇಕು. ಈ ಕುರಿತಾದ ಮಾಹಿತಿಯನ್ನು ಪೋಷಕರು ಮಕ್ಕಳಿಗೆ ಮೊದಲೇ ತಿಳಿಸಿರಬೇಕು. ನಿನ್ನ ಖಾಸಗಿ ಅಂಗಗಳನ್ನು ಯಾರಾದರೂ ಸ್ಪರ್ಷಿಸಿದರೆ ಅವರು ಯಾರೇ ಆಗಿದ್ದರೂ ತಕ್ಷಣ ತಮಗೆ ತಿಳಿಸಬೇಕು ಎನ್ನುವ ಮಾಹಿತಿ ಬಹಳ ಅಗತ್ಯವಾಗಿ ರುತ್ತದೆ. ಬೇಬಿ ಸಿಟ್ಟಿಂಗ್, ಡೇಕೇರ್‌ಗಳಲ್ಲಿ ಬಿಡುವುದು ಅನಿವಾರ್ಯವಾದರೆ ಆಗಾಗ ಅಲ್ಲಿಗೆ ದಿಢೀರ್‌ ಭೇಟಿನೀಡಿ ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಪೋಷಕರು ಮಕ್ಕಳ ಮಾತು ವರ್ತನೆಗಳನ್ನು ಟೀಕಿಸುವುದು ಹೊಡೆಯುವುದು ಬೈಯುವುದು ಮಾಡದಿದ್ದರೆ ಮಕ್ಕಳ ಸಹಜವಾಗಿ ಎಲ್ಲವನ್ನೂ ಹಂಚಿ ಕೊಳ್ಳುತ್ತಾರೆ. ಆಗ ವಿಷಯಗಳನ್ನು ಕೆದಕಿ ಹೊರತೆಗೆಯುವ ಅಗತ್ಯವೇ ಇರುವುದಿಲ್ಲ.

ಕೆಲವೊಮ್ಮೆ ಪೋಷಕರ ಹಿಡಿತವನ್ನು ಮೀರಿ ಘಟನೆಗಳು ನಡೆಯಬಹುದು. ಆಗ ಮೊದಲ ಹಂತದಲ್ಲಿಯೇ ಅದನ್ನು ಗುರುತಿಸಿದರೆ ಪುನರಾವರ್ತನೆಯನ್ನು ತಪ್ಪಿಸಬಹುದು. ಮಕ್ಕಳ ಮಾತು ವರ್ತನೆಗಳಲ್ಲಿ ಒಮ್ಮೆಲೆ ಆಗುವ ತೀವ್ರವಾದ ಬದಲಾವಣೆಗಳು. ಆವರ ಆರೋಗ್ಯದಲ್ಲಿನ ಏರುಪೇರುಗಳು, ಏಕಾಂಗಿಯಾಗಿರಲು ಬಯಸುವುದು, ಪದೇಪದೇ ದೇಹವನ್ನು ಶುದ್ಧಮಾಡಿಕೊಳ್ಳುವುದು, ಓದು ಸ್ನೇಹ ಸಂಬಂಧಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಮುಂತಾದ ಅಸಹಜ ನಡವಳಿಕೆಗಳ ಕಂಡುಬಂದರೆ ಎಚ್ಚರಗೊಳ್ಳಬೇಕು.

ಮಾಹಿತಿ ದೊರೆತ ಮೇಲೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಮತ್ತೆ ಅಂತಹ ಸಂದರ್ಭಗಳನ್ನು ಎದುರಿಸಲು ಅವಕಾಶ ನೀಡಬಾರದು. ಸಾಧ್ಯವಿದ್ದರೆ ಪೊಲೀಸರ ಸಹಾಯ ಪಡೆಯಬಹುದು. ಸಾಧ್ಯವೇ ಇಲ್ಲ ಎನ್ನಿಸಿ ದಾಗಲೂ ಅಪರಾಧಿಯನ್ನು ನೇರವಾಗಿ ಎದುರಿಸುವ ಪ್ರಯತ್ನಮಾಡಬಾರದು. ಇದರಿಂದ ಅವರು ಮುಂದೆ ಮಗುವಿಗೆ ಹೆಚ್ಚು ಅಪಾಯಕಾರಿಯಾಗಬಹುದು ಅಥವಾ ಪುರಾವೆಗಳನ್ನು ನಾಶಪಡಿಸಬಹುದು. ಸಂಬಂಧ ವಯಸ್ಸು ಮುಂತಾದ ದೃಷ್ಟಿಯಿಂದ ಕಾನೂನು ಕ್ರಮ ಸಾಧ್ಯವೇ ಇಲ್ಲ ಎನ್ನಿಸಿದರೆ ಶೋಷಕರು ಮಕ್ಕಳ ಸಂಪರ್ಕಕ್ಕೆ ಬರದಂತೆ ಮನೆಯಿಂದ ಹೊರಗಿಡಬೇಕು. ಶೋಷಕರಿಗೆ ಮನೋಚಿಕಿತ್ಸಕರ ಸಹಾಯಪಡೆಯಲು ಸೂಚಿಸಿದರೆ ಒಳ್ಳೆಯದು.

ಶೋಷಿತರಾದ ಮಕ್ಕಳಿಗೆ ಪೋಷಕರ ಸಂಪೂರ್ಣ ಬೆಂಬಲ ಅಗತ್ಯ. ಯಾವುದೇ ಕಾರಣಕ್ಕೂ ನಿನ್ನನ್ನು ದೂಷಿಸುವುದಿಲ್ಲ, ನೀನು ಮೊದಲಿನಂತೆಯೇ ನಮಗೆ ಪ್ರೀತಿಪಾತ್ರಳು/ನು ಎನ್ನುವ ಭರವಸೆ ನೀಡಬೇಕು. ಇಡೀ ಕುಟುಂಬ ಮನೋಚಿಕಿತ್ಸಕರ ಸಹಾಯ ಪಡೆದರೆ ಈ ಆಘಾತದಿಂದ ಬೇಗ ಚೇತರಿಸಿಕೊಳ್ಳಬಹುದು. ಮಕ್ಕಳು ಆದಷ್ಟು ಬೇಗ ಅವರ ಸಹಜ ದಿನಚರಿಗೆ ಹಿಂತಿರುಗುವಂತೆ ವ್ಯವಸ್ಥೆ ರೂಪಿಸಬೇಕು.

ಕಾನೂನು ಕ್ರಮಗಳು ಅಸಾಧ್ಯ ಎನ್ನಿಸಿದರೂ ಮಾಹಿತಿಯನ್ನು ಕುಟುಂಬದ ಇತರ ಸದಸ್ಯರು, ಇತರ ಪೋಷಕರು, ಶಾಲೆಯ ಆಡಳಿತ ಮಂಡಳಿ ಮುಂತಾದ ಕಡೆ ಹಂಚಿಕೊಳ್ಳಬೇಕು ಇದರಿಂದ ಹೆಚ್ಚಿನ ಮಕ್ಕಳು ಬಲಿಪಶುಗಳಾಗುವುದನ್ನು ತಡೆಯಬಹುದು. ಹತ್ತಿರದಲ್ಲಿ ಇರುವ ಮಕ್ಕಳ ಅಥವಾ ಮಹಿಳಾ ಸಹಾಯ ಕೇಂದ್ರಗಳನ್ನು ಹಾಗೂ ಸ್ವಯಂ ಸೇವಾ ಸಂಸ್ಥೆಗಳ(ಎನ್‌ಜಿಒ) ಬೆಂಬಲವನ್ನೂ ಪಡೆಯಬಹದು.

ಮಕ್ಕಳ ಲೈಂಗಿಕ ಶೋಷಣೆಯಂತಹ ಅನಿಷ್ಟದ ವಿರುದ್ಧ ಎಲ್ಲಾ ಪೋಷಕರು ಮತ್ತು ಇಡೀ ಸಮಾಜ ಒಗ್ಗೂಡಿ ಧ್ವನಿಯೆತ್ತಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT