ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನಾಚರಣೆ: ಪರಿಸರಸ್ನೇಹಿ ‘ಪ್ಯಾಡ್‌ ವುಮನ್’

ಮಹಿಳೆಯರ ಸಂಕಟ, ಹಿಂಜರಿಕೆ ಪ್ಯಾಡ್‌ ತಯಾರಿಕೆಗೆ ಪ್ರೇರಣೆ
Last Updated 8 ಮಾರ್ಚ್ 2021, 1:34 IST
ಅಕ್ಷರ ಗಾತ್ರ

ಋತುಚಕ್ರದ ಸಮಯದಲ್ಲಿ ಬಳಸುವ ಪ್ಯಾಡ್‌ ತಯಾರಿಸಿ ಜಾಗೃತಿ, ಸೇವೆ, ಮಾರಾಟದ ಮೂಲಕ ‘ಪ್ಯಾಡ್‌ ವುಮನ್’ ಎಂದೇ ಪರಿಚಿತರು ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನ ಭಾರತಿ ಬಸವರಾಜ ಗುಡ್ಲಾನೂರ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಪ್ಯಾಡ್‌ ಬಳಕೆ ಬಗ್ಗೆ ತಿಳಿವಳಿಕೆ ನೀಡಿ ಅವರ ಆರೋಗ್ಯ ರಕ್ಷಣೆಯ ಕಾರಣೀಭೂತರು.

***

ನನಗೆ ಮುಂಚಿನಿಂದಲೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆಯಿತ್ತು. ಒಮ್ಮೆ ಟಿ.ವಿ ಮುಂದೆ ಕುಳಿತಾಗ ಅಕ್ಷಯ್‌ ಕುಮಾರ್‌ ಅವರ ‘ಪ್ಯಾಡ್‌ ಮ್ಯಾನ್’‌ ಸಿನಿಮಾ ಗಮನ ಸೆಳೆಯಿತು. ಹಿಂದುಳಿದ ಭಾಗದ ಜಿಲ್ಲೆಯವಳಾಗಿ ಇಲ್ಲಿಯ ಮಹಿಳೆಯರ ಮುಟ್ಟಿನ ಸಂಕಟ ಕೂಡಾ ಕಣ್ಮುಂದೆ ಹಾದು ಹೋಯಿತು. ಅದೇ ನನಗೆ ಪ್ಯಾಡ್‌ ತಯಾರಿಕೆಗೆ ಸ್ಫೂರ್ತಿ.

ನನ್ನ ಬಳಿ ಹಣವಿರಲಿಲ್ಲ. ಮಹಿಳೆಯರ ಸಬಲೀಕರಣಕ್ಕಾಗಿ ಇರುವ ಸರ್ಕಾರದ ಎಲ್ಲ ಯೋಜನೆಗಳನ್ನು ತಲಾಶ್ ಮಾಡಿದೆ. ಇದಕ್ಕಾಗಿ ಬ್ಯಾಂಕುಗಳಿಗೆ ಅಲೆದೆ. ನನ್ನಲ್ಲಿರುವ ಉತ್ಸಾಹ ಗುರುತಿಸಿ ₹ 3 ಲಕ್ಷ ಸಾಲ ನೀಡಿದರು. ‘ಪ್ರಕೃತಿ ಸೇವಾ ಸಂಸ್ಥೆ’ ಸ್ಥಾಪಿಸಿ ‘ಸಂಘಿನಿ’ ಎಂಬ ಹೆಸರಿನಲ್ಲಿ ಪ್ಯಾಡ್‌ ತಯಾರಿಕೆ ಶುರು ಮಾಡಿದ್ದು, ಈಗ ವಾರ್ಷಿಕ ₹ 35 ಲಕ್ಷ ವಹಿವಾಟು ನಡೆಸುವಷ್ಟರ ಮಟ್ಟಿಗೆ ಬೆಳೆದಿದ್ದೇನೆ. ಉಪಯೋಗಿಸಿದ ನಂತರ ಮಣ್ಣಲ್ಲಿ ಬೆರೆತು ಗೊಬ್ಬರವಾಗುವ ಪರಿಸರಸ್ನೇಹಿ ಪ್ಯಾಡ್‌ಗಳಿವು.

ಮುಟ್ಟಿನ ಕುರಿತು ಅಧ್ಯಯನ ನಡೆಸುತ್ತಾ ಹೋದಾಗ ಧಾರ್ಮಿಕ, ಸಾಮಾಜಿಕ, ಧರ್ಮಸೂಕ್ಷ್ಮ ಹಿಂಜರಿಕೆ, ಹಳೆ ಬಟ್ಟೆಯ ಉಪಯೋಗ, ಕೆಲವು ಗ್ರಾಮಗಳಲ್ಲಿ ಎಲೆ, ಮಣ್ಣುಗಳನ್ನು ಹಚ್ಚಿಕೊಳ್ಳುವುದು, ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿಯ ಕಷ್ಟ, ಅರಿವಿನ ಕೊರತೆ ಇರುವ ತಾಂಡಾದ ಹೆಣ್ಣುಮಕ್ಕಳು ಅನುಭವಿಸುವ ನೋವು ಗಮನಕ್ಕೆ ಬಂದವು. ಮೈಮೇಲೆ ಪುರುಷರ ರೀತಿ ಕೂದಲು ಬೆಳೆಯುವುದು ಪ್ಯಾಡ್‌ನ ಸತತ ಬಳಕೆಯಿಂದ ತಪ್ಪಿದೆ, ರಕ್ತಸ್ರಾವ ನಿಂತಿದೆ ಎಂದು ಮಹಿಳೆಯರು, ತಜ್ಞ ವೈದ್ಯರು ಹೇಳಿದಾಗ ಏನೋ ಸಾಧಿಸಿದ ಸಂತೃಪ್ತಭಾವ.

ಕೊಪ್ಪಳ ಜಿಲ್ಲೆಯ ಮಹಿಳೆಯರ ಸರ್ಕಾರಿ ಕಾಲೇಜು, ಜಿಲ್ಲಾಡಳಿತ ಭವನ, ಮಹಿಳಾ ಪೊಲೀಸ್‌ ಸ್ಟೇಶನ್‌ ಸೇರಿದಂತೆ 12 ಕಡೆಗಳಲ್ಲಿ ಆಟೊಮ್ಯಾಟಿಕ್‌ ಪ್ಯಾಡ್‌ ಡಿಸ್ಪೆನ್ಸರ್‌ಗಳನ್ನು ಅಳವಡಿಸಿದ್ದೇನೆ. 30 ಪ್ಯಾಡ್‌ಗೆ ಸ್ಥಳಾವಕಾಶ ಇರುವಮಷೀನ್‌ಗೆ ₹ 5ರ ನಾಣ್ಯ ಹಾಕಿ 1 ಪ್ಯಾಡ್‌ ಪಡೆಯಬಹುದು.

ಈಗ ನನ್ನ ಈ ಉದ್ಯಮ ಮಂಡ್ಯ, ಹೈದರಾಬಾದ್‌ಗೂ ವಿಸ್ತರಣೆಯಾಗಿದೆ.ನಿತ್ಯ 10 ಸಾವಿರ ಪ್ಯಾಡ್‌ ತಯಾರಿಸುತ್ತಿದ್ದೇನೆ. 20ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ ನೀಡಿದ್ದೇನೆ. ಪ್ಯಾಡ್‌ ಬಳಕೆ ಕುರಿತು ಜಾಗೃತಿ ಮೂಡಿಸಲು 12 ಮಂದಿ ಹದಿಹರೆಯದ ಹೆಣ್ಣುಮಕ್ಕಳನ್ನು ಒಳಗೊಂಡ 15 ಸಂಘಗಳನ್ನು ರಚಿಸಿದ್ದೇನೆ. ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ ಮತ್ತು ಅವರಿಗೆ ಉಚಿತವಾಗಿ ಪ್ಯಾಡ್‌ ವಿತರಿಸುತ್ತಿದ್ದೇನೆ. ಲಾಭ ಹೆಚ್ಚಿದರೆ ಯೋಜನೆಯನ್ನು ಇನ್ನೂ 100 ಹಳ್ಳಿಗಳಿಗೆವಿಸ್ತರಿಸುವ ಗುರಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT