ಸೋಮವಾರ, ಏಪ್ರಿಲ್ 6, 2020
19 °C

ರಕ್ಷಣಾ ಕಲೆಯ ‘ಕಲಿ’

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಸರ್ಕಾರಿ ಬಸ್ಸಿನಲ್ಲಿ ಶಾಲಾ–ಕಾಲೇಜಿಗೆ ಹೋಗಿ ಬರುವ ಯುವತಿಯರನ್ನು ಪೀಡಿಸುವವರಿಗೆ ‘ಪಾಠ’ ಕಲಿಸುವ ಛಲದೊಂದಿಗೆ ಕರಾಟೆ ತರಬೇತಿಗೆ ಸೇರಿದ ಮಲ್ಲಮ್ಮ, ಇದೀಗ ಬ್ಲ್ಯಾಕ್‌ ಬೆಲ್ಟ್‌ ಮೂರನೇ ಹಂತದ ಸಾಧಕಿ. ವೃತ್ತಿಯಲ್ಲಿ ಗುತ್ತಿಗೆ ಆಧಾರದ ಕ್ರಾಫ್ಟ್‌ ಶಿಕ್ಷಕಿ. ವೃತ್ತಿಯ ಜತೆಯಲ್ಲೇ ನೂರಾರು ಬಾಲಕಿಯರಿಗೆ ಕರಾಟೆ ತರಬೇತಿ ಕೂಡಾ ನೀಡುತ್ತಿದ್ದಾರೆ.

ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಮಲ್ಲಮ್ಮ, ಅದೇ ಗ್ರಾಮದ ಕಸ್ತೂರಬಾ ಸರ್ಕಾರಿ ವಸತಿ ಶಾಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮದ ಅಕ್ಕಪಕ್ಕದ ಶಾಲಾ ಮಕ್ಕಳಿಗೆ ಆರು ವರ್ಷಗಳಿಂದ ಕರಾಟೆ ತರಬೇತಿ ಮುಂದುವರಿಸಿದ್ದಾರೆ. 

2018ರಲ್ಲಿ ಇಂಡೊನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಕರಾಟೆಯಲ್ಲಿ ಇನ್ನೂ ಸಾಧನೆ ಮಾಡುವ ಛಲ ಇಟ್ಟುಕೊಂಡು ವಾರದಲ್ಲಿ ಎರಡು ದಿನ ತರಬೇತಿಗಾಗಿ ಕಲಬುರ್ಗಿಗೆ ಹೋಗಿ ಬರುತ್ತಾರೆ. ಕಲಬುರ್ಗಿಯಲ್ಲಿ ತರಬೇತುದಾರ ದಶರಥ ಅವರು ಮಲ್ಲಮ್ಮ ಅವರಿಗೆ ಕರಾಟೆ ಪಟ್ಟುಗಳನ್ನು ಹೇಳಿಕೊಡುತ್ತಿದ್ದಾರೆ.

ಆಲ್‌ ಇಂಡಿಯಾ ಶಿಟೊ ರಿಯು ಕರಾಟೆ ಡು ಯೂನಿಯನ್‌ (ಎಐಎಸ್‌ಆರ್‌ಕೆಡಿಯು) ಮೈಸೂರಿನಲ್ಲಿ 2018ರ ಆಗಸ್ಟ್‌ನಲ್ಲಿ ಏರ್ಪಡಿಸಿದ್ದ ‘ಮಾಬುನಿ ಕಪ್‌– 2018’ ಅಖಿಲ ಭಾರತ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಲ್ಲಮ್ಮ ಗೆಲುವು ಸಾಧಿಸಿದ್ದರು. ಅದೇ ಗೆಲುವು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗಿಯಾಗಲು ಮೆಟ್ಟಿಲಾಯಿತು. ಜಕಾರ್ತಗೆ ಹೋಗಿ ಬರಲು ಆರ್ಥಿಕ ಸಂಕಷ್ಟ ಎದುರಾಗಿತ್ತು. ಮಲ್ಲಮ್ಮನ ಸಾಧನೆಯನ್ನು ಪ್ರೋತ್ಸಾಹಿಸಿದ ಕೆಲವರು ₹1 ಲಕ್ಷದವರೆಗೂ ಧನಸಹಾಯ ಮಾಡಿದರು. ಅದು ಸಾಕಾಗದೆ, ಸಾಲ ಮಾಡಿಕೊಂಡು ಹೋದ ಅವರು ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು. ಸದ್ಯ ಅಂತರರಾಷ್ಟ್ರೀಯ ಸ್ಪರ್ಧೆಗಳತ್ತ ಗಮನ ಕೇಂದ್ರೀಕರಿಸಿ ಮತ್ತಷ್ಟು ಕಠಿಣ ಪರಿಶ್ರಮ ಪಡುತ್ತಿದ್ದಾರೆ.

ತಂದೆ ತೀರಿಹೋಗಿದ್ದು, ತಾಯಿ ಹಾಗೂ ತಮ್ಮನನ್ನು ಪೋಷಿಸುವ ಜವಾಬ್ದಾರಿ ಇದೆ. ಆರ್ಥಿಕ ಸಂಕಷ್ಟದಲ್ಲೂ ಕರಾಟೆ ಕಲಿಕೆ ಹಾಗೂ ಕಲಿಸುವುದನ್ನು ನಿಲ್ಲಿಸಿಲ್ಲ. ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಬಾಲ್ಯದಲ್ಲಿ ಬಡತನದ ಕಾರಣಕ್ಕಾಗಿ ಮಲ್ಲಮ್ಮ ಅವರು ಶಾಲೆಗೆ ಹೋಗದೆ ಹೊರಗುಳಿದ ವಿದ್ಯಾರ್ಥಿನಿ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಲ್ಲಮ್ಮನನ್ನು ಗುರುತಿಸಿ, ವಯಸ್ಸು ಆಧರಿಸಿ ಬಳ್ಳಾರಿಯ ಸರ್ಕಾರಿ ವಸತಿ ಶಾಲೆಯಲ್ಲಿ ಏಳನೇ ತರಗತಿಗೆ 2005–06ರಲ್ಲಿ ನೇರ ಪ್ರವೇಶ ದೊರಕಿಸಿಕೊಟ್ಟಿದ್ದರು. ಅಲ್ಲಿಂದ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ಶಾಲೆಯಲ್ಲಿ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಿದ್ದ ಶಿಕ್ಷಕಿ ಗೀತಾಂಜಲಿ ಅವರಿಂದ ಪ್ರಭಾವಿತರಾದರು.

‘ಕಷ್ಟ ಏನಿದ್ದರೂ ಕರಾಟೆಯಲ್ಲಿ ಸಾಧನೆ ಮುಂದುವರಿಸುತ್ತೇನೆ. ಇದರೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸುವ ತಯಾರಿ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಮಲ್ಲಮ್ಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು