ಭಾನುವಾರ, ಮಾರ್ಚ್ 29, 2020
19 °C
ಇಂದು ವಿಶ್ವ ಮಹಿಳಾ ದಿನ

ನೆಲೆನಿಂತ ಅಲೆಮಾರಿ

ಸುಮಾ ಬಿ. Updated:

ಅಕ್ಷರ ಗಾತ್ರ : | |

ತುಮಕೂರು: ಚಿಂದಿ ಆಯುತ್ತಾ ಬೀದಿ ಬೀದಿ ಅಲೆಯುತ್ತಿದ್ದ ಆ ಅಲೆಮಾರಿ ಮಕ್ಕಳೀಗ ಪುಸ್ತಕ ಹಿಡಿದು ಶಾಲೆ ಮೆಟ್ಟಿಲು ಹತ್ತಿದ್ದಾರೆ. ಊರಿಂದೂರಿಗೆ ಅಲೆಯುತ್ತ ನಾಗರಿಕ ಜೀವನದಿಂದ ದೂರವೇ ಉಳಿದಿದ್ದ ಅಲೆಮಾರಿಗಳೀಗ ಒಂದೆಡೆ ನೆಲೆನಿಂತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ...

ಇದೆಲ್ಲ ಸಾಧ್ಯವಾದದ್ದು ಹಂದಿ ಗೂಡಿಗೆ ‘ಬೆಂಕಿ’ ಇಟ್ಟಿದ್ದರಿಂದ! ಹೌದು... ಇಪ್ಪತ್ತು ವರ್ಷಗಳ ಹಿಂದಿನ ಒಂದು ರಾತ್ರಿ ತುಮಕೂರಿನ ಇಸ್ಮಾಯಿಲ್‌ ನಗರದಲ್ಲಿರುವ ಹಂದಿಜೋಗಿ ಅಲೆಮಾರಿಗಳ ಗೂಡಿಗೆ ಕಿಡಿಗೇಡಿಗಳು ಬೆಂಕಿ ಇಟ್ಟರು. ಅಂದು ಹತ್ತಿದ ಬೆಂಕಿ ತಣ್ಣಗಾದರೂ ಹಂದಿಜೋಗಿ ರಾಮಕ್ಕನ ಎದೆಯಲ್ಲಿನ ಆ ಕಿಚ್ಚು ಇಂದಿಗೂ ಉರಿಯುತ್ತಿದೆ.

ಅಕ್ಷರ ಜ್ಞಾನದಿಂದ ಮಾತ್ರ ಬದುಕು ಬೆಳಕಾಗಲು ಸಾಧ್ಯ ಎಂಬುದನ್ನರಿತ ಅನಕ್ಷರಸ್ಥ ರಾಮಕ್ಕ, ಅಲೆಮಾರಿ ಮಕ್ಕಳ ಶಿಕ್ಷಣ ಕ್ರಾಂತಿಯ ಅಲೆ ಎಬ್ಬಿಸಿದರು. ಶಿಕ್ಷಣ ಇಲಾಖೆಯ ಮನವೊಲಿಸಿ ಟೆಂಟ್‌ ಶಾಲೆ ಆರಂಭಿಸುವಂತೆ ಮಾಡಿ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳನ್ನೆಲ್ಲ ಟೆಂಟ್‌ ಶಾಲೆಗೆ ಕರೆತಂದರು. ಇಲ್ಲಿ ಕಲಿತ ಐವತ್ತಕ್ಕೂ ಹೆಚ್ಚು ಮಕ್ಕಳು ವಿವಿಧ ಶಾಲೆಗಳಲ್ಲಿ ಓದುತ್ತಿದ್ದಾರೆ.

ನಿವಾಸಿ ದೃಢೀಕರಣ ಪತ್ರ, ಆಧಾರ್‌ ಕಾರ್ಡ್‌ ಕಡ್ಡಾಯ ಎಂದು ಶಾಲೆ ಮುಖ್ಯಸ್ಥರು ಮಕ್ಕಳಿಗೆ ಪ್ರವೇಶಾತಿ ನೀಡಲು ಹಿಂದೇಟು ಹಾಕಿದರು. ರಾಮಕ್ಕ ಅಧಿಕಾರಿಗಳ ದುಂಬಾಲು ಬಿದ್ದಿದ್ದರಿಂದ ಅಲೆಮಾರಿಗಳು ಗುರುತಿನ ಚೀಟಿ, ಪಡಿತರ ಚೀಟಿ ಪಡೆಯುವಂತಾಯಿತು. ರಾಮಕ್ಕನ ಹೋರಾಟಕ್ಕೆ ಒಂದು ಚೌಕಟ್ಟು ನೀಡಲು ‘ಕರ್ನಾಟಕ ರಾಜ್ಯ ಮಹಿಳಾ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ಮಹಾಸಭಾ’ ಅಸ್ತಿತ್ವಕ್ಕೆ ಬಂದಿದೆ.

‘ಹೋರಾಟ ಮಾಡ್ಕತಾ ಬಂದೆ. ನಮ್‌ ಹಕ್‌ ನಮ್ಗೆ ಕೊಡ್ರಿ ಅಂತ ಕೇಳ್ದೆ ಆಟೆಯ’ ಎನ್ನುತ್ತ ಕಣ್ಣಂಚಲ್ಲಿ ಜಿನುಗಿದ ನೀರು ಒರೆಸಿಕೊಳ್ಳುವ ರಾಮಕ್ಕ ಅಂಗವಿಕಲೆ. ಚಿಕ್ಕಂದಿನಲ್ಲೇ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ಅವರು, ಕೈಯಲ್ಲಿ ಊರುಗೋಲು ಹಿಡಿದುಕೊಂಡೇ ಹೋರಾಟ ಮಾಡುತ್ತಿದ್ದಾರೆ. ತಾನೂ ಅಕ್ಷರ ಕಲಿಯಬೇಕೆಂಬ ರಾಮಕ್ಕನ ಹೆಬ್ಬಯಕೆ ಮಾತ್ರ ಇನ್ನೂ ಈಡೇರಿಲ್ಲ. ತುತ್ತು ಅನ್ನಕ್ಕಾಗಿ ಹೂ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು