ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ, ಕಾಮ, ದ್ರೋಹ!!!

ಬೆಡ್‌ ರೂಂಗಳಲ್ಲಿ ವಿರಸದ ಅಡ್ಡಗೋಡೆ/ ಬೆಡ್‌ ರೂಂನಲ್ಲಿ ದಂಪತಿಯೇ ಎರಡು ತೀರ
Last Updated 17 ಜುಲೈ 2019, 19:45 IST
ಅಕ್ಷರ ಗಾತ್ರ

ಸಹಜ ನಾಚಿಕೆ, ಭಯ, ಆತಂಕ ಮತ್ತು ಮುಜುಗರದಿಂದ ಮದುವೆಯ ನಂತರ ಹಲವಾರು ವರ್ಷವಾದರೂ ಮೊದಲ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹೆಚ್ಚಿನ ನವ ವಿವಾಹಿತ ದಂಪತಿ ಹಿಂಜರಿಯುತ್ತಿದ್ದಾರೆ. ಇದು ಸಮರಸವಿಲ್ಲದ ದಾಂಪತ್ಯದಲ್ಲಿ ಅಪಸ್ವರ ಮತ್ತು ವಿಚ್ಛೇದನಗಳಿಗೆ ದಾರಿ ಮಾಡಿಕೊಡುತ್ತಿದೆ.

ಮಹಿಳೆಯರ ನೆರವಿಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿಗೆ ಬರುತ್ತಿರುವ ಹೆಚ್ಚಿನ ಕರೆಗಳು ಇಂಥವೇ ದಾಂಪತ್ಯ ವಿರಹದ ಕಥೆಗಳು.

ಪ್ರತಿ ವಾರ ವನಿತಾ ಸಹಾಯವಾಣಿಗೆ ಬರುವ ನೂರಾರು ಕರೆಗಳಲ್ಲಿ ಕನಿಷ್ಠ ಐದು ಕರೆಗಳು ಹೊಸದಾಗಿ ಮದುವೆಯಾದವರ ‘ಸೆಕ್ಸ್‌’ ನಿರಾಸಕ್ತಿಗೆ ಸಂಬಂಧ ಪಟ್ಟಿರುತ್ತವೆ. ಸಮಾಲೋಚನೆ ಕೋರಿ ಸಹಾಯವಾಣಿಗೆ ಕರೆ ಮಾಡುವವರಲ್ಲಿ ದಾಂಪತ್ಯ ಸುಖದಿಂದ ವಂಚಿತರಾದ 25 ವರ್ಷದಿಂದ 40 ವರ್ಷದೊಳಗಿನ ಮಹಿಳೆಯರೇ ಹೆಚ್ಚು. ಅವರಲ್ಲಿ ಹೆಚ್ಚಿನವರು ಸುಶಿಕ್ಷಿತರು, ಆರ್ಥಿಕವಾಗಿ ಸ್ವಾವಲಂಬಿಗಳಾದ ಸ್ವತಂತ್ರ ಮನೋಭಾವದ ಉದ್ಯೋಗಸ್ಥ ಮಹಿಳೆಯರು. ಅದಕ್ಕೂ ಮಿಗಿಲಾಗಿ ಸೆಕ್ಸ್‌ ಬಗ್ಗೆ ಮುಕ್ತವಾಗಿ ಚರ್ಚಿಸಲು ಹಿಂಜರಿಯದ ಸ್ವಭಾವದವರು ಎನ್ನುತ್ತಾರೆ ವನಿತಾ ಸಹಾಯವಾಣಿಯ ಸಿಬ್ಬಂದಿ.

ಆಕೆ ಹೊಂದಿಕೊಳ್ಳಲು ಸಮಯ ಬೇಕು

ಮನೆಯಲ್ಲಿ ಪೋಷಕರು ನಿಶ್ಚಯ ಮಾಡಿದ ಗಂಡಿನೊಂದಿಗೆ ಮದುವೆಯಾದ ನವ ವಧುವಿಗೆ ಸಂಗಾತಿಯ ಜತೆ ಒಡನಾಡಲು ಮತ್ತು ನಂಬಲು ಕೆಲ ಸಮಯ ಬೇಕಾಗುತ್ತದೆ. ಮೊದಲ ಬಾರಿಗೆ ಬೋರ್ಡ್‌ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳನ್ನು ಕಾಡುವ ಭಯದಂತೆ ಮದುವೆಯಾದ ಗಂಡಸರಿಗೂ ಮೊದಲ ರಾತ್ರಿಯ ಭಯ ಆವರಿಸಿರುತ್ತದೆ. ಮಿಲನದ ವೇಳೆ ಪುರುಷತ್ವ ಅಥವಾ ಪಾರಮ್ಯ ಮೆರೆಯುವ ಬಗ್ಗೆ ಆತಂಕ ಬೇರು ಬಿಟ್ಟಿರುತ್ತದೆ.

ಸರಿಯಾದ ಮಾರ್ಗದರ್ಶನ, ಅರಿವು ಮತ್ತು ಭಾವನಾತ್ಮಕ ಬೆಸುಗೆ ಇಲ್ಲದೆ ಯಶಸ್ವಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನವ ದಂಪತಿ ವಿಫಲರಾಗುತ್ತಿದ್ದಾರೆ. ಇದು ಹತಾಶೆ, ಕೋಪ, ಅಪನಂಬಿಕೆ ಮತ್ತು ಮುನಿಸಿಗೆ ಕಾರಣವಾಗುತ್ತಿದೆ. ಅಂತಿಮವಾಗಿ ವಿವಾಹೇತರ ಸಂಬಂಧಗಳಿಗೆ ದಾರಿ ಮಾಡಿ ಕೊಡುತ್ತದೆ ಎನ್ನುವುದು ಸಹಾಯವಾಣಿಯ ಹಿರಿಯ ಸಮಾಲೋಚಕಿ ಸರಸ್ವತಿ ಅವರ ಅಭಿಪ್ರಾಯ.

ಮದುವೆಗೂ ಮುಂಚೆ ಲೈಂಗಿಕ ಸಂಬಂಧವಿಟ್ಟುಕೊಂಡ ನವ ವಿವಾಹಿತ ಮಹಿಳೆಯರು ಗಂಡನೊಂದಿಗೆ ಮೊದಲ ರಾತ್ರಿಸೆಕ್ಸ್‌ಗೆ ಹಿಂಜರಿಯುತ್ತಾರೆ. ಮೊದಲ ರಾತ್ರಿ ರಕ್ತಸ್ರಾವವಾಗದಿದ್ದರೆ ತಾನು ‘ಕನ್ಯೆ‘ ಅಲ್ಲ ಎಂಬ ಸತ್ಯ ಗೊತ್ತಾಗಿಬಿಡುತ್ತದೆಯೋ ಭೀತಿ, ತಪ್ಪು ಕಲ್ಪನೆ ಕೊರೆಯುತ್ತಿರುತ್ತದೆ.

ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಒಳಗಾದ ಪುರುಷ ಅಥವಾ ಮಹಿಳೆ ಸಹಜ ದಾಂಪತ್ಯ ಜೀವನಕ್ಕೆ ತಮ್ಮನ್ನು ತೆರೆದುಕೊಳ್ಳುವುದಿಲ್ಲ. ಬಾಲ್ಯದ ಕಹಿ ಘಟನೆ ನೆನಪು ಅವರನ್ನು ದುಃಸ್ವಪ್ನವಾಗಿ ಕಾಡುತ್ತಿರುತ್ತದೆ. ಹೀಗಾಗಿ ಅಂಥವರ ಲೈಂಗಿಕ ಜೀವನ ಸುಖಕರವಾಗಿರುವುದಿಲ್ಲ ಎನ್ನುತ್ತಾರೆ ಮನೋರೋಗ ತಜ್ಞ ಡಾ. ವಿನೋದ್‌ ಕುಮಾರ್‌.

ಸಲಿಂಗಿಗಳಿಗೂ ದಾಂಪತ್ಯದ ಆತಂಕ

ಪೋಷಕರ ಒತ್ತಡ ಮತ್ತು ಸಮಾಜಕ್ಕೆ ಹೆದರಿ ಸಲಿಂಗಿಗಳು ಮದುವೆಗೆ ಒಪ್ಪಿಕೊಳ್ಳುತ್ತಾರೆ. ಗಂಡು ಸಲಿಂಗಿಯಾಗಿದ್ದರೆ (ಗೇ) ಎಂದಿಗೂ ಆತ ಹೆಂಡತಿ ಕಡೆ ಆಕರ್ಷಿತನಾಗುವುದಿಲ್ಲ. ಆಕೆಯನ್ನು ಮೋಹಿಸುವುದಿಲ್ಲ. ಹೆಂಡತಿ ಸಲಿಂಗಿಯಾಗಿದ್ದರೆ (ಲೆಸ್ಬಿಯನ್‌) ಗಂಡನಿಂದ ಅಂತರ ಕಾಯ್ದುಕೊಳ್ಳುತ್ತಾಳೆ. ಸಲಿಂಗಿಗಳಿಗೆ ವೈವಾಹಿಕ ಜೀವನ ಬಂಧನದಂತೆ ಭಾಸವಾಗುತ್ತದೆ. ಅಂತಹ ದಂಪತಿ ಎಂದಿಗೂ ಭಾವನಾತ್ಮಕವಾಗಿ ಹತ್ತಿರವಾಗುವುದಿಲ್ಲ. ಇಂತಹ ವಿವಾಹಗಳು ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತವೆ ಎನ್ನುವುದು ಮನೋ ತಜ್ಞರ ಅಭಿಪ್ರಾಯ.

ಎಲ್ಲ ಪ್ರಾಣಿಗಳಂತೆ ಮನುಷ್ಯ ಕೂಡ ಸೆಕ್ಸ್‌ನಿಂದ ಹೊರತಾಗಿಲ್ಲ. ಕಾಮಾಸಕ್ತಿ ಇಲ್ಲದೆ ದಾಂಪತ್ಯ ಪೂರ್ಣವಾಗುವುದಿಲ್ಲ. ಹಾಗಂತ ಬರೀ ಕಾಮ ತುಂಬಿದ ದಾಂಪತ್ಯ ಕೂಡ ಯಶಸ್ವಿಯಾಗುವುದಿಲ್ಲ. ಮನುಷ್ಯನಲ್ಲಿ ಮಿದುಳು ಲೈಂಗಿಕ ಕ್ರಿಯೆಮೇಲೆ ಸಂಪೂರ್ಣ ಹತೋಟಿ ಹೊಂದಿರುತ್ತದೆ. ಪ್ರಾಣಿಗಳಲ್ಲಿ ಹಾಗಲ್ಲ. ಗಂಡು ಹಾಸಿಗೆಯಲ್ಲಿ ತನ್ನ ಪುರುಷತ್ವದ ಪಾರಮ್ಯ ಪ್ರದರ್ಶನ ಮಾಡಲು ಬಯಸುತ್ತಾನೆ. ಗಂಡ ತನ್ನನ್ನು ಅರ್ಥ ಮಾಡಿಕೊಳ್ಳಲಿ ಎಂದು ಹೆಣ್ಣು ಬಯಸುತ್ತಾಳೆ. ಈ ಕೊರಗು ಬಾಧಿಸಲು ಶುರುವಾದರೆ ಹಾಸಿಗೆಯಲ್ಲಿ ನಡೆಯುವುದು ಕಾಟಾಚಾರದ ಲೈಂಗಿಕ ಕ್ರಿಯೆ. ದಂಪತಿಯಲ್ಲಿ ವೈಯಕ್ತಿಕವಾಗಿ ಕಾಮಾಸಕ್ತಿ ಇದ್ದರೂ ಪರಸ್ಪರ ಆಕರ್ಷಣೆ ಕಳೆದು ಹೋಗಿ ಮನಸ್ತಾಪ ಬೆಳೆಯುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಶರೀರ, ಮನಸ್ಸು ಮತ್ತು ಎರಡು ವಿಭಿನ್ನ ವ್ಯಕ್ತಿತ್ವಗಳು ಅರಳಬೇಕು ಎನ್ನುವುದು ದಾಂಪತ್ಯ ಲೈಂಗಿಕ ಚಿಕಿತ್ಸಕ ಡಾ. ವಿನೋದ್‌ ಛೆಬ್ಬಿ ಅವರ ಅಭಿಪ್ರಾಯ.

ಹಾಗಾದರೆ ಪರಿಹಾರ ಇಲ್ಲವೇ?

ಮೆಡಿಸೆಕ್ಸ್‌ ಫೌಂಡೇಶನ್‌ ವತಿಯಿಂದ ಮನೋಲೈಂಗಿಕ ದಂಪತ್ಯ ಚಿಕಿತ್ಸೆ ಕಾರ್ಯಾಗಾರ ನಡೆಸುತ್ತಿರುವ ಡಾ. ಛೆಬ್ಬಿ, ಮನೋ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಿಗೆ ದಾಂಪತ್ಯ ಲೈಂಗಿಕ ಚಿಕಿತ್ಸೆ( ಸೆಕ್ಸುವಲ್‌ ಆ್ಯಂಡ್‌ ಸೈಕೋ ಥೆರಪಿ) ಅಲ್ಪಾವಧಿಯ ತರಬೇತಿ ಆರಂಭಿಸುವುದಾಗಿ ಹೇಳುತ್ತಾರೆ. ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ತಜ್ಞರ ಕೊರತೆ ಇದೆ ಎಂಬ ಕೊರಗನ್ನು ಇದು ಸ್ವಲ್ಪ ಮಟ್ಟಿಗೆ ನೀಗಬಹುದು ಎನ್ನುವುದು ಅವರ ಆಶಯ.

* ದಾಂಪತ್ಯ ಸಮಸ್ಯೆಗೆ ತಜ್ಞರ ಜತೆ ಸಮಾಲೋಚನೆ

* ಸಂಗಾತಿಯಲ್ಲಿ ಪರಸ್ಪರ ಗೌರವ, ನಂಬುಗೆ ಇರಿಸುವುದು

* ದಂಪತಿ ಪರಸ್ಪರರಿಗಾಗಿ ಸಮಯ ಮೀಸಲಿಡಿ

ದಂಪತಿ ಸಂಬಂಧಕ್ಕೆ ಹುಳಿ ಹಿಂಡುವ ಸಂಗತಿ

* ಅಪರಿಚಿತ ಸಂಗಾತಿ ಜತೆ ಹೊಂದಾಣಿಕೆ ಕೊರತೆ

* ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ

* ಅವಾಸ್ತವಿಕ ನಿರೀಕ್ಷೆಗಳು

* ಸಂಗಾತಿಯನ್ನು ಲೈಂಗಿಕವಾಗಿ ತೃಪ್ತಿಪಡಿಸಲಾರೆ ಎಂಬ ಮಾನಸಿಕ ನಪುಂಸಕತ್ವ

* ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮಾನಸಿಕ ಭೀತಿ

* ಲೈಂಗಿಕ ಮನಸ್ಥಿತಿ, ಕಾಮಾಸಕ್ತಿ, ಅಭಿರುಚಿ ಹೊಂದಾಣಿಕೆಯಾಗದಿರುವುದು

ಸಾಮರಸ್ಯದ ಕೊರತೆಯಿಂದ ವಿಚ್ಛೇದನ

ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಬರುವ ಹೆಚ್ಚಿನ ಪ್ರಕರಣಗಳಲ್ಲಿ ಗಂಡ–ಹೆಂಡತಿ ನಡುವೆ ಸಾಮರಸ್ಯವಿಲ್ಲದ ಲೈಂಗಿಕ ಸಂಬಂಧವೇ ಮುಖ್ಯ ಕಾರಣವಾಗಿರುತ್ತದೆ. ಕೌಟುಂಬಿಕ ಸಮಸ್ಯೆ, ಹಣಕಾಸಿನ ವಿಚಾರ, ಪರಸ್ಪರ ಹೊಂದಾಣಿಕೆ ಕೊರತೆ ಕೂಡ ಅದಕ್ಕೆ ನೆಪವಾಗುತ್ತವೆ. ಬೆಂಗಳೂರಿನಲ್ಲಿ ಗಂಡ, ಹೆಂಡತಿ ಇಬ್ಬರೂ ಉದ್ಯೋಗದಲ್ಲಿರುತ್ತಾರೆ. ಹೆಚ್ಚಿನ ಸಮಯ ಕಚೇರಿ ಮತ್ತು ಟ್ರಾಫಿಕ್‌ನಲ್ಲಿಯೇ ಕಳೆಯುತ್ತಾರೆ. ಡೆಡ್‌ಲೈನ್‌ ಜಾಬ್‌ಗಳಲ್ಲಿರುವವರು ತೀವ್ರ ಒತ್ತಡಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ ಕಚೇರಿಗೆ ಹೋದರೆ ರಾತ್ರಿ ಮನೆಗೆ ಮರಳುತ್ತಾರೆ. ಕೆಲಸದ ಒತ್ತಡದಿಂದ ಇಬ್ಬರೂ ದಣಿದಿರುತ್ತಾರೆ. ಹೀಗಾಗಿ ಏಕಾಂತದಲ್ಲಿ ಕಾಲ ಕಳೆಯಲು ಅವರಿಗೆ ಸಾಧ್ಯವಾಗುವುದಿಲ್ಲ. ಕೊನೆಗೆ ವಿಚ್ಛೇದನಕ್ಕೆ ಮೊರೆ ಹೋಗುತ್ತಾರೆ.

– ಶಿವಕುಮಾರ್‌ ಗೋಗಿ, ಹೈಕೋರ್ಟ್‌ ವಕೀಲರು, ಗೋಗಿ ಆ್ಯಂಡ್‌ ಗೋಗಿ ಅಸೋಸಿಯೇಟ್ಸ್‌

ಲೈಂಗಿಕ ಸಮಸ್ಯೆಗಳಿಗೂ ಪರಿಹಾರ ಇದೆ

ಮದುವೆಯಾಗಿ ಐದಾರು ವರ್ಷವಾದರೂ ಕೆಲವರು ಮೊದಲ ರಾತ್ರಿಯ ಸುಖವನ್ನು ಕಂಡಿರುವುದಿಲ್ಲ. ಲೈಂಗಿಕ ಜೀವನ ಸಹಜವಾಗಿರದಿದ್ದರೆ ಗಂಡ, ಹೆಂಡತಿ ನಡುವೆ ದೈಹಿಕ ಮತ್ತು ಮಾನಸಿಕ ಸಂಪರ್ಕ ಕಡಿದು ಹೋಗುತ್ತದೆ. ಸಮಸ್ಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗುವ ದಂಪತಿಯಲ್ಲಿ ಕೋಪ, ಮುನಿಸು, ಮನಸ್ತಾಪ, ಕಲಹ ಶುರುವಾಗುತ್ತವೆ. ಎಷ್ಟೋ ಜನರು ಗುಪ್ತವಾಗಿ ನಕಲಿ ಲೈಂಗಿಕ ತಜ್ಞರನ್ನು ಕಂಡು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿಕೊಳ್ಳುತ್ತಾರೆ. ಯುವ ದಂಪತಿಗಳು ಪೋಷಕರು, ಆಪ್ತರ ಜತೆ ಸಮಸ್ಯೆಯನ್ನು ಮುಕ್ತವಾಗಿ ಚರ್ಚಿಸಬೇಕು. ಲೈಂಗಿಕ ತಜ್ಞರನ್ನು ಕಾಣಬೇಕು. ಇದರಿಂದ ಬಹಳಷ್ಟು ಕುಟುಂಬಗಳನ್ನು ಉಳಿಸಿಕೊಳ್ಳಬಹುದು. ಮುರಿದು ಬೀಳುವ ಮದುವೆಗಳನ್ನು ಕಾಪಾಡಬಹುದು. ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಮತ್ತು ಚಿಕಿತ್ಸೆಗಳಿವೆ ಎಂಬುವುದನ್ನು ಮರೆಯಬಾರದು.

– ಡಾ. ಪದ್ಮಿನಿ ಪ್ರಸಾದ್‌, ಸ್ತ್ರೀರೋಗ ಮತ್ತು ಲೈಂಗಿಕ ತಜ್ಞರು

ಬೆಡ್‌ ರೂಂಗಳಲ್ಲಿ ಅಡ್ಡಗೋಡೆ

ಬೆಡ್‌ ರೂಂಗಳಲ್ಲಿ ಏನು ನಡೆಯಬೇಕೋ ಅದು ನಡೆಯುವುದಿಲ್ಲ. ನಡೆದರೂ ಕಾಟಾಚಾರದ ಕ್ರಿಯೆ ನಡೆಯುತ್ತದೆ. ಕೌಟುಂಬಿಕ ಸಮಸ್ಯೆಗಳು ಹಾಸಿಗೆ ಪ್ರವೇಶಿಸಿದರೆ ಅಲ್ಲಿ ಜಗಳ ಆರಂಭವಾಗುತ್ತದೆ. ದಾಂಪತ್ಯ ಜೀವನದ ಮೇಲೆ ನಮ್ಮ ಸುತ್ತಮುತ್ತಲಿನ ಪರಿಸರ, ಕೆಲಸದ ಒತ್ತಡ, ಸಾಮಾಜಿಕ ಮತ್ತು ಕೌಟುಂಬಿಕ ಜೀವನದ ಪ್ರಭಾವ ಇದ್ದೇ ಇರುತ್ತದೆ. ಮನುಷ್ಯ ಸಹಜವಾದ ಅಸ್ತಿತ್ವ, ಪಾರಮ್ಯ ಮತ್ತು ದೌರ್ಬಲ್ಯಗಳು ಬೆಡ್‌ರೂಂ ಜೀವನದ ಮೇಲೆ ಪ್ರಭಾವ ಬೀರುತ್ತವೆ. ವಾಂಛಲ್ಯ ರಹಿತವಾದ ಅನ್ಯೋನ್ಯಪೂರಿತ ಕಾಮಕೂಟ ಏನಿದ್ದರೂ ಸಾಧ್ಯವಾಗುವುದು 60 ವಯಸ್ಸಿನ ನಂತರ.

– ಡಾ.ವಿನೋದ್‌ ಛೆಬ್ಬಿ, ಮನೋ ಲೈಂಗಿಕ ದಾಂಪತ್ಯ ಚಿಕಿತ್ಸಕರು

ಅಪನಂಬಿಕೆ ಮೇಲುಗೈ ಸಾಧಿಸಿದರೆ

ಹೆಚ್ಚಿನ ಗಂಡಸರು ಪತ್ನಿಯತ್ತ ಉಡಾಫೆ ತೋರುತ್ತಾರೆ. ಅವಳೊಂದಿಗೆ ಹೇಗಿದ್ದರೂ ನಡೆಯುತ್ತದೆ ಎಂಬ ಉಪೇಕ್ಷ ಸಾಮಾನ್ಯವಾಗಿ ಎಲ್ಲ ಗಂಡಸರಲ್ಲೂ ಕಂಡು ಬರುತ್ತದೆ. ಹೆಣ್ಣಿಗೂ ಭಾವನೆಗಳಿರುತ್ತವೆ ಎಂಬುವುದನ್ನು ಗಂಡಸು ಮರೆತು ಬಿಡುತ್ತಾನೆ. ಇದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ದಾಂಪತ್ಯ ಸಮಸ್ಯೆಗೆ ದಂಪತಿ ಪರಸ್ಪರ ದೂಷಾರೋಪಣೆ ಮಾಡಿಕೊಳ್ಳುತ್ತಾರೆ. ಮುಖಾಮುಖಿಯಾಗಿ ಸಮಾಲೋಚನೆ ನಡೆಸಿದಾಗ ಇಬ್ಬರ ಆರೋಪಗಳೂ ಸುಳ್ಳು ಎಂಬ ಸಂಗತಿ ಬಯಲಾಗುತ್ತದೆ. ಸುಳ್ಳು, ಅಪನಂಬಿಕೆ, ಅಗೌರವ ಸಂಬಂಧಗಳನ್ನು ಬಿಗಡಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪರಸ್ಪರ ಗೌರವ ಮತ್ತು ಕಾಳಜಿ ವ್ಯಕ್ತಪಡಿಸುವ ಹಾಗೂ ಸಕಾರಾತ್ಮಕ ಚಿಂತನೆಗಳಿಂದ ದಂಪತಿಯಲ್ಲಿ ಅನ್ನೋನ್ಯತೆ ತರಲು ಸಾಧ್ಯ.

– ಡಾ. ಸುಗಮಿ ರಮೇಶ್‌, ಹಿರಿಯ ಸಮಾಲೋಚಕರು, ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಅಪೊಲೊ ಆಸ್ಪತ್ರೆ

ಪ್ರೀತಿ ಇಲ್ಲದ ಮೇಲೆ...

ಸಂಬಂಧಗಳ ಮಹತ್ವದ ಬಗ್ಗೆ ಅಜ್ಞಾನದ ಕೊರತೆಯೇ ದಾಂಪತ್ಯ ವಿರಸಕ್ಕೆ ನಾಂದಿ ಹಾಡುತ್ತದೆ. ಹೆಚ್ಚಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಗಂಡಸರು ಅದನ್ನು ನಿಜ ಜೀವನದಲ್ಲೂ ಪರೀಕ್ಷಿಸಲು ಮುಂದಾಗುತ್ತಾರೆ. ಈ ರೀತಿಯ ಅವಾಸ್ತವಿಕ ನಿರೀಕ್ಷೆಗಳು ಹುಸಿಯಾದಾಗ ಆತ ಕೆರಳುತ್ತಾನೆ. ತನ್ನಿಂದ ಸಾಧ್ಯವಾಗುವುದಿಲ್ಲ ಎಂದು ಮಾನಸಿಕವಾಗಿ ಕುಗ್ಗುತ್ತಾನೆ. ತನ್ನ ದೌರ್ಬಲ್ಯ ಮರೆಮಾಡಲು ಪತ್ನಿಯನ್ನು ಶಂಕಿಸಲು ಆರಂಭಿಸುತ್ತಾನೆ. ಗಂಡಸರಲ್ಲಿ ಲೈಂಗಿಕ ದೌರ್ಬಲ್ಯ ಭೀತಿ ಮತ್ತು ಮಹಿಳೆಯರಲ್ಲಿ ಕಾಮಾಸಕ್ತಿ ಕೊರತೆ ದಾಂಪತ್ಯದ ಸಾಮರಸ್ಯ ಹಾಳು ಮಾಡುತ್ತವೆ. ಹಾಸಿಗೆಯಲ್ಲಿ ಗಂಡಸು ತನ್ನ ಸಂಗಾತಿಯನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಆಕೆಯಿಂದ ಸಿಗುವ ದೈಹಿಕ ಮತ್ತು ಲೈಂಗಿಕ ಸುಖದತ್ತ ಆಸಕ್ತನಾಗಿರುತ್ತಾನೆ. ಇಂಥ ಮಿಲನಗಳು ಇಬ್ಬರಿಗೂ ಸುಖ ಕೊಡುವುದಿಲ್ಲ. ಹೆಣ್ಣಿಗೆ ಮನಸ್ಸಿಗೆ ಮಾಯವಾಗದ ಘಾಸಿ ಮಾಡುತ್ತವೆ. ಪ್ರೀತಿ ಇಲ್ಲದ ಕಾಮವೇ ಪ್ರಧಾನವಾಗಿರುವ ಇಂತಹ ಮಿಲನಗಳಿಗೆ ಆಕೆ ಮಾನಸಿಕವಾಗಿ ಸಜ್ಜಾಗಿರುವುದಿಲ್ಲ. ಏನಾದರೊಂದು ನೆಪ ಹೇಳಿ ಆಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾಳೆ.

- ಡಾ. ವಿನೋದ್‌ ಕುಮಾರ್‌, ಮನೋರೋಗ ತಜ್ಞ, ಎಂಪವರ್, ಇಂದಿರಾನಗರ

ನಿಮ್ಮ ಸಮಸ್ಯೆಗೆ ಪರಿಹಾರ ಇಲ್ಲಿ ದೊರೆಯುತ್ತದೆ

* ವನಿತಾ ಸಹಾಯವಾಣಿ: 080–22943225 (ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ)

* ಮೆಡಿಸೆಕ್ಸ್‌ ಫೌಂಡೇಶನ್‌: 08494933888/9844106085 (ಬೆಳಿಗ್ಗೆ 10ರಿಂದ ಸಂಜೆ 6 ಗಂಟೆ)

* ಕುಟುಂಬ ಮನೋರೋಗ ಚಿಕಿತ್ಸಾ ಕೇಂದ್ರ: 080–26995328/26995327 (ಬೆಳಿಗ್ಗೆ 9.30–ಸಂಜೆ 5 ಗಂಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT